ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಹಳ್ಳಿ ಕೆರೆ ನಿರ್ವಹಣೆ ಖಾಸಗಿ ತೆಕ್ಕೆಗೆ

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಉತ್ತರಹಳ್ಳಿ ಕೆರೆಯ ನಿರ್ವಹಣೆಗೆ ಹಣ ವಿನಿಯೋಗಿಸಲು ಯುನೈಟೆಡ್ ವೇ ಸಂಸ್ಥೆ ಮುಂದಾಗಿದ್ದು, ಮುಂದಿನ ಒಂದು ವರ್ಷ ಕಾಲ ಸಂಸ್ಥೆಯು ಸ್ಥಳೀಯ ಸಂಸ್ಥೆಗಳ ನೆರವಿನೊಂದಿಗೆ ಕೆರೆಯ ನಿರ್ವಹಣೆ ಕಾರ್ಯ ಕೈಗೊಳ್ಳಲಿದೆ.

ಬಿಬಿಎಂಪಿಯು ಈಗಾಗಲೇ ಎರಡು ಹಂತಗಳಲ್ಲಿ ಒಟ್ಟು 1.80 ಕೋಟಿ ರೂಪಾಯಿ ವೆಚ್ಚದಲ್ಲಿ ಉತ್ತರಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸಿದೆ. 1.90 ಕೋಟಿ ರೂಪಾಯಿ ವೆಚ್ಚದಲ್ಲಿ ಕೊಳಚೆ ನೀರು ಸಂಸ್ಕರಣಾ ಘಟಕ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇದೀಗ ಕೆರೆಯ ನಿರ್ವಹಣೆಗೆ ಸಂಬಂಧಪಟ್ಟಂತೆ ಪಾಲಿಕೆಯು ಯುನೈಟೆಡ್ ವೇ  ಸಂಸ್ಥೆ ಜತೆ ಒಡಂಬಡಿಕೆ ಮಾಡಿಕೊಂಡಿದೆ.

ಆ ಹಿನ್ನೆಲೆಯಲ್ಲಿ ಯುನೈಟೆಡ್ ವೇ ಸಂಸ್ಥೆಯು ಶನಿವಾರ ಕೆರೆ ಅಂಗಳದಲ್ಲಿ `ಲೇಕಥಾನ್~ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿತ್ತು.

ಈ ಸಂದರ್ಭದಲ್ಲಿ ಮಾತನಾಡಿದ ಐಐಎಂಬಿ ಸಾರ್ವಜನಿಕ ನೀತಿ ಕೇಂದ್ರದ ಸದಸ್ಯ ಡಾ.ಅಶ್ವಿನ್ ಮಹೇಶ್, `ಬೆಂಗಳೂರು ಇಂದು ವಿಸ್ತಾರವಾಗಿ ಬೆಳೆದಿದೆ. ನಿತ್ಯ ಸುಮಾರು 1,000 ಮಂದಿ ಬೆಂಗಳೂರಿಗೆ ವಲಸೆ ಬರುತ್ತಿದ್ದಾರೆ ಎಂಬ ಅಂದಾಜು ಇದೆ. ಇದರಿಂದಾಗಿ ನಗರದಲ್ಲಿ ಮೂಲ ಸೌಕರ್ಯ ಕಲ್ಪಿಸುವುದು ಸವಾಲಾಗಿ ಪರಿಣಮಿಸಿದೆ. ಹಾಗಾಗಿ ಕೆರೆ ಸಂರಕ್ಷಣೆಯಂತಹ ಕಾರ್ಯಗಳಲ್ಲಿ ಸರ್ಕಾರ ಹಾಗೂ ಸ್ಥಳೀಯ ಆಡಳಿತದ ಜತೆಗೆ ಸಾರ್ವಜನಿಕರು ಕೈಜೋಡಿಸಬೇಕು~ ಎಂದರು.

ಪರಿಸರವಾದಿ ಡಾ.ಅ.ನ.ಯಲ್ಲಪ್ಪರೆಡ್ಡಿ, `ಕೆರೆಗಳು, ಉದ್ಯಾನಗಳೆಲ್ಲಾ ಸರ್ಕಾರದ ಸ್ವತ್ತಾಗಿದ್ದರೂ ಜನರು ಅವುಗಳ ಸಂರಕ್ಷಣೆಗೆ ಮುಂದಾಗಬೇಕು. ಆ ಮೂಲಕ ಅಂತರ್ಜಲ ರಕ್ಷಣೆ, ಪರಿಸರ ಮಾಲಿನ್ಯವನ್ನು ನಿಯಂತ್ರಿಸಲು ಪ್ರಯತ್ನಿಸಬೇಕು. ಖಾಸಗಿ ಸ್ವತ್ತನ್ನು ಸಂರಕ್ಷಿಸುವ ರೀತಿಯಲ್ಲಿ ಅವುಗಳ ನಿರ್ವಹಣೆ ಮಾಡಬೇಕು~ ಎಂದು ಕಿವಿಮಾತು ಹೇಳಿದರು.

ಕ್ರೀಡಾ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ್‌ರಾಜು ಮಾತನಾಡಿ, `ಉತ್ತರಹಳ್ಳಿ ಕೆರೆಯನ್ನು ಅಭಿವೃದ್ಧಿಪಡಿಸಲಾಗಿದ್ದು, ಇದೀಗ ಕೆರೆಯ ನಿರ್ವಹಣೆ ಜವಾಬ್ದಾರಿಯನ್ನು ಯುನೈಟೆಡ್ ವೇ ಸಂಸ್ಥೆ ವಹಿಸಿರುವುದು ಉತ್ತಮವಾಗಿದೆ. ಈ ಭಾಗದ ಕೆರೆಗಳ ಸಂರಕ್ಷಣೆಗೆ ಒತ್ತು ನೀಡಲಾಗಿದ್ದು, ಸುಮಾರು ಎರಡು ಎಕರೆ ಪ್ರದೇಶದಲ್ಲಿ ಹೊಸದಾಗಿ ಕೆರೆ ನಿರ್ಮಿಸಲಾಗುತ್ತಿದೆ~ ಎಂದರು.

ಯುನೈಟೆಡ್ ವೇ ಸಂಸ್ಥೆಯ ಅಧ್ಯಕ್ಷ ಸಾಬು ಥಾಮಸ್, `ಇಂಗರ್‌ಸೊಲ್ ರ‌್ಯಾಂಡ್ ಸಂಸ್ಥೆಯ ಸಹಯೋಗದಲ್ಲಿ ಕೆರೆಗಳ ಸಂರಕ್ಷಣೆಗೆ ಆದ್ಯತೆ ನೀಡಲಾಗಿದೆ. ಈ ಬಗ್ಗೆ ಸ್ಥಳೀಯರಲ್ಲಿ ಅರಿವು ಮೂಡಿಸಲು ಆಂದೋಲನ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಕೈಕೊಂಡನಹಳ್ಳಿ ಕೆರೆಯ ನಿರ್ವಹಣೆಯನ್ನು ಸಂಸ್ಥೆ ವಹಿಸಿಕೊಂಡಿದೆ~ ಎಂದರು.

`ಉತ್ತರಹಳ್ಳಿ ಕೆರೆ ಅಂಗಳದಲ್ಲೂ ಈವರೆಗೆ 300 ಔಷಧೀಯ ಸಸಿಗಳನ್ನು ನೆಡಲಾಗಿದ್ದು, ಇನ್ನೂ 300 ಸಸಿಗಳನ್ನು ನೆಡುವ ಉದ್ದೇಶವಿದೆ. ಕೆರೆಯಲ್ಲಿ ಸ್ವಚ್ಛತೆ ಕಾಪಾಡಲು, ದಿನದ 24 ಗಂಟೆ ಭದ್ರತಾ ವ್ಯವಸ್ಥೆ ಕಲ್ಪಿಸಲು ವಾರ್ಷಿಕವಾಗಿ 10 ಲಕ್ಷ ರೂಪಾಯಿ ವೆಚ್ಚ ಮಾಡಲು ಚಿಂತಿಸಲಾಗಿದೆ.  ಸಂಸ್ಥೆಯು ಹಣವನ್ನು ಕ್ರೋಢಿಕರಿಸಿ ಸ್ಥಳೀಯ ನಿವಾಸಿಗಳ ಸಂಘದವರಿಗೆ ನೀಡಲಿದೆ. ಆ ಸಂಘದ ಪದಾಧಿಕಾರಿಗಳು ಕೆರೆಯ ನಿರ್ವಹಣೆ ಕೈಗೊಳ್ಳಲಿದ್ದಾರೆ~ ಎಂದು ಹೇಳಿದರು.

ಇಂಗರ್‌ಸೊಲ್ ರ‌್ಯಾಂಡ್ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ ವೆಲ್ಲೂರಿ, ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ.ವಿ. ಸತೀಶ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT