ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರೆ ಮಳೆಗೆ ಜನಜೀವನ ಅಸ್ತವ್ಯಸ್ತ

Last Updated 11 ಸೆಪ್ಟೆಂಬರ್ 2013, 6:08 IST
ಅಕ್ಷರ ಗಾತ್ರ

ಹನುಮಸಾಗರ: ಎರಡು ದಿನಗಳಿಂದ ಬಿಡದೆ ಸುರಿದ ಉತ್ತರಿ ಮಳೆಯಿಂದ ಇಲ್ಲಿನ ಬಹುತೇಕ ಹಳ್ಳಕೊಳ್ಳಗಳು ನೀರಿನಿಂದ ತುಂಬಿ ಹರಿಯುತ್ತಿವೆ. ಕೆರೆಕಟ್ಟಿಗಳು ನೀರಿನಿಂದ ಭರ್ತಿಯಾಗಿದ್ದು, ಸಂಚಾರಕ್ಕೆ ಅಡತಡೆ ಉಂಟು ಮಾಡಿವೆ.

ಇಲ್ಲಿನ ಶಾದಿಮಹಲ್ ಮೂಲಕ ಜಮೀನುಗಳಿಗೆ ಹೋಗುವ ಮುಖ್ಯರಸ್ತೆ ಮಂಗಳವಾರ ಮಧ್ಯಾಹ್ನದ ವರೆಗೂ ನೀರಿನಿಂದ ಆವೃತವಾಗಿದ್ದರಿಂದ ಕೃಷಿ ಕೆಲಸಕ್ಕೆ ಹೋಗಬೇಕಾದ ರೈತರು ನೀರಿನಲ್ಲಿಯೇ ತೆರಳುತ್ತಿರುವುದು ಕಂಡುಬಂದಿತು.

ಈ ಹಳ್ಳದ ಮುಂಭಾಗದಲ್ಲಿ ಚಕ್‌ ಡ್ಯಾಂ ನಿರ್ಮಾಣ ಮಾಡಿರುವುದರಿಂದ ಡ್ಯಾಂ ತುಂಬಿದ ಬಳಿಕ ಹೀಗೆ ರಸ್ತೆಗೆ ನೀರು ಬಂದು ನಿಲ್ಲುತ್ತದೆ. ಮಳೆ ಬಂದಾಗ ಹೀಗೆ ನೀರು ತುಂಬಿ ವಾರದ ವರೆಗೂ ನಿಲ್ಲುವುದರಿಂದ ಹೊಲಗಳಿಗೆ ತೆರಳಲು ತೀವ್ರ ತೊಂದರೆಯಾಗುತ್ತಿದೆ.
ಸಮೀಪದ ಮಿಯಾಪೂರ ಗ್ರಾಮದ ಹಳ್ಳ ಬೆಳಗಿನ ವರೆಗೂ ತುಂಬಿ ಹರಿಯುತ್ತಿದಿದರಿಂದ ಜನ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಆರು ವರ್ಷಗಳ ಅವಧಿಯಲ್ಲಿ ಈರೀತಿ ಹಳ್ಳ ತುಂಬಿ ಹರಿಯುತ್ತಿರುವುದು ಇದು ಎರಡನೇ ಬಾರಿ ಎಂದು ಸಾರ್ವಜನಿಕರು ಹೇಳುತ್ತಾರೆ.
ಸೋಮವಾರ ಮಧ್ಯರಾತ್ರಿಯಿಂದಲೇ ಈ ಹಳ್ಳ ತುಂಬಿ ಹರಿಯುತ್ತಿದ್ದು, ಮಂಗಳವಾರ ಬೆಳಗಿನ ವರೆಗೂ ನೀರಿನ ರಭಸ ಕಡಿಮೆಯಾಗದಿ ರುವುದರಿಂದ ಜನರು, ಶಾಲಾ, ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ನೌಕರರು ಹಳ್ಳದ ರಭಸ ಕಡಿಮೆಯಾಗುವವರೆಗೂ ದಂಡೆಯಲ್ಲಿಯೇ ಕುಳಿತುಕೊಳ್ಳುವಂತಾಗಿತ್ತು.

ದಾಖಲೆ ಮಳೆ: ಸಂಚಾರ ಸ್ಥಗಿತ
ಕನಕಗಿರಿ:
ಭಾನುವಾರ ಸಂಜೆ ಇಲ್ಲಿ ಸುರಿದ ದಾಖಲೆ ಪ್ರಮಾಣದ ಮಳೆಯಿಂದ ಗಂಗಾವತಿ-–ಲಿಂಗಸೂರು ರಸ್ತೆ ಕುಸಿದಿದೆ.
ಎರಡು ಗಂಟೆ ಕಾಲ ನಿರಂತರವಾಗಿ ಸುರಿದ ಮಳೆಯಿಂದ ಇಲ್ಲಿನ ತ್ರಿವೇಣಿ ಸಂಗಮ ತುಂಬಿ ಹರಿಯುತ್ತಿದ್ದು, ನೀರಿನ ರಭಸಕ್ಕೆ ಗಂಗಾಕ್ಯಾಂಪ್‌ನ ರಸ್ತೆ ಸಂಪೂರ್ಣವಾಗಿ ಕುಸಿದ ಕಾರಣ ಬಸ್ ಸಂಚಾರ ಸ್ಥಗಿತಗೊಂಡಿದ್ದು, ಕನಕಾಚಲಪತಿ ದೇವ ಸ್ಥಾನ ರಸ್ತೆ (ಹಳೆಯ ತಾವರಗೆರೆ ರಸ್ತೆ) ಮೂಲಕ ಬಸ್, ಇತರೆ ವಾಹನಗಳು ಓಡಾಡುತ್ತಿವೆ.

ತಿಪ್ಪನಾಳ, ನೀರ್ಲೂಟಿ, ಹುಲಿಹೈದರ, ಸೂಳೇಕಲ್, ಬಸರಿಹಾಳ, ಅರಳಹಳ್ಳಿ ಇತರೆ ಗ್ರಾಮದ ಹೊಲದಲ್ಲಿಯೂ ನೀರು ನಿಂತು ಕೃಷಿ ಚಟುವಟಿಕೆಗಳಿಗೆ ತೊಂದರೆ ಉಂಟಾಗಿದೆ.

2 ವರ್ಷಗಳಿಂದ ಮಳೆ ಇಲ್ಲದ ಕಾರಣ ತ್ರಿವೇಣಿ ಸಂಗಮದಲ್ಲಿ ಒಂದು ಹನಿ ನೀರು ಇರಲಿಲ್ಲ. ಈ ಬಾರಿ ಗಣೇಶ ಪ್ರತಿಷ್ಠಾಪನೆ ಮುನವೇ ಮಳೆ ಬಿದ್ದಿದ್ದು ಅಪಾರ ಪ್ರಮಾಣದಲ್ಲಿ ನೀರು ತ್ರಿವೇಣಿ ಸಂಗಮಕ್ಕೆ ಹರಿದು ಬಂದಿದೆ. ಸೋಮವಾರ ರಾತ್ರಿ ಸಾಕಷ್ಟು ಜನರು ಇಲ್ಲಿಯೆ ಪೂಜೆ ಸಲ್ಲಿಸಿ ಗಣೇಶ ಮೂರ್ತಿಗಳನ್ನು ವಿಸರ್ಜನೆ ಮಾಡಲಾಯಿತು.

ಸೋಮವಾರ ಸಂತೆಯ ದಿನವಾಗಿದ್ದು ಬಸ್ ಇತರೆ ವಾಹನಗಳು ಹಳೆಯ ತಾವರಗೆರೆ ರಸ್ತೆಯಲ್ಲಿ ಸಂಚರಿಸಿದವು, ಬೀದಿ ಬದಿಯ ವ್ಯಾಪಾರಸ್ಥರು ತೊಂದರೆಗೀಡಾದರು.

ಮಧ್ಯರಾತ್ರಿ ನುಗ್ಗಿದ ಪ್ರವಾಹ
ಕುಷ್ಟಗಿ:
ತಾಲ್ಲೂಕಿನ ಹಿರೇಬನ್ನಿಗೋಳ ಗ್ರಾಮ ಮತ್ತು ಸುತ್ತಲಿನ ಪ್ರದೇಶದಲ್ಲಿ ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಹಳ್ಳಕ್ಕೆ ಪ್ರವಾಹ ಬಂದು ನೀರು ಊರೊಳಗೆ ನುಗ್ಗಿ ನೂರಕ್ಕೂ ಅಧಿಕ ಕುಟುಂಬಗಳನ್ನು ಸಂಕಷ್ಟಕ್ಕೆ ಸಿಲುಕಿದೆ.

ರಾತ್ರಿ 9ರಿಂದ ಮೂರು ತಾಸು ನಿರಂತರ ಮಳೆ ಸುರಿದು ನಂತರ ಊರ ಮಧ್ಯದಲ್ಲಿ ಹರಿಯುವ ಹಳ್ಳ ಉಕ್ಕಿ ಹರಿದು ಪರಿಶಿಷ್ಟರ ಕಾಲೊನಿಯಲ್ಲಿ ಅವಾಂತರ ಸೃಷ್ಟಿಸಿದೆ. ದಿಢಿೀರನೆ ನೀರು ನುಗ್ಗುತ್ತಿದ್ದು ದರಿಂದ ಆತಂಕಗೊಂಡ ಅಲ್ಲಿನ ನಿವಾಸಿಗಳು ಜೀವ ರಕ್ಷಿಸಿಕೊಳ್ಳಲು ಪರದಾಡಿ ದ್ದಾರೆ. ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಕಂದಮ್ಮಗಳು, ವೃದ್ಧರನ್ನು ಜನ ರಕ್ಷಿಸಿದ್ದಾರೆ. ತೇಲಿ ಹೋಗುತ್ತಿದ್ದ ದ್ವಿಚಕ್ರ, ತ್ರಿಚಕ್ರವಾಹನಗಳನ್ನು ಹಗ್ಗಗಳಿಂದ ಕಟ್ಟಿಹಾಕಿದ್ದಾರೆ. ಆದರೆ, ಮನೆ ಮುಂದಿನ ಹಟ್ಟಿಯಲ್ಲಿದ್ದ ಹತ್ತಾರು ಕುರಿ, ಮೇಕೆ ಮತ್ತು ಮರಿಗಳು ಮತ್ತು ಕೋಳಿಗಳು ನೀರುಪಾಲಾಗಿವೆ.

ಸುಮಾರು 150ಕ್ಕೂ ಅಧಿಕ ಮನೆಗಳಲ್ಲಿನ ದವಸ–ಧಾನ್ಯ, ಬಟ್ಟೆ, ಹಾಸಿಗೆ, ಎಲೆಕ್ಟ್ರಾನಿಕ್ ವಸ್ತುಗಳು, ಕಾಗದಪತ್ರಗಳು ಇತರೆ  ವಸ್ತುಗಳು ಕೆಸರಿನಲ್ಲಿ ಮುಚ್ಚಿ ಹಾಳಾಗಿವೆ. ಅಲ್ಲದೇ, ಅಂಗನವಾಡಿಯಲ್ಲಿನ ಆಹಾರಧಾನ್ಯಗಳು ನೀರಿನಲ್ಲಿ ಮುಳುಗಿವೆ. ಗ್ರಂಥಾಲಯದ ಪುಸ್ತಕಗಳು ಹಾಳಾಗಿವೆ. ನಾಲ್ಕು ಅಡಿಯಷ್ಟು ನೀರು ನಿಂತು ಮಣ್ಣಿನ ಮನೆಗಳು ಕುಸಿದು ಬಿದ್ದಿವೆ. ಉಳಿದ ಮನೆಗಳೂ ಕುಸಿಯುವ ಸಾಧ್ಯತೆ ಇರುವುದರಿಂದ ಆ ಕುಟುಂಬಗಳನ್ನು ಗ್ರಾ.ಪಂ ಕಚೇರಿಯಲ್ಲಿ ತೆರೆದಿರುವ ತಾತ್ಕಾಲಿಕ ಗಂಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ.
ಮಧ್ಯರಾತ್ರಿ ಸುದ್ದಿ ತಿಳಿದ ತಕ್ಷಣ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಮಹಾದೇವ ಪಂಚಮುಖಿ ಮತ್ತು ಸಿಬ್ಬಂದಿ ಗ್ರಾಮಕ್ಕೆ ಆಗಮಿಸಿದರೂ ಪ್ರವಾಹ ಹೆಚ್ಚಿದ್ದರಿಂದ ಊರೊಳಗೆ ಹೋಗಲು ಸಾಧ್ಯವಾ ಗಿಲ್ಲ. ಬೆಳಗಿನ ಜಾವ 5ಗಂಟೆಗೆ ಪ್ರವಾಹ ತಗ್ಗಿದೆ.

ಶಾಸಕ ಭೇಟಿ: ಮಳೆ ಅನಾಹುತದ ಹಿನ್ನೆಲೆಯಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ತಹಶೀಲ್ದಾರ ವೀರೇಶ ಬಿರಾದಾರ, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸಿ.ಬಿ.ಮ್ಯಾಗೇರಿ, ಪಂ.ರಾ ಎಂಜಿನಿಯರ್ ಜಾಕೀರ್‌ಹುಸೇನ್ ಇದ್ದರು.
     ಊರ ಮಧ್ಯದಲ್ಲಿ ಹಳ್ಳ ಇದ್ದು ನೀರು ಸರಾಗ ವಾಗಿ ಹರಿಯುವುದಕ್ಕೆ ಅಡ್ಡಿಯಾಗಿರುವುದೇ ಈ ಅನಾಹುತಕ್ಕೆ ಕಾರಣವಾಗಿದೆ.


ಯಲಬುರ್ಗಾ: ಬೆಳೆ ಜಲಾವೃತ
ಯಲಬುರ್ಗಾ:
ಪಟ್ಟಣವೂ ಸೇರಿದಂತೆ ತಾಲ್ಲೂಕಿನ ವಿವಿಧ ಹೋಬಳಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ವ್ಯಾಪಕ ಮಳೆಯಾದ ಪರಿಣಾಮ ಜಮೀನುಗಳಿಗೆ ನೀರು ನುಗ್ಗಿ ಅಪಾರ ಬೆಳೆ ನಾಶವಾಗಿದೆ.

ಎರಡು ದಿನಗಳಿಂದ ನಿರಂತರವಾಗಿ ಸುರಿದ ಮಳೆಯು ವಿವಿಧ ರೀತಿಯ ನಷ್ಟಕ್ಕೆ ಕಾರಣವಾಗಿದೆ. ಅನೇಕ ರೈತರಿಗೆ ನಷ್ಟ ಉಂಟಾಗಿದೆ. ಅನೇಕ ಹೊಲಗಳ ಬದು ಹಾಗೂ ಒಡ್ಡು ಒಡೆದಿವೆ, ಬಳೂಟಗಿ, ಬಂಡಿ, ಬೇವೂರ, ವಜ್ರಬಂಡಿ ಗ್ರಾಮ ಗಳಲ್ಲಿ ಅಧಿಕ ಮಳೆಯಾಗಿದ್ದು, ಬಹುತೇಕ ಹೊಲ ಗಳು ಕೆರೆಗಳಂತಾಗಿವೆ. ಬಳೂಟಗಿ ಪ್ರದೇಶದಲ್ಲಿ ಸುರಿದ ಮಳೆಯಿಂದ ಹೊಲದಲ್ಲಿದ್ದ ಕೊಳೆ ಕೊಚ್ಚಿಕೊಂಡು ಹೋಗಿದ್ದು, ಬಂಡಿ ಹೊರವಲದ ವಿದ್ಯುತ್‌ ಪರಿವರ್ತನ ಕೇಂದ್ರದಲ್ಲಿ ಭೂಮಿ ಕುಸಿದು ಕಟ್ಟಡಕ್ಕೆ ನಷ್ಟವಾಗಿದೆ. ಕೆಲ ಮನೆಗಳು ನೆಲಕ್ಕುರುಳಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಭಾನುವಾರ ಮತ್ತು ಸೋಮವಾರ ಬೇವೂರು ಭಾಗದಲ್ಲಿ ಕ್ರಮವಾಗಿ 21.2 ಎಂ.ಎಂ ಹಾಗೂ 48.2 ಎಂ.ಎಂ.ರಷ್ಟು ಮಳೆ ದಾಖಲಾಗಿದೆ. ಮಂಗಳೂರು ಪ್ರದೇಶದಲ್ಲಿ ಕ್ರಮವಾಗಿ 35.0 ಎಂ.ಎಂ. ಹಾಗೂ 24.0 ಎಂ.ಎಂ ಮಳೆ ಸುರಿದಿದೆ. ಭಾನುವಾರ ರಾತ್ರಿ ಹಿರೇವಂಕಲಕುಂಟಾದಲ್ಲಿ 23.8 ಎಂ.ಎಂ., ಯಡ್ಡೋಣಿ ಪ್ರದೇಶದಲ್ಲಿ 11.3 ಎಂ.ಎಂ., ಕುಕನೂರು ಪ್ರದೇಶದಲ್ಲಿ 52.0 ಎಂ.ಎಂ ಮಳೆಯಾ ದರೆ, ಸೋಮವಾರ ಸಂಜೆ ಕೇವಲ 10.2 ಎಂ. ಎಂದಷ್ಟಾಗಿದೆ. ಯಲಬುರ್ಗಾದಲ್ಲಿ ಭಾನುವಾರ 33.0 ಎಂ.ಎಂ ಮಳೆಯಾದರೆ ಸೋಮವಾರ ರಾತ್ರಿ 18.0 ಎಂ.ಎಂ. ಆಗಿದೆ. ಆದರೆ, ನಿಂಗಾಪುರ ಪ್ರದೇಶದಲ್ಲಿ ಮಾತ್ರ ಭಾನು ವಾರ ಮತ್ತು ಸೋಮವಾರ ಕ್ರಮವಾಗಿ 22.0 ಎಂಎಂ, 6.2 ಎಂ.ಎಂ.ದಷ್ಟು ಮಳೆ ದಾಖಲಾಗಿದೆ. ಮಂಗಳವಾರ ಸಂಜೆವರೆಗೂ ಮೋಡಕವಿದ ವಾತಾವರಣ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT