ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದಯೋನ್ಮುಖ ಗಾಯಕ ಆದಿತ್ಯ ನಾಡಿಗ್ ಆತ್ಮಹತ್ಯೆ

Last Updated 5 ನವೆಂಬರ್ 2011, 18:30 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸುವಂತೆ ಪೋಷಕರು ಬುದ್ಧಿ ಮಾತು ಹೇಳಿದ್ದರಿಂದ ಮನನೊಂದ ಉದಯೋನ್ಮುಖ ಗಾಯಕ ಆದಿತ್ಯ ನಾಡಿಗ್ (21) ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಟ್ಟಮಡು ಸಮೀಪದ ಶ್ರೀರಾಮನಗರದಲ್ಲಿ ಶುಕ್ರವಾರ ರಾತ್ರಿ ನಡೆದಿದೆ.

ಶ್ರೀರಾಮನಗರದಲ್ಲಿ ವಾಸವಿರುವ ರಾಮಸ್ವಾಮಿ ಮತ್ತು ಗಾಯತ್ರಿ ದಂಪತಿಯ ಮಗನಾದ ಆದಿತ್ಯ ಅವರು ಬಸವನಗುಡಿಯ ಎಪಿಎಸ್ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಅವರು ಕನ್ನಡ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ಸಂಗೀತ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅಲ್ಲದೆ, ಅವರಿಗೆ ಹಿಂದಿ ವಾಹಿ ನಿಯೊಂದರ ಕಾರ್ಯಕ್ರಮದಲ್ಲಿ ಹಾಡಲು ಅವಕಾಶ ಬಂದಿತ್ತು. ಈ ಹಿನ್ನೆಲೆಯಲ್ಲಿ ಅವರು ಮುಂಬೈಗೆ ಹೋಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿದ್ದರು. ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡು, ಸಂಗೀತ ಕಾರ್ಯಕ್ರಮಕ್ಕೆ ಮುಂದೆಯೂ ಅವಕಾಶಗಳು ಬರುತ್ತವೆ ಎಂದು ಪೋಷಕರು ಮಗನಿಗೆ ಬುದ್ಧಿ ಮಾತು ಹೇಳಿದ್ದರು.
ಇದೇ ವಿಷಯವಾಗಿ ಆದಿತ್ಯ ಮತ್ತು ಪೋಷಕರ ನಡುವೆ ರಾತ್ರಿ ವಾಗ್ವಾದ ನಡೆದಿತ್ತು. ಇದರಿಂದ ಬೇಸರಗೊಂಡ ಅವರು ಮಲಗುವ ಕೋಣೆಗೆ ತೆರಳಿ ಅಲ್ಲಿಯೇ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಕೆಂಪೇಗೌಡ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಕಿಮ್ಸ) ಶನಿವಾರ ಅವರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಚೆನ್ನಮ್ಮನಕೆರೆ ಅಚ್ಚುಕಟ್ಟೆಯಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರೋಡೆ
ಮನೆಗೆ ನುಗ್ಗಿದ ದುಷ್ಕರ್ಮಿಗಳು ಐದು ಮಂದಿ ಯುವಕರನ್ನು ಬೆದರಿಸಿ ಹಣ ಮತ್ತು ಮೊಬೈಲ್ ಪೋನ್‌ಗಳನ್ನು ದರೋಡೆ ಮಾಡಿರುವ ಘಟನೆ ಕೋರಮಂಗಲದ ಶುಕ್ರವಾರ ರಾತ್ರಿ ನಡೆದಿದೆ.

ಈ ಬಗ್ಗೆ ಖಾಸಗಿ ಕಂಪೆನಿ ಉದ್ಯೋಗಿ ಬಿಜು ಎಂಬುವರು ದೂರು ಕೊಟ್ಟಿದ್ದಾರೆ. ಮಧ್ಯ ರಾತ್ರಿ ಹನ್ನೆರಡು ಗಂಟೆ ಸುಮಾರಿಗೆ ಮನೆಯಿಂದ ಹೊರಗೆ ನಿಂತು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದೆ. ಆ ಸಂದರ್ಭದಲ್ಲಿ ಮನೆಯ ಬಾಗಿಲು ತೆರೆದಿತ್ತು ಮತ್ತು ಗೆಳೆಯರು ಒಳಗಿದ್ದರು. ಮಾರಕಾಸ್ತ್ರಗಳೊಂದಿಗೆ ಏಕಾಏಕಿ ಮನೆಯೊಳಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಬೆದರಿಸಿ ಐದು ಮೊಬೈಲ್ ಫೋನ್‌ಗಳು ಮತ್ತು ಪರ್ಸ್‌ಗಳನ್ನು ಕಿತ್ತುಕೊಂಡರು.

ಪರ್ಸ್‌ನಲ್ಲಿ 1,200 ರೂಪಾಯಿ ಹಣವಿತ್ತು. ದರೋಡೆಕೋರರು ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದರು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಆಡುಗೋಡಿ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT