ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದಾತ್ತ ಮೌಲ್ಯದ ರಾಜಕಾರಣಿ ಎಂಪಿಪಿ

Last Updated 17 ಫೆಬ್ರುವರಿ 2011, 9:40 IST
ಅಕ್ಷರ ಗಾತ್ರ

ಹೂವಿನಹಡಗಲಿ: ರಾಜಕಾರಣದಲ್ಲಿ ಮಾನವೀಯತೆಯನ್ನು ಕಳೆದುಕೊಂಡವರೆ ಹೆಚ್ಚು. ಆದರೆ ಎಂ.ಪಿ. ಪ್ರಕಾಶ ರಾಜಕಾರಣದಲ್ಲಿ ಉದಾತ್ತ ಮಟ್ಟಕ್ಕೇರಿದವರು ಎಂದು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.ರಂಗಭಾರತಿ, ಎಂ.ಪಿ. ಪ್ರಕಾಶ್‌ರ ಪ್ರತಿಷ್ಠಾನ ಮತ್ತು ಎಂ.ಪಿ. ಪ್ರಕಾಶ ರಾಜಕೀಯ ಪರಿಷತ್ ವತಿಯಿಂದ ಬುಧವಾರ ಹಮ್ಮಿಕೊಂಡಿದ್ದ ದಿ.ಎಂ.ಪಿ. ಪ್ರಕಾಶರ ನುಡಿ ನಮನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ವಾತಂತ್ರ್ಯ ನಂತರದಲ್ಲಿ ಉತ್ತಮ ಆಡಳಿತಕ್ಕೆ ಹೆಸರಾಗಿದ್ದ ಬಿ.ಡಿ. ಜತ್ತಿ, ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಜೆ.ಎಚ್. ಪಟೇಲ್, ಎಸ್.ಆರ್. ಬೊಮ್ಮಾಯಿ ಇಂಥವರ ಸಾಲಲ್ಲಿ ಎಂ.ಪಿ. ಪ್ರಕಾಶ್ ನಿಲ್ಲುತ್ತಾರೆ. ಪ್ರಕಾಶ ಅವರನ್ನು ಕೇವಲ ವೀರಶೈವ ಮುಖಂಡ ಎಂದರೆ ತಪ್ಪಾದೀತು. ಅವರು ಧ್ವನಿಯಿಲ್ಲದವರ, ಶೋಷಿತರ ಮತ್ತು ರಾಜ್ಯದ ಎಲ್ಲಾ ಜನಾಂಗದ ಮುಖಂಡರಾಗಿದ್ದರು ಎಂದರು.

ಸಾಹಿತ್ಯ, ಶಿಕ್ಷಣ ಹೀಗೆ ಹತ್ತಾರು ರಂಗಗಳಲ್ಲಿ ಪ್ರಾವೀಣ್ಯತೆ ಪಡೆದಿದ್ದ ಪ್ರಕಾಶರ ಹೆಸರು ಶಾಶ್ವತವಾಗಿ ಉಳಿಯುವಂತೆ ಸರ್ಕಾರ ಅವರ ಹೆಸರನ್ನು ಸಾಹಿತ್ಯ ಅಥವಾ ಶಿಕ್ಷಣ ಸಂಸ್ಥೆಗಳಿಗೆ ಇಡಬೇಕು ಎಂದು ಅವರು ಒತ್ತಾಯಿಸಿದರು.

ಮಾಜಿ ಸಚಿವ ಮಹಾದೇವ ಪ್ರಸಾದ ಮಾತನಾಡಿ ಪ್ರಕಾಶರ ನೆನಪಿನ ಶಕ್ತಿ ಅಗಾಧವಾದದ್ದು. ಸದನದಲ್ಲಿ ಅವರು ಕೊಡುತ್ತಿದ್ದ ಉತ್ತರಗಳು ವಿರೋಧಿಗಳನ್ನು ಬೆರಗುಗೊಳಿಸುತ್ತಿದ್ದವು.19ಕ್ಕೂ ಹೆಚ್ಚು ಖಾತೆಗಳಲ್ಲಿ ಸೇವೆ ಸಲ್ಲಿಸಿದ ಪ್ರಕಾಶರು ಸಂಕೋಚದ ಸ್ವಭಾವದವರು. ಹೀಗಾಗಿಯೇ ಸಿಕ್ಕ ಅಧಿಕಾರದ ಅವಕಾಶ ಕಳೆದುಕೊಂಡರು ಎಂದು ನುಡಿದರು.

ರೈತ ಮುಖಂಡ ಹಾಗೂ ಹೋರಾಟಗಾರ ಕಡಿದಾಳ ಶಾಮಣ್ಣ ಮಾತನಾಡಿ ರೈತರ ಕಷ್ಟ- ಸುಖ, ಅವರ ಭಾಷೆ ಅರ್ಥ ಮಾಡಿಕೊಂಡ ಏಕೈಕ ಮಂತ್ರಿ ಪ್ರಕಾಶ್. ನಿರ್ಮಲ ಕರ್ನಾಟಕ ಯೋಜನೆಯ ಮೂಲಕ ಜನತೆಯ ಕಷ್ಟವನ್ನು ನಿರ್ಮೂನೆ ಮಾಡಿದವರು ಎಂದರು.

ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ, ಎಸ್.ಎಸ್. ಪಾಟೀಲ್, ಶಾಸಕ ಸಂತೋಷ ಲಾಡ್, ಲೋಹಿಯಾ ಪ್ರಕಾಶನದ ಸಿ. ಚನ್ನಬಸವಣ್ಣ, ಶಿವಮೊಗ್ಗಾದ ಅಂಕಣಕಾರ ಬಿ. ಚಂದ್ರೇಗೌಡ ಮಾತನಾಡಿ ಪ್ರಕಾಶರ ಜೊತೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಹೊಸಪೇಟೆಯ ಸಂಗನಬಸವಸ್ವಾಮೀಜಿ, ನೀಲಗುಂದದ ಚನ್ನಬಸವ ಸ್ವಾಮೀಜಿ, ಲಿಂಗನಾಯ್ಕನಹಳ್ಳಿಯ ಚನ್ನವೀರಸ್ವಾಮೀಜಿ, ಹಾಲಸ್ವಾಮೀಜಿ, ಹಿರಿಶಾಂತವೀರ ಸ್ವಾಮೀಜಿ, ಇಟಿಗಿಯ ಗುರುಶಾಂತಸ್ವಾಮೀಜಿ ಮಾತನಾಡಿದರು. ಮಾಜಿ ಶಾಸಕ ಪಿ.ಟಿ. ಪರಮೇಶ್ವರ ನಾಯ್ಕ, ಚಂದ್ರಶೇಖರಯ್ಯ, ಜಲಜಾ ನಾಯ್ಕ, ಏಕಾಂತಯ್ಯ, ದೀಪಕ್‌ಸಿಂಗ್, ಸಾಹಿತಿ ಬಿ.ವಿ. ವೀರಭದ್ರಪ್ಪ, ಸಾಲಿ ಸಿದ್ದಯ್ಯ, ಸೊಪ್ಪಿನ ಬಾಳಪ್ಪ ಉಪಸ್ಥಿತರಿದ್ದರು.

ಪ್ರೊ. ಶಾಂತಮೂರ್ತಿ ಕುಲಕರ್ಣಿ ಸ್ವಾಗತಿಸಿದರು. ದ್ವಾರಕೇಶ ರೆಡ್ಡಿ ನಿರೂಪಿಸಿದರು. ಜಾನಪದ ಹಾಡುಗಾರ ಡಾ. ಬಸಲಿಂಗಯ್ಯ ದಿ.ಎಂ.ಪಿ. ಪ್ರಕಾಶರ ಅಚ್ಚುಮೆಚ್ಚಿನ ‘ಗುಬ್ಬಿಯೊಂದು ಗೂಡ ಕಟ್ಯಾದೋ ಆ ಗೂಡಿನಲ್ಲಿ ಜೀವವಿಟ್ಟು ಎಲ್ಲಿ ಹೋಗ್ಯಾದೊ...’ ಎಂಬ ಗೀತೆಯನ್ನು ಹಾಡುತ್ತಿದ್ದಂತೆ ನೆರೆದಿದ್ದ ಅಭಿಮಾನಿಗಳ ಕಣ್ಣಲ್ಲಿ ನೀರು ತಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT