ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಪ್ರೇಕ್ಷಿತ ಸಾಲ; ಆರ್‌ಬಿಐ ಕಡಿವಾಣ...

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಗೃಹ ಸಾಲ ಮಂಜೂರು ಮಾಡುವಾಗ ಬ್ಯಾಂಕ್‌ಗಳು ಮನೆಗಳ ಮೌಲ್ಯವನ್ನು ಉದ್ದೇಶಪೂರ್ವಕವಾಗಿ ಉತ್ಪ್ರೇಕ್ಷಿಸಬಾರದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ), ವಾಣಿಜ್ಯ ಬ್ಯಾಂಕ್‌ಗಳಿಗೆ ಹೊಸದಾಗಿ ಸೂಚಿಸಿದೆ.

ಮುದ್ರಾಂಕ ಶುಲ್ಕ (stamp duty) ಮತ್ತಿತರ ಶುಲ್ಕಗಳನ್ನು ಒಟ್ಟಾರೆ ವೆಚ್ಚದಲ್ಲಿ ಸೇರ್ಪಡೆ ಮಾಡಿ ಗೃಹ ಸಾಲ ನಿಗದಿ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎನ್ನುವುದು ಕೇಂದ್ರೀಯ ಬ್ಯಾಂಕ್‌ನ ನಿಲುವಾಗಿದೆ.

ಸಾಲ ಮಂಜೂರು ಮಾಡಲು ಬ್ಯಾಂಕ್‌ಗಳು, ಗೃಹ ಆಸ್ತಿಯ ಮೌಲ್ಯ ನಿರ್ಧರಿಸುವಾಗ ತಮಗೆ ತೋಚಿದಂತೆ ನಿರ್ಧಾರಕ್ಕೆ ಬರುತ್ತಿವೆ. ಕೆಲ ಬ್ಯಾಂಕ್‌ಗಳು ಸ್ಟ್ಯಾಂಪ್ ಡ್ಯೂಟಿ, ನೋಂದಣಿ ಮತ್ತು ಇತರ ದಾಖಲೆ ಪತ್ರಗಳ ಶುಲ್ಕಗಳನ್ನೆಲ್ಲ ಮನೆ ನಿರ್ಮಾಣದ ಒಟ್ಟು ವೆಚ್ಚದಲ್ಲಿ ಸೇರಿಸಿ ಸಾಲದ ಮೊತ್ತ ನಿರ್ಧರಿಸುತ್ತಿರುವ ಬಗ್ಗೆ ತನಗೆ ಸಾಕಷ್ಟು ದೂರುಗಳು ಬಂದಿವೆ. ಯಾವುದೇ ಬ್ಯಾಂಕ್ ಹೀಗೆ ಮಾಡಬಾರದು ಎಂದು `ಆರ್‌ಬಿಐ~ ಸುತ್ತೋಲೆಯಲ್ಲಿ ತಿಳಿಸಿದೆ.

ಇಂತಹ ಕ್ರಮಗಳಿಂದ ಮನೆಗಳ ನಿಜವಾದ ಮೌಲ್ಯ ಉತ್ಪ್ರೇಕ್ಷಿಸಿದಂತಾಗುತ್ತದೆ. ಮುದ್ರಾಂಕ ಶುಲ್ಕ, ನೋಂದಣಿ ಶುಲ್ಕ ಮತ್ತಿತರ ದಾಖಲೆ ಪತ್ರಗಳ ಶುಲ್ಕ ಗಳನ್ನು ಆಸ್ತಿಯ ಮೌಲ್ಯಕ್ಕೆ ಸೇರಿಸುವುದು ಸರಿಯಲ್ಲ.

ಬ್ಯಾಂಕ್‌ಗಳು ಗೃಹ ನಿರ್ಮಾಣ ಉದ್ದೇಶಕ್ಕೆ ನೀಡುವ ಸಾಲದಲ್ಲಿ ಇಂತಹ ಶುಲ್ಕಗಳನ್ನೆಲ್ಲ ಸೇರ್ಪಡೆ ಮಾಡಬಾರದು. `ಮೌಲ್ಯಕ್ಕೆ ತಕ್ಕಂತೆ ಸಾಲ~ Loan to Value (LTV) ನಿಯಮಗಳನ್ನು ಯಾವುದೇ ಕಾರಣಕ್ಕೂ ಸಡಿಲಿಸಬಾರದು ಎನ್ನುವುದು `ಆರ್‌ಬಿಐ~ನ ನಿಲುವಾಗಿದೆ.

ರಿಯಲ್ ಎಸ್ಟೇಟ್ ವಲಯಕ್ಕೆ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬ್ಯಾಂಕ್ ಸಾಲ ಹರಿದು ಹೋಗುತ್ತಿರುವುದು `ಆರ್‌ಬಿಐ~ನ ಚಿಂತೆಗೆ ಕಾರಣವಾಗಿದೆ. ಮನೆ ನಿರ್ಮಾಣದ (ಆಸ್ತಿಯ ವೆಚ್ಚ) ಶೇ 80ರಷ್ಟು ಮೊತ್ತದ ಸಾಲ ಮಂಜೂರು ಮಾಡಬೇಕು ಎಂದು `ಆರ್‌ಬಿಐ~, 2010ರಲ್ಲಿಯೇ ಮಾರ್ಗದರ್ಶಿ ಸೂತ್ರ ಬಿಡುಗಡೆ ಮಾಡಿತ್ತು.

ನಿಯಮಾವಳಿ ಪ್ರಕಾರ, ಗೃಹ ನಿರ್ಮಾಣ, ಮನೆ ಖರೀದಿ ಉದ್ದೇಶಕ್ಕೆ ಸಾಲ ಪಡೆಯುವವರು, ಒಟ್ಟು ವೆಚ್ಚದ ಕನಿಷ್ಠ ಶೇ 20ರಷ್ಟು ಮೊತ್ತವನ್ನು ಹೊಂದಿಸಿಕೊಂಡ ನಂತರವೇ ಸಾಲಕ್ಕಾಗಿ ಬ್ಯಾಂಕ್‌ಗಳನ್ನು ಸಂಪರ್ಕಿಸಬೇಕು.

ರಿಯಲ್ ಎಸ್ಟೇಟ್ ವಲಯದಲ್ಲಿ ಬೆಲೆ ಏರಿಕೆಗೆ ಕಡಿವಾಣ ವಿಧಿಸಲು, `ಆರ್‌ಬಿಐ~, ಗರಿಷ್ಠ ಮೊತ್ತದ ಸಾಲಗಳಾದ ರೂ. 75 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಮೊತ್ತದ ಸಾಲ ಮಂಜೂರು ಮಾಡಲು ಕಠಿಣ ನಿಯಮಗಳನ್ನು ರೂಪಿಸಿದೆ.

ಕೇಂದ್ರೀಯ ಬ್ಯಾಂಕ್‌ನ ನಿಯಮಗಳ ಅನ್ವಯ, ರೂ. 20 ಲಕ್ಷದವರೆಗಿನ ಗೃಹ ಸಾಲಕ್ಕೆ ಬ್ಯಾಂಕ್‌ಗಳು ಶೇ 90ರಷ್ಟು ಸಾಲ ನೀಡಬಹುದಾಗಿದೆ. ಇಂತಹ ಸಾಲಗಳು ಆದ್ಯತಾ ವಲಯದ ಸಾಲದ ವ್ಯಾಪ್ತಿಗೂ ಬರುತ್ತವೆ.

`ಮೌಲ್ಯಕ್ಕೆ ತಕ್ಕಂತೆ ಸಾಲ~ ನಿಯಮ ಪಾಲನೆ ಮಾಡದ ಹಲವಾರು ಸಂದರ್ಭದಲ್ಲಿ, ಮನೆ ಖರೀದಿಗೆ ಬ್ಯಾಂಕ್‌ಗಳು ಉದಾರವಾಗಿ ಸಾಲ ಮಂಜೂರು ಮಾಡುತ್ತಿವೆ. ಒಟ್ಟು ಮೌಲ್ಯದ ಶೇ 90ರವರೆಗೂ ಸಾಲ ನೀಡುವ ನಿದರ್ಶನಗಳಿವೆ. ಇದು ಮಾರ್ಗದರ್ಶಿ ಸೂತ್ರಗಳಿಗೆ ವಿರುದ್ಧವಾಗಿದೆ ಎನ್ನುವುದು ಕೇಂದ್ರೀಯ ಬ್ಯಾಂಕ್‌ನ ನಿಲುವಾಗಿದೆ.

ಸಾಲದ ಆಯ್ಕೆಯಲ್ಲಿ ಎಚ್ಚರ
ಸಾಲ ಮಾಡಿ ಹೊಸ ಮನೆ ಖರೀದಿಸುವುದಾಗಲಿ, ಮನೆ ಕಟ್ಟುವುದಾಗಲಿ ಅಷ್ಟು ಸುಲಭವಲ್ಲ. ನಿರ್ಮಾಣಗೊಂಡ ಮನೆ ಖರೀದಿಸುವ, ಖಾಲಿ ನಿವೇಶನ ಗುರುತಿಸಿ ಹೊಸ ಮನೆ ಕಟ್ಟುವ ಮೊದಲು, ತಮ್ಮ ಆದಾಯಕ್ಕೆ ಸೂಕ್ತವಾಗಿ ಹೊಂದಾಣಿಕೆಯಾಗುವ, ಸಾಲ ತೀರಿಸುವ ಸಾಮರ್ಥ್ಯವನ್ನೂ ಪರಿಗಣಿಸಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಅಗತ್ಯವಿರುವ ಸಾಲ ಮಂಜೂರು ಮಾಡುವ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಫ್ಲ್ಯಾಟ್ ಖರೀದಿ / ಗೃಹ ನಿರ್ಮಾಣಕ್ಕೆ ಸಾಲ ಪಡೆಯಲು ಮುಂದಾಗುವವರು ಆಯ್ಕೆಯಲ್ಲಿ ಹಲವಾರು ಗೊಂದಲಗಳನ್ನು ಎದುರಿಸುತ್ತಾರೆ. ಹೀಗಾಗಿ ಸಾಲದ ಆಯ್ಕೆಯಲ್ಲಿಯೂ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ.

ಗೃಹ ಸಾಲ ಒಪ್ಪಂದದ ದಾಖಲೆ ಪತ್ರಗಳನ್ನು ಮೊದಲು ಕೂಲಂಕಷವಾಗಿ ಪರಿಶೀಲಿಸಬೇಕು. ಮನದಲ್ಲಿ ಮೂಡುವ ಅನುಮಾಗಳನ್ನೆಲ್ಲ ಪರಿಹರಿಸಿಕೊಳ್ಳಬೇಕು. ದೊಡ್ಡ ಮೊತ್ತದ ಹೂಡಿಕೆ ಮಾಡಬೇಕಾಗುವುದರಿಂದ ಸಾಕಷ್ಟು ಶ್ರದ್ಧೆಯಿಂದಲೇ ಗಮನ ಹರಿಸಬೇಕು.

ಬಡ್ಡಿ ದರ
ಬ್ಯಾಂಕ್ ಮತ್ತು ಗೃಹ ಹಣಕಾಸು ಸಂಸ್ಥೆಗಳು ನೀಡುವ ಸಾಲಗಳ ಮೇಲಿನ ಬಡ್ಡಿ ದರಗಳಲ್ಲಿ ಅಲ್ಪ ಪ್ರಮಾಣದ ವ್ಯತ್ಯಾಸ ಇದ್ದರೂ ಸಾಲಗಾರರ ಪಾಲಿಗೆ ಅದು ದೊಡ್ಡ ಹೊರೆಯಾಗಿ ಪರಿಣಮಿಸುತ್ತದೆ. ಶೇ 10.5ರ ಬಡ್ಡಿ ದರದಲ್ಲಿ ರೂ. 30 ಲಕ್ಷದ ಸಾಲವನ್ನು 20 ವರ್ಷಗಳ ಮರು ಪಾವತಿ ಅವಧಿಗೆ ತೆಗೆದುಕೊಂಡರೆ, ಮಾಸಿಕ ಸಮಾನ ಕಂತಿನ ಹಣವು (ಇಎಂಐ) ರೂ. 29,951ರಷ್ಟಾಗುತ್ತದೆ.

ಬಡ್ಡಿ ದರ ಶೇ 10.5ರ ಬದಲಿಗೆ ಶೇ 11ರಷ್ಟಾಗಿದ್ದರೆ, `ಇಎಂಐ~ ರೂ. 1000ಕ್ಕಿಂತ ಹೆಚ್ಚಾಗುತ್ತದೆ (ರೂ. 30,966). ಸಾಲದ ಅವಧಿ ಪೂರ್ಣಗೊಂಡಾಗ ರೂ. 2,43,421 ರಷ್ಟು ಮೊತ್ತವನ್ನು ಹೆಚ್ಚುವರಿಯಾಗಿ ಪಾವತಿ ಮಾಡಬೇಕಾಗುತ್ತದೆ. ಹೀಗಾಗಿ ಸ್ಪರ್ಧಾತ್ಮಕ ದರಗಳನ್ನು ನೀಡುವ ಸಾಲಗಾರರನ್ನೇ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಬದಲಾಗುವ ಬಡ್ಡಿ ದರಗಳಿಗೆ (floating rate ) ಹೋಲಿಸಿದರೆ, ಸ್ಥಿರ ಬಡ್ಡಿ ದರಗಳು (Fixed rate) ಹೆಚ್ಚು ದುಬಾರಿಯಾಗಿರುತ್ತವೆ. ಸ್ಥಿರ ಬಡ್ಡಿ ದರಗಳನ್ನು ಆಯ್ಕೆ ಮಾಡಿಕೊಂಡರೆ, ತಿಂಗಳ ಮಾಸಿಕ ಕಂತು ಒಂದೇ ಬಗೆಯಲ್ಲಿ ಇರುತ್ತದೆ.

ಸದ್ಯಕ್ಕೆ ಅನೇಕ ಸ್ಥಿರ ಬಡ್ಡಿ ದರಗಳು ನಿರ್ದಿಷ್ಟ ಅವಧಿಗೆ ಇಲ್ಲವೇ ಕೆಲಮಟ್ಟಿಗೆ ಸಾಲದ ಮಿತಿಗೆ ಸ್ಥಿರವಾಗಿರುತ್ತವೆ. ಸ್ಥಿರ ಬಡ್ಡಿ ದರಗಳು, ಯಾವಾಗ ಮತ್ತು ಎಷ್ಟರಮಟ್ಟಿಗೆ ಬದಲಾಗಬಹುದು ಎನ್ನುವುದನ್ನು ಸಾಲಗಾರರು ತಿಳಿದುಕೊಂಡಿರಬೇಕು.

ಜತೆಗೆ ಬದಲಾಗುವ ಬಡ್ಡಿ ದರಗಳ ವಿಷಯದಲ್ಲಿಯೂ, ಸಾಲ ನೀಡುವ ಸಂಸ್ಥೆಯು ಬಡ್ಡಿ ದರಗಳನ್ನು ಹೇಗೆ ಲೆಕ್ಕ ಮಾಡುತ್ತದೆ ಮತ್ತು ಅದು ನ್ಯಾಯೋಚಿತವಾಗಿದೆಯೇ ಎನ್ನುವುದನ್ನು ತಿಳಿದುಕೊಳ್ಳಬೇಕು.

ಇತ್ತೀಚಿನ ದಿನಗಳಲ್ಲಿ ವಾಣಿಜ್ಯ ಬ್ಯಾಂಕ್‌ಗಳು ಗೃಹ ಸಾಲ ಮೇಲಿನ ಬಡ್ಡಿ ದರಗಳನ್ನು ನಿಗದಿ ಮಾಡುವಾಗ ತಮ್ಮ `ಮೂಲ ದರ~ (invariably) ಆಧರಿಸಿ ಬಡ್ಡಿ ದರ ನಿಗದಿ ಮಾಡುತ್ತಿವೆ.
ಗೃಹ ಹಣಕಾಸು ಸಂಸ್ಥೆಗಳು (home finance com­pany-HFC) ಕೂಡ, ಕಾಲ ಕಾಲಕ್ಕೆ ಬದಲಾಗುವ ತಮ್ಮದೇ ಆದ ಬಡ್ಡಿ ದರಗಳನ್ನು ಹೊಂದಿರುತ್ತವೆ.

ಸ್ಥಿರ ಬಡ್ಡಿ ಮತ್ತು ಬದಲಾಗುವ ಬಡ್ಡಿ ದರಗಳನ್ನು ಬದಲಿಸಿಕೊಳ್ಳುವ ಅವಕಾಶ ಇದೆಯೇ ಎನ್ನುವುದನ್ನೂ ಸಾಲಗಾರರು ತಿಳಿದುಕೊಂಡಿರಬೇಕು. ಇಂತಹ ಬದಲಾವಣೆ ಸಾಧ್ಯತೆ ಮತ್ತು ಅದಕ್ಕೆ ವಿಧಿಸಬಹುದಾದ ಶುಲ್ಕಗಳು ಸಾಲಗಾರರಿಗೆ ಹೆಚ್ಚುವರಿ ಹೊರೆಯಾಗಿ ಪರಿಣಮಿಸುತ್ತವೆ ಎನ್ನುವುದನ್ನೂ ಮರೆಯಬಾರದು.

ಸಾಲದ ಮೇಲಿನ ಬಡ್ಡಿ ದರದ ಜತೆಗೆ, ಸಾಲಗಾರರು, ಸಾಲ ನೀಡುವ ಸಂಸ್ಥೆ ವಿಧಿಸುವ ಸಾಲ ಪ್ರಕ್ರಿಯೆ ಶುಲ್ಕದ ( processing fees ) ಬಗ್ಗೆಯೂ ತಿಳಿದುಕೊಂಡಿರಬೇಕು.

ಈ ಶುಲ್ಕವು, ಸಾಲದ ಮೊತ್ತದ ಶೇ 0.5 ರಿಂದ ಶೇ 1ರಷ್ಟು ಅಥವಾ ಸಾಲದ ಮೊತ್ತಕ್ಕೆ ಸಮಾನವಲ್ಲದ ಸಾರಾಸಗಟು ಬಗೆಯಲ್ಲಿಯೂ ಇರುತ್ತದೆ. ಸಾಲ ಮಂಜೂರು ಮಾಡುವ ಹಂತದಲ್ಲಿಯೇ ಸಾಲಗಾರರಿಂದ ಈ ಶುಲ್ಕ ವಸೂಲು ಮಾಡಲಾಗುತ್ತದೆ. ಇದನ್ನು ಸಾಲಗಾರರಿಗೆ ಮರಳಿಸಲಾಗುವುದಿಲ್ಲ. ಗೃಹ ಸಾಲ ಮೇಳ ಏರ್ಪಡಿಸಿದ ವಿಶೇಷ ಸಂದರ್ಭಗಳಲ್ಲಿ ಮಾತ್ರ ಇಂತಹ ಶುಲ್ಕ ಪಾವತಿಗೆ ವಿನಾಯ್ತಿ ನೀಡಲಾಗುತ್ತದೆ. ಈ `ಸಾಲ ಪ್ರಕ್ರಿಯೆ~ ಶುಲ್ಕದ ದರ ಕಡಿಮೆ ಇದ್ದಷ್ಟೂ ಸಾಲಗಾರರಿಗೆ ಹೆಚ್ಚಿನ ಪ್ರಯೋಜನ ಲಭಿಸುತ್ತದೆ.

ಗೃಹ ಸಾಲ ನೀಡುವ ಕೆಲ ಸಂಸ್ಥೆಗಳು ಮೌಲ್ಯವರ್ಧಿತ ಸೇವೆಗಳಾದ ಮನೆ / ಫ್ಲ್ಯಾಟ್ ಹುಡುಕಿ ಕೊಡುವಂತಹ ಸೌಲಭ್ಯವನ್ನೂ ಒದಗಿಸುತ್ತವೆ. ಇಂತಹ ಸೇವೆಗೆ ಹೆಚ್ಚುವರಿ ಶುಲ್ಕ ಪಾವತಿಸಬೇಕೆ ಮತ್ತು ಅದು ನ್ಯಾಯೋಚಿತ ರೀತಿಯಲ್ಲಿ ಇರಲಿದೆಯೇ ಎನ್ನುವುದನ್ನೂ ಸಾಲಗಾರರು ತಿಳಿದುಕೊಂಡಿರಬೇಕು.

ಸಾಲ ಪಡೆಯುವಾಗ, ಆಸ್ತಿಯ ಒಟ್ಟು ಮೊತ್ತಕ್ಕೆ ಹೋಲಿಸಿದರೆ ನಿರ್ದಿಷ್ಟ ಪ್ರತಿಶತ ಪ್ರಮಾಣಕ್ಕೆ ಸಾಲ ಪಡೆಯಬೇಕು.

ಉದಾಹರಣೆಗೆ- ರೂ. 40 ಲಕ್ಷದಷ್ಟು ಮೊತ್ತದ ಮನೆ ಖರೀದಿಗೆ ಇಲ್ಲವೇ ಗೃಹ ನಿರ್ಮಾಣಕ್ಕೆ ಇಷ್ಟು ವೆಚ್ಚ ಬರುತ್ತಿದ್ದರೆ, ಬ್ಯಾಂಕ್ ಮತ್ತಿತರ ಮೂಲಗಳಿಂದ ಪಡೆಯುವ ಸಾಲದ ಮೊತ್ತ (ಶೇ 80ರಷ್ಟು) ರೂ. 32 ಲಕ್ಷ ಆಗಿರುತ್ತದೆ.

ಉಳಿದ ಮೊತ್ತವಾದ ರೂ. 8 ಲಕ್ಷವನ್ನು ಸಾಲ ಪಡೆಯುವವರೇ ಹೊಂದಿಸಿಕೊಳ್ಳಬೇಕು. ಮನೆ ಅಥವಾ ಅಪಾರ್ಟ್‌ಮೆಂಟ್ ಖರೀದಿಸುವ ಸಂದರ್ಭದಲ್ಲಿ ಮುಂಗಡ ಹಣ ಪಾವತಿಸಿದ ನಂತರವೇ ಬ್ಯಾಂಕ್‌ಗಳು ಉಳಿದ ಸಾಲದ ಮೊತ್ತ ಮಂಜೂರು ಮಾಡುತ್ತವೆ.

ಸಾಲ ನೀಡುವ ಸಂಸ್ಥೆಗಳು ಆಸ್ತಿಯ ಒಟ್ಟು ಮೌಲ್ಯಕ್ಕೆ ಹೋಲಿಸಿದರೆ ಹೆಚ್ಚಿನ ಪ್ರಮಾಣದ ಸಾಲ ನೀಡಲು ಮುಂದೆ ಬರುವುದರಿಂದ ಸಾಲ ಪಡೆಯುವವರು ಸ್ವಂತದ ಬಲದ ಮೇಲೆ ಹೊಂದಿಸಿಕೊಳ್ಳಬಹುದಾದ ಮೊತ್ತ ಕಡಿಮೆಯಾಗುತ್ತದೆ ಎನ್ನುವುದು ನಿಜ. ಆದರೆ, ಇದರಿಂದ ಸಾಲದ ಹೊರೆ ಹೆಚ್ಚುತ್ತದೆ ಎನ್ನುವುದನ್ನೂ ಮರೆಯಬಾರದು.

ಬದಲಾಗುವ ಬಡ್ಡಿ ದರಗಳ ವಿಷಯದಲ್ಲಿ ಬ್ಯಾಂಕ್‌ಗಳು ಕಾಲ ಕಾಲಕ್ಕೆ ಬಡ್ಡಿ ದರ ಬದಲಾಯಿಸುತ್ತವೆ. ಬಡ್ಡಿ ದರ ಹೆಚ್ಚಳಗೊಂಡಾಗ ಆ ದರಗಳನ್ನು ಕಾರ್ಯರೂಪಕ್ಕೆ ತರಲು ಬ್ಯಾಂಕ್‌ಗಳು ದೀರ್ಘ ಸಮಯ ತೆಗೆದುಕೊಂಡರೆ ಅದರಿಂದ ಸಾಲಗಾರರಿಗೆ ಹೆಚ್ಚಿನ ಪ್ರಯೋಜನ ಲಭಿಸುತ್ತದೆ.

ಒಂದು ವೇಳೆ ಬಡ್ಡಿ ದರ ಇಳಿಸಿದಾಗಲೂ ಸಾಲಗಾರರಿಗೆ ಅದರ ಪ್ರಯೋಜನ ದಾಟಿಸಲು ವಿಳಂಬವಾಗುತ್ತದೆ. ಈ ಹಿನ್ನೆಲೆಯಲ್ಲಿ, ಸಾಲ ನೀಡುವ ಸಂಸ್ಥೆ ಅನುಸರಿಸುವ ವಿಧಾನ ತಿಳಿದುಕೊಂಡಿರಬೇಕು.

ಈಗಾಗಲೇ ಸಾಲ ಪಡೆದವರನ್ನು ಮತ್ತು ಹೊಸ ಸಾಲಗಾರರಿಗೆ ಒಂದೇ ಬಗೆಯಲ್ಲಿ ಸೌಲಭ್ಯ ಕಲ್ಪಿಸಲಾಗುವುದೇ ಎನ್ನುವುದನ್ನೂ ಅರಿತುಕೊಂಡಿರಬೇಕು. ತಾರತಮ್ಯ ಮಾಡದ ಸಂಸ್ಥೆಯನ್ನೇ ಆಯ್ಕೆ ಮಾಡಿಕೊಳ್ಳಬೇಕು.

ಸಾಲ ನೀಡುವ ಸಂಸ್ಥೆಯು ಬಡ್ಡಿ ದರಗಳನ್ನು ದಿನ, ತಿಂಗಳು ಅಥವಾ ವಾರ್ಷಿಕವಾಗಿ ಕಡಿಮೆಯಾಗುವ ಮೊತ್ತ ಆಧರಿಸಿ ಬಡ್ಡಿ ಆಕರಿಸುವುದೇ ಎನ್ನುವುದರ ಬಗ್ಗೆಯೂ ಮಾಹಿತಿ ಕಲೆಹಾಕಬೇಕು. ಅವಧಿ ಕಡಿಮೆಯಾದಷ್ಟೂ ಸಾಲಗಾರರಿಗೆ ಹೆಚ್ಚು ಪ್ರಯೋಜನ ಇದೆ.

ಮರು ಪಾವತಿ
ಆರಂಭದಲ್ಲಿ ಸಮಾನ ಮಾಸಿಕ ಕಂತಿನ ಮೊತ್ತ ಕಡಿಮೆ ಇದ್ದು, ಸಾಲಗಾರರ ಆದಾಯ ಹೆಚ್ಚಾದಾಗ ಕಂತಿನ ಮೊತ್ತ ಹೆಚ್ಚುವ ಅವಕಾಶ ಇರುವಂತೆಯೂ ನೋಡಿಕೊಳ್ಳಬೇಕು.
ಗೃಹ ಸಾಲ ಮರು ಪಾವತಿ ವಿಷಯದಲ್ಲಿ ಸುಸ್ತಿದಾರ ಆಗದಂತೆ ಎಚ್ಚರವಹಿಸಬೇಕು.

ಮರು ಪಾವತಿ ಮಾಡಲು ವಿಫಲವಾದರೆ ದಂಡದ ಮೊತ್ತವು ವಾರ್ಷಿಕ ಶೇ 18ರಿಂದ ಶೇ 24ರಷ್ಟು ಇರಲಿದೆ.ಒಟ್ಟಾರೆ ಗೃಹ ಸಾಲ ಪಡೆಯುವಾಗ ಸಾಕಷ್ಟು ಮುಂಜಾಗ್ರತೆ ವಹಿಸಲು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT