ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತೇಜಕ ನೀತಿಗೆ ಕಾಯುತ್ತಿರುವ ಪೇಟೆ

Last Updated 19 ಜೂನ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಸರ್ಕಾರ ಪ್ರಕಟಿಸಲಿರುವ ಹಣಕಾಸು ನೀತಿ ಉತ್ತೇಜಕ ಕ್ರಮಗಳನ್ನು ಎದುರುನೋಡುತ್ತಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಯುತ್ತಿರುವುದು ಮತ್ತು ಉದ್ದೇಶಿತ  ಮುಂಗಾರು ಸಹಜ ಮಟ್ಟಕ್ಕಿಂತ ಹೆಚ್ಚಿರುವುದು ಕೂಡ ಈ ಉತ್ತೇಜಕ ಕ್ರಮಗಳಿಗೆ ಲಾಭವಾಗಿ ಪರಿಗಣಿಸುವ ಸಾಧ್ಯತೆ ಇದೆ.

`ಈ ವಾರದ ಪೇಟೆ ವಹಿವಾಟು ಸರ್ಕಾರ ಪ್ರಕಟಿಸಲಿರುವ ಹಣಕಾಸು ನೀತಿ ಮತ್ತು ಜಾಗತಿಕ ವಿದ್ಯಮಾನಗಳನ್ನು ಅವಲಂಬಿಸಿವೆ. ಕಳೆದ ಕೆಲವು ವಾರಗಳಲ್ಲಿ ಸೂಚ್ಯಂಕ 500 ಅಂಶಗಳಿಗಷ್ಟು ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಈ ಉತ್ತೇಜಕ ಕ್ರಮಗಳು ವಹಿವಾಟಿನಲ್ಲಿ ಚೇತರಿಕೆ ಮೂಡಿಸುವ ಭರವಸೆ ಇದೆ ಎಂದು ಮೋತಿಲಾಲ್ ಓಸ್ವಾಲ್ ಸೆಕ್ಯುರಿಟೀಸ್‌ನ ಉಪಾಧ್ಯಕ್ಷ ಪರಾಗ್ ಡಾಕ್ಟರ್ ಹೇಳಿದ್ದಾರೆ.

ಕಳೆದ ವಾರದ ವಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಶೇ 2.17ರಷ್ಟು ಕುಸಿತ ಕಂಡು 17,870 ಅಂಶಗಳಿಗೆ ವಹಿವಾಟು ಕೊನೆಗೊಳಿಸಿತು. ಗ್ರೀಕ್‌ನಲ್ಲಿ ತಲೆದೋರಿರುವ ಸಾಲದ ಬಿಕ್ಕಟ್ಟು, ಜಾಗತಿಕ ಆರ್ಥಿಕ ಪುನಶ್ಚೇತನ ನಿಗದಿತ ಮಟ್ಟಕ್ಕಿಂತ ಮಂದಗತಿಯಲ್ಲಿ ಸಾಗುತ್ತಿದೆ ಎಂಬ ವರದಿಗಳು ಸೂಚ್ಯಂಕ 398 ಅಂಶಗಳಷ್ಟು ಕುಸಿಯಲು ಪ್ರಮುಖ ಪಾತ್ರ ವಹಿಸಿದವು.
 
ಆಹಾರ ಹಣದುಬ್ಬರ ನಿಯಂತ್ರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೊಮ್ಮೆ ಅಲ್ಪಾವಧಿ ಬಡ್ಡಿ ದರಗಳನ್ನು ಶೇ 0.25ರಷ್ಟು ಹೆಚ್ಚಿಸಲಿದೆ ಎನ್ನುವ ಸುದ್ದಿ ಕೂಡ ವಹಿವಾಟಿನ ಮೇಲೆ ಪ್ರತಿಕೂಲ ಪರಿಣಾಮ ಬೀರಿತು.

`ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಗಳಲ್ಲಿ ಹಣದುಬ್ಬರ ನಿಯಂತ್ರಿಸಲು ಕೈಗೊಳ್ಳುತ್ತಿರುವ ಬಿಗಿ ವಿತ್ತೀಯ ಕ್ರಮಗಳು ಪೇಟೆ ವಹಿವಾಟಿಗೆ ಸವಾಲೊಡ್ಡುವ ಪರಿಸ್ಥಿತಿ ನಿರ್ಮಿಸಿದೆ~  ಎಂದು `ಐಐಎಫ್‌ಎಲ್~ನ  ಸಂಶೋಧನೆ ಮುಖ್ಯಸ್ಥ ಅಮರ್ ಅಂಬಾನಿ ಹೇಳಿದ್ದಾರೆ.ಭಾರತದಂತಹ ಮಾರುಕಟ್ಟೆಗಳಲ್ಲಿ ಹೂಡಿಕೆದಾರರ ಹಿತಾಸಕ್ತಿಗಳನ್ನೂ ಗಮನದಲ್ಲಿಟ್ಟುಕೊಂಡು ಸರ್ಕಾರ ಹಣಕಾಸು ನೀತಿಗಳನ್ನು ಪ್ರಕಟಿಸಬೇಕು ಎನ್ನುತ್ತಾರೆ ಅವರು.

ನೇರ ತೆರಿಗೆ ನೀತಿ ಸಂಹಿತೆ (ಡಿಟಿಸಿ) ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಜಾರಿ ಸೇರಿದಂತೆ ತೆರಿಗೆ ಕಾನೂನುಗಳಲ್ಲಿ ಹಲವು ಪ್ರಮುಖ ಸುಧಾರಣೆಗಳನ್ನು ತರಲು ಸರ್ಕಾರ ಚಿಂತಿಸುತ್ತಿದೆ. ಇದರ ಜತೆಗೆ ಜೀವ ವಿಮೆ ಮಸೂದೆ ಮತ್ತು ಪಿಂಚಣಿ ಮಸೂದೆಗಳೂ ಕೂಡ ಸಂಸತ್ತಿನಲ್ಲಿ ಮಂಡನೆಯಾಗುವ ಸಾಧ್ಯತೆಗಳಿವೆ. ಜಾಗತಿಕ ಒತ್ತಡಗಳು ಏನೇ ಇದ್ದರೂ,  ಈ ಎಲ್ಲ ಉತ್ತೇಜಕ ಕ್ರಮಗಳು ಪೇಟೆ ವಹಿವಾಟನ್ನು ಸಹಜ ಸ್ಥಿತಿಗೆ ತರುವ ಸಾಧ್ಯತೆ ಇದೆ ಎನ್ನುತ್ತಾರೆ ವಿಶ್ಲೇಷಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT