ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಮಿಗಳಿಗೆ ದಾನಶೀಲತೆ ಕಡ್ಡಾಯವಲ್ಲ

Last Updated 23 ಮಾರ್ಚ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಭಾರತದ ಕೈಗಾರಿಕೋದ್ಯಮಿಗಳಿಗೆ ದಾನ ಧರ್ಮ  ಕಡ್ಡಾಯಗೊಳಿಸುವ ಅಗತ್ಯ ಇಲ್ಲ’ ಎಂದು ಸಾಫ್ಟ್‌ವೇರ್ ದೈತ್ಯ ಸಂಸ್ಥೆ ಇನ್ಫೋಸಿಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಎಸ್. ಗೋಪಾಲಕೃಷ್ಣನ್ ಬುಧವಾರ ಇಲ್ಲಿ ಅಭಿಪ್ರಾಯಪಟ್ಟರು.
 

ಭಾರತೀಯ ಕೈಗಾರಿಕಾ ಒಕ್ಕೂಟವು (ಸಿಐಐ), ಅಮೆರಿಕದ ಬಂಡವಾಳ ಹೂಡಿಕೆದಾರ ವಾರನ್ ಬಫೆಟ್ ಅವರ ಗೌರವಾರ್ಥ ಏರ್ಪಡಿಸಿದ್ದ ಔತಣಕೂಟದಲ್ಲಿ ಅವರು ಮಾತನಾಡುತ್ತಿದ್ದರು. ‘ಉದ್ದಿಮೆದಾರರು ದಾನಶೀಲತೆ   ಅನುಸರಿಸುವುದನ್ನು ಕಡ್ಡಾಯಗೊಳಿಸಬೇಕೆಂದು ನನಗೆ ಅನಿಸುವುದಿಲ್ಲ. ದಾನ ನೀಡುವ ಪ್ರವೃತ್ತಿ ರೂಢಿಸಿಕೊಳ್ಳಲು ನಾವು ಜನರನ್ನು ಉತ್ತೇಜಿಸಬೇಕಷ್ಟೆ’ ಎಂದರು.

‘ದಾನ-ಧರ್ಮ ಪ್ರವೃತ್ತಿ ರೂಢಿಸಿಕೊಂಡು ಅದನ್ನು ನಿಷ್ಠೆಯಿಂದ ಪಾಲಿಸುತ್ತಿರುವವರ ಬಗ್ಗೆ ನಾವು ಉತ್ತೇಜಕ ರೀತಿಯಲ್ಲಿ ಮಾತನಾಡಬೇಕು. ದಾನಿಗಳು ಹಮ್ಮಿಕೊಳ್ಳುವ ಕಾರ್ಯಕ್ರಮಗಳ ಬಗ್ಗೆ ಹೆಚ್ಚೆಚ್ಚು ಚರ್ಚೆ ನಡೆಯಬೇಕು. ದಾನಿಗಳ ಆದರ್ಶ ಇತರರಿಗೆ ಮಾದರಿಯಾಗಬೇಕು. ಇಂತಹ ವಿಷಯದಲ್ಲಿ ಬಫೆಟ್ ಮತ್ತು ಬಿಲ್ ಗೇಟ್ಸ್ ಅತ್ಯುತ್ತಮ ನಿದರ್ಶನವಾಗಿದ್ದಾರೆ.

ಇಂತಹ ಆದರ್ಶ ವ್ಯಕ್ತಿಗಳು ಭಾರತದಲ್ಲಿಯೂ ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಇಂತವರ ನಡೆ ನುಡಿ ಬಗ್ಗೆ ನಾವು ಮಾತನಾಡುವುದರಿಂದ  ಅವರ ಆದರ್ಶ ಪಾಲಿಸಲು ಇತರರಿಗೆ ಉತ್ತೇಜನ ನೀಡಿದಂತಾಗುವುದು’ ಎಂದರು.
 

ಬಫೆಟ್ ಆಶಯ: ‘ಮತ್ತೊಮ್ಮೆ ಶ್ರೀಮಂತನಾಗಿಯೇ ಜನಿಸುವ ಆಶಯ ನನಗೆ ಇಲ್ಲ’ ಎಂದು ವಾರನ್ ಬಫೆಟ್ ಅಭಿಪ್ರಾಯಪಟ್ಟರು. ‘ನನ್ನ ಉದ್ದಿಮೆ ವಹಿವಾಟಿನ ಸಾಹಸಗಳಲ್ಲಿ  ನಾನು ತುಂಬ ಅದೃಷ್ಟಶಾಲಿಯಾಗಿರುವೆ. ನನ್ನಲ್ಲಿ ಅದೃಷ್ಟದ ಗುಣಾನು(ಜೀನ್ಸ್)ಗಳಿವೆ.
 

ಆದರೆ ಮರು ಜನ್ಮ ಏನಾದರೂ ಇದ್ದರೆ ನಾನು ಮತ್ತೆ ಸಿರಿವಂತನಾಗಿ ಜನಿಸಲು ಖಂಡಿತವಾಗಿಯೂ ಬಯಸುವುದಿಲ್ಲ. ಸಮಾಜಕ್ಕೆ ಒಳಿತನ್ನು ಉಂಟು ಮಾಡುವಂತಹ ಕೆಲ ನಿರ್ದಿಷ್ಟ ಗುಣ ವಿಶೇಷ ಹೊಂದಿದ ವ್ಯಕ್ತಿಯಾಗಿ ಜನಿಸಲು ಬಯಸುವೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT