ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರದಲ್ಲಿ ಪ್ರವಾಹ, ಭೂಕುಸಿತ: 27 ಸಾವು

Last Updated 4 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಡೆಹ್ರಾಡೂನ್/ಶಿಮ್ಲಾ/ಜಮ್ಮು (ಪಿಟಿಐ): ದೇಶದ ವಿವಿಧ ಕಡೆ ಭಾರಿ ಮಳೆ ಸುರಿಯುತ್ತಿದ್ದು, ಉತ್ತರಾಖಂಡದಲ್ಲಿ 26 ಹಾಗೂ ಶಿಮ್ಲಾದಲ್ಲಿ ಒಬ್ಬರು ಬಲಿಯಾಗಿದ್ದಾರೆ. ಜಮ್ಮುವಿನಲ್ಲಿ ಪ್ರವಾಹಕ್ಕೆ ಸಿಲುಕಿದ್ದ ಸುಮಾರು 22 ಮಂದಿಯನ್ನು ಶನಿವಾರ ರಕ್ಷಿಸಲಾಗಿದೆ.

ಉತ್ತರಾಖಂಡದಲ್ಲಿ 1978ರ ಬಳಿಕ ಇದೇ ಮೊದಲ ಬಾರಿ ಇಷ್ಟೊಂದು ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ರಸ್ತೆ ಹಾಗೂ ರೈಲು ಸಂಚಾರಕ್ಕೆ ಭಾರಿ ಅಡಚಣೆಯಾಗಿದೆ. ಈ ಭಾಗದಲ್ಲಿ ಇನ್ನೂ ಹೆಚ್ಚಿನ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಗಂಗೋರಿ, ದುಂಢಾ, ಉತ್ತರಕಾಶಿ ಹಾಗೂ ಬರ್ಕೋಟ್ ಪ್ರದೇಶದಲ್ಲಿ ಅನೇಕ ಮಂದಿ ಕಣ್ಮರೆಯಾಗಿದ್ದು, ಇವರ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಉತ್ತರಕಾಶಿ ಜಿಲ್ಲಾಧಿಕಾರಿ ಆರ್.ರಾಜೇಶ್ ಕುಮಾರ್ ಹೇಳಿದ್ದಾರೆ.

ಗಂಗೋರಿ ಪ್ರದೇಶದಲ್ಲಿ ಅಗ್ನಿ ಶಾಮಕ ದಳದ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ. ಪ್ರವಾಹದ ಕಾರಣ ಗಂಗೋತ್ರಿ ಹಾಗೂ ಯಮುನೋತ್ರಿ ಯಾತ್ರೆಯನ್ನು ರದ್ದುಪಡಿಸಲಾಗಿದೆ. ಗಂಗೋರಿಯಲ್ಲಿ ಭಾಗೀರಥಿ ನದಿಯು ಅಪಾಯದ ಮಟ್ಟವನ್ನು ಮೀರಿ ಹರಿಯುತ್ತಿದ್ದು, ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಗಂಗೋರಿ ಸೇತುವೆ ಕುಸಿದ ಪರಿಣಾಮ ಸುಮಾರು 30 ಮನೆಗಳು ಕೊಚ್ಚಿಕೊಂಡು ಹೋಗಿವೆ.

ಜಮ್ಮು ವರದಿ:
ಸತತ ಮೂರು ವಾರಗಳಿಂದ ಮಳೆಗಾಗಿ ಎದುರು ನೋಡುತ್ತಿದ್ದ ಕಣಿವೆ ರಾಜ್ಯದ ಜನರು ವರುಣನ ಅಟ್ಟಹಾಸ ನೋಡಿ ಬೆಚ್ಚಿ ಬಿದ್ದಿದ್ದಾರೆ. ಶುಕ್ರವಾರ ರಾತ್ರಿ ಇಡೀ ಸುರಿದ ವರ್ಷಧಾರೆಯಿಂದ ಅನೇಕ ಪ್ರದೇಶಗಳು ಜಲಾವೃತಗೊಂಡಿವೆ. ಜಮ್ಮುವಿನ ಅನೇಕ ನದಿಗಳಿಗೆ ಪ್ರವಾಹ ಬಂದಿದ್ದು, ಸುಮಾರು 3 ತಾಸುಗಳ ಕಾರ್ಯಾಚರಣೆ ಬಳಿಕ 22 ಮಂದಿಯನ್ನು ರಕ್ಷಿಸಲಾಗಿದೆ. ಚಿನಾಬ್, ತಾವಿ, ಉಜ್ ಹಾಗೂ ಬಸಂತರ್ ನದಿಗಳು ಅಪಾಯದ ಮಟ್ಟವನ್ನು ತಲುಪುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಭೂಕುಸಿತ-ಸಂಚಾರ ಸ್ಥಗಿತ: ರಂಬನ್ ವಲಯದಲ್ಲಿ ಭೂಕುಸಿತದಿಂದಾಗಿ ಶ್ರೀನಗರ-ಜಮ್ಮು ಹೆದ್ದಾರಿ ಸ್ಥಗಿತಗೊಂಡಿದೆ.

ಶಿಮ್ಲಾ ವರದಿ: ಕುಲು ಜಿಲ್ಲೆಯ ಮನಾಲಿಯಲ್ಲಿ ಪ್ರವಾಹಕ್ಕೆ ವ್ಯಕ್ತಿಯೊಬ್ಬರು ಬಲಿಯಾಗಿದ್ದಾರೆ. ಪ್ರಮುಖ ಸೇತುವೆಗಳು, ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಭೂಕುಸಿತದಿಂದ ಮನಾಲಿ-ರೊಹ್ಟಾಂಗ್ ಪಾಸ್ ಹೆದ್ದಾರಿ ಸಂಚಾರ ಸ್ಥಗಿತಗೊಂಡಿದೆ.

ಫೈಜಾಬಾದ್ ವರದಿ: ಉತ್ತರಪ್ರದೇಶದ ಸರಯೂ, ಘಾಘ್ರಾ ನದಿಗಳು ಉಕ್ಕಿ ಹರಿಯುತ್ತಿದ್ದು, ಬಾರಾಬಂಕಿ ಜಿಲ್ಲೆಯಲ್ಲಿ  ಗ್ರಾಮಗಳು ಜಲಾವೃತಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT