ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿ ಕಣಕ್ಕೆ: ಚುನಾವಣೆಗೆ ತಿರುವು

Last Updated 1 ಜೂನ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಾಟಕೀಯ ಬೆಳವಣಿಗೆಯಲ್ಲಿ ಜೆಡಿಎಸ್ ಹಾಗೂ ಪಕ್ಷೇತರ ಶಾಸಕರ ಬೆಂಬಲದೊಂದಿಗೆ ಉದ್ಯಮಿ ಬಿ.ಎಸ್. ಸುರೇಶ್ ಕೊನೆ ಗಳಿಗೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವುದರಿಂದ ವಿಧಾನ ಪರಿಷತ್ ಚುನಾವಣೆ ಕುತೂಹಲ ಕೆರಳಿಸಿದೆ.

ಬಿಜೆಪಿಯ ಆರು, ಕಾಂಗ್ರೆಸ್‌ನ ನಾಲ್ಕು ಅಭ್ಯರ್ಥಿಗಳು ಮತ್ತು ಜೆಡಿಎಸ್‌ನ ಒಬ್ಬರು ಶುಕ್ರವಾರ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಸುರೇಶ್ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಟಿ.ಡಿ.ಆರ್.ಹರಿಶ್ಚಂದ್ರ ಗೌಡ ಅವರೂ ಪಕ್ಷೇತರ ಅಭ್ಯರ್ಥಿಯಾಗಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ನಿಯಮಾವಳಿಯಂತೆ ಹತ್ತು ಜನ ಶಾಸಕರು ಸೂಚಕರಾಗಿ ಸಹಿ ಮಾಡದೆ ಇರುವುದರಿಂದ ಅವರ ನಾಮಪತ್ರ ತಿರಸ್ಕೃತಗೊಳ್ಳುವುದು ಖಚಿತವಾಗಿದೆ. ವಿಧಾನ ಸಭೆಯಿಂದ ಪರಿಷತ್ತಿನ 11 ಸ್ಥಾನಗಳಿಗೆ ಇದೇ 11ರಂದು ನಡೆಯುವ ಚುನಾವಣೆಗೆ ಒಟ್ಟು 13 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಶನಿವಾರ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಸೋಮವಾರ ಕೊನೆಯ ದಿನ.

2010ರಲ್ಲಿ ನಡೆದ ಬಿಬಿಎಂಪಿ ಚುನಾವಣೆಯಲ್ಲಿ ರಾಮಮೂರ್ತಿ ನಗರ ವಾರ್ಡ್‌ನಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸುರೇಶ್ ಸೋಲು ಅನುಭವಿಸಿದ್ದರು. ಕೆ.ಆರ್.ಪುರ ಬಳಿಯ ಬೈರತಿ ಗ್ರಾಮದವರಾದ ಅವರು ರಿಯಲ್ ಎಸ್ಟೇಟ್ ವ್ಯವಹಾರ, ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಇವರ ಸಹೋದರ ಬೈರತಿ ಬಸವರಾಜ್ ಅವರು ಬಿಬಿಎಂಪಿ ಸದಸ್ಯ. ಸುರೇಶ್ ಅವರ ನಾಮಪತ್ರಕ್ಕೆ ಜೆಡಿಎಸ್‌ನ ಸಿ.ಬಿ.ಸುರೇಶ್‌ಗೌಡ, ಬಂಡೆಪ್ಪ ಕಾಶೆಂಪುರ, ವೆಂಕಟರಾವ್ ನಾಡಗೌಡ, ಜಿ.ಕೆ.ವೆಂಕಟಶಿವಾರೆಡ್ಡಿ, ಎಚ್.ಎಸ್.ಪ್ರಕಾಶ್, ಪಕ್ಷೇತರರಾದ ಶಿವರಾಜ ತಂಗಡಗಿ, ಡಿ.ಸುಧಾಕರ್, ವೆಂಕಟರಮಣಪ್ಪ, ಪಿ.ಎಂ.ನರೇಂದ್ರಸ್ವಾಮಿ, ಗೂಳಿಹಟ್ಟಿ ಶೇಖರ್ ಅವರು ಸಹಿ ಹಾಕಿದ್ದಾರೆ. ಸಿದ್ದರಾಮಯ್ಯ ಅವರ ಬಂಡಾಯದ ಪರಿಣಾಮವಾಗಿ ಪರಿಷತ್ ಚುನಾವಣೆ ಯಾವ ತಿರುವು ಪಡೆಯುವುದೋ ಎಂಬ ಕುತೂಹಲ ಎಲ್ಲರನ್ನೂ ಕಾಡುತ್ತಿದೆ.

ಸಂಖ್ಯಾಬಲದಲ್ಲಿ ಬಿಜೆಪಿ ಆರು ಸ್ಥಾನಗಳನ್ನು ಸುಲಭವಾಗಿ ಗಳಿಸಲಿದೆ. ಕಾಂಗ್ರೆಸ್ 3 ಅಭ್ಯರ್ಥಿಗಳಿಗೆ ತಲಾ 20ರ ಪ್ರಕಾರ 60 ಮತಗಳನ್ನು ಹಂಚಿದರೂ, 11 ಮತಗಳು ಹೆಚ್ಚುವರಿಯಾಗಿ ಉಳಿಯಲಿವೆ. ಈ ಮತಗಳು ಹಾಗೂ ಪಕ್ಷೇತರರ ಶಾಸಕರ ಬೆಂಬಲದ ಮೂಲಕ ನಾಲ್ಕನೇ ಸ್ಥಾನ ಪಡೆಯಬಹುದು ಎಂಬ ದೃಷ್ಟಿಯಿಂದ ಸೀತಾರಾಂ ಅವರನ್ನು ಕಣಕ್ಕೆ ಇಳಿಸಿದೆ. ಆದರೆ ಪಕ್ಷೇತರರು ಈಗಾಗಲೇ ಸುರೇಶ್ ಅವರಿಗೆ ಬೆಂಬಲ ಘೋಷಿಸಿದ್ದಾರೆ.

ಜೆಡಿಎಸ್ ಸಹ ತಮ್ಮ ಪಕ್ಷದ ಆರು ಹೆಚ್ಚುವರಿ ಮತಗಳನ್ನು ಪಕ್ಷೇತರ ಅಭ್ಯರ್ಥಿಗೆ ನೀಡುವುದಾಗಿ ಘೋಷಿಸಿದೆ. ಹೀಗಾಗಿ ಕಾಂಗ್ರೆಸ್‌ನ ನಾಲ್ಕನೇ ಅಭ್ಯರ್ಥಿ ಸೀತಾರಾಂ ಅವರು ಗೆಲುವಿಗಾಗಿ ಪ್ರಯಾಸಪಡುವಂತಾಗಿದೆ.

ಸ್ಪೀಕರ್ ಕೆ.ಜಿ.ಬೋಪಯ್ಯ, ನಾಮಕರಣ ಸದಸ್ಯ ಡೆರಿಕ್ ಫುಲಿನ್‌ಫಾ, ಪಕ್ಷೇತರ ಸದಸ್ಯರಾಗಿರುವ ಜವಳಿ ಸಚಿವ ವರ್ತೂರು ಪ್ರಕಾಶ್ ಸೇರಿದಂತೆ ಬಿಜೆಪಿ 122 ಸದಸ್ಯ ಬಲವನ್ನು ಹೊಂದಿದೆ. ಒಬ್ಬ ಅಭ್ಯರ್ಥಿ ಗೆಲುವಿಗೆ ಕನಿಷ್ಠ 19 ಮತಗಳು ಬೇಕು. ಆದರೆ ಮುನ್ನೆಚ್ಚರಿಕೆ ದೃಷ್ಟಿಯಿಂದ ಒಂದು ಮತವನ್ನು ಹೆಚ್ಚಿಗೆ ಹಂಚಿಕೆ ಮಾಡಲಾಗುತ್ತದೆ.

ಹೀಗಾಗಿ ಒಟ್ಟು 120 ಮತಗಳು ಬಿಜೆಪಿ ಅಭ್ಯರ್ಥಿಗಳಿಗೆ ಹಂಚಿಕೆಯಾಗಲಿವೆ. ಆರನೇ ಅಭ್ಯರ್ಥಿಯ ಗೆಲುವಿನ ಬಳಿಕವೂ ಬಿಜೆಪಿ ಬಳಿ ಎರಡು ಹೆಚ್ಚುವರಿ ಮತಗಳು ಉಳಿಯುತ್ತವೆ. ಹೆಚ್ಚುವರಿ ಮತಗಳನ್ನು ಬೇರೆ ಯಾರಿಗೂ ನೀಡುವುದಿಲ್ಲ. ನಮ್ಮ ಪಕ್ಷದ ಅಭ್ಯರ್ಥಿಗಳಿಗೇ ಹಂಚಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ, ಕೆ.ಎಸ್.ಈಶ್ವರಪ್ಪ  ಸ್ಪಷ್ಟಪಡಿಸಿದ್ದಾರೆ.

ಮಾಜಿ ಸಚಿವ ಬಿ.ಶ್ರೀರಾಮುಲು ಸೇರಿ 6ಜನ ಪಕ್ಷೇತರ ಶಾಸಕರಿದ್ದಾರೆ. ಜೆಡಿಎಸ್ ಬಳಿ ಆರು ಹೆಚ್ಚುವರಿ ಮತಗಳಿವೆ. ಒಟ್ಟು 12 ಮತಗಳು ಸುರೇಶ್ ಅವರಿಗೆ ದೊರೆಯುವ ಸಾಧ್ಯತೆ ಮೇಲ್ನೋಟಕ್ಕೆ ಕಾಣುತ್ತಿದೆ. 

ಗೆಲುವಿಗೆ 7 ಮತಗಳು ಕೊರತೆಯಾಗಲಿವೆ. ಈ ಚುನಾವಣೆಯಲ್ಲಿ ರಹಸ್ಯ ಮತದಾನಕ್ಕೆ ಅವಕಾಶವಿದೆ. ಪಕ್ಷಗಳು ತಮ್ಮ ಶಾಸಕರಿಗೆ ವಿಪ್ ನೀಡಿದರೂ, ಪ್ರಯೋಜನವಾಗುವುದಿಲ್ಲ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಹಾಗೂ ಬಿ.ಶ್ರೀರಾಮುಲು ಬೆಂಬಲಿಗ ಶಾಸಕರು ಪಕ್ಷದ ಆದೇಶಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಫಲಿತಾಂಶದ ಚಿತ್ರಣವೇ ಬದಲಾಗಲಿದೆ. ಈಗಾದರೆ ಬಿಜೆಪಿ, ಕಾಂಗ್ರೆಸ್‌ನ ಒಬ್ಬರಿಗೆ ಸೋಲಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT