ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಪ್ರದೇಶದಲ್ಲಿ ಸಣ್ಣ ಪಕ್ಷಗಳ ದೊಡ್ಡ ಆಸೆ

Last Updated 5 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪ್ರದೇಶದಲ್ಲಿ ಸಣ್ಣ ಪಕ್ಷಗಳಿಗೆ ತಮ್ಮ ಶಕ್ತಿ ಏನೆಂಬುದು ತಿಳಿದಿದೆ. ಆದರೆ ಕೆಲವು ಪಕ್ಷಗಳು ಚುನಾವಣಾ ಆಯೋಗದಿಂದ ಮನ್ನಣೆ ಪಡೆಯುವ ಬಹುದೊಡ್ಡ ಆಕಾಂಕ್ಷೆಯಿಂದ ಚುನಾವಣಾ ಕಣಕ್ಕೆ ಇಳಿದಿವೆ.
ದೊಡ್ಡ ಸಂಖ್ಯೆಯ ರಾಜಕೀಯ ಪಕ್ಷಗಳು ಆಯೋಗದಲ್ಲಿ ಸ್ಥಳೀಯ ಕಾರಣಗಳನ್ನು ನೀಡಿ ನೋಂದಣಿ ಮಾಡಿಸಿಕೊಂಡಿವೆ. ಅವುಗಳಿಗೆ ಜಾತಿ ಮತ್ತು ಪ್ರದೇಶ ಮುಖ್ಯವಾದ ಅಂಶಗಳಾಗಿವೆ.

  ಜನತಾದಳ (ಯು), ಲೋಕ ಜನಶಕ್ತಿ, ತೃಣಮೂಲ ಕಾಂಗ್ರೆಸ್, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷಗಳಿಗೆ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಇಲ್ಲ. ಆದರೂ ರಾಷ್ಟ್ರೀಯ ಪಕ್ಷ ಎನ್ನುವ ಮಾನ್ಯತೆ ಪಡೆಯುವುದು ಅವುಗಳ ಮುಖ್ಯ ಉದ್ದೇಶ. ತಮ್ಮ ತಮ್ಮ ರಾಜ್ಯಗಳಲ್ಲಿ ಈ ಪಕ್ಷಗಳು ಬಲಿಷ್ಠವಾಗಿದ್ದರೂ ಸಹ ಉತ್ತರ ಪ್ರದೇಶಗಳಲ್ಲಿ ಅವುಗಳಿಗೆ ನೆಲೆ ಇಲ್ಲ. ಸ್ವತಃ ಆ ಪಕ್ಷಗಳಿಗೆ ಇದರ ಅರಿವೂ ಇದೆ.

 ತಮ್ಮ ಪಕ್ಷದ ಅಭ್ಯರ್ಥಿಗಳು ಪಡೆಯುವ ಮತಗಳ ಆಧಾರದ ಮೇಲೆ ರಾಷ್ಟ್ರೀಯ ಪಕ್ಷಗಳು ಎಂದು ಮನ್ನಣೆ ಪಡೆಯಲು ಸಾಧ್ಯ ಎನ್ನುವುದು ಈ ಪಕ್ಷಗಳ ಆಶಯವಾಗಿದೆ.

 ಶರದ್ ಯಾದವ್ ಮುಂದಾಳತ್ವದ ಜೆಡಿಯು ಪಕ್ಷವು ಬಿಹಾರ ಮತ್ತು ಜಾರ್ಖಂಡ್‌ನಲ್ಲಿ ಮನ್ನಣೆ ಪಡೆದಿದೆ. ಹಾಗೆಯೇ ಇನ್ನೂ ಎರಡು ರಾಜ್ಯಗಳಲ್ಲಿ ಮನ್ನಣೆ ಪಡೆದರೆ, ರಾಷ್ಟ್ರೀಯ ಪಕ್ಷವಾಗುತ್ತದೆ. ಅದಕ್ಕಾಗಿ ಉತ್ತರಪ್ರದೇಶದಲ್ಲಿ ಶೇ 6ರಷ್ಟು ಮತ ಅಥವಾ ಕೆಲವು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲಬೇಕು. ಈ ಕಾರಣಕ್ಕಾಗಿಯೇ ಜೆಡಿಯು ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದೆ. ಅಲ್ಲದೆ, ಮಣಿಪುರ ವಿಧಾನಸಭೆಗೆ ನಡೆದಿರುವ ಚುನಾವಣೆಯಲ್ಲಿಯೂ ಸ್ಪರ್ಧಿಸಿದೆ.

ಶರದ್ ಪವಾರ್ ನೇತೃತ್ವದ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್‌ಸಿಪಿ) ಇದೇ ಆಲೋಚನೆಯಿಂದ ಉತ್ತರಪ್ರದೇಶದಲ್ಲಿ ಚುನಾವಣೆ ಕಣಕ್ಕೆ ಇಳಿದಿದೆ. ಹಲವು ರಾಜ್ಯಗಳಲ್ಲಿ ಈ ಪಕ್ಷ ತನ್ನ ಅಸ್ಥಿತ್ವ ಉಳಿಸಿಕೊಂಡಿದೆ.
ಮಮತಾ ಬ್ಯಾನರ್ಜಿ ನಾಯಕತ್ವದ ತೃಣಮೂಲ ಕಾಂಗ್ರೆಸ್ ವಿವಿಧ ರಾಜ್ಯಗಳಲ್ಲಿ ಬಲವರ್ಧನೆ ಮಾಡಿಕೊಳ್ಳುವ ಸಲುವಾಗಿ ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದೆ.

ಇದೇ ರೀತಿಯ ಆಶಯವನ್ನು ರಾಮ ವಿಲಾಸ್ ಪಾಸ್ವಾನ್ ಅವರ ಲೋಕ ಜನಶಕ್ತಿ ಪಕ್ಷ ಸಹ ಹೊಂದಿದೆ. ಮುಖ್ಯಮಂತ್ರಿ ಮಾಯಾವತಿ ಅವರಿಗೆ ಸವಾಲು ಹಾಕಲು ಈ ಪಕ್ಷ ಸಜ್ಜಾಗಿ ನಿಂತಿದೆ. ಇದಕ್ಕಾಗಿಯೇ ಬಿಎಸ್ಪಿ ನಿಜವಾದ ದಲಿತರ ಪಕ್ಷ ಅಲ್ಲ ಎಂದು ಆರೋಪಿಸುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT