ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದರದರ್ಶಕ ಶಸ್ತ್ರಚಿಕಿತ್ಸೆಗೆ ಹೊಸ ಆಯಾಮ

Last Updated 2 ಮೇ 2012, 19:30 IST
ಅಕ್ಷರ ಗಾತ್ರ

ಎರಡು ದಶಕದ ಹಿಂದೆ ಉದರದರ್ಶಕ ಶಸ್ತ್ರಚಿಕಿತ್ಸೆಗಳು ಪ್ರಾಯೋಗಿಕ ಹಂತವನ್ನು ದಾಟಿ ಸಾಮಾನ್ಯವಾಗಿ ಬಳಸುವ ಕಾರ್ಯವಿಧಾನವಾಗಿ ಬೆಳೆದವು. ಆದರೆ ಈ ಕ್ಷೇತ್ರದ ಆರಂಭಿಕ ಹರಿಕಾರರು ಬಳಸಿದ ಉಪಕರಣಗಳು ಮತ್ತು ದೃಶ್ಯೋಪಕರಣಗಳು ಇಂದಿಗೆ ಹಳತಾಗಿವೆ. ಆದರೆ, ಈ ಕ್ಷೇತ್ರದಲ್ಲಿನ ತಾಂತ್ರಿಕ ಬೆಳವಣಿಗೆಗಳು, ಶಸ್ತ್ರಚಿಕಿತ್ಸೆಗಳನ್ನು ಹೆಚ್ಚು ದಕ್ಷ ಹಾಗೂ ಸುಲಭವನ್ನಾಗಿಸಿದ್ದಂತೂ ಸತ್ಯ. ವಿದ್ಯುತ್ ಮೂಲಗಳು, 3-ಚಿಪ್ ಕ್ಯಾಮೆರಾಗಳು, ರೋಬೋಗಳ ನೆರವು ಮುಂತಾದ ಅನೇಕ ಸಾಧನಗಳು ಶಸ್ತ್ರಚಿಕಿತ್ಸಾ ತಜ್ಞರಿಗೆ ಸಂಕೀರ್ಣ ಶಸ್ತ್ರಚಿಕಿತ್ಸೆಗಳನ್ನು ವಿಶ್ವಾಸದಿಂದ ನಿರ್ವಹಿಸಲು ನೆರವಾಗಿವೆ.

ಉದರದರ್ಶಕ ಶಸ್ತ್ರಚಿಕಿತ್ಸೆಯಲ್ಲಿ ಒಂದು ಬಹುದೊಡ್ಡ ಸವಾಲೆಂದರೆ ಶಸ್ತ್ರಚಿಕಿತ್ಸೆ ನಡೆಸುವ ಕ್ಷೇತ್ರದ ಅಥವಾ ದೇಹದ ಭಾಗದ 2-ಡಿ (ಎರಡು ಆಯಾಮಗಳ) ವೀಕ್ಷಣೆ. ಆಳದ ಗ್ರಹಿಕೆಯಿಲ್ಲದೆ ಶಸ್ತ್ರಚಿಕಿತ್ಸಾ ತಜ್ಞರಿಗೆ ಗಣನೀಯವಾಗಿ ಸಂವೇದನೆಯ ಕೊರತೆಯಾಗುತ್ತಿತ್ತು. ಆದರೆ ಈ ಕೊರತೆಯನ್ನು ನೀಗಿಸಲು 3-ಡಿ ಉದರದರ್ಶಕ ದೃಶ್ಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಯಿತು. ಇದರಿಂದ ಉದರದರ್ಶನದ ಕೌಶಲಗಳು ಹೆಚ್ಚುತ್ತಿವೆ.

ಮುಖ್ಯವಾಗಿ ಈ 3-ಡಿ ವ್ಯವಸ್ಥೆಯಲ್ಲಿ ಎರಡು ವಿಡಿಯೊ ಕ್ಯಾಮೆರಾಗಳಿರುತ್ತವೆ. ಇವು ಉದರದರ್ಶಕ ತಂತ್ರಜ್ಞಾನದ ತುದಿಯಲ್ಲಿರುತ್ತವೆ. ಎರಡು ಪ್ರತ್ಯೇಕ ಬಿಂಬಗಳ ಸಂಕೇತಗಳನ್ನು ಸೆರೆಹಿಡಿಯಲಾಗುತ್ತದೆ. ಇವುಗಳನ್ನು ಹೆಚ್ಚಿನ ಆವರ್ತನದಲ್ಲಿ ಒಂದು ಉನ್ನತ-ಸಾಮರ್ಥ್ಯದ (ರೆಸಲ್ಯೂಷನ್) ವಿಡಿಯೊ ಮಾನಿಟರ್‌ಗೆ ಕಳುಹಿಸಲಾಗುತ್ತದೆ. ಶಸ್ತ್ರಚಿಕಿತ್ಸಾ ತಜ್ಞರು ಈ ಸ್ಟೀರಿಯೊ ಬಿಂಬಗಳನ್ನು ಎರಡು ವಿಧಗಳಲ್ಲಿ ಗ್ರಹಿಸಬಹುದು: 1- ಕಣ್ಣಿಗೆ ಲಿಕ್ವಿಡ್ ಕ್ರಿಸ್ಟಲ್ ಗಾಜಿನಿಂದ ಮಾಡಿರುವ ಸಾಧನವನ್ನು ಧರಿಸುವುದು. ಇದು ಒಂದು ಅವರೋಹಿತ (ಇನ್‌ಫ್ರಾರೆಡ್) ಟ್ರಾನ್ಸ್‌ಮಿಟರ್‌ನಿಂದ ಸಂಕೇತಗಳನ್ನು ಸ್ವೀಕರಿಸುತ್ತದೆ. ಹೀಗೆ ಬಂದ ಸಂಕೇತಗಳು ಕಣ್ಣಿನ ದಿರಿಸಿನಲ್ಲಿಟ್ಟ ಶಟರ್ ಮೂಲಕ ಎರಡು ಬಿಂಬಗಳನ್ನು ಸ್ವೀಕರಿಸಲು ನೆರವಾಗುತ್ತವೆ. ಮಿದುಳು ಈ ಬಿಂಬಗಳನ್ನು 3-ಡಿ ಬಿಂಬಗಳನ್ನಾಗಿ ಸಂಯೋಜಿಸಿಕೊಳ್ಳುತ್ತದೆ. 2- ಇದರಲ್ಲೂ ಅದೇ ಸಿದ್ಧಾಂತ. ಆದರೆ ಶಟರನ್ನು ಕಣ್ಣಿನಲ್ಲಿ ಅಲ್ಲ, ವಿಡಿಯೋ ಮಾನಿಟರಿನಲ್ಲಿ ಇರಿಸಲಾಗುತ್ತದೆ. ವಿಡಿಯೊ ಮಾನಿಟರಿನಲ್ಲಿ ಒಂದು ದೊಡ್ಡ ಲಿಕ್ವಿಡ್ ಕ್ರಿಸ್ಟಲ್ ಶಟರ್ ಇರುತ್ತದೆ. ಇದು ಧ್ರುವೀಕರಣವನ್ನು ಬದಲಾಯಿಸಿಕೊಳ್ಳಬಲ್ಲದು ಮತ್ತು ಎಡ ಮತ್ತು ಬಲ ಬಿಂಬಗಳ ಸಂಕೇತಗಳನ್ನು ಹೊಂದಿಸಿಕೊಳ್ಳಬಲ್ಲದು. ಶಸ್ತ್ರಚಿಕಿತ್ಸಾ ತಜ್ಞರು ನಿಷ್ಕ್ರಿಯ ಕಣ್ಣಿನ ದಿರಿಸನ್ನು ಧರಿಸಿರುತ್ತಾರೆ. ಅದರಲ್ಲಿ ಬಲಗಡೆಯದರಲ್ಲಿ ಬಲ ವೃತ್ತೀಯ ಧ್ರುವೀಕರಿಸಿದ ಮಸೂರ ಮತ್ತು ಎಡಗಡೆ, ಎಡ ವೃತ್ತೀಯ ಧ್ರುವೀಕರಿಸಿದ ಮಸೂರ ಇರುತ್ತದೆ.
ಹಾಗಾಗಿ ಬಲಗಣ್ಣು ಕೇವಲ ಬಲ ಬಿಂಬ ಸಂಕೇತಗಳನ್ನು ಗ್ರಹಿಸಬಲ್ಲದು. ಹಾಗೆಯೇ ಎಡಗಡೆಯದು ಎಡ ಬಿಂಬ ಸಂಕೇತಗಳನ್ನು ಗ್ರಹಿಸುತ್ತದೆ.

ಈ ಚಿಕಿತ್ಸೆಯ ಲಾಭ
ಶಸ್ತ್ರಚಿಕಿತ್ಸೆಯ ಯಶಸ್ಸು, ಸಮಯ ಮತ್ತು ರೋಗಾವಸ್ಥೆಯ ತೀವ್ರತೆ ಇವೆಲ್ಲ ತಂತ್ರಜ್ಞಾನ ಬಳಕೆಯ ಕೌಶಲ್ಯಗಳನ್ನು ಅವಲಂಬಿಸಿವೆ. 3-ಡಿ ಕ್ಯಾಮೆರಾ ವ್ಯವಸ್ಥೆಯು ದಕ್ಷತೆಯನ್ನು ಸುಧಾರಿಸುತ್ತದೆ ಹಾಗೂ ಶಸ್ತ್ರ ಚಿಕಿತ್ಸಾ ಅವಧಿಯನ್ನು ಕಡಿಮೆಗೊಳಿಸುತ್ತದೆ.

ಕಾರ್ಯವಿಧಾನದ ಸಮಯ ಕಡಿಮೆಯಾಗುವುದರಿಂದ ಆಯಾಸವೂ ಕಡಿಮೆ. ಹೀಗಾಗಿ ಶಸ್ತ್ರಚಿಕಿತ್ಸೆಯ ನಿಖರತೆ ಹೆಚ್ಚುತ್ತದೆ, ಛೇದನ, ಹಿಡಿಯುವುದು, ರಚನೆ ಮತ್ತು ಸ್ಟೇಪ್ಲಿಂಗ್ ಕೌಶಲಗಳು ಹೆಚ್ಚುತ್ತವೆ. ಸ್ತ್ರೀರೋಗ ಸಾಂಪ್ರದಾಯಿಕ ಉದರದರ್ಶಕ ಶಸ್ತ್ರಚಿಕಿತ್ಸೆಗಳಲ್ಲಿ 3-ಡಿ ದೃಶ್ಯ ವ್ಯವಸ್ಥೆ ಬಳಸುವುದರಿಂದ ಆಳದಲ್ಲಿರುವ ಅಂಗಗಳಾದ ಗರ್ಭಾಶಯ ಮತ್ತು ಅಂಡಗಳು ಇತ್ಯಾದಿಯನ್ನು ಮತ್ತಷ್ಟು ಸ್ಪಷ್ಟವಾಗಿ ಕಾಣಬಹುದಾಗಿದೆ. ಇದರಿಂದ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವ ಕಾಲಾವಧಿಯೂ ಕಡಿಮೆಯಾಗುತ್ತದೆ.  
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT