ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನ ಜಾಗ ಕಬಳಿಕೆ ಆರೋಪ ಸತ್ಯಕ್ಕೆ ದೂರ: ರಂಗಸ್ವಾಮಿ

Last Updated 3 ಜೂನ್ 2013, 7:49 IST
ಅಕ್ಷರ ಗಾತ್ರ

ಹಾಸನ: `ವಿದ್ಯಾನಗರದಲ್ಲಿ ಉದ್ಯಾನಕ್ಕೆ ಮೀಸಲಿಟ್ಟ ಜಾಗವನ್ನು ನಾನು ಕಬಳಿಸಿದ್ದೇನೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು, ನನ್ನ ನಿವೇಶನವನ್ನು ಖರೀದಿ ಮಾಡಲು ಪ್ರಯತ್ನಿಸಿದ ವ್ಯಕ್ತಿ ಜಮೀನು ಕೊಟ್ಟಿಲ್ಲ ಎಂಬ ಕಾರಣಕ್ಕೆ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ ' ಎಂದು ಹಾಸನ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಕೆ. ರಂಗಸ್ವಾಮಿ ನುಡಿದಿದ್ದಾರೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ವಿದ್ಯಾನಗರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಟ್ಟಿಲ್ಲ. ಹಿಂದೆ ಕರಡು ಸಿಡಿಪಿ ಯೋಜನೆ ಮಾಡಿದ್ದರೂ ಪ್ರಾಧಿಕಾರದವರು ಭೂಸ್ವಾಧೀನ ಮಾಡಿಕೊಂಡಿರಲಿಲ್ಲ. ಆದ್ದರಿಂದ ಸಿಡಿಪಿ ವ್ಯಾಪ್ತಿಯಲ್ಲಿದ್ದರೂ, ಭೂಮಿ ಮಾಲೀಕರ ಸ್ವಾಧೀನದಲ್ಲೇ ಇರುತ್ತದೆ. ಅದನ್ನು ಪರಿವರ್ತನೆ ಮಾಡಿ ಮಾರಾಟ ಮಾಡುವ ಹಕ್ಕು ಅವರಿಗೆ ಇರುತ್ತದೆ.

ನಾನು ಅಧ್ಯಕ್ಷನಾದಾಗ ನಾಲ್ಕು ಮಂದಿ `ಸ್ವಂತಕ್ಕೆ ಮನೆ ಕಟ್ಟುವ ಉದ್ದೇಶದಿಂದ ನಿವೇಶನ ಖರೀದಿಸಿದ್ದೆವು. ಅದನ್ನು ಪರಿವರ್ತನೆ ಮಾಡಿ ಕೊಡಿ'ಎಂದು ಮನವಿ ಸಲ್ಲಿಸಿದ್ದರು. ಅರ್ಜಿಯನ್ನು ಮಂಡಳಿಯ ಸಭೆಯಲ್ಲಿಟ್ಟು ಅನುಮೋದನೆ ಪಡೆಯಲಾಗಿತ್ತು. ಕಾನೂನು ಪ್ರಕಾರವೇ ಎಲ್ಲ ಪ್ರಕ್ರಿಯೆ ನಡೆದಿದೆ' ಎಂದರು.

ಸ್ವಂತಕ್ಕೆ ಮನೆ ಕಟ್ಟಿಕೊಳ್ಳಲು ಅರ್ಜಿ ನೀಡಿದವರು ನಿವೇಶನಗಳನ್ನು ಪರಿವರ್ತನೆಯಾದ ಬಳಿಕ ನಿಮಗೇ ಮಾರಾಟ ಮಾಡಿದ್ದರಿಂದ ನೀವು ಇದರಲ್ಲಿ ಶಾಮೀಲಾಗಿರುವ ಸಂದೇಹ ಬರುವುದಿಲ್ಲವೇ? ಎಂಬ ಪ್ರಶ್ನೆಗೆ, `ನೀವು ಸಂದೇಹಪಟ್ಟರೆ ಅದು ನಿಮ್ಮ ತಪ್ಪು. ನಾನೇನೂ ಮಾಡಲು ಬರುವುದಿಲ್ಲ. ತಮ್ಮ ನಿವೇಶನವನ್ನು ಮಾರಾಟ ಮಾಡುವ ಹಕ್ಕು ಮಾಲೀಕರಿಗೆ ಇರುತ್ತದೆ, ಖರೀದಿಸುವ ಹಕ್ಕು ನನಗೂ ಇದೆ. ಕಾನೂನು ಪ್ರಕಾರ ನಾನು ಖರೀದಿಸಿದ್ದೇನೆ' ಎಂದರು.

ದೂರುದಾರರೇ ಆರೋಪಿ: ನನ್ನ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿರುವ ಸುಶೀಲೇಗೌಡ ಅವರೇ ಈ 30 ಕುಂಟೆ ಜಾಗದಲ್ಲಿ ದೊಡ್ಡ ಪಾಲನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಅದೇ ಜಾಗದಲ್ಲಿ ಕಟ್ಟಡವನ್ನೂ ನಿರ್ಮಿಸಿದ್ದು, ಅದಕ್ಕೆ ಇನ್ನೂ ಸಿ.ಸಿ. ಪಡೆದಿಲ್ಲ. ಕಟ್ಟಡದ ಸುತ್ತ 10 ಅಡಿ ಜಾಗ ಬಿಡಬೇಕೆಂಬ ನಿಯಮ ಇದ್ದರೂ ಒಂದಿಂಚು ಜಾಗವನ್ನೂ ಬಿಡದೆ ಕಟ್ಟಡ ನಿರ್ಮಿಸಿದ್ದಾರೆ.

ಮಾತ್ರವಲ್ಲದೆ ರಸ್ತೆಗೆ ಸೇರಬೇಕಾಗಿದ್ದ ಜಾಗವನ್ನೂ ಕಬಳಿಸಿ ಸೈಕಲ್ ಸ್ಟ್ಯಾಂಡ್ ನಿರ್ಮಿಸಿದ್ದಾರೆ. ನನ್ನ ಜಾಗವನ್ನೂ ಕೊಡುವಂತೆ ಅವರು ನನ್ನನ್ನು ಒತ್ತಾಯಿಸಿದ್ದರು. ನನ್ನ ಸ್ನೇಹಿತರ ಮೂಲಕ ಅವರು ಒತ್ತಡ ಹೇರುವ ಪ್ರಯತ್ನವನ್ನೂ ಮಾಡಿದ್ದರು. ನಾನು ಜಾಗ ಕೊಡಲು ನಿರಾಕರಿಸಿದ್ದಕ್ಕೆ ದೂರು ದಾಖಲಿಸಿದ್ದಾರೆ. ಅವರ ವಿರುದ್ಧ ಕಾನೂನು ಹೋರಾಟ ಆರಂಭಿಸುವ ಬಗ್ಗೆಯೂ ನಾನು ಚಿಂತನೆ ನಡೆಸುತ್ತಿದ್ದೇನೆ ಎಂದು ರಂಗಸ್ವಾಮಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT