ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರಾಂಧ್ರದಲ್ಲಿ ಆಧಿಪತ್ಯಕ್ಕೆ ಸೆಣಸಾಟ

Last Updated 2 ಮೇ 2014, 19:30 IST
ಅಕ್ಷರ ಗಾತ್ರ

ವಿಶಾಖಪಟ್ಟಣಂ (ಆಂಧ್ರಪ್ರದೇಶ): ಶ್ರೀಕಾಕುಳಂ, ವಿಜಯನಗರಂ ಮತ್ತು ವಿಶಾಖಪಟ್ಟಣಂ ಜಿಲ್ಲೆಗಳಿಂದ ಕೂಡಿದ ಉತ್ತರಾಂಧ್ರ ಭಾಗ ಒಡಿಶಾ ಗಡಿಗೆ ಹೊಂದಿಕೊಂಡಿದೆ. ಇಲ್ಲಿ ಅರಣ್ಯ ಪ್ರದೇಶ ತುಸು ಹೆಚ್ಚಿದೆ. ಬುಡಕಟ್ಟು ಜನ ಅಧಿಕ ಸಂಖ್ಯೆಯಲ್ಲಿದ್ದಾರೆ. ವಿಭಜನೆಯ ನಂತರದ ಸೀಮಾಂಧ್ರದ ಅತಿದೊಡ್ಡ ನಗರ ವಿಶಾಖಪಟ್ಟಣಂ. ಔದ್ಯಮಿಕ ರಂಗದಲ್ಲೂ ಮುನ್ನೆಲೆಗೆ ಬಂದಿದೆ.

ಸೀಮಾಂಧ್ರದ 175 ವಿಧಾನಸಭಾ ಕ್ಷೇತ್ರಗಳ ಪೈಕಿ 34 ಕ್ಷೇತ್ರಗಳು ಉತ್ತರಾಂಧ್ರದಲ್ಲೇ ಇವೆ. ಹೀಗಾಗಿ ಈ ಪ್ರಾಂತ್ಯದ ಜನರ ಒಲವು–ನಿಲುವು ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದಕ್ಕಾಗಿಯೇ ಎಲ್ಲ ಪಕ್ಷಗಳೂ ಈ ಭಾಗದಲ್ಲಿ ಆಧಿಪತ್ಯ ಸಾಧಿಸಲು ವಿಶೇಷ ಆಸಕ್ತಿ ವಹಿಸಿವೆ.

ತೆಲುಗುದೇಶಂ ಸ್ಥಾಪನೆಯಾದ ಶುರು­ವಿನಿಂದಲೂ ಆ ಪಕ್ಷಕ್ಕೆ ಬೆಂಬಲ­ವಾಗಿ ನಿಂತಿದ್ದಾರೆ ಇಲ್ಲಿನ ಜನ. ಒಂದೆರಡು ಬಾರಿ ರಾಜ್ಯದ ಉದ್ದಗಲ­ಕ್ಕೂ ಬೀಸಿದ ‘ಅಲೆ’ ಇಲ್ಲಿಯೂ ಪ್ರಭಾವ ಬೀರಿದೆಯಾದರೂ ಉಳಿದಂತೆ ಟಿಡಿಪಿಗೆ ಭದ್ರಕೋಟೆಯಾಗಿದೆ. ಆಗಾಗ್ಗೆ ಕಾಂಗ್ರೆಸ್‌ಗೆ ಮರ್ಮಾಘಾತ ನೀಡು­ತ್ತಲೇ ಬಂದಿದೆ.

1994ರ ಚುನಾವಣೆಯಲ್ಲಿ ಉತ್ತರಾಂಧ್ರದಿಂದ ಕಾಂಗ್ರೆಸ್‌ ಗೆದ್ದಿದ್ದು ಬರೀ ಒಂದು ಸ್ಥಾನ. 2009ರ ಚುನಾ­ವಣೆಯಲ್ಲಿ ಕ್ಷೇತ್ರ ಪುನರ್‌ ವಿಂಗಡಣೆ ಪ್ರಭಾವ ಹಾಗೂ ಚಿರಂಜೀವಿ ನೇತೃತ್ವದ ಪ್ರಜಾರಾಜ್ಯಂ ಪಕ್ಷದ ರಂಗಪ್ರವೇಶದಿಂದ ಟಿಡಿಪಿ ಹಿನ್ನಡೆ ಅನುಭವಿಸಿತು. ಎರಡಂಕಿ ಮುಟ್ಟುವಲ್ಲಿ ಮೊದಲ ಬಾರಿಗೆ ವಿಫಲವಾಯಿತು.

ಆ ನಂತರದ ಪರಿಣಾಮಗಳಿಂದ (ಕಾಂಗ್ರೆಸ್‌ನಲ್ಲಿ ಪ್ರಜಾರಾಜ್ಯಂ ಪಕ್ಷದ ವಿಲೀನ, ರಾಜ್ಯ ವಿಭಜನೆ ಇತ್ಯಾದಿ) ಟಿಡಿಪಿ ಪೂರ್ವ­ವೈಭವ ­ಸಾಧಿಸುವ ದಿಸೆಯಲ್ಲಿ ದಾಪುಗಾಲು ಇಟ್ಟಿದೆ. ವೈಎಸ್‌ಆರ್‌ ಕಾಂಗ್ರೆಸ್ ಮುಖಂಡ ಜಗನ್ಮೋಹನ್‌ ರೆಡ್ಡಿ  ಇದನ್ನು ಮನಗಂಡು, ‘ಸೈಕಲ್‌’ (ಟಿಡಿಪಿ ಚಿಹ್ನೆ)  ವೇಗಕ್ಕೆ ತಡೆಯೊಡ್ಡುವ ತಂತ್ರವಾಗಿ ತಮ್ಮ ತಾಯಿ ವೈ.ಎಸ್‌.ವಿಜಯಲಕ್ಷ್ಮಿ ಅವರನ್ನು ವಿಶಾಖ­ಪಟ್ಟಣಂ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿಸಿದ್ದಾರೆ.

ಹೀಗಾಗಿ ವಿಶಾಖಪಟ್ಟಣಂ ಜಿಲ್ಲೆ­ಯಲ್ಲಿ ಚುನಾವಣಾ ಅಖಾಡ ರಂಗೇರಿದೆ. ರಾಜ್ಯದ ಎಲ್ಲರ ದೃಷ್ಟಿ ಇತ್ತ ನೆಟ್ಟಿದೆ. ಕಾರ್ಯಕರ್ತರು ತಂಡೋ­ಪಾದಿಯಲ್ಲಿ ಮನೆಮನೆಗೂ ತೆರಳಿ ಮತ ಯಾಚಿಸುತ್ತಿದ್ದಾರೆ. ‘ಮನೆ ಕೆಲಸದವರು ಮೂರು– ನಾಲ್ಕು ದಿವಸದಿಂದ ಚಕ್ಕರ್‌ ಹೊಡೆದಿದ್ದಾರೆ’ ಎಂದು ನಗರದ ಗಾಜುವಾಕ ನಿವಾಸಿ ವಿ.ಎನ್‌.ಮೂರ್ತಿ ಮುಗುಳ್ನಕ್ಕರು, ಪಕ್ಷಗಳು ಇವರನ್ನೆಲ್ಲ ಪ್ರಚಾರದಲ್ಲಿ ತೊಡಗಿಸಿವೆ ಎಂಬರ್ಥದಲ್ಲಿ.
ಮೆರವಣಿಗೆ, ರೋಡ್‌ ಷೋ, ಬಹಿರಂಗ ಸಭೆಗಳು ಸಾಲುಗಟ್ಟಿವೆ.  ಟಿಡಿಪಿ–ಬಿಜೆಪಿ ಗುರುವಾರ ಸಂಜೆ ಆಯೋಜಿಸಿದ್ದ ಬಹಿರಂಗ ಸಭೆಯಲ್ಲಿ ನರೇಂದ್ರ ಮೋದಿ, ನಾರಾ ಚಂದ್ರಬಾಬು ನಾಯ್ಡು ಹಾಗೂ ನಟ ಪವನ್‌ ಕಲ್ಯಾಣ್‌ ಭಾಗವಹಿಸಿದ್ದರು. ಇದರ ಬೆನ್ನಿಗೇ ಚಂದ್ರಬಾಬು ಮಗ ಲೋಕೇಶ್‌ ರೋಡ್‌ ಷೋ ನಡೆಸಿದ್ದಾರೆ. ಜಗನ್‌ ಭಾಗವಹಿಸಲಿರುವ ಬಹಿರಂಗ ಸಭೆ ದಿನ ನಿಗದಿಯಾಗಿದೆ. 

ವಿಶಾಖಪಟ್ಟಣಂ ಜಿಲ್ಲೆ ಮೂರು ಲೋಕಸಭಾ ಕ್ಷೇತ್ರ ಹಾಗೂ 15 ವಿಧಾನಸಭಾ ಕ್ಷೇತ್ರಗಳಲ್ಲಿ ಹರಡಿ­ಕೊಂಡಿದೆ. ವಿಶಾಖಪಟ್ಟಣಂ ಲೋಕ­ಸಭಾ ಕ್ಷೇತ್ರಕ್ಕೆ ನಗರದ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮ ಹಾಗೂ ಭೀಮಿಲಿ, ಗಾಜುವಾಕ, ಶೃಂಗವರಪುಕೋಟ ವಿಧಾನಸಭಾ ಕ್ಷೇತ್ರಗಳು ಒಳಪಡುತ್ತವೆ. ಈ ಕ್ಷೇತ್ರ ವ್ಯಾಪ್ತಿಯಲ್ಲಿ ನಗರದ ಮತದಾರರೇ ಹೆಚ್ಚು. ಅದರಲ್ಲಿಯೂ ಉದ್ಯೋಗ ನಿಮಿತ್ತ ಬೇರೆ ಬೇರೆ ರಾಜ್ಯಗಳಿಂದ ಬಂದ ಜನರು ನೆಲೆಸಿ­ದ್ದಾರೆ. ಉತ್ತರ ಭಾರತದಿಂದ ಬಂದ­ವರೂ ಗಣನೀಯ ಸಂಖ್ಯೆಯಲ್ಲಿದ್ದಾರೆ.

ಈ ಲೋಕಸಭಾ ಕ್ಷೇತ್ರ ಒಂದು ರೀತಿ ವಲಸಿಗರ ಬೀಡಾಗಿದೆ. ಕಳೆದ ಚುನಾ­ವಣೆಯಲ್ಲಿ ಎನ್‌.ಟಿ. ರಾಮರಾವ್‌ ಪುತ್ರಿ ದಗ್ಗುಬಾಟಿ ಪುರಂದೇಶ್ವರಿ ಇಲ್ಲಿಂದ ಆಯ್ಕೆಯಾಗಿದ್ದರು. ಅದಕ್ಕೂ ಹಿಂದೆ ನೆದುರುಮಲ್ಲಿ ಜನಾರ್ದನ ರೆಡ್ಡಿ, ಟಿ.ಸುಬ್ಬಿರಾಮಿ ರೆಡ್ಡಿ ಆಯ್ಕೆಯಾ­ಗಿ­ದ್ದರು. ಎಲ್ಲರೂ ಹೊರಗಿನವರೇ. ಈ ಸಲ ವಿಜಯಲಕ್ಷ್ಮಿ  ಸರದಿ.

‘ಹೊರಗಿನಿಂದ ಬಂದವರು ಗೆದ್ದ ಬಳಿಕ ಸ್ಥಳೀಯರ ಕೈಗೆ ಸಿಗುವುದೇ ಇಲ್ಲ’ ಎಂದು ಪೋತುಲ ಸೀತಾರಾಮ ರಾವ್‌ ಅಸಮಾಧಾನಪಟ್ಟರು. ಈ ಬಗೆಯ ಅಸಮಾಧಾನವನ್ನು ಅನೇಕರು ವ್ಯಕ್ತಪಡಿಸುತ್ತಾರೆ. ಟಿಡಿಪಿ ತನ್ನ ಮಿತ್ರ ಪಕ್ಷ ಬಿಜೆಪಿಗೆ ಈ ಕ್ಷೇತ್ರವನ್ನು ಬಿಟ್ಟುಕೊಟ್ಟಿದೆ. ಡಾ.ಕಂಭಂಪಾಟಿ ಹರಿಬಾಬು ಇಲ್ಲಿಂದ ಕಣಕ್ಕೆ ಇಳಿದಿದ್ದಾರೆ. ಬಿಜೆಪಿಯ ಸೀಮಾಂಧ್ರ ಘಟಕದ ಅಧ್ಯಕ್ಷರಾದ ಇವರು, 1999ರಲ್ಲಿ ವಿಶಾಖಪಟ್ಟಣಂ–1 ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾ­ಗಿದ್ದರು. ನಂತರದ ಚುನಾವಣೆಯಲ್ಲಿ ಸೋಲುಂಡಿದ್ದರು. ಇವರು ಗೆದ್ದರೆ ಕೇಂದ್ರ­ದಲ್ಲಿ ಸಚಿವರಾಗುವುದು ಖಚಿತ ಎಂದು ಪಕ್ಷದ ಕಾರ್ಯಕರ್ತರು ಪ್ರಚಾರ ನಡೆಸಿ­ದ್ದಾರೆ.

‘ಎನ್‌ಡಿಎ ಅಧಿಕಾರಕ್ಕೆ ಬಂದೇ ಬರುತ್ತದೆ’ ಎಂಬ ದೃಢ ವಿಶ್ವಾಸದಲ್ಲಿ ಹೀಗೆ ಹೇಳುತ್ತಿದ್ದಾರೆ. ಜೈ ಸಮೈಕ್ಯಾಂಧ್ರ ಪಕ್ಷದಿಂದ ಸಬ್ಬಂ ಹರಿ ಸ್ಪರ್ಧಿಸಿದ್ದಾರೆ. ಜಿಲ್ಲೆಯ ಇನ್ನೊಂದು ಲೋಕಸಭಾ ಕ್ಷೇತ್ರ ಅನಕಾಪಲ್ಲಿಯನ್ನು ಪ್ರತಿನಿಧಿಸುತ್ತಿರುವ ಇವರು, ಕಾಂಗ್ರೆಸ್‌ನಿಂದ ಸಮೈಕ್ಯಾಂಧ್ರ ಪಕ್ಷಕ್ಕೆ ಜಿಗಿದಿದ್ದಾರೆ. ಪಕ್ಷಾಂತರದ ಜತೆಗೆ ಕ್ಷೇತ್ರವನ್ನೂ ಬದಲಿಸಿದ್ದಾರೆ.

ಕಳೆದ ಚುನಾವಣೆಯಲ್ಲಿ ಪ್ರಜಾ­ರಾಜ್ಯಂ ಪಕ್ಷದ ನಾಲ್ವರು ಅಭ್ಯರ್ಥಿಗಳು ಇಲ್ಲಿಂದ ಆಯ್ಕೆಯಾಗಿದ್ದರು. ಆಗ ಟಿಡಿಪಿಯಿಂದ ದೂರವಾಗಿದ್ದ ಗಂಟಾ ಶ್ರೀನಿವಾಸ ರಾವ್‌ ಸೇರಿದಂತೆ ಹಲ ಮುಖಂಡರು ಪುನಃ ಮಾತೃಪಕ್ಷದ ಅಂಗಳ ಸೇರಿದ್ದಾರೆ. ಪಕ್ಷಾಂತರ ಹಾಗೂ ಹೊಸ ಧ್ರುವೀಕರಣದ ಪರಿಣಾಮಗಳ ಕುರಿತು ಮತದಾರರಲ್ಲಿ ಕುತೂಹಲ ಇದೆ. ‘ಏನನ್ನೂ ಹೇಳಲಿಕ್ಕೆ ಬರದು’ ಎಂದು ಸಿಂಹಾಚಲಂ ನಿವಾಸಿ ದೊರಬಾಬು ಪ್ರತಿಕ್ರಿಯಿಸಿದರು.

ಸೀಮಾಂಧ್ರದಲ್ಲಿ ಇದೇ 7ಕ್ಕೆ ಮತದಾನ ನಡೆಯಲಿದೆ. ಆದರೆ ವಿಶಾಖಪಟ್ಟಣಂ ಜಿಲ್ಲೆಯಲ್ಲಿ ಪಕ್ಷಾಂತರ ಪ್ರಕ್ರಿಯೆ ಇನ್ನೂ ಮುಂದುವರಿದಿದೆ. ಕೈಗಾರಿಕೆಗಳಿಗೆ, ಪೆಟ್ರೊ ಕಾರಿಡಾರ್‌ಗೆ ಜಮೀನು ಬಿಟ್ಟುಕೊಟ್ಟ ರೈತರಿಗೆ ಇನ್ನೂ ಪೂರ್ಣ ಪರಿಹಾರ ಸಿಕ್ಕಿಲ್ಲ. ಹೊರವಲಯದಲ್ಲಿ ಈ ಕುರಿತು ಹಲ­ವರು ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ನಾಲ್ಕು ಸಹಕಾರ ಸಕ್ಕರೆ ಕಾರ್ಖಾನೆಗಳಿವೆ. ಕಬ್ಬಿಗೆ ಬೆಂಬಲ ಬೆಲೆ ಸಮರ್ಪಕವಾಗಿ ನಿಗದಿ ಮಾಡಿಲ್ಲ  ಎಂಬ ಕೊರಗು ಬೆಳೆಗಾರರಲ್ಲಿದೆ. ಈ ಅಂಶಗಳು ಚುನಾವಣೆಯಲ್ಲಿ ಪ್ರಭಾವ ಬೀರಬಹುದು.

ಕಾಂಗ್ರೆಸ್‌ ಇಲ್ಲಿಯೂ ಏದುಸಿರು ಬಿಡುತ್ತಿದೆ. ಟಿಡಿಪಿಗೆ ನಿಷ್ಠ ಕಾರ್ಯ­ಕರ್ತರ ಪಡೆ ಇದೆ. ಆದರೆ ಕಾಂಗ್ರೆಸ್‌­ನಿಂದ ಬಹಳಷ್ಟು ಮಂದಿ ಟಿಡಿಪಿ ಸೇರಿದ್ದಾರೆ. ಹಳೆ ಕಾರ್ಯಕರ್ತರು ಹಾಗೂ ಹೊಸ ಮುಖಂಡರ ನಡುವೆ ಸಮನ್ವಯ ಹೇಗೆ ಕುದುರುತ್ತದೆ ಎಂಬು­ದರ ಮೇಲೆ ಫಲಿತಾಂಶ ಅವಲಂಬಿಸಿದೆ. ಬಿಜೆಪಿ ಜತೆಗಿನ ಮೈತ್ರಿ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಅನುಕೂಲ ಆಗಲಿದೆ ಎಂಬುದು ಪಕ್ಷದ ಮುಖಂಡರ ಆಶಯ. ಆದರೆ ಪಕ್ಷದ ಹಿರಿಯ ನಾಯಕರ ನಡುವೆ ಭಿನ್ನಾಭಿಪ್ರಾಯ­ಗಳಿವೆ. ಇದನ್ನು ಸರಿಪಡಿಸಿಕೊಳ್ಳದಿದ್ದರೆ ಟಿಡಿಪಿಗೆ ಹಾನಿ ಕಟ್ಟಿಟ್ಟಬುತ್ತಿ.

ವೈಎಸ್‌ಆರ್‌ ಕಾಂಗ್ರೆಸ್‌ ಪ್ರಚಾರ­ದಲ್ಲಿ ಮುಂದಿದೆ. ಕಾಂಗ್ರೆಸ್‌ನ ಹಲವು ಮುಖಂಡರು ಈ ಪಕ್ಷಕ್ಕೂ ಸೇರಿರುವು­ದ­ರಿಂದ ಪಕ್ಷ ಬಲ ವೃದ್ಧಿಸಿಕೊಂಡಿದೆ. ಪಕ್ಷಕ್ಕೆ ದುಡಿದವರಿಗೆ ಟಿಕೆಟ್‌ ಕೈತಪ್ಪಿರುವುದರ ಬಗ್ಗೆ ಅತೃಪ್ತಿ ಇದೆ. ಆದರೆ ಪಕ್ಷದ ಗೌರವಾಧ್ಯಕ್ಷೆ ವಿಜಯಲಕ್ಷ್ಮಿ ಅವರು ಇಲ್ಲಿಂದ ಸ್ಪರ್ಧಿಸಿರುವುದು ಕಾರ್ಯ­ಕರ್ತರ ನೈತಿಕ ಸ್ಥೈರ್ಯ ಹೆಚ್ಚಿಸಿದೆ. ಇದರ ಪ್ರಭಾವ ಇಡೀ ಉತ್ತರಾಂಧ್ರದ ಮೇಲೆ ಸ್ವಲ್ಪಮಟ್ಟಿಗೆ ಆಗಬಹುದು.

ಬುಡಕಟ್ಟು ಸ್ಪರ್ಧೆ: ಬುಡಕಟ್ಟು ಜನರು ವಾಸಿಸುವ ಹಲವು ಗ್ರಾಮಗಳಿಗೆ ಇನ್ನೂ ರಸ್ತೆ, ಶಾಲೆ ಮತ್ತು ಆಸ್ಪತ್ರೆಯಂಥ ಮೂಲ ಸೌಕರ್ಯ ಇಲ್ಲ. ಇದರಿಂದ ಸಿಟ್ಟಾಗಿರುವ ಬುಡಕಟ್ಟು ಜನರು, ಅರಕು ಮತ್ತು ಪಾಡೇರು ಮೀಸಲು ವಿಧಾನಸಭಾ ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದಾರೆ. ಇವರ ಜನಸಂಖ್ಯೆ ಸುಮಾರು ಎರಡು ಲಕ್ಷ ಇರಬಹುದು ಎಂದು ಅಂದಾಜಿಸ­ಲಾಗಿದೆ. ಒಂದೆರಡು ಕ್ಷೇತ್ರಗಳಲ್ಲಿ ಈ ಅಂಶವೂ ಪರಿಣಾಮ ಬೀರುವ ಸಾಧ್ಯತೆಗಳಿವೆ.

ಅರಕು ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ವಿಶಾಖಪಟ್ಟಣಂ ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳೂ ಸೇರುತ್ತವೆ. ಕೇಂದ್ರ ಸಚಿವ ಕಿಶೋರ್‌ ಚಂದ್ರದೇವ್‌ ಕಾಂಗ್ರೆಸ್‌ನಿಂದ ಪುನರಾಯ್ಕೆ ಬಯಸಿದ್ದಾರೆ. ಟಿಡಿಪಿ– ಬಿಜೆಪಿ ಮೈತ್ರಿಕೂಟದಿಂದ ಗುಮ್ಮಡಿ ಸಂಧ್ಯಾರಾಣಿ, ವೈಎಸ್‌ಆರ್‌ ಕಾಂಗ್ರೆಸ್‌­ನಿಂದ ಕೊತ್ತಪಲ್ಲಿ ಗೀತಾ ಸ್ಪರ್ಧಿಸಿದ್ದಾರೆ. ನಗರದಲ್ಲಿ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ.
ಆರು ಪಥದ ಹೊರ ವರ್ತುಲ

ರಸ್ತೆ ವಾಹನ ಸಂಚಾರಕ್ಕೆ ತೆರೆದುಕೊಂಡಿದೆ. ನೌಕಾ ನೆಲೆ, ವಿಶಾಖ ಉಕ್ಕು ಕಾರ್ಖಾನೆ ಇದೆ. ಖನಿಜ ಸಂಪತ್ತು ಹೇರಳವಾಗಿದೆ. ಇದನ್ನು ಪ್ರಥಮ ಶ್ರೇಣಿ ನಗರವಾಗಿ ಅಭಿವೃದ್ಧಿಪಡಿಸಬೇಕು. ಮಾಹಿತಿ ತಂತ್ರಜ್ಞಾನ ಚಟುವಟಿಕೆ ಹಾಗೂ ದೇಶ ರಕ್ಷಣೆಯ ಅಗತ್ಯಗಳಿಗೆ ಸಂಬಂಧಿಸಿದ ಉದ್ಯಮಗಳ ಸ್ಥಾಪನೆಗೆ ಉತ್ತೇಜನ ನೀಡಬೇಕು ಎಂದು ವಾಣಿಜ್ಯೋದ್ಯಮ ಸಂಘಟನೆಗಳು ಆಗ್ರಹಿಸುತ್ತಲೇ ಬಂದಿವೆ. ಆದರೆ ಸರ್ಕಾರದಿಂದ ಸರಿಯಾದ ಸ್ಪಂದನ ದೊರೆತಿಲ್ಲ ಎಂದು ಸುಶಿಕ್ಷಿತರು ದೂರುತ್ತಾರೆ.

ಉತ್ತರಾಂಧ್ರದಲ್ಲಿ ‘ಕಳೆದುಕೊಂಡಿ­ರುವ ವೈಭವವನ್ನು ಟಿಡಿಪಿ ಮರಳಿ ಪಡೆಯುವುದೇ? ವೈಎಸ್ಆರ್‌ ಕಾಂಗ್ರೆಸ್‌ ಅದಕ್ಕೆ ಅವಕಾಶ ನೀಡುವುದೇ’ ಎಂಬ ಕುತೂಹಲ ರಾಜಕೀಯ ವಲಯದಲ್ಲಿ ಗರಿಗೆದರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT