ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ದೇಶಿತ ಭೂ ಸುಧಾರಣೆ ತಿದ್ದುಪಡಿ ಮಸೂದೆ: ಶೇ 5ರಷ್ಟು ಜನರಿಗೆ ಮಾತ್ರ ಲಾಭ

Last Updated 7 ಜುಲೈ 2012, 19:45 IST
ಅಕ್ಷರ ಗಾತ್ರ

ಬೆಂಗಳೂರು: `ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಭೂ ಸುಧಾರಣೆಯ ತಿದ್ದುಪಡಿ ಮಸೂದೆಯಿಂದ ರಾಜ್ಯದ ಶೇ 5ರಷ್ಟು ಮಂದಿಗೆ ಮಾತ್ರ ಲಾಭವಾಗಲಿದ್ದು, ಇದರಿಂದ ಹೊಸ ಭೂಮಾಲೀಕ ವರ್ಗದ ಸೃಷ್ಟಿಗೆ ದಾರಿ ಮಾಡಿಕೊಟ್ಟಂತಾಗುತ್ತದೆ. ಅಲ್ಲದೆ ಗ್ರಾಮೀಣ ಪ್ರದೇಶದಲ್ಲಿ ಬಡವರು ಹಾಗೂ ಶ್ರೀಮಂತರ ನಡುವೆ ದೊಡ್ಡ ಕಂದಕ ನಿರ್ಮಾಣವಾಗಲಿದೆ~ ಎಂದು ಸಿಪಿಎಂ ಪಾಲಿಟ್‌ಬ್ಯೂರೋ ಸದಸ್ಯ ಸೂರ್ಯಕಾಂತ ಮಿಶ್ರಾ ಎಚ್ಚರಿಸಿದರು.

ಭೂ ಸುಧಾರಣಾ ಕಾಯ್ದೆಗೆ ತಿದ್ದುಪಡಿ ವಿರೋಸಿ ಕರ್ನಾಟಕ ಪ್ರಾಂತ ರೈತ ಸಂಘ ಹಾಗೂ ಪ್ರಾಂತ ಕೃಷಿ ಕೂಲಿಕಾರರ ಸಂಘದ ಆಶ್ರಯದಲ್ಲಿ ನಗರದ ಎನ್‌ಜಿಒ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

`ಹೊಸ ಆರ್ಥಿಕ ನೀತಿಯ ಬಳಿಕ ದೇಶದಲ್ಲಿ 2.70 ಲಕ್ಷ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರೈತ ಸ್ನೇಹಿ ಯೋಜನೆಗಳನ್ನು ರೂಪಿಸದ ಸರ್ಕಾರಗಳು ಕೃಷಿಕರ ಮೇಲೆ ಸವಾರಿ ಮಾಡುತ್ತಿವೆ. ಅಮೆರಿಕದ ಮೈತ್ರಿ ಆಧಾರದಲ್ಲಿ ಹೊಸ ಆರ್ಥಿಕ ನೀತಿ ರೂಪುಗೊಂಡಿದ್ದು, ಪ್ರತಿ ಕಾರ್ಯಕ್ಕೂ ಅಮೆರಿಕದ ಸಲಹೆ ಕೇಳಲಾಗುತ್ತಿದೆ.
 
ಅಮೆರಿಕದಲ್ಲಿ ಕೃಷಿಗೆ ಕೈಗಾರಿಕಾ ರೂಪ ನೀಡಿದ್ದರಿಂದಲೇ ಶೇ 3 ಮಂದಿ ಕೃಷಿ ಚಟುವಟಿಕೆಯಲ್ಲಿ ತೊಡಗಿ ಅಧಿಕ ಲಾಭ ಪಡೆಯುತ್ತಿದ್ದಾರೆ ಎಂಬ ಹೇಳಿಕೆ ನೀಡಲಾಗುತ್ತಿದೆ. ವಾಸ್ತವವಾಗಿ ಅಮೆರಿಕದಲ್ಲಿ ಕೃಷಿಯಲ್ಲಿ ತೊಡಗಿಕೊಂಡಿರುವವರ ಸಂಖ್ಯೆ ಶೇ 27ರಷ್ಟು ಇದೆ~ ಎಂದು ಅವರು ಪ್ರತಿಪಾದಿಸಿದರು.

`ಅಂತರರಾಷ್ಟ್ರೀಯ ಮಾರುಕಟ್ಟೆ ಶಕ್ತಿಗಳು ದೇಶದ ಮಾರುಕಟ್ಟೆಗಳನ್ನು ನಿಯಂತ್ರಣ ಮಾಡುತ್ತಿದ್ದು, ಜನರು ವಸ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಿ ಅಧಿಕ ಬೆಲೆಗೆ ಖರೀದಿಸುವಂತಹ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಶೇ 40ರಷ್ಟು ರೈತರಿಗೆ ಕೃಷಿ ನಷ್ಟದ ಕಾಯಕ ಎಂಬ ಭಾವನೆ ಬಂದಿದೆ. ಈಗ ಕೃಷಿಯನ್ನು ಉದ್ಯಮ ಎಂಬಂತೆ ಬಿಂಬಿಸಲಾಗುತ್ತಿದ್ದು, ಕೈಗಾರಿಕೋದ್ಯಮಿಗಳು ಸಹ ಕೃಷಿಕರಾಗಿ ಪರಿವರ್ತನೆ ಗೊಂಡಿದ್ದಾರೆ. ಇದರಿಂದಾಗಿ ಮಧ್ಯಮ ಹಾಗೂ ಸಣ್ಣ ಕೃಷಿಕರು ಭೂಮಿ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ~ ಎಂದು ಕಿಡಿಕಾರಿದರು.

`ಪಶ್ಚಿಮ ಬಂಗಾಳದಲ್ಲಿ ಇಡೀ ಕುಟುಂಬದ ಭೂ ಮಿತಿ 25 ಎಕರೆಗಿಂತ ಜಾಸ್ತಿ ಇರಬಾರದು ಎಂದು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ. ಕರ್ನಾಟಕದಲ್ಲಿ ಕುಟುಂಬದ ಭೂ ಮಿತಿ 54 ಎಕರೆಗೆ ಇಳಿದಿರುವುದು ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಕುಟುಂಬದ ಭೂ ಮಿತಿಯನ್ನು 108 ಎಕರೆಗೆ ಏರಿಸಿದರೆ ಹಣ ಉಳ್ಳವರು ಸಾವಿರಾರು ಎಕರೆ ಭೂಮಿಯ ಒಡೆಯರಾಗುವ ಸಾಧ್ಯತೆ ಇದೆ. ಸರ್ಕಾರದ ನೀತಿಯ ವಿರುದ್ಧ ಸಂಘಟಿತ ಚಳವಳಿ ನಡೆಸುವ ಅಗತ್ಯ ಇದೆ~ ಎಂದು ಸಲಹೆ ನೀಡಿದರು.

ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಬಯ್ಯಾ ರೆಡ್ಡಿ ಮಾತನಾಡಿ, `ಈ ಮಸೂದೆಗೆ ಇದೇ 16ರಿಂದ ನಡೆಯಲಿರುವ ವಿಧಾನ ಮಂಡಲ ಅಧಿವೇಶನದಲ್ಲಿ ಒಪ್ಪಿಗೆ ಪಡೆಯಲಾಗುವುದು ಎಂದು ಸರ್ಕಾರ ತಿಳಿಸಿದೆ. ಕಾಯ್ದೆ ಜಾರಿಯನ್ನು ವಿರೋಧಿಸಿ 16ರಂದು ಪ್ರತಿ ಗ್ರಾಮಗಳಲ್ಲಿ ಮಸೂದೆಯ ಪ್ರತಿಗಳನ್ನು ಸುಟ್ಟು ಹಾಕಿ ಪ್ರತಿಭಟನೆ ನಡೆಸಲಾಗುವುದು~ ಎಂದರು.


ಪ್ರಾಂತ ರೈತ ಸಂಘದ ಅಧ್ಯಕ್ಷ ಮಾರುತಿ ಮಾನ್ಪಡೆ, ಪ್ರಾಂತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ನಿತ್ಯಾನಂದಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಿಪಿಎಂ ರಾಜ್ಯ ಸಮಿತಿ ಕಾರ್ಯದರ್ಶಿ ಜಿ. ವಿ. ಶ್ರೀರಾಮರೆಡ್ಡಿ, ಸಂಘದ ಉಪಾಧ್ಯಕ್ಷ ಎನ್. ವೆಂಕಟಾಚಲಯ್ಯ, ಪ್ರಾಂತ ಕೃಷಿ ಕೂಲಿಕಾರರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಪ್ಪ ಹೊಸ್ಕೇರಾ, ಸಂಘದ ಮುಖಂಡ ಯು.ಬಸವರಾಜ್, ಕಿಸಾನ್ ಸಭಾದ ಮುಖಂಡ ವಿಜು ಕೃಷ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT