ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ಸವದಲ್ಲಿ ವಿಶಿಷ್ಟ ಪತಂಗಗಳ ಹಾರಾಟ

Last Updated 11 ಫೆಬ್ರುವರಿ 2011, 7:05 IST
ಅಕ್ಷರ ಗಾತ್ರ

ಬೀದರ್: ಈ ಬಾರಿಯ ಬೀದರ್ ಉತ್ಸವದಲ್ಲಿ ದೇಶ- ವಿದೇಶಗಳ ವಿಶಿಷ್ಟ ಪತಂಗಗಳು ಹಾರಾಟ ನಡೆಸಲಿವೆ.ನಗರದಲ್ಲಿ ಬುಧವಾರ ಪತಂಗ ಉತ್ಸವದ ಪ್ರಚಾರ ಚಿತ್ರಗಳನ್ನು ಬಿಡುಗಡೆ ಮಾಡಿ ಜಿಲ್ಲಾಧಿಕಾರಿ ಸಮೀರ್ ಶುಕ್ಲಾ ಈ ವಿಷಯ ತಿಳಿಸಿದರು.

ಬೀದರ್ ಉತ್ಸವದ ಅಂಗವಾಗಿ ನಗರದ ಕೋಟೆಯ ಒಳಗಿನ ಚಾಂದಿನಿ ಚಬೂತರ್ ಪ್ರದೇಶದಲ್ಲಿ ಫೆಬ್ರುವರಿ 18, 19 ಮತ್ತು 20 ರಂದು ಪತಂಗ ಉತ್ಸವ ಜರುಗಲಿದೆ. ದೇಶದ ಪ್ರಸಿದ್ಧ ಕೈಟ್ ಕ್ಲಬ್‌ಗಳಾದ ಹೈದರಾಬಾದ್‌ನ ಕೋಹಿನೂರ ಕೈಟ್ ಕ್ಲಬ್, ಮುಂಬೈನ ಶ್ರುತಿ ಕೈಟ್ ಕ್ಲಬ್, ಉತ್ತರ ಪ್ರದೇಶದ ಲಕ್ನೋ ಕೈಟ್ ಆರ್ಗನೈಝೇಶನ್, ಚೆನ್ನೈನ ಎಂ.ಸುಂದರಮೂರ್ತಿ, ಗುಜರಾತ್‌ನ ವಡೋದರಾದ ದಿಗಂತ ಜೋಶಿ ಮತ್ತಿತರ ತಂಡದವರು ಆಕರ್ಷಕ ಪತಂಗಗಳನ್ನು ಪರಿಚಯಿಸಲಿದ್ದಾರೆ. ತಾವೇ ಸಿದ್ಧಪಡಿಸಿದ ಬಗೆ ಬಗೆಯ ಪತಂಗಗಳನ್ನು ಹಾರಿಸಿ ಉತ್ಸವದ ಮೆರುಗು ಹೆಚ್ಚಿಸಲಿದ್ದಾರೆ ಎಂದು ತಿಳಿಸಿದರು.

ಕಳೆದ ಮೂರು ವರ್ಷಗಳಿಂದ ಪತಂಗ ಉತ್ಸವ ನಡೆಸಿಕೊಂಡು ಬರಲಾಗಿದೆ. ಈ ಬಾರಿಯ ಪತಂಗ ಉತ್ಸವ ಹಿಂದಿಗಿಂತಲೂ ಹೆಚ್ಚು ಆಕರ್ಷಕ ಮತ್ತು ವೈವಿಧ್ಯಮಯ ಆಗಿರಲಿದೆ ಎಂದು ಪತಂಗ ಉತ್ಸವದ ಅಧ್ಯಕ್ಷ ಡಾ. ರಾಜಶೇಖರ ಕೌಜಲಿ ಹೇಳಿದ್ದಾರೆ.ಮೊದಲ ಉತ್ಸವದಲ್ಲಿ ಪೆಂಚ್, ಅತಿದೊಡ್ಡ ಹಾಗೂ ವಿಶೇಷ ಪತಂಗ ಸ್ಪರ್ಧೆ ಆಯೋಜಿಸಲಾಗಿತ್ತು. ಕಳೆದ ಉತ್ಸವದಲ್ಲಿ ಮಹಾಪೇಂಚ್ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಬಾರಿಯ ಉತ್ಸವದಲ್ಲಿ ‘ಚಾಲೆಂಜ್ ಪೆಂಚ್’ ಸ್ಪರ್ಧೆಯನ್ನು ಪರಿಚಯಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಈ ಬಾರಿ ವಿಭಿನ್ನ ಮತ್ತು ದೇಶ- ವಿದೇಶಗಳ ಪತಂಗಗಳು ಆಕಾಶದಲ್ಲಿ ಚಿತ್ತಾರ ಬಿಡಿಸಲಿವೆ. ನೋಡುಗರಿಗೆ ಮನೋರಂಜನೆ ಜೊತೆಗೆ ಹೊಸ ಅನುಭವ ನೀಡಲಿವೆ ಎಂದು ಹೇಳಿದ್ದಾರೆ.ಪೆಂಚ್ ಸ್ಪರ್ಧೆಗೆ ರೂ. 5,001, ಅತಿ ದೊಡ್ಡ ಪತಂಗಗೆ ರೂ. 5,001, ಆಕರ್ಷಕ ಪತಂಗಗೆ ರೂ. 2,001 ಹಾಗೂ ಮಹಾಪೇಂಚ್‌ನಲ್ಲಿ ವಿಜೇತರಾದವರಿಗೆ 2,001 ರೂಪಾಯಿ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. ಜಿಲ್ಲೆಯ ಜನ ತಮ್ಮ ಮಕ್ಕಳ ಜೊತೆಗೆ ಇದರ ಸವಿ ಅನುಭವಿಸಬೇಕು ಎಂದು ಮನವಿ ಮಾಡಿದ್ದಾರೆ.
ಮಕ್ಕಳ ಚಲನಚಿತ್ರೋತ್ಸವ: ಬೀದರ್ ಉತ್ಸವದ ನಿಮಿತ್ತ ಬೀದರ್ ಸಿನಿ ಸೋಸೈಟಿ ವತಿಯಿಂದ ಫೆಬ್ರುವರಿ 14 ರಿಂದ ಮೂರು ದಿನಗಳ ಕಾಲ ನಗರದ ರಂಗಮಂದಿರದಲ್ಲಿ ಮಕ್ಕಳ ಚಲನ ಚಿತ್ರೋತ್ಸವ ಆಯೋಜಿಸಲಾಗಿದೆ ಎಂದು ಮಕ್ಕಳ ಚಲನಚಿತ್ಸೋತ್ಸವದ ಮುಖ್ಯಸ್ಥ ರವಿ ಮೂಲಗೆ ತಿಳಿಸಿದ್ದಾರೆ.

ಫೆಬ್ರುವರಿ 14 ರಂದು ಬೆಳಿಗ್ಗೆ ‘ಚಿನ್ನಾರಿ ಮುತ್ತಾ’ ಕನ್ನಡ ಚಿತ್ರ ಪ್ರದರ್ಶನವಾಗಲಿದೆ. ಫೆಬ್ರುವರಿ 15 ರಂದು ಬೆಳಿಗ್ಗೆ 9.30ಕ್ಕೆ ‘ಬೀ ಮೂವಿ’ ಎನಿಮೇಟೆಡ್ ಇಂಗ್ಲಿಷ್ ಚಿತ್ರ ಮತ್ತು ಫೆಬ್ರುವರಿ 16 ರಂದು ಬೆಳಿಗ್ಗೆ 10ಕ್ಕೆ ‘ತೂನ್‌ಪುರ ಕಾ ಸೂಪರ್ ಹಿರೋ’ ಹಿಂದಿ ಚಿತ್ರ ಪ್ರದರ್ಶನವಾಗಲಿದೆ ಎಂದು ಹೇಳಿದ್ದಾರೆ.ಪ್ರತಿದಿನ ಚಲನಚಿತ್ರ ಪ್ರದರ್ಶನಕ್ಕೆ ಮುಂಚೆ ಬೀದರನ ಇತಿಹಾಸ- ಸಂಸ್ಕೃತಿ ಪರಿಚಯಿಸುವ ಸಾಕ್ಷ್ಯಚಿತ್ರ ಪ್ರದರ್ಶಿಸಲಾಗುತ್ತದೆ. ಚಿತ್ರ ಪ್ರದರ್ಶನದ ಮೊದಲ ಎರಡು ದಿನ ಪ್ರದರ್ಶನದಲ್ಲಿ ತೋರಿಸಲಾದ ಚಿತ್ರಗಳಿಗೆ ಸಂಬಂಧಿಸಿದಂತೆ ಕ್ವಿಜ್ ಏರ್ಪಡಿಸಿ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT