ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಘಾಟನೆಯಾಗದ ಕಟ್ಟಡ

Last Updated 7 ಅಕ್ಟೋಬರ್ 2011, 8:15 IST
ಅಕ್ಷರ ಗಾತ್ರ

ಗೌರಿಬಿದನೂರು: ಮಾರುಕಟ್ಟೆಯಲ್ಲಿ ವ್ಯಾಪಾರಸ್ಥರು ಎದುರಿಸುತ್ತಿರುವ ತೊಂದರೆಗಳನ್ನು ಗಮನದಲ್ಲಿರಿಸಿಕೊಂಡು ಮತ್ತು ವ್ಯಾಪಾರಸ್ಥರ ಬೇಡಿಕೆಗಳಿಗೆ ಆದ್ಯತೆ ನೀಡಿ ಪುರಸಭೆಯಲ್ಲಿ ನೂತನ ತರಕಾರಿ ಮಾರುಕಟ್ಟೆ ಸಂಕೀರ್ಣ ಕಟ್ಟಲಾಗಿದೆ. ಆದರೆ ಕಟ್ಟಡ ನಿರ್ಮಾಣವಾಗಿ ಮೂರು ತಿಂಗಳು ಕಳೆದರೂ ಉದ್ಘಾಟನೆಯಾಗುವ ಲಕ್ಷಣ ಕಾಣಿಸುತ್ತಿಲ್ಲ. ಪ್ರತ್ಯೇಕ ಮಳಿಗೆಗಳನ್ನು ಹೊಂದಿರುವ ನೂತನ ಕಟ್ಟಡದಲ್ಲಿ ಮಾರುಕಟ್ಟೆ ಚಟುವಟಿಕೆ ಯಾವಾಗ ಆರಂಭಗೊಳ್ಳುತ್ತದೆ ಎಂಬ ಬಗ್ಗೆಯೂ ಸ್ಪಷ್ಟ  ಚಿತ್ರಣವಿಲ್ಲ.

ಪಟ್ಟಣದ ಹಳೆಯ ಮಾರುಕಟ್ಟೆಯಲ್ಲಿ ಇಕ್ಕಟ್ಟಾದ ಸ್ಥಳವಿದೆ. ಗಲೀಜು ಮತ್ತು ಕೊಳಚೆ ವಾತಾವರಣದಲ್ಲೇ ವ್ಯಾಪಾರ- ವಹಿವಾಟು ಮಾಡಬೇಕಾದ ಪರಿಸ್ಥಿತಿಯಿದೆ. ಮೂಲಸೌಕರ್ಯ ಕೊರತೆ ಇರುವಾಗ, ನಾವು ಇಲ್ಲಿ ವ್ಯಾಪಾರ ಮಾಡುವುದು ಹೇಗೆ ಎಂದು ವ್ಯಾಪಾರಿಗಳ ದೂರಿಗೆ, ಪುರಸಭೆಯವರು ನೂತನ ಕಟ್ಟಡ ಮಾಡುವ ಕಾರ್ಯವನ್ನು ಕೈಗೊಂಡರು. ನೂತನ ಕಟ್ಟಡದಲ್ಲಿ ಒಟ್ಟು 137 ಮಳಿಗೆಗಳಿದ್ದು, ಕೆಳ ಅಂತಸ್ತಿನ ಮಳಿಗೆಗಳು ತರಕಾರಿ ವ್ಯಾಪಾರಸ್ಥರಿಗೆ ಮತ್ತು ಮೇಲಂತಸ್ತಿನ ಮಳಿಗೆಗಳನ್ನು ಇತರ ವ್ಯಾಪಾರಸ್ಥರಿಗೆ ಮೀಸಲಿಡಲಾಗಿದೆ.

`ಕಟ್ಟಡ ಕಟ್ಟಿ ಮೂರು ತಿಂಗಳಾದರೂ ವ್ಯಾಪಾರಸ್ಥರಿಗೆ ನೀಡಲಾಗಿಲ್ಲ. ಸಂಕಷ್ಟದಲ್ಲಿಯೇ ನಾವು ವ್ಯಾಪಾರ ಮಾಡುತ್ತಿದ್ದರೂ ನಮ್ಮ ಸಮಸ್ಯೆಗಳನ್ನು ಯಾರೂ ಸಹ ಗಂಭೀರವಾಗಿ ಪರಿಗಣಿಸುತ್ತಿಲ್ಲ. ನೂತನ ಮಳಿಗೆಗಳಲ್ಲಿ ಎಲ್ಲ ವ್ಯಾಪಾರಸ್ಥರಿಗೆ ಅವಕಾಶ ಸಿಗುವುದೋ ಅಥವಾ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಎಲ್ಲರೂ ಮಳಿಗೆಗಳನ್ನು ಪಡೆದುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಹೊಸ ವ್ಯಾಪಾರಸ್ಥರು ಮತ್ತು ಹಳೆಯ ವ್ಯಾಪಾರಸ್ಥರು ಎಂದು ವಿಂಗಡಿಸಲಾಗಿದೆ. ಹಳೆಯ ವ್ಯಾಪಾರಸ್ಥರಿಗೆ ಆದ್ಯತೆ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರಾದರೂ ನಮಗೆ ಖಚಿತ ಮಾಹಿತಿ ಸಿಕ್ಕಿಲ್ಲ~ ಎಂದು ವ್ಯಾಪಾರಿ ಮೋಹನ್ ತಿಳಿಸಿದರು.

`ಬೇರೆ ಯಾವುದೇ ಸೌಕರ್ಯ ಇರದ ಕಾರಣ ತಾತ್ಕಾಲಿಕ ಶೆಡ್ ಮತ್ತು ಕಬ್ಬಿಣದ ಶೀಟು ಹಾಕಿಕೊಂಡು ವ್ಯಾಪಾರ ಮಾಡುತ್ತಿದ್ದೇವೆ. ಮಳೆಯಾದರೆ, ವ್ಯಾಪಾರ ನಡೆಸಲು ಆಗುವುದಿಲ್ಲ. ಸುತ್ತಲೂ ಮಳೆನೀರು ನಿಂತುಕೊಳ್ಳುತ್ತದೆ.

ಕೆಸರುಗದ್ದೆಯಿಂದ ಗ್ರಾಹಕರು ಇಲ್ಲಿ ಬರಲು ಇಚ್ಛಿಸುವುದಿಲ್ಲ. ಅಂಗಡಿಗಳಿಗೆ ಬಾಗಿಲು ಮತ್ತು ಇತರ ವ್ಯವಸ್ಥೆ ಇರದ ಕಾರಣ ಯಾವಾಗಲೂ ಕಾವಲು ಇರಬೇಕು~ ಎಂದು ವ್ಯಾಪಾರಸ್ಥರಾದ ಮೋಹನ್ ಮತ್ತು ಶಿವಕುಮಾರ್ ಹೇಳುತ್ತಾರೆ.

`ನೂತನ ಕಟ್ಟಡದಲ್ಲಿ ವ್ಯಾಪಾರಸ್ಥರಿಗಾಗಿ ಎಲ್ಲ ಸೌಕರ್ಯ ಕಲ್ಪಿಸಲಾಗಿದೆ. ಆದರೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿಲ್ಲ. ಪ್ರತಿಯೊಂದು ಮಳಿಗೆಗೆ ಮೀಟರ್ ಅಳವಡಿಸುವ ಜೊತೆಗೆ ಪ್ರತ್ಯೇಕ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕಿದೆ. ಈ ಸಂಬಂಧ ಬೆಸ್ಕಾಂ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ.
ವಿದ್ಯುತ್ ಸಂಪರ್ಕ ಕಲ್ಪಿಸಿದ ಕೂಡಲೇ ಮಳಿಗೆಗಳನ್ನು ಹರಾಜು ನಡೆಸಿ, ವ್ಯಾಪಾರಸ್ಥರಿಗೆ ವಹಿಸಲಾಗುವುದು~ ಎಂದು ಪುರಸಭೆ ಉಪಾಧ್ಯಕ್ಷ ರಮೇಶ್ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT