ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನಕ್ಕೆ ರಂಗಸ್ವಾಮಿ ಹೆಸರು: ಸಲಹೆ

Last Updated 4 ಜನವರಿ 2011, 9:00 IST
ಅಕ್ಷರ ಗಾತ್ರ

ಹಾಸನ: ಶನಿವಾರ  ನಿಧನ ಹೊಂದಿದ ನಗರಸಭೆಯ ಅಧ್ಯಕ್ಷ ಬಿ.ಆರ್. ರಂಗಸ್ವಾಮಿ ಅವರಿಗೆ ನಗರಸಭೆಯಲ್ಲಿ ಸೋಮವಾರ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರಸಭೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಶಾಸಕ  ಎಚ್.ಎಸ್. ಪ್ರಕಾಶ್, ‘ರಂಗಸ್ವಾಮಿ ಜನ ಸಾಮಾನ್ಯರ ಜತೆ ಬಹಳ ವಿಶ್ವಾಸದಿಂದ ಬೆರೆತು ಅವರ ಕುಂದು ಕೊರತೆಗಳನ್ನು ನೀಗಿಸಲು ಮುಂದಾಗುತ್ತಿದ್ದರು. ಅವರೊಬ್ಬ ಅಪರೂಪದ ರಾಜ ಕಾರಣಿಯಾಗಿದ್ದರು. ನಗರದ ಪ್ರಮುಖ ಬಡಾವಣೆಯಲ್ಲಿ ನಿರ್ಮಾಣ ವಾಗಲಿರುವ ಯಾವುದಾದರೂ ಪಾರ್ಕ್‌ಗೆ ಅವರ ಹೆಸರಿಡುವ ಬಗ್ಗೆ ನಗರಸಭೆ ಚಿಂತನೆ ನಡೆಸಬೇಕು’ ಎಂದು ಸಲಹೆ ಮಾಡಿದರು.

ಕಾರ್ಯಕ್ರಮದ ಬಳಿಕ ರಂಗಸ್ವಾಮಿ ಅವರ ಸ್ಮರಣಾರ್ಥ ನಗರದ ಮಹಾರಾಜ ಪಾರ್ಕ್‌ನಲ್ಲಿ ಪ್ರಕಾಶ್ ಹಾಗೂ ನಗರಸಭೆಯ ಸದಸ್ಯರು ಕೆಲವು ಗಿಡಗಳನ್ನು ನೆಟ್ಟರು.
ನಗರಸಭೆ ಸದಸ್ಯ ಪ್ರಸನ್ನ  ಮಾತನಾಡಿ, ‘ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ರಂಗಸ್ವಾಮಿ ಅವರ ವಯಸ್ಸು ಮತ್ತು ವ್ಯಕ್ತಿತ್ವವನ್ನು ಅರಿತು ಅವರನ್ನು ‘ಧರ್ಮರಾಯ’ ಎಂದು ಗೌರವದಿಂದ ಕರೆಯು ತ್ತಿದ್ದರು. ರಂಗಸ್ವಾಮಿ ಸ್ಮರಣಾರ್ಥ ನಗರದ ಯಾವುದಾದರೂ ಪ್ರಮುಖ ವೃತ್ತಕ್ಕೆ ಅವರ ಹೆಸರಿಡಲು ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ನೀಡಿದ್ದಾರೆ’ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ, ‘ರಂಗಸ್ವಾಮಿ ಯಾರನ್ನೂ ಏಕವಚನದಲ್ಲಿ ಮಾತನಾಡಿಸಿದವರಲ್ಲ. ವೈಯಕ್ತಿಕ ನೋವು ಗಳಿದ್ದರೂ, ಅವುಗಳನ್ನು ಇತರರಿಗೆ ತೋರ್ಪಡಿಸದೆ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತಿದ್ದ ದೊಡ್ಡ ಗುಣ ಅವರಲ್ಲಿತ್ತು. ಉತ್ತಮ ನಡವಳಿಕೆಯಿಂದ ಅವರು ಎಲ್ಲರಿಗೂ ಬೇಕಾದವರಾಗಿದ್ದರು’ ಎಂದರು.

ನಗರಸಭಾ ಸದಸ್ಯ ಶ್ಯಾಮ ಸುಂದರ್ ಮಾತನಾಡಿ ‘ನಾನು ರಂಗಸ್ವಾಮಿಯವರನ್ನು ಸ್ನೇಹದಿಂದ ಪುಟ್ಟಣ್ಣ ಎಂದೇ ಕರೆಯುತ್ತಿದ್ದೆ. ಅವರೊಬ್ಬ ಅಪರೂಪದ ವ್ಯಕ್ತಿ’ ಎಂದು ತಮ್ಮ 30 ವರ್ಷಗಳ ಒಡನಾಟವನ್ನು ಸ್ಮರಿಸಿದರು.

ನಗರಸಭೆ ಸದಸ್ಯರಾದ ಶಂಕರ್, ಅನ್ನಪೂರ್ಣಮ್ಮ, ಅಂಬಿಕಾ ರವಿಶಂಕರ್, ಸಯ್ಯದ್ ಅಕ್ಬರ್, ನೇತ್ರಾವತಿ ಗಿರೀಶ್, ನಾಗೇಂದ್ರಬಾಬು, ವಿದ್ಯಾ ಮುಂತಾದವರು ರಂಗಸ್ವಾಮಿಯವರ ಜೀವನ, ವ್ಯಕ್ತಿತ್ವದ ಗುಣಗಾನ ಮಾಡಿದರು. ಪೌರಾಯುಕ್ತ ಶಿವನಂಜೇಗೌಡ ಸ್ವಾಗತಿಸಿ ವಂದಿಸಿದರು. ಸಭೆಯಲ್ಲಿ ಮೊದಲು ಎರಡು ನಿಮಿಷಗಳ ಕಾಲ ಮೌನ ಆಚರಿಸಿ, ಬಳಿಕ ರಂಗಸ್ವಾಮಿ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT