ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಘಾಟನೆಯಾದರೂ ಕಾಲುವೆಗೆ ಬಾರದ ನೀರು

Last Updated 24 ಡಿಸೆಂಬರ್ 2012, 7:03 IST
ಅಕ್ಷರ ಗಾತ್ರ

ಆಲಮಟ್ಟಿ: ಮುದ್ದೇಬಿಹಾಳ ತಾಲ್ಲೂಕಿನ ಗುಂಡಕರ್ಜಗಿ ಬಳಿ ನಿರ್ಮಾಣಗೊಂಡ ಚಿಮ್ಮಲಗಿ ಏತ ನೀರಾವರಿ ಯೋಜನೆಯ ಮುಖ್ಯ ಸ್ಥಾವರಕ್ಕೆ ಬಳಿ ನವೆಂಬರ್ 26ರಂದು ಜಗದೀಶ ಶೆಟ್ಟರ್ ಚಾಲನೆ ನೀಡಿದ್ದರು. ಆದರೆ ನೀರು ಹರಿಯಲೇ ಇಲ್ಲ. ಕೆಬಿಜೆಎನ್‌ಎಲ್ ಅಧಿಕಾರಿಗಳು ಇದಕ್ಕಾಗಿ ಸಿದ್ಧತೆ ಮಾಡಿಕೊಂಡಿದ್ದರೂ ನೀರು ಕಾಲುವೆಗೆ ಬರಲಿಲ್ಲ!

ಆಲಮಟ್ಟಿ ಎಡದಂಡೆ ಮುಖ್ಯ ಕಾಲುವೆಯ ಕಿ.ಮೀ 12.65 ರಲ್ಲಿ ನಿರ್ಮಾಣಗೊಂಡ ವೃತ್ತಾಕಾರದ ಛೇಂಬರ್‌ನಿಂದ 1.6 ಕಿ.ಮೀ ಲೀಡ್ ಆಫ್ ಕಾಲುವೆ ನಿರ್ಮಿಸಲಾಗಿದ್ದು, ಅಲ್ಲಿಂದ ಕೃಷ್ಣಾ ನದಿಯ ನೀರನ್ನು ಪಡೆದು ಗುಂಡಕರ್ಜಗಿ ಬಳಿ ನಿರ್ಮಿಸಿದ ಮುಖ್ಯಸ್ಥಾವರದ ತನಕ ಈಗಾಗಲೇ ನೀರು ಹರಿದಿದೆ.

ಆ ಜಾಕ್‌ವೆಲ್‌ನ ಪಂಪ್‌ಗಳು ಪ್ರಾರಂಭಗೊಂಡು, ಮುಖ್ಯ ಸ್ಥಾವರದಲ್ಲಿ ಬಂದ ನೀರನ್ನು ಎತ್ತಿ  ಏರುಗೊಳವೆಯ ಮುಖಾಂತರ 600 ಮೀ ಅಂತರದಲ್ಲಿ ವಿತರಣಾ ತೊಟ್ಟಿಗೆ ನೀರು ಹರಿದು 2 ಕಿ.ಮೀ ಸಂಯುಕ್ತ ಕಾಲುವೆ ಮುಖಾಂತರ ಚಿಮ್ಮಲಗಿ ಪಶ್ಚಿಮ ಕಾಲುವೆಯ ಮೊದಲ 20 ಕಿ.ಮೀಗೆ ನೀರು ಹರಿಯಬೇಕಾಗಿತ್ತು.

ಈ ಮುಖ್ಯ ಸ್ಥಾವರದ ಘಟಕದ ನೀರೆತ್ತುವ ಪಂಪ್‌ಗಳನ್ನು ಬಳಸಲು ಇದೇ ಮೊದಲ ಬಾರಿಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಸಮರ್ಪಕವಾಗಿ ವಿದ್ಯುತ್ ಪೂರೈಕೆಯಾಗದಿದ್ದರೆ, ಈ ಪಂಪ್‌ಸೆಟ್‌ಗಳು ಕಾರ್ಯಾರಂಭ ಮಾಡುವುದಿಲ್ಲ. ಮುದ್ದೇಬಿಹಾಳ ತಾಲ್ಲೂಕಿನ ಢವಳಗಿಯಿಂದ ಪೂರೈಕೆ ಮಾಡಿರುವ 11 ಕೆವಿ ವಿದ್ಯುತ್ ಸಮರ್ಪಕವಾಗಿ ಪೂರೈಕೆಯಾಗದ್ದರಿಂದ ಪಂಪ್‌ಸೆಟ್‌ಗಳು ಕಾರ್ಯಾರಂಭವಾಗುತ್ತಿಲ್ಲ ಎನ್ನುತ್ತಾರೆ ಕೆಬಿಜೆಎನ್‌ಎಲ್ ಅಣೆಕಟ್ಟು ವಲಯದ ಮುಖ್ಯ ಎಂಜಿನಿಯರ್ ಅನಂತರಾಮು.

ವಿದ್ಯುತ್ ಅಗತ್ಯ
ಈ ಪಂಪ್‌ಸೆಟ್‌ಗಳಿಗೆ ಅತ್ಯಂತ ನಿಖರವಾದ ವಿದ್ಯುತ್ ಅವಶ್ಯಕತೆ ಇದೆ. ಈ ಕ್ಷೇತ್ರದಲ್ಲಿ ಪರಿಣಿತ ನಿವೃತ್ತ ಮುಖ್ಯ ಎಂಜಿನಿಯರ್ (ವಿದ್ಯುತ್) ಅವರನ್ನು ಕರೆಯಿಸಿ ಸಮಸ್ಯೆ ಕಂಡು ಹಿಡಿದು ಅವರ ಸಲಹೆ ಮೇರೆಗೆ ಪರ್ಯಾಯ ಕ್ರಮ ಕೈಗೊಳ್ಳಲಾಗುತ್ತಿದೆ.

ಅದಕ್ಕಾಗಿ ನಿಡಗುಂದಿಯಿಂದ ಹೊಸದಾಗಿ ಮುಖ್ಯ ಸ್ಥಾವರದ ಸ್ಥಳದವರೆಗೆ ಮತ್ತೊಂದು ಹೊಸ ವಿದ್ಯುತ್ ಲೈನ್ ಎಳೆಯುವ ಕಾರ್ಯ ಭರದಿಂದ ಸಾಗಿದೆ. ಜನವರಿ ಮೊದಲ ವಾರದ ಒಳಗೆ ಲೈನ್ ಎಳೆಯುವ ಕಾರ್ಯ ಮುಕ್ತಾಯ ಗೊಳ್ಳಲಿದ್ದು, ಕೆಪಿಟಿಸಿಎಲ್‌ನ ಬೆಂಗಳೂರಿನ ಅಧಿಕಾರಿಗಳ ಪರಿಶೀಲನೆ ನಂತರವಷ್ಟೇ ಏತ ನೀರಾವರಿಯ ಪಂಪ್‌ಸೆಟ್‌ಗಳು ಕಾರ್ಯಾರಂಭ ಮಾಡಲಿವೆ. ಈ ಸಮಸ್ಯೆ ನಿವಾರಣೆಗೆ ಯತ್ನಿಸ ಲಾಗುತ್ತಿದ್ದು ಸಂಕ್ರಾಂತಿ ವೇಳೆಗೆ ಕಾಲುವೆಗೆ ನೀರು ಹರಿವ ವಿಶ್ವಾಸವಿದೆ ಎನ್ನುತ್ತಾರೆ ಅನಂತರಾಮ್ ಅವರು.

ಬಸರಕೋಡ ಕೆರೆಗೆ ನೀರು
ಚಿಮ್ಮಲಗಿ ಏತ ನೀರಾವರಿ ಪಶ್ಚಿಮ ಕಾಲುವೆಯ 9 ಕಿ.ಮೀ ಬಳಿಯಿಂದ ಹೊರಡುವ ಔಟ್‌ಲೆಟ್‌ನಿಂದ ಬಸರಕೋಡ ಕೆರೆಯನ್ನು ತುಂಬಲಾಗುತ್ತದೆ. ಕಾಲುವೆಗೆ ನೀರು ಹರಿದರೆ ಖಾಲಿಯಿರುವ ಬಸರಕೋಡ ಕೆರೆಯೂ ತುಂಬಲಿದೆ ಎನ್ನುತ್ತಾರೆ ಮುದ್ದೇಬಿಹಾಳ ತಾಲ್ಲೂಕು ಕೆರೆ ನೀರು ತುಂಬುವ ಯೋಜನೆಯ ಅಧ್ಯಕ್ಷ ಗುರುನಾಥ ಬಿರಾದಾರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT