ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸವಕ್ಕೆ ಕವಿ ಲಕ್ಷ್ಮೀನಾರಾಯಣ ಭಟ್ಟ ದಂಪತಿ ಚಾಲನೆ;ಮಲೆನಾಡಿನಲ್ಲಿ ನವರಾತ್ರಿ ಮಹೋತ್ಸವ ಸಂಭ್ರಮ

Last Updated 17 ಅಕ್ಟೋಬರ್ 2012, 10:25 IST
ಅಕ್ಷರ ಗಾತ್ರ

ಶಿವಮೊಗ್ಗ: ನಗರಸಭೆ ಹಮ್ಮಿಕೊಂಡಿರುವ ಒಂಬತ್ತು ದಿನಗಳ ಕಾಲದ ದಸರಾ ಉತ್ಸವಕ್ಕೆ ಮಂಗಳವಾರ ಬೆಳಿಗ್ಗೆ ಕೋಟೆ ಶ್ರೀದುರ್ಗಮ್ಮ ದೇವಸ್ಥಾನದಲ್ಲಿ ಸಾಹಿತಿ ಡಾ.ಎನ್.ಎಸ್. ಲಕ್ಷ್ಮೀನಾರಾಯಣ ಭಟ್ ದಂಪತಿ ಚಾಮುಂಡೇಶ್ವರಿ ದೇವಿಗೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೈಸೂರು ದಸರಾ ಹೊರತುಪಡಿಸಿದರೆ ಇಷ್ಟೊಂದು ವಿಜೃಂಭಣೆಯಿಂದ ದಸರಾ ಮಹೋತ್ಸವ ನಡೆಯುವುದು ಶಿವಮೊಗ್ಗದಲ್ಲಿ ಮಾತ್ರ ಎಂದು ಸಂತೋಷ ವ್ಯಕ್ತಪಡಿಸಿದರು.

ಶಿವಮೊಗ್ಗ ತಮ್ಮ ಪಾಲಿಗೆ ಕಾಮಧೇನು; ಈ ಬಗ್ಗೆ ತಾವು ಶಿವಮೊಗ್ಗ ದಸರಾ ಗೀತೆ ರಚಿಸಿದ್ದು, ಮುಂದೆ ಜಿಲ್ಲೆಯಲ್ಲಿ ನಡೆಯುವ ಉತ್ಸವಗಳಲ್ಲಿ ಈ ಹಾಡು ಹಾಡುವಂತಾಗಲಿ ಎಂದರು.ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಮಾತನಾಡಿ, ಪ್ರತಿ ವರ್ಷ ವೈಭವದಿಂದ ದಸರಾ ಹಬ್ಬ ಆಚರಿಸುತ್ತಿದ್ದು, ಮಕ್ಕಳ, ಮಹಿಳೆಯರ, ಸಾಂಸ್ಕೃತಿಕ, ಚಲನಚಿತ್ರೋತ್ಸವ ಹಾಗೂ ರಂಗ ದಸರಾ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ನಗರಸಭೆ ಅಧ್ಯಕ್ಷ ಎಸ್.ಎನ್. ಚನ್ನಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಸಂಸತ್ ಸದಸ್ಯ ಬಿ.ವೈ. ರಾಘವೇಂದ್ರ, ಶಾಸಕ ಕೆ.ಜಿ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಭಾನುಪ್ರಕಾಶ್, ಕಲಾವಿದ ಉಪಾಸನ ಮೋಹನ್, ನಗರಸಭೆ ಮಾಜಿ ಅಧ್ಯಕ್ಷರಾದ ಎಂ. ಶಂಕರ್, ಕೆ.ಎಸ್. ಗಂಗಾಧರಪ್ಪ ಇದ್ದರು.

ಮಹಿಳಾ ದಸರಾಕ್ಕೆ ಚಾಲನೆ
ಸಮಾಜದ ಎಲ್ಲಾ ಕಡೆ ದೌರ್ಜನ್ಯ ನಡೆಯುತ್ತಿದೆ; ಅದು ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರದ್ದು ಎಂದು ವಸ್ತ್ರವಿನ್ಯಾಸಕಿ ನಾಗಿಣಿ ಭರಣ ಅಭಿಪ್ರಾಯಪಟ್ಟರು.ನಗರದ ಕುವೆಂಪು ರಂಗಮಂದಿರದಲ್ಲಿ ಮಂಗಳವಾರ ನಗರಸಭೆ ಆಯೋಜಿಸಿದ್ದ ಮಹಿಳಾ ದಸರಾ ಉದ್ಘಾಟಿಸಿ ಅವರು ಮಾತನಾಡಿದರು.

ಮಲೆನಾಡಿನ ಮಣ್ಣಿಗೆ ಅದ್ಭುತ ಶಕ್ತಿ ಇದೆ. ಇಲ್ಲಿನ ಹೆಣ್ಣುಮಕ್ಕಳು ಎಲ್ಲ ಕ್ಷೇತ್ರದಲ್ಲೂ ಮುಂದೆ ಬಂದು ಹೆಚ್ಚಿನ ಸಾಧನೆ ಮಾಡಬೇಕು. ಮಹಿಳೆಯರು ಇಂತಹ ಕಾರ್ಯಕ್ರಮಗಳಿಂದ ಸ್ಫೂರ್ತಿ ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.

 ಕಿರುತೆರೆ ನಟಿ ಕೃತಿಕಾ ಮಾತನಾಡಿ, ಹೆಣ್ಣುಮಕ್ಕಳಿಗೆ ಅವಕಾಶಗಳು ಬಂದರೂ ಸ್ವೀಕರಿಸುವುದಿಲ್ಲ; ಅವಕಾಶ ಸದುಪಯೋಗಪಡಿಸಿಕೊಳ್ಳುವ ಗುಣವನ್ನು ಹೆಣ್ಣುಮಕ್ಕಳು ಬೆಳೆಸಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ನಟಿ ಆಶಾಲತಾ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಯಲಕ್ಷ್ಮೀ ಕೆ.ಎಸ್. ಈಶ್ವರಪ್ಪ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹೇಮಾ ರಾಜಗೋಪಾಲ್, ಕುಸುಮಾ ನಾಗರಾಜ್, ಶೈಲಜಾ ಟಿ.ಎಸ್. ನಾಗರಾಜ್, ಕವಿತಾ ಪ್ರಶಾಂತ್ ಹಾಗೂ ಮಂಜುಳಮ್ಮ ರಂಗಸ್ವಾಮಿ ಅವರನ್ನು ಸನ್ಮಾನಿಸಲಾಯಿತು.

ನಗರಸಭಾ ಸದಸ್ಯೆ ಸುನಿತಾ ಅಣ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಎಸ್.ಎಸ್. ಚನ್ನಬಸಪ್ಪ, ಉಪಾಧ್ಯಕ್ಷ ಎಸ್. ರಾಮು ಉಪಸ್ಥಿತರಿದ್ದರು.

ಸೊರಬ ವರದಿ
ಪಟ್ಟಣದಲ್ಲಿ ನಾಡಹಬ್ಬ ದಸರಾ ಉತ್ಸವಕ್ಕೆ ಮಂಗಳವಾರ ಶಾಸಕ ಎಚ್. ಹಾಲಪ್ಪ ವಿಧ್ಯುಕ್ತವಾಗಿ ಚಾಲನೆ ನೀಡಿದರು.ನಾಡಹಬ್ಬ ದಸರಾ ಉತ್ಸವ ಸಮಿತಿ, ತಾಲ್ಲೂಕು ಆಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪಟ್ಟಣ ಪಂಚಾಯ್ತಿ  ಸಹಯೋಗದಲ್ಲಿ ತೃತೀಯ ಬಾರಿಗೆ ನಡೆಯುತ್ತಿರುವ ದಸರಾ ಉತ್ಸವಕ್ಕೆ ಬೆಳಿಗ್ಗೆ ವಿದ್ವಾನ್ ನಾರಾಯಣ ಭಟ್ ಅವರು ಪೂಜೆ ಸಲ್ಲಿಸುವ ಮೂಲಕ ಸೀತಾ ರಾಮಚಂದ್ರ ದೇವಸ್ಥಾನದಲ್ಲಿ ದುರ್ಗಾದೇವಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು.

ತಹಶೀಲ್ದಾರ್ ಶ್ರೀಧರಮೂರ್ತಿ ಎಸ್. ಪಂಡಿತ್, ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ವಿಜಯಾ ಮಹಾಲಿಂಗಪ್ಪ, ಉಪಾಧ್ಯಕ್ಷ ಪ್ರಶಾಂತ ಮೇಸ್ತ್ರಿ, ಗೌರಮ್ಮ ಭಂಡಾರಿ, ಮಹೇಶ್ ಗೌಳಿ, ಜಿ. ಕೆರಿಯಪ್ಪ, ರೇವಣ ಕುಮಾರ್, ಮಧುರಾಯ್ ಜಿ. ಶೇಟ್, ಷಣ್ಮುಖಾಚಾರ್, ಸುಬ್ರಹ್ಮಣ್ಯ ಗುಡಿಗಾರ್, ಹೊಳೆಲಿಂಗಪ್ಪ, ರೇಣುಕಮ್ಮ ಗೌಳಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT