ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪ್ರದೇಶ: 1ನೇ ಹಂತ ಚುನಾವಣೆಗೆ ಅಧಿಸೂಚನೆ

Last Updated 12 ಜನವರಿ 2012, 20:05 IST
ಅಕ್ಷರ ಗಾತ್ರ

ಲಖನೌ (ಪಿಟಿಐ): ಉತ್ತರಪ್ರದೇಶದಲ್ಲಿ ಫೆ.8ರಂದು ಮೊದಲ ಹಂತದ ಚುನಾವಣೆ ನಡೆಯಲಿದ್ದು, ಈ ಸಂಬಂಧ ಗುರುವಾರ ಅಧಿಸೂಚನೆ ಹೊರಡಿಸಲಾಗಿದೆ.

10 ಜಿಲ್ಲೆಗಳ 55 ಕ್ಷೇತ್ರಗಳಲ್ಲಿ ಅಂದು ಚುನಾವಣೆ ನಡೆಯಲಿದೆ. ಸೀತಾಪುರ, ಗೊಂಡ, ಬಸ್ತಿ, ಬಲರಾಂಪುರ, ಬಾರಬಂಕಿ, ಫೈಜಾಬಾದ್, ಅಂಬೇಡ್ಕರ್ ನಗರ್, ಸಿದ್ಧಾರ್ಥ ನಗರ್, ಬಾಹ್‌ರೈಚ್, ಶ್ರವಸ್ತಿ ಇವೇ ಆ 10 ಜಿಲ್ಲೆಗಳು.

ಕೇಂದ್ರ ಸಚಿವ ಬೇನಿ ಪ್ರಸಾದ್ ವರ್ಮ, ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ಪಿ.ಎಲ್.ಪುನಿಯಾ ಸೇರಿದಂತೆ ಹಲವು ಪ್ರಮುಖರು ಆ ದಿನ ಅಗ್ನಿಪರೀಕ್ಷೆ ಎದುರಿಸಲಿದ್ದಾರೆ.

15 ಮಾಜಿ ಸಚಿವರು, ಮೂವರು ಹಾಲಿ ಸಚಿವರು ಹಾಗೂ 31 ಶಾಸಕರ ಭವಿಷ್ಯ ಕೂಡ ಅಂದು ಮತಪೆಟ್ಟಿಗೆ  ಸೇರಲಿದೆ.

ಗೊಂಡ ಲೋಕಸಭಾ ಕ್ಷೇತ್ರ ಪ್ರತಿನಿಧಿಸುತ್ತಿರುವ ಕುರ್ಮಿ ಸಮೂಹ ಮುಖಂಡರಾದ ಬೇನಿ ಪುತ್ರ ರಾಕೇಶ್ ಶರ್ಮ ಕೂಡ ಕಣಕ್ಕಿಳಿದಿದ್ದು, ಅವರು ದರಿಯಾಬಾದ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಬಯಸಿದ್ದಾರೆ.

ದಲಿತ ನಾಯಕನೆಂದೇ ಹೆಸರಾಗಿರುವ ಬಾರಾಬಂಕಿ ಕಾಂಗ್ರೆಸ್ ಸಂಸದ ಪಿ.ಎಲ್.ಪುನಿಯಾ ಕೂಡ ಗೊಂಡ ವ್ಯಾಪ್ತಿಯಲ್ಲಿ ಪ್ರಭಾವಿಯಾಗಿದ್ದು ಅವರು ತಮ್ಮ ಪಕ್ಷಕ್ಕೆ ಎಷ್ಟರ ಮಟ್ಟಿಗೆ ನೆರವಾಗಲಿದ್ದಾರೆ ಎಂಬ ಕುತೂಹಲವೂ ಇದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಕೂಡ ಇಲ್ಲಿನ ಹಲವು ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕ ಸಭೆಗಳನ್ನು ನಡೆಸಿದ್ದು ಅದು ಮತದಾರರನ್ನು ತನ್ನಡೆಗೆ ಸೆಳೆಯಲು ನೆರವಾಗಬಹುದು ಎಂಬ ಲೆಕ್ಕಾಚಾರವೂ ಕಾಂಗ್ರೆಸ್‌ನಲ್ಲಿದೆ.

ಕಾಂಗ್ರೆಸ್ ನಾಯಕಿ ಹಾಗೂ ಸಂಸದೆ ಜಗದಾಂಬಿಕಾ ಪಾಲ್ ಅವರ ಪುತ್ರ ಅಭಿಷೇಕ್ ಪಾಲ್ ಬಸ್ತಿ ಸದರ್ ಕ್ಷೇತ್ರದಿಂದ ಅಖಾಡಕ್ಕಿಳಿದಿದ್ದು, ಜಗದಾಂಬಿಕಾ ಅಲ್ಲೇ ಬಿಡಾರ ಹೂಡಿದ್ದಾರೆ.

ಆದರೆ ಈ ಹಿಂದಿನ ಚುನಾವಣೆಯಲ್ಲಿ ಈ 55 ಕ್ಷೇತ್ರಗಳ ಪೈಕಿ 30 ಸ್ಥಾನಗಳನ್ನು ತನ್ನದಾಗಿಸಿಕೊಂಡಿದ್ದ ಬಹುಜನಸಮಾಜ ಪಕ್ಷ ಕೂಡ ಇಲ್ಲಿ ಇದೀಗ ಇನ್ನಷ್ಟು ಗಟ್ಟಿಲಖನೌ (ಪಿಟಿಐ):ಯಾಗುವ ತಯಾರಿಯಲ್ಲಿದೆ.

ಪ್ರತಿಮೆಗಳಿಗೆ ಮುಸುಕು: ಆದೇಶ ಮರುಪರಿಶೀಲನೆಗೆ ಮನವಿ

ಲಖನೌ (ಪಿಟಿಐ): ಉತ್ತರಪ್ರದೇದ ಮುಖ್ಯಮಂತ್ರಿ ಮಾಯಾವತಿ ಪ್ರತಿಮೆ ಮತ್ತು ಪಕ್ಷದ ಚಿಹ್ನೆಯ ಪ್ರತಿಮೆಗಳನ್ನು ಮುಚ್ಚಬೇಕೆಂಬ ಚುನಾವಣಾ ಆಯೋಗದ ಆದೇಶ ಏಕಪಕ್ಷೀಯ ಮತ್ತು ಅಸಮರ್ಥನೀಯ. ಇದು ಸಂವಿಧಾನದ 14ನೇ ಪರಿಚ್ಛೇದದ ಉಲ್ಲಂಘನೆಯಾಗಿದ್ದು ಆದೇಶವನ್ನು ಮರು ಪರಿಶೀಲಿಸಬೇಕೆಂದು ಬಿಎಸ್‌ಪಿ ಗುರುವಾರ ಹೇಳಿದೆ.

`ಬಿಜೆಪಿ, ಎಸ್‌ಪಿ ಮತ್ತು ಕಾಂಗ್ರೆಸ್‌ನ ಮನವಿ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ದಲಿತರು ಮತ್ತು ಹಿಂದುಳಿದ ವರ್ಗದ ಜನರಲ್ಲಿ ವಂಚನೆಗೆ ಒಳಗಾದ ಭಾವನೆ ಮೂಡಿದೆ~ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಚಂದ್ರ ಮಿಶ್ರಾ ಹೇಳಿದರು.

`ಆಯೋಗದ ನಿರ್ಧಾರ ಖಂಡಿಸಿ ಪಕ್ಷದ ಕಾರ್ಯಕರ್ತರು ಬೀದಿಗಿಳಿಯಲು ಬಯಸಿದ್ದರು. ಆದರೆ ಮಾಯಾವತಿ ಇದನ್ನು ತಡೆದರು~ ಎಂದು ತಿಳಿಸಿದರು.

`ಚುನಾವಣಾ ಆಯೋಗ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದೆಂಬ ನಿರೀಕ್ಷೆಯನ್ನು ಬಿಎಸ್‌ಪಿ ಹೊಂದಿತ್ತು. ಆದರೆ ಅದರ ನಿರ್ಧಾರ ಪಕ್ಷದ ಸ್ಥೈರ್ಯ ಕುಗ್ಗಿಸಿದೆ~ ಎಂದು ಹೇಳಿದರು. `ಆಯೋಗವು ನಮ್ಮ `ಆನೆ~ಗೆ ಆಕ್ಷೇಪ ವ್ಯಕ್ತಪಡಿಸಿದರೆ, ಎಸ್‌ಪಿಯ `ಸೈಕಲ್~, ಬಿಜೆಪಿಯ `ಕಮಲ~ ಮತ್ತು ಆರ್‌ಎಲ್‌ಡಿಯ ಕೈಪಂಪಿನ ಚಿಹ್ನೆಗಳಿಗೂ ಇದನ್ನೇ ಅನ್ವಯಿಸಬೇಕು~ ಎಂದು ಅವರು ಒತ್ತಾಯಿಸಿದರು.

`ಸರ್ಕಾರವು ಅನೇಕ ಕಡೆ ಕೈಪಂಪುಗಳನ್ನು ಒದಗಿಸಿದೆ. ಇತರ ಪಕ್ಷಗಳ ಮಾಜಿ ಅಧ್ಯಕ್ಷರು ಮತ್ತು ನಾಯಕರ ಪ್ರತಿಮೆಗಳ ಬಗ್ಗೆಯೂ ಆಯೋಗ ಗಮನ ಹರಿಸಬೇಕಾಗುತ್ತದೆ~ ಎಂದು ಅಭಿಪ್ರಾಯಪಟ್ಟರು.

`ಚುನಾವಣಾ ಆಯೋಗವು ತನ್ನ ನಿರ್ಧಾರವನ್ನು ಪುನರ್ ಪರಿಶೀಲಿಸಬೇಕು. ಎಲ್ಲಾ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಒದಗಿಸಬೇಕು~ ಎಂದೂ ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT