ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಪಾದನಾ ರಂಗ: ಚೀನಾ ನಮಗೇಕೆ ಮಾದರಿಯಾಗಬಾರದು?

Last Updated 21 ಜೂನ್ 2011, 19:30 IST
ಅಕ್ಷರ ಗಾತ್ರ

ನನ್ನ ಐವತ್ತನೆಯದೋ, ಅರುವತ್ತನೆಯದೋ ಚೀನಾ ಭೇಟಿ ಮುಗಿಸಿ ನಾನು ಕೆಲವು ದಿನಗಳ ಹಿಂದೆಯಷ್ಟೇ ವಾಪಸಾದೆ. ಪ್ರತಿ ಬಾರಿ ಚೀನಾದಿಂದ ವಾಪಸಾಗುವಾಗಲೂ ನನ್ನಲ್ಲಿ ಕಾಡುವ ವಿಚಾರ ಅದೇ, ನಾವು ಏಕೆ ಚೀನಾದ ಆರ್ಥಿಕತೆಯನ್ನು, ಅದರಲ್ಲೂ ಮುಖ್ಯವಾಗಿ ಉತ್ಪಾದನಾ ಕ್ಷೇತ್ರದಲ್ಲಿನ ಆರ್ಥಿಕತೆಯನ್ನು ನಕಲು ಮಾಡಬಾರದು ಎಂದು.

ಜಾಗತಿಕ ಉತ್ಪಾದನೆಯ ಹಿತ್ತಿಲು ಎಂಬ ಹೆಗ್ಗಳಿಕೆ ಈಗಾಗಲೇ ಚೀನಾಕ್ಕೆ ದೊರಕಿಬಿಟ್ಟಿದೆ. ಉತ್ಪಾದನಾ ಕ್ಷೇತ್ರಕ್ಕೆ ಒತ್ತು ಕೊಟ್ಟರೆ ಅಭಿವೃದ್ಧಿ ಕುಂಠಿತವಾದೀತು ಎಂಬ ಅರ್ಥಶಾಸ್ತ್ರಜ್ಞರ ವಿಶ್ಲೇಷಣೆಯನ್ನು ಹುಸಿ ಮಾಡುವ ರೀತಿಯಲ್ಲಿ ಚೀನಾದ ಉತ್ಪಾದನಾ ರಂಗ ಮುನ್ನುಗ್ಗುತ್ತಿದೆ.

ಜಾಗತಿಕ ಆರ್ಥಿಕ ಹಿಂಜರಿತದಂತಹ ಹೊಡೆತಗಳ ನಡುವೆಯೂ ಉತ್ಪಾದನಾ ರಂಗದಲ್ಲಿ ಚೀನಾ ಎದೆಯುಬ್ಬಿಸಿ ನಿಲ್ಲಲು ಮುಖ್ಯ ಕಾರಣವೆಂದರೆ ಅದರ ಕರೆನ್ಸಿ ಮೌಲ್ಯ. ಚೀನಾದ ಕರೆನ್ಸಿ ಮೌಲ್ಯ ಕಳೆದ 20 ವರ್ಷಗಳಲ್ಲಿ ಡಾಲರ್‌ಗೆ 8.9ರಿಂದ 6.4ಕ್ಕೆ ಸುಧಾರಣೆಗೊಂಡಿದೆ.

ಇದೇ ಅವಧಿಯಲ್ಲಿ ಭಾರತೀಯ ಕರೆನ್ಸಿ ತನ್ನ ಮೌಲ್ಯವನ್ನು ದೊಡ್ಡ ಪ್ರಮಾಣದಲ್ಲಿ ಕಳೆದುಕೊಂಡಿದೆ. ಚೀನಾದ ಕರೆನ್ಸಿಯ ದಿಟ್ಟ ನಡೆಯಿಂದಾಗಿ ಅಲ್ಲಿನ ಸಾಮಗ್ರಿಗಳು ಶೇ 40ರಷ್ಟು ದುಬಾರಿಯಾಗಿವೆ.

ಸಾಮಗ್ರಿಗಳು ದುಬಾರಿಯಾದರೂ ಚೀನಾದ ಕರೆನ್ಸಿ ಮುಂದೆ ಅಮೆರಿಕ ಡಾಲರ್ ಮೌಲ್ಯ ತಗ್ಗಿದ್ದರಿಂದಾಗಿ ಸಾಮಗ್ರಿಗಳ ರಫ್ತಿನ ಸಂದರ್ಭದಲ್ಲಿ ಚೀನಾದ ಉತ್ಪನ್ನಗಳು ಜಾಗತಿಕ ರಂಗದಲ್ಲಿ ಸ್ಪರ್ಧಾತ್ಮಕವಾಗಿ ಬದಲಾಗಿಬಿಟ್ಟವು. ಯೂರೋಪ್‌ಗೆ ರಫ್ತು ಮಾಡುವಾಗಲಂತೂ ಇದು ಬಹಳ ಪ್ರಯೋಜನಕ್ಕೆ ಬಂದಿದೆ.

ಬಹುರಾಷ್ಟ್ರೀಯ ಕಂಪೆನಿಗಳನ್ನು (ಎಂಎನ್‌ಸಿ) ದೊಡ್ಡ ಪ್ರಮಾಣದಲ್ಲಿ ತನ್ನ ದೇಶಕ್ಕೆ ಸೆಳೆಯುವಲ್ಲಿ ಸಫಲವಾದುದು ಸಹ ಚೀನಾದ ಯಶಸ್ಸಿಗೆ ಮತ್ತೊಂದು ಕಾರಣ.

ಎಂಎನ್‌ಸಿಗಳು ಚೀನಾದಲ್ಲಿ ಇದ್ದುಕೊಂಡೇ ತಮ್ಮ ಉತ್ಪಾದನೆ ಮಾಡಬೇಕು, ಅದಕ್ಕೆ ಎಲ್ಲ ಸೌಲಭ್ಯಗಳನ್ನೂ ಒದಗಿಸಲಾಗುವುದು ಎಂಬ ನೀತಿಯನ್ನು ಅದು ರೂಪಿಸಿ ಅದರಂತೆ ನಡೆದುಕೊಂಡಿದೆ. ಚೀನಾದ ದೇಶೀಯ ಮಾರುಕಟ್ಟೆಯೇ ಬಹಳ ದೊಡ್ಡದು.
 
ಹೀಗಾಗಿ ಎನ್‌ಎನ್‌ಸಿಗಳಿಂದ ಗರಿಷ್ಠ ಪ್ರಮಾಣದಲ್ಲಿ ರಯಾಯಿತಿಗಳನ್ನು ಪಡೆದುಕೊಂಡು ಸಹ ಅವುಗಳು ದೇಶದಲ್ಲೇ ಉತ್ಪಾದನೆ ಮಾಡುವಂತಹ ವ್ಯಾವಹಾರಿಕ ಜಾಣ್ಮೆಯನ್ನು ಚೀನಾ ಮಾಡಿದೆ. ಭಾರಿ ದೊಡ್ಡ ಮಾರುಕಟ್ಟೆಯಿಂದಾಗಿ ಚೀನಾದಲ್ಲಿ ತಮ್ಮ ಕಂಪೆನಿಗಳನ್ನು ಸ್ಥಾಪಿಸುವುದಕ್ಕೆ ಸಹ ಎಂಎನ್‌ಸಿಗಳು ಹಿಂದೆ ಮುಂದೆ ನೋಡುವುದಿಲ್ಲ.

ಎಂಎನ್‌ಸಿಗಳಿಗೆ ಚೀನಾ ಒದಗಿಸುತ್ತಿರುವ ಮೂಲಸೌಲಭ್ಯವೂ ಅದರ ಮತ್ತೊಂದು ಆಕರ್ಷಣೆ. ಎಂಎನ್‌ಸಿಗಳು ಜಗತ್ತಿನೆಲ್ಲೆಡೆ ಅಗ್ಗದ ಪರ್ಯಾಯವನ್ನು ನೋಡುತ್ತಿರುವುದು ನಿಜವಾದರೂ, ಕೇವಲ ಭೂಮಿ, ನೀರು, ಮಾನವ ಸಂಪನ್ಮೂಲ ಅಗ್ಗದಲ್ಲಿ ಸಿಕ್ಕಿದರೆ ಸಾಕಾಗುವುದಿಲ್ಲ.

ಅಲ್ಲಿ ಸಮರ್ಪಕ ಹೆದ್ದಾರಿಗಳು, ಬಂದರುಗಳು, ಕೈಗಾರಿಕಾ ಪಾರ್ಕ್‌ಗಳು, ತ್ವರಿತ ಸಂಪರ್ಕ ಸಾಧನಗಳೆಲ್ಲ ಇರಬೇಕು. ಚೀನಾ ಅದೆಲ್ಲವನ್ನೂ ಪೂರೈಸುತ್ತಿರುವುದರಿಂದ ಎಂಎನ್‌ಸಿಗಳಿಗೆ ನೆಚ್ಚಿನ ತಾಣವಾಗಿಬಿಟ್ಟಿದೆ.

ಭಾರತದಂತಹ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಲ್ಲಿ ಮುಖ್ಯ ಸಮಸ್ಯೆ ಭೂ ಸ್ವಾಧೀನ ಪ್ರಕ್ರಿಯೆ. ಚೀನಾದಲ್ಲಿ ಭೂಮಿ ಮತ್ತು ಬ್ಯಾಂಕ್‌ಗಳು ಸರ್ಕಾರದ ಒಡೆತನದಲ್ಲಿವೆ. ಹೀಗಾಗಿ ಕಂಪೆನಿಗಳು ಸುಲಭವಾಗಿ ಭೂಮಿ ಪಡೆಯುವುದು ಹಾಗೂ ತಮ್ಮ ಕಂಪೆನಿಗಳನ್ನು ಸ್ಥಾಪಿಸಿಕೊಳ್ಳುವುದು ಸಾಧ್ಯವಾಗುತ್ತದೆ.

ದೊಡ್ಡ ಪ್ರಮಾಣದಲ್ಲಿ ಬಂಡವಾಳ ಆಕರ್ಷಿಸಿ, ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಅಂತಿಮ ಹಂತದ ಉತ್ಪನ್ನಗಳನ್ನು ತಯಾರಿಸಿ ರಫ್ತು ಮಾಡುವಂತಹ (ಜಪಾನ್ ಮಾಡಿದಂತೆ) ಮಟ್ಟಕ್ಕೆ ಚೀನಾ ಇದೀಗ ಬಂದಿರುವುದನ್ನು ಸಹ ನಾವು ಅಲ್ಲಗಳೆಯುವಂತಿಲ್ಲ.
 
ಹೀಗಿರುವಾಗ ಅದು ದೊಡ್ಡ ಪ್ರಮಾಣದಲ್ಲಿ ಆಮದನ್ನೂ ಮಾಡಿಕೊಳ್ಳುತ್ತದೆ, ಅಷ್ಟೇ ದೊಡ್ಡ ಪ್ರಮಾಣದಲ್ಲಿ ಸಿದ್ಧ ಉತ್ಪನ್ನಗಳ ರಫ್ತನ್ನು ಸಹ ಮಾಡುತ್ತದೆ. ದೇಶದಲ್ಲೇ ಬಳಕೆ ಅಧಿಕ ಇರುವಾಗ ರಫ್ತು ಮಾಡದಿದ್ದರೂ ಆಮದು ಮಾಡಿಕೊಳ್ಳುವ ತೊಂದರೆಯನ್ನು ಅದು ತಪ್ಪಿಸಿಕೊಂಡು ವಿದೇಶಿ ವಿನಿಮಯ ಉಳಿಸಿಕೊಳ್ಳುವುದು ಸಾಧ್ಯವಾಗುತ್ತದೆ.

`ಇನ್ನೊಬ್ಬನನ್ನು ಸದೆಬಡಿಯಲಾಗದಿದ್ದರೆ ಆತನೊಂದಿಗೆ ಸೇರಿಕೊಳ್ಳುವುದು ಒಳ್ಳೆಯದು~ ಎಂಬುದು ಹಳೆಯ ಮಾತು. ನಾವು ಇಲ್ಲಿ ಮತ್ತೆ ನಮ್ಮ ಕಾರ್ಯತಂತ್ರ ಮತ್ತು ನೀತಿಗಳ ಬಗ್ಗೆ ಮರುವಿಮರ್ಶೆ ಮಾಡಿಕೊಳ್ಳಬೇಕು. ಉತಾಯನ್ನು ನಾವು ಸಹ ತುಳಿಯಬೇಕು.

ಸ್ಥಳೀಯ ಸಾಮಾಜಿಕ ಮತ್ತು ಆರ್ಥಿಕ ವಿಚಾರಗಳಲ್ಲಿ ಕೆಲವೊಂದು ಹೊಂದಾಣಿಕೆ ಮಾಡಿಕೊಳ್ಳಬೇಕಿರುವುದು ಸಹಜವಾದರೂ ಒಟ್ಟಾರೆ ಉತ್ಪಾದನಾ ಕ್ಷೇತ್ರದಲ್ಲಿ ನಮ್ಮ ಮುಂದಿರುವ ಚೀನಾದ ಮಾದರಿ ಅತ್ಯುತ್ತಮ ಎಂದೆನಿಸುತ್ತದೆ.

ಉತ್ಪಾದನಾ ರಂಗದಲ್ಲಿ ಈ ಚರ್ಚೆ ಇಂದು ಬಹಳ ಮಹತ್ವ ಪಡೆದಿದೆ, ಏಕೆಂದರೆ ಕೇಂದ್ರ ಸರ್ಕಾರ `ಹೊಸ ಉತ್ಪಾದನಾ ನೀತಿ~ ಪ್ರಕಟಿಸಲು ಮುಂದಾಗಿದೆ.

ಭಾರತವನ್ನು ಜಾಗತಿಕ ಉತ್ಪಾದನಾ ಕೇಂದ್ರವಾಗಿ ಮಾರ್ಪಡಿಸುವ ಮಹಾನ್ ಉದ್ದೇಶ ಈ ನೀತಿಯ ಹಿಂದೆ ಅಡಗಿದೆ ಎಂದು ಹೇಳಲಾಗುತ್ತಿದೆ. ಉತ್ಪಾದನಾ ರಂಗದಲ್ಲಿ ಈಗ ಎದುರಾಗಿರುವ ಹಲವು ಅಡ್ಡಿ, ಆತಂಕಗಳನ್ನು ನಿವಾರಿಸಲು ಈ ಹೊಸ ನೀತಿ ಬಯಸುತ್ತದೆ.
 
ಸರ್ಕಾರ ಕೈಗೆತ್ತಿಕೊಂಡಿರುವ ಕಾರ್ಯ ಬಹಳ ದೊಡ್ಡದೇ ಎಂಬುದರಲ್ಲಿ ಎರಡು ಮಾತಿಲ್ಲ. 2020ರೊಳಗೆ ಒಟ್ಟು ದೇಶೀಯ ಉತ್ಪಾದನೆಯಲ್ಲಿ (ಜಿಡಿಪಿ) ಉತ್ಪಾದನಾ ರಂಗದ ಪಾಲನ್ನು ಈಗಿನ ಶೇ 12ರಿಂದ ಶೇ 25ಕ್ಕೆ ಹೆಚ್ಚಿಸುವುದು ಹಾಗೂ ಕನಿಷ್ಠ 2.5 ಕೋಟಿ ಉದ್ಯೋಗ ಸೃಷ್ಟಿಸುವುದು ಈ ಹೊಸ ನೀತಿಯ ಉದ್ದೇಶ.

ಡಿಐಪಿಪಿ ವೆಬ್‌ಸೈಟ್‌ನಲ್ಲಿ ಇದರ ವಿವರವಾದ ಮಾಹಿತಿ ಲಭ್ಯವಿದೆ. ಕೆಲವು ಹಿರಿಯ ಅಧಿಕಾರಿಗಳೇ ಈ ವರದಿಯನ್ನು ಸಿದ್ಧಪಡಿಸಿರುವುದು ಸ್ಪಷ್ಟವಾಗುತ್ತದೆ.

ಈ ಹೊಸ ಉತ್ಪಾದನಾ ನೀತಿಯಲ್ಲಿ ಈ ಮುಂದಿನ ಅಂಶಗಳಿಗೆ ಬಹಳ ಒತ್ತು ನೀಡಲಾಗಿದೆ. 1)ರಾಷ್ಟ್ರೀಯ ಉತ್ಪಾದನೆ ಮತ್ತು ಹೂಡಿಕೆ ವಲಯ. 2) ಹೊರ ಹೋಗುವ ನೀತಿ, 3) ಪರಿಸರ ಸ್ನೇಹಿ ತಂತ್ರಜ್ಞಾನ, 4) ರಾಷ್ಟ್ರೀಯ ಉತ್ಪಾದನಾ ರಂಗದ ವಲಯಗಳಲ್ಲಿ (ಎನ್‌ಎಂಐಜೆಡ್) ಸ್ಥಾಪನೆಗೊಳ್ಳುವ ಘಟಕಗಳಿಗೆ ಪ್ರೋತ್ಸಾಹಧನ, ಇತರ ಸೌಲಭ್ಯ ನೀಡುವುದರ ಜತೆಗೆ ಪ್ರಕ್ರಿಯೆಗಳನ್ನು ಸರಳಗೊಳಿಸುವುದು, 5) ಕೌಶಲ್ಯ ಅಭಿವೃದ್ಧಿ.

ಈ ನೀತಿಯಲ್ಲಿ ಅಡಕವಾಗಿರುವುದೆಲ್ಲ ತಪ್ಪು ಆದ್ಯತೆಗಳು. ಹೀಗಾಗಿ ನಿಗದಿತ ಗುರಿ ತಲುಪದೆ ಮೈಲಾಚೆ ಈ ನೀತಿಗಳು ಬ್ದ್ದಿದು ಹೋಗಲಿವೆ ಎಂಬುದನ್ನು ಯಾವ ರಾಕೆಟ್ ವಿಜ್ಞಾನಿಯೂ ಹೇಳಬೇಕಾಗಿಲ್ಲ.

ಕೇವಲ ಉದ್ಯೋಗ ವಿಚಾರವನ್ನೇ ತೆಗೆದುಕೊಳ್ಳೋಣ. ದೇಶದ ಜನಸಂಖ್ಯೆ ವರ್ಷಕ್ಕೆ ಶೇ 1.5ರಂತೆ ಹೆಚ್ಚುತ್ತಿದೆ. ಅಂದರೆ ವರ್ಷಕ್ಕೆ 1.5 ಕೋಟಿ ಕೆಲಸ ಮಾಡಬಹುದಾದ ಮಂದಿ ಸಜ್ಜಾಗಿರುತ್ತಾರೆ.
 
50 ಲಕ್ಷ ಉದ್ಯೋಗ ಸೇವೆ ಮತ್ತು ಇತರ ಕ್ಷೇತ್ರಗಳಲ್ಲಿ ಲಭಿಸುತ್ತದೆ ಎಂದಿಟ್ಟುಕೊಂಡರೂ ಉತ್ಪಾದನಾ ರಂಗವೊಂದರಲ್ಲೇ ಪ್ರತಿ ವರ್ಷ ಒಂದು ಕೋಟಿ ಉದ್ಯೋಗ ಸೃಷ್ಟಿಸಬೇಕು. ಇದಕ್ಕೆ ಎಷ್ಟು ಹೂಡಿಕೆ ಮಾಡಬೇಕು ಎಂಬುದು ಅಂದಾಜಿಗೆ ಮೀರಿದ ವಾಸ್ತವ. ಭಾರಿ ದೊಡ್ಡ ಪ್ರಮಾಣದ ಬಂಡವಾಳವೇ ಬೇಕು.

ಸದ್ಯದ ಕಾರ್ಮಿಕ ಕಾನೂನುಗಳಿಂದಾಗಿ ಕಾಯಂ ಉದ್ಯೋಗಿಗಳನ್ನು ನೇಮಿಸುವುದೇ ಬೇಡ ಎಂಬ ಮನೋಭಾವ ಎಲ್ಲೆಡೆ ಬೆಳೆಯುತ್ತಿದೆ, ಬದಲಿಗೆ ಯಂತ್ರಗಳ ಸಹಾಯದಿಂದ ಕೆಲಸ ಮಾಡಿಸುವ ದಾರಿಯನ್ನು ಕಂಡುಕೊಳ್ಳಲಾಗುತ್ತಿದೆ.

ಉತ್ಪಾದನಾ ಕ್ಷೇತ್ರವೊಂದಕ್ಕೇ ನಮಗೆ ವರ್ಷಕ್ಕೆ 5 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡುವ ಅಗತ್ಯ ಇದೆ. ಈ ಲೆಕ್ಕವನ್ನು ನೋಡಿದಾಗ ಒಂದು ಉದ್ಯೋಗ ಸೃಷ್ಟಿಗೆ 50 ಲಕ್ಷ ರೂಪಾಯಿ ಹೂಡಿಕೆಯ ದೊಡ್ಡ ಗಾತ್ರ ಕಣ್ಣಿಗೆ ಕಟ್ಟುತ್ತದೆ. ದೇಶ ಇಷ್ಟು ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವುದು ಸಾಧ್ಯವೇ ಇಲ್ಲ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ.

ಹೊಸದಾಗಿ ರೂಪುಗೊಳ್ಳುವ ಉತ್ಪಾದನಾ ಕೈಗಾರಿಕಾ ವಲಯಗಳಲ್ಲೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುವ ಸಾಧ್ಯತೆ ತೀರಾ ಕಡಿಮೆ.

ಭಾರತದ ಸ್ಪರ್ಧಾತ್ಮಕ ಅನುಕೂಲ ಏನಿದ್ದರೂ ಗುರಿ ಸಾಧಿಸುವುದೇ ಹೊರತು ಹೊಸ ಯೋಜನೆಗಳಲ್ಲ ಎಂಬುದನ್ನು ಸರ್ಕಾರ ತಿಳಿದುಕೊಳ್ಳಲೇಬೇಕು. ಲಾಭಾಂಶವೇ ಹೂಡಿಕೆಯನ್ನು ಮುಂದಕ್ಕೆ ಸಾಗಿಸಬೇಕು ಎಂಬುದರತ್ತ ಗಮನ ನೀಡಬೇಕು.

ಅತ್ಯುತ್ತಮ ಪ್ರತಿಫಲ ನೀಡುವ ಸ್ಥಳಗಳತ್ತ ಜಗತ್ತಿನ ದೇಶಗಳು ಸದಾ ಕಣ್ಣಿಟ್ಟಿರುತ್ತವೆ.ಭಾರತದ ಪಾಲಿಗೆ ದೊಡ್ಡ ತಲೆನೋವಾಗಿರುವುದು ಇಲ್ಲಿನ ವೆಚ್ಚದ ವಿಚಾರ. ಕಾರ್ಮಿಕ, ವಿದ್ಯುತ್, ಬಡ್ಡಿ, ಸಾರಿಗೆ, ತೆರಿಗೆ, ಸಂಪರ್ಕ, ವ್ಯವಹಾರ, ಮೂಲಸೌಲಭ್ಯದಂತಹ ಎಲ್ಲಾ ಕ್ಷೇತ್ರಗಳಲ್ಲೂ ನಮ್ಮ ವೆಚ್ಚ ಅಪಾರ.

ಚೀನಾ ಈ ಎಲ್ಲಾ ವಿಚಾರಗಳಲ್ಲೂ ನಮ್ಮಿಂದ ಬಹಳ ಮುಂದಿದೆ. ಖರ್ಚು, ವೆಚ್ಚ ನೋಡಿದಾಗ ನಮಗಿಂತ ಚೀನಾದಲ್ಲಿ ಉತ್ಪಾದನಾ ವೆಚ್ಚ ಕಡಿಮೆಯಾಗುತ್ತದೆ. ನಮ್ಮ ನೆರವಿಗೆ ಬರುವುದು ಏನಿದ್ದರೂ ಭೌಗೋಳಿಕ ಪರಿಸರ ಮಾತ್ರ. ಉತ್ಪಾದನೆ ಮೂಲಕ ಅಭಿವೃದ್ಧಿ ಸಾಧಿಸುವಲ್ಲಿ ನಾವು ಒದಗಿ ಬಂದ ಅವಕಾಶ ಕಳೆದುಕೊಂಡೆವು ಎಂದಾದರೆ ಯಾವುದೂ ನಮ್ಮ ಉಪಯೋಗಕ್ಕೆ ಬರುವುದು ಸಾಧ್ಯವಿಲ್ಲ.

ಈ ವಿಚಾರವನ್ನು ಚರ್ಚಿಸುವಾಗ ನಾವು ವಿಶ್ವಬ್ಯಾಂಕಿನ ವರದಿಯೊಂದನ್ನು ಉಲ್ಲೇಖಿಸಿದರೆ ತಪ್ಪಾಗುವುದಿಲ್ಲ. ಈ ವರದಿಯು ಜಗತ್ತಿನ ಎಲ್ಲಾ ರಾಷ್ಟ್ರಗಳ ನಡುವೆ ತುಲನೆ ಮಾಡಿದೆ. ಅದಕ್ಕೆ ಹಲವು ಮಾನದಂಡಗಳನ್ನು ಸಹ ಬಳಸಲಾಗಿದೆ. ಇದು ಪ್ರತಿ ವರ್ಷ ನಡೆಯುವ ಒಂದು ಸಾಮಾನ್ಯ ಪ್ರಕ್ರಿಯೆ. 2011ರ ವಾರ್ಷಿಕ ವರದಿ ಕೂಡ ಬಂದಿದೆ. ಇದರ ಫಲಿತಾಂಶ ನೋಡಿದಾಗ ಹೃದಯ ಬಾಯಿಗೆ ಬಂದಂತಾಗುತ್ತದೆ.

ಕಾರಣ ಜಗತ್ತಿನ 183 ರಾಷ್ಟ್ರಗಳ ಪೈಕಿ ಭಾರತ 134ನೇ ಸ್ಥಾನದಲ್ಲಿದೆ. ಕಳೆದ ಐದು ವರ್ಷಗಳಲ್ಲಿ ಭಾರತದ ಸ್ಥಿತಿ ಸ್ವಲ್ಪವೇ ಸ್ವಲ್ಪ ಸುಧಾರಣೆಗೊಂಡಿದೆ ಅಷ್ಟೇ.

ದೇಶದ ಸ್ಥಿತಿಗತಿ ಮೇಲೆ ಬೆಳಕು ಚೆಲ್ಲುವಂತಹ ವರದಿ ಇದು. ಇಲ್ಲಿ ಉದ್ಯಮಿಗಳ ಎರಡೂ ಕಾಲುಗಳಿಗೆ ಹಗ್ಗ ಕಟ್ಟಿ ಜಾಗತಿಕ ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಬಿಟ್ಟಂತಹ ಸ್ಥಿತಿ ಇದೆ.

ನಾವು ದೇಶೀಯ ಮತ್ತು ಅಂತರರಾಷ್ಟ್ರೀಯ ಬಂಡವಾಳವನ್ನು ದೊಡ್ಡ ಪ್ರಮಾಣದಲ್ಲಿ ಆಕರ್ಷಿಸಬೇಕಾದರೆ ನಾವು ಈ ವರದಿಯನ್ನು ಗಂಭೀರವಾಗಿ ತೆಗೆದುಕೊಳ್ಳಲೇಬೇಕು ಮತ್ತು ಅದರಲ್ಲಿ ಉಲ್ಲೇಖಿಸಿರುವ ಕೊರತೆಗಳನ್ನು ಬಗೆಹರಿಸಿಕೊಳ್ಳಬೇಕು.

ಒಂದು ದೇಶದಲ್ಲಿ ದೀರ್ಘಾವಧಿಯ ಹೂಡಿಕೆ ಮಾಡುವಾಗ ಮತ್ತೊಂದು ರಾಷ್ಟ್ರ ನೋಡುವುದು ಇಂತಹ ವರದಿಗಳನ್ನೇ. ಹೀಗಾಗಿ ಭಾರತ ಕೇವಲ ಆಂತರಿಕವಾಗಿ ಮಾತ್ರವಲ್ಲ, ಬಾಹ್ಯ ರೀತಿಯಿಂದಲೂ ತನ್ನ ಶ್ರೀಮಂತಿಕೆಯನ್ನು ತೋರ್ಪಡಿಸಿಕೊಳ್ಳಬೇಕು.

ಜಾಗತಿಕ ಬಂಡವಾಳ ಹೂಡಿಕೆದಾರರನ್ನು ಆಕರ್ಷಿಸಲು ಹಲವಾರು ಯೋಜನೆಗಳನ್ನು ರೂಪಿಸಿಕೊಂಡು ಅದನ್ನು ಕಾರ್ಯರೂಪಕ್ಕೆ ತರಬೇಕು.

ಉತ್ಪಾದನಾ ರಂಗ ಇರಲಿ, ಸೇವಾ ಕ್ಷೇತ್ರ ಅಥವಾ ಇನ್ಯಾವುದೇ ಕ್ಷೇತ್ರ ಇರಲಿ, ಎಲ್ಲಾ ಪ್ರಕ್ರಿಯೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿರುವುದು ಅಧಿಕಾರಶಾಹಿಯೇ. ಸವಾಲು ಇರುವುದು ಎಲ್ಲಿ ಎಂಬುದು ನಮಗೀಗ ಗೊತ್ತಾಗಿದೆ.

ಸರ್ಕಾರ ಕೆಲಸಕ್ಕೆ ಬಾರದ ಮತ್ತೊಂದು ನೀತಿ ನಿರೂಪಣೆಯ ಹೇಳಿಕೆ ನೀಡುವುದರ ಬದಲಿಗೆ ಚೀನಾದಂತಹ ರಾಷ್ಟ್ರಗಳನ್ನು ಅನುಕರಿಸಿದರೂ ಸರಿ, ವಾಸ್ತವ ನೆಲೆಗಟ್ಟಿನಲ್ಲಿ ದೃಢವಾದ ಹೆಜ್ಜೆ ಇರಿಸಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT