ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಘಾಟನೆಗೆ ಕಾಯುತ್ತಿದೆ ವಸತಿ ಶಾಲಾ ಕಟ್ಟಡ

Last Updated 18 ಜುಲೈ 2013, 5:18 IST
ಅಕ್ಷರ ಗಾತ್ರ

ಮುದ್ದೇಬಿಹಾಳ: ತಾಲ್ಲೂಕಿನ ಜಮ್ಮಲದಿನ್ನಿ ಗ್ರಾಮದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ನಿಲಯದ 250  ವಿದ್ಯಾರ್ಥಿನಿಯರು ಮಳೆ ಬಂತೆಂದರೆ ಅವರವರ ಊರುಗಳಿಗೆ ತೆರಳುತ್ತಾರೆ. ಕಾರಣ; ಅವರು ವಾಸವಿರುವ ನಾಲ್ಕು ಕೊಠಡಿ (ಖಾಸಗಿ ಕಟ್ಟಡ)ಗಳು ಮಳೆ ಬಂದರೆ ಸೋರುತ್ತವೆ. ಕಟ್ಟಡ ಕುಸಿದು ಬೀಳುವ ಆತಂಕ ಇರುವ ಕಾರಣ ವಿದ್ಯಾರ್ಥಿನಿಯರಿಗೆ ರಜೆ ಕೊಟ್ಟು ಮನೆಗೆ ಕಳಿಸುತ್ತಾರೆ!

ನಾಲ್ಕು ವರ್ಷಗಳ ಹಿಂದೆ ಆರಂಭವಾದ ವಸತಿ ಶಾಲೆ ಕಟ್ಟಡ ನಿರ್ಮಾಣ ಇನ್ನೂ ಪೂರ್ಣಗೊಂಡಿಲ್ಲ. ನೂರಾರು ವಿದ್ಯಾರ್ಥಿನಿಯರ ಇಂದಿನ ಸ್ಥಿತಿಗೇ ಈ ವಿಳಂಬ ನೀತಿಯೇ ಕಾರಣ. 4.68 ಕೋಟಿ ರೂಪಾಯಿ ಹಣವನ್ನು ಕಟ್ಟಡ ನಿರ್ಮಾಣಕ್ಕೆ ಮೀಸಲಾಗಿಡಲಾಗಿತ್ತು.

ಕಾಮಗಾರಿ ಆರಂಭವಾಗಿ ಬಹುತೇಕ ಕಟ್ಟಡ ಮುಗಿದಿದೆ. ಆದರೆ ಉಳಿದ ಸಣ್ಣ ಪುಟ್ಟ ಕಾಮಗಾರಿಗಳನ್ನು ಮುಗಿಸಲು ಗುತ್ತಿಗೆದಾರರು ಮನಸ್ಸು ಮಾಡುತ್ತಿಲ್ಲ. ಗುತ್ತಿಗೆದಾರರಿಗೆ ಹಣ ಬಾಕಿ ಬರಬೇಕಿರುವುದರಿಂದ ಕಾಮಗಾರಿ ಮುಂದಕ್ಕೆ ಹೋಗುತ್ತಿದೆ ಎನ್ನಲಾಗುತ್ತಿದೆ. ಇದೇ 13ರಿಂದ 15ರವರೆಗೆ ರಜೆ ಕೊಡಲಾಗಿತ್ತು. `ಸೈಕ್ಲೋನ್ ಬಂದು ಮನಿಗಳು ಸೋರಾಕೆ ಹತ್ತಿತ್ರೀ, ಸ್ನಾನಕ್ಕೂ ತ್ರಾಸ್ ಆಯ್ತರಿ. ತೇವ ಹೆಚ್ಚಿ ಕುಸಿದು ಅಪಾಯವಾಗಬಾರದೆಂದು ರಜೆ ಕೊಟ್ಟಿದ್ದೆವು' ಎನ್ನುತ್ತಾರೆ ಪ್ರಾಚಾರ್ಯ ವೈ.ಬಿ.ಕನ್ನೂರ.

ಬಾಲಕಿಯರು ತಾತ್ಕಾಲಿಕವಾಗಿ ವಾಸವಿದ್ದ ಮನೆಗಳು ಮಳೆಯಿಂದಾಗಿ ನೆನೆದು ಎಲ್ಲಿ ಕುಸಿದು ಬೀಳುತ್ತವೋ ಎಂದು ಅಂಜಿ  ನಿಲಯದ ವ್ಯವಸ್ಥಾಪಕರು  ವಿದ್ಯಾರ್ಥಿನಿಯರ  ಅವರವರ ಊರುಗಳಿಗೆ ಸಾಗಹಾಕಿದ್ದರು ಎಂಬುದು ಸಾರ್ವಜನಿಕರ ಆರೋಪ
`ಕಟ್ಟಡದ ಎಲ್ಲ ಕೆಲಸ ಮುಗಿದಿದೆ, ಇನ್ನು ಹೊರಗಡೆ ಚರಂಡಿ  ಹಾಗೂ ತಂತಿ ಬೇಲಿ ಹಾಕುವ ಕೆಲಸ ಉಳಿದಿದೆ. ಒಳಗೆ ವಿದ್ಯಾರ್ಥಿನಿಯರನ್ನು ಕಳಿಸಿ ಪಾಠ ಶುರು ಮಾಡಲು ಸಮಸ್ಯೆ ಏನೂ ಇಲ್ಲ' ಎಂದು ಕಟ್ಟಡ ನಿರ್ಮಿಸುತ್ತಿರುವ ನಾರಾಯಣ ರಾಜ್ ಕನ್ಸ್‌ಸ್ಟ್ರಕ್ಷನ್ಸ್‌ನ ಎಂಜಿನಿಯರ್ ಬಸವರಾಜ ಮಣಿನಾಗರ ತಿಳಿಸಿದರು.

`ಇನ್ನೂ ಹೆಸ್ಕಾಂ  ಕೆಲಸ ಉಳಿದಿದೆ, ಹೆಸ್ಕಾಂ ಅಧಿಕಾರಿಗಳು ಬಂದು ಕ್ಯೂಬಿಕಲ್ ಮೀಟರ್ ಹಾಗೂ ಟ್ರಾನ್ಸ್‌ಫಾರ್ಮರ್ ಚೆಕ್ ಮಾಡಬೇಕು. ಸದ್ಯ ಸಿಂಗಲ್ ಫೇಸ್ ವಿದ್ಯುತ್ ನೀಡಿದ್ದು, ಕಟ್ಟಡದೊಳಗಿನ ಬೋರವೆಲ್ ಶುರುವಾಗಲು 34 ಕೆ.ವಿ. ಸಾಮರ್ಥ್ಯದ ವಿದ್ಯುತ್ ಕೊಟ್ಟರೆ ಮಾತ್ರ ಸಾಧ್ಯ. ಇದರಿಂದ ಇನ್ನೂ ಬಾಕಿ ಉಳಿದಿರುವ ಪ್ಲೋರ್ ಪಾಲಿಷಿಂಗ್ ಮಾಡಲು ಯಂತ್ರಗಳು ಕೆಲಸ ಮಾಡುತ್ತವೆ.

ಈಗಾಗಲೇ ನಿರಂತರ ಜ್ಯೋತಿ ವಿದ್ಯುತ್ ಲೈನ್‌ಗೆ ಗುತ್ತಿಗೆದಾರರೇ ಶುಲ್ಕ ತುಂಬಿ ಅರ್ಜಿ ಕಳಿಸಿದ್ದಾರೆ. ಗುತ್ತಿಗೆದಾರರಿಗೆ ಸರಿಯಾದ ಸಮಯಕ್ಕೆ ಬಿಲ್ ಬಾರದ್ದರಿಂದ ಕಾಮಗಾರಿ ವಿಳಂಬವಾಗಿದೆ ಆದಷ್ಟು ಬೇಗನೇ ಕಾಮಗಾರಿ ಮುಗಿಸುತ್ತೇವೆ' ಎಂದು  ಸರ್ಕಾರದ ಪರವಾಗಿ ಕಾಮಗಾರಿ ಉಸ್ತುವಾರಿ ನೋಡಿಕೊಳ್ಳುವ ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಎಸ್.ಎಸ್.ಪಾಟೀಲ ಸ್ಪಷ್ಟನೆ ನಿಡಿದರು.

`ಇನ್ನು ಸ್ವಲ್ಪ ಕೆಲಸ ಬಾಕಿ ಉಳಿದಿದೆ. ಗುತ್ತಿಗೆದಾರರು ತಿಳಿಸಿದ ತಕ್ಷಣವೇ ಶಾಸಕರ ದಿನಾಂಕ ಗೊತ್ತುಪಡಿಸಿ ಉದ್ಘಾಟನೆ ಮಾಡುತ್ತೇವೆ' ಎನ್ನುತ್ತಾರೆ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎನ್.ಆರ್. ಉಂಡಿಗೇರಿ.

`ಕಟ್ಟಡ ಕಾಮಗಾರಿಯ ಕೆಲಸ ಎಂದೋ ಮುಗಿಯಬೇಕಿತ್ತು. ಗುತ್ತಿಗೆದಾರರು ಅನಗತ್ಯವಾಗಿ  ತಡ ಮಾಡುತ್ತಿದ್ದಾರೆ. ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಕಾಮಗಾರಿ ಮುಗಿಸಿ ಕೊಡುವಂತೆ ಗುತ್ತಿಗೆದಾರರಿಗೆ ಒತ್ತಾಯಿಸಿದರೆ ಕೆಲಸವಾಗುತ್ತದೆ' ಎನ್ನುತ್ತಾರೆ ಗ್ರಾಮದ ಗಣ್ಯರಾದ ಮಡಿವಾಳಪ್ಪ ಮಂಗಿಹಾಳ, ಎಸ್.ಎಸ್.ಸೋಮನಾಳ, ಬಿ.ಎಸ್.ಮೇಟಿ, ಬಸವರಾಜ ಅಂಗಡಗೇರಿ, ನಾನಾಗೌಡ ಪಾಟೀಲ, ಶಿವಲಿಂಗಪ್ಪ ಮಾಲಗತ್ತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT