ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದುರುವ ಅಡಿಕೆ: ಕೊಳೆರೋಗದ ಶಂಕೆ

ವಿಜ್ಞಾನಿಗಳಿಂದ ನಿಯಂತ್ರಣಕ್ಕೆ ಸಲಹೆ
Last Updated 1 ಆಗಸ್ಟ್ 2013, 7:08 IST
ಅಕ್ಷರ ಗಾತ್ರ

ಶಿರಸಿ: ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ತಾಲ್ಲೂಕಿನಲ್ಲಿ ಅಡಿಕೆ ಬೆಳೆಗೆ ವ್ಯಾಪಕವಾಗಿ ಉದುರು ರೋಗ ಹಾಗೂ ಕೊಳೆ ರೋಗ ಹರಡಿದ್ದು, ಅಡಿಕೆ ಬೆಳೆಗಾರರು ಚಿಂತಿತರಾಗಿದ್ದಾರೆ.

ತಾಲ್ಲೂಕಿನ ಸಂಪಖಂಡ, ಗದ್ದೆಮನೆ, ಕೂಗ್ತೆಮನೆ, ವಡ್ಡಿ, ಜಡ್ಡಿಗದ್ದೆ, ವಾನಳ್ಳಿ, ನುಜಿಗೆಮನೆ, ಬಿಸಲಕೊಪ್ಪ, ಮುಂಡಿಗೆಸರ ಸೇರಿದಂತೆ ವಿವಿಧ ಹಳ್ಳಿಗಳ ಅಡಿಕೆ ತೋಟದಲ್ಲಿ ದೊಡ್ಡ ಪ್ರಮಾಣದಲ್ಲಿ ಅರೆ ಬಲಿತ ಹಸಿರು ಅಡಿಕೆ ಕಾಯಿಗಳು ಉದುರುತ್ತಿವೆ. ರೈತರು ಈಗಾಗಲೇ ತೋಟಗಾರಿಕಾ ಇಲಾಖೆಗೆ ಮೊರೆಹೋಗಿದ್ದು, ಪರಿಹಾರ ಸೂಚಿಸುವಂತೆ ವಿನಂತಿಸಿದ್ದಾರೆ.

ಸಾಲ್ಕಣಿ ಭಾಗದಲ್ಲಿ ತಟ್ಟೀಸರ, ಮಣದೂರು, ಕೆಳಗಿನ ಓಣಿಕೇರಿ, ಶಿಂಗನಳ್ಳಿ ಮತ್ತಿತರ ಊರುಗಳಲ್ಲಿ ಹಸಿ ಅಡಿಕೆ ಕಾಯಿ ಉದುರುವ ಜೊತೆಗೆ ಕೊಳೆರೋಗ ವ್ಯಾಪಿಸಿದೆ. ಈಗಾಗಲೇ ಒಟ್ಟು ಬೆಳೆಯ ಶೇ 10ರಷ್ಟು ಅಡಿಕೆ ನೆಲಕಚ್ಚಿದೆ.

`ನಿರಂತರ ಮಳೆ ಸುರಿಯುತ್ತಿರುವುದರಿಂದ ಕೊಳೆರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣ ಸಿಂಪಡಣೆಗೂ ಸಾಧ್ಯವಾಗುತ್ತಿಲ್ಲ. ಬಹಳಷ್ಟು ರೈತರಿಗೆ ಜೂನ್ ತಿಂಗಳಲ್ಲಿ ನೀಡಬೇಕಿದ್ದ ಮೊದಲನೇ ಸುತ್ತಿನ ಬೋರ್ಡೋ ಸಿಂಪಡಣೆಯೇ ಸಾಧ್ಯವಾಗಿಲ್ಲ' ಎಂದು ಆ ಭಾಗದ ಮುಖಂಡ ಜಿ.ಎನ್.ಹೆಗಡೆ ಮುರೇಗಾರ ಹೇಳುತ್ತಾರೆ.

ತೋಟಗಾರಿಕಾ ಇಲಾಖೆ ಅಧಿಕಾರಿಗಳು, ತೋಟಗಾರಿಕಾ ಕಾಲೇಜಿನ ತಜ್ಞರು ಸ್ಥಳ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಬೆಣಗಾಂವ ಗ್ರಾಮದ ನುಜಿಗೆಮನೆ ಸತ್ಯನಾರಾಯಣ ಭಟ್ಟರ ತೋಟಕ್ಕೆ ಭೇಟಿ ಉದುರಿರುವ ಅಡಿಕೆ ತಂದು ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಕೊಳೆರೋಗ ಹಾಗೂ ಅಂದ್ರ್ಯಾಕ್ನೋಜ್ ರೋಗದ ಲಕ್ಷಣಗಳು ಇರುವುದು ದೃಢಪಟ್ಟಿದೆ. ಅಡಿಕೆ ಉದುರಿರುವ ಮರಗಳಲ್ಲಿ ಶಾಟ್‌ಹೋಲ್ ಬಾರರ್ (ಟಠಿ ಟ್ಝಛಿ ಚಿಟ್ಟಛ್ಟಿ) ಕೀಟದ ಇರುವಿಕೆ ಸಹ ಕಂಡುಬಂದಿದೆ. ಮಣ್ಣಿನಲ್ಲಿ ಪೋಷಕಾಂಶ ಕೊರತೆಯಾಗಿರುವ ಅಂಶವನ್ನು ಸಹ ಗುರುತಿಸಲಾಗಿದೆ ಎಂದು ವಿಜ್ಞಾನಿಗಳು ಅಧ್ಯಯನ ವರದಿಯಲ್ಲಿ ತಿಳಿಸಿದ್ದಾರೆ.

ಎಲ್ಲೆಡೆ ಸಾಮಾನ್ಯವಾಗಿ ಆಗುತ್ತಿರುವ ಕಾಯಿ ಕೊಳೆ ರೋಗಕ್ಕೆ ಪೈಟೋಪ್ಲೇರ್ ಮಿಡಿ ಎಂಬ ಶಿಲೀಂಧ್ರ ಕಾರಣವಾಗಿದ್ದು, ಮಣ್ಣಿನಲ್ಲಿ ತೇವಾಂಶ ಅಧಿಕವಾದರೆ ಹಾಗೂ ಮಳೆಯ ಪ್ರಮಾಣ ಹೆಚ್ಚಾದರೆ ಈ ರೋಗ ಉಲ್ಬಣಗೊಳ್ಳುತ್ತದೆ. ನೀರು ತುಂಬಿದ ಚುಕ್ಕೆ ಆಕಾರದಲ್ಲಿ ಪ್ರಾರಂಭವಾಗುವ ರೋಗ ಹೆಚ್ಚಾಗುತ್ತ ಅಡಿಕೆಯನ್ನು ಉದುರಿಸುತ್ತದೆ. ಅಡಿಕೆ ಕಾಯಿ ತೊಟ್ಟಿನ ಭಾಗದಲ್ಲಿ ರೋಗ ಕಾಣಿಸಿಕೊಂಡು ಪೂರಕ ವಾತಾವರಣ ಸಿಕ್ಕರೆ ಇಡೀ ಗೊನೆಗೆ ವ್ಯಾಪಿಸಿ ಅಡಿಕೆಕಾಯಿಯನ್ನು ಉದುರಿಸುತ್ತದೆ.

ನಿಯಂತ್ರಣಕ್ಕೆ ಕ್ರಮ: ಮುಂಜಾಗ್ರತಾ ಕ್ರಮವಾಗಿ ಮಳೆಗಾಲದ ಮುಂಚೆ ಶೇ 1ರ ಬೋರ್ಡೋ ದ್ರಾವಣ ಸಿಂಪರಣೆ ಮಾಡಿದರೆ ರೋಗ ನಿಯಂತ್ರಿಸಬಹುದು. ಸದ್ಯಕ್ಕೆ ಉದುರುವಿಕೆ ಹೆಚ್ಚಿದ್ದು, ನೀರು ಬಸಿದು ಹೋಗಲು ತೋಟದಲ್ಲಿ ಕಾಲುವೆಗಳನ್ನು ಸ್ವಚ್ಛಗೊಳಿಸಬೇಕು. ಶೇ 1ರ ಬೋರ್ಡೋ ದ್ರಾವಣವನ್ನು ರೋಸಿನ್ ಸೋಡಾ ಅಥವಾ ಎಪಿಎಸ್‌ಎ 80 ದ್ರಾವಣದಲ್ಲಿ ಸೇರಿಸಿ ಸಿಂಪಡಿಸಿದರೆ ರೋಗ ನಿಯಂತ್ರಿಸಬಹುದು. ಬೋರ್ಡೋ ದ್ರಾವಣದ ಸರಸಾರ 7.5ರಿಂದ 8.5 ಇರುವಂತೆ ನೋಡಿಕೊಳ್ಳಬೇಕು. ಮಣ್ಣಿಗೆ ಡೋಲೋಮೈಟ್ ಸುಣ್ಣ 200-225 ಗ್ರಾಂ ಸುಣ್ಣವನ್ನು ಪ್ರತಿ ಗಿಡಕ್ಕೆ ಮಳೆಗಾಲದ ಮುಂಚೆ ನೀಡಬೇಕು ಎಂದು ತೋಟಗಾರಿಕಾ ಇಲಾಖೆ ವಿಜ್ಞಾನಿಗಳು ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT