ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯಾನಗಳ ಅಭಿವೃದ್ಧಿ: ಚರ್ಚೆ ಸಾಕಿನ್ನು, ಕೃತಿಗಿಳಿಸಿ

Last Updated 21 ಫೆಬ್ರುವರಿ 2011, 8:15 IST
ಅಕ್ಷರ ಗಾತ್ರ

ಮಡಿಕೇರಿ: ಪ್ರಕೃತಿ ಸೌಂದರ್ಯಕ್ಕೆ ಹೆಸರಾದ ಕೊಡಗು ಜಿಲ್ಲೆ ತನ್ನದೇ ಆದ ಭೌಗೋಳಿಕ ಹಿನ್ನೆಲೆ, ವಿಶಿಷ್ಟ ಪರಂಪರೆ, ಸಂಸ್ಕೃತಿಯಿಂದ ಎಲ್ಲರ ಗಮನಸೆಳೆದಿದೆ. ಪ್ರವಾಸೋದ್ಯಮ ಅಭಿವೃದ್ಧಿ ನಿಂತ ನೀರಾಗಿದ್ದರೂ ಜಿಲ್ಲೆಗೆ ಪ್ರವಾಸಿಗರ ದಂಡು ಮಾತ್ರ ಲಗ್ಗೆಯಿಡುತ್ತಿದೆ. ಮೊನ್ನೆ ವಿಧಾನ ಪರಿಷತ್ ಸದಸ್ಯ ಎಂ.ಸಿ. ನಾಣಯ್ಯ ನಗರಸಭೆ ಸಾಮಾನ್ಯ ಸಭೆಯಲ್ಲಿ ಪ್ರಸ್ತಾಪಿಸಿದಂತೆ, ವಾರದ ಕೊನೇ ಮೂರು ದಿನಗಳಲ್ಲಿ ಪ್ರತಿ ದಿನ ತಲಾ ಐದು ಸಾವಿರದಂತೆ ತಿಂಗಳಿಗೆ ಹೊರಗಿನಿಂದ 60 ಸಾವಿರ ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಿದ್ದಾರೆ.

ಕುಶಾಲನಗರ- ಮಡಿಕೇರಿ ರಸ್ತೆ ಅಭಿವೃದ್ಧಿ ಕೆಲಸ ಪೂರ್ಣಗೊಂಡಿದ್ದರ ಜೊತೆಗೆ, ಮಡಿಕೇರಿಯ ಮುಖ್ಯ ರಸ್ತೆಗಳು ಕಾಂಕ್ರೀಟ್ ರಸ್ತೆಗಳಾಗಿ ಪರಿವರ್ತನೆಗೊಂಡಿದ್ದರಿಂದ ನಗರದ ರೂಪ ಸ್ವಲ್ಪ ಬದಲಾಗಿದೆ. ಆದರೆ, ಪ್ರಾಕೃತಿಕ ಸೌಂದರ್ಯದ ನೆಲೆವೀಡಿನಲ್ಲಿ ಪ್ರವಾಸೋದ್ಯಮಕ್ಕೆ ಪೂರಕವಾಗಿ ಉದ್ಯಾನ ಅಭಿವೃದ್ಧಿಯಂತಹ ಯೋಜನೆಗಳು ಮಾತ್ರ ನಿರ್ಲಕ್ಷ್ಯಕ್ಕೆ ಒಳಗಾಗುತ್ತಿವೆ. ಜಿಲ್ಲೆಯ ಅನೇಕ ಕಡೆ ಮನೆ ಆವರಣಗಳೇ ಹೂದೋಟಗಳಾಗಿ ಪರಿವರ್ತನೆಯಾಗಿರುವುದು ನಮ್ಮ ಕಣ್ಣ ಮುಂದೆ ಕಾಣುವಾಗ ಉದ್ಯಾನ ಅಭಿವೃದ್ಧಿಯ ಪರಿಕಲ್ಪನೆಯಲ್ಲಿ ‘ಮಂಜಿನ ನಗರಿ’ ಬಹಳಷ್ಟು ಹಿಂದೆ ಬಿದ್ದಿದೆ ಏನೋ ಎಂದು ಭಾಸವಾಗುತ್ತಿದೆ.

ಪ್ರತಿ ವರ್ಷ ಸಾರ್ವಜನಿಕರ ವೀಕ್ಷಣೆಗಾಗಿ ತಮ್ಮ ‘ಬಲ್ಯಾಟ್ರಿ’ ಎಸ್ಟೇಟ್‌ನಲ್ಲಿ ಪುಷ್ಪ ಪ್ರದರ್ಶನ ಏರ್ಪಡಿಸುವ ಹಿರಿಯ ಜೀವ, ರಾಜ್ಯಸಭಾ ಮಾಜಿ ಸದಸ್ಯ ಎಫ್.ಎಂ.ಖಾನ್ ಕೂಡ ಒಮ್ಮೆ ರಾಜಾಸೀಟಿನ ನಿರ್ಲಕ್ಷ್ಯದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಒಂದು ವೇಳೆ ಇಲಾಖೆ ಅದನ್ನು ನಿರ್ವಹಿಸಲು ಸಾಧ್ಯವಾಗದಿದ್ದಲ್ಲಿ ಖಾಸಗಿಯವರಿಗಾದರೂ ನೀಡಲಿ ಎಂದು ಸಲಹೆ ಮಾಡಿದ್ದರು. ಹಿರಿಯ ರಾಜಕಾರಣಿಯ ವಿಷಾದದ ಮಾತಿನಲ್ಲಿ ನೋವಿದೆ. ಆದರೆ, ಅವರ ನೋವಿಗೆ ಇದುವರೆಗೆ ಜನಪ್ರತಿನಿಧಿಗಳಿಂದಾಗಲಿ ಅಥವಾ ಅಧಿಕಾರಿಗಳಿಂದಾಗಲೀ ಸಕಾರಾತ್ಮಕ ಸ್ಪಂದನೆ ದೊರೆತಂತಿಲ್ಲ.

ಏಕೆಂದರೆ, ನಮ್ಮ ನಗರಸಭೆ ಕಳೆದ ಎರಡು-ಎರಡೂವರೆ ವರ್ಷಗಳಿಂದ ಉದ್ಯಾನಗಳ ಅಭಿವೃದ್ಧಿಗೆ ಬರೀ ಚರ್ಚೆ ನಡೆಸಿತೇ ಹೊರತು ಯಾವುದೂ ಅನುಷ್ಠಾನಕ್ಕೆ ಬಂದಿಲ್ಲ. ಈ ಉದ್ದೇಶಕ್ಕಾಗಿ ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ 40 ಲಕ್ಷ ರೂಪಾಯಿಗಳನ್ನು ಮೀಸಲಿಟ್ಟಿದ್ದರೂ ಅದನ್ನು ಎಷ್ಟರ ಮಟ್ಟಿಗೆ ಸದುಪಯೋಗಪಡಿಸಿಕೊಳ್ಳಲಾಗಿದೆ ಎಂಬುದನ್ನು ನಗರಸಭೆಯೇ ಹೇಳಬೇಕಿದೆ. ಏಕೆಂದರೆ, ಇದುವರೆಗೆ ಉದ್ಯಾನಗಳ ಬಗ್ಗೆ ಬರೀ ಬಾಯಿ ಮಾತಿನ ಚರ್ಚೆ ನಡೆದಿದೆಯೇ ಹೊರತು ಯಾವುದೂ ಅನುಷ್ಠಾನಕ್ಕೆ ಬಂದಿಲ್ಲ. ಆದರೆ, ಕಾಂಗ್ರೆಸ್ ಗಿಡಗಳು ಬೆಳೆದು ನಿಂತಿದ್ದ ನಗರಸಭೆ ಆವರಣದ ಜಾಗವನ್ನು ಮಾತ್ರ ಸಣ್ಣ ಉದ್ಯಾನವಾಗಿ ಪರಿವರ್ತಿಸಿರುವುದು ಮೆಚ್ಚುಗೆಯ ಸಂಗತಿ.

ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಸರ್ಕಾರದ ಅವಧಿಯಲ್ಲಿ ಬೆಂಗಳೂರಿನ ನೂರು ವಾರ್ಡ್‌ಗಳಲ್ಲಿ ಉದ್ಯಾನಗಳ ಅಭಿವೃದ್ಧಿ ತೀರ್ಮಾನ ಕೈಗೊಂಡಾಗ ಬಹಳಷ್ಟು ಜನ ಅಚ್ಚರಿ ವ್ಯಕ್ತಪಡಿಸಿದರು. ಆದರೆ, ಮಹಾನಗರ ಪಾಲಿಕೆ ಸದಸ್ಯರೇ ಒಬ್ಬರಿಗೊಬ್ಬರು ಸ್ಪರ್ಧೆಗಿಳಿದ ರೀತಿಯಲ್ಲಿ ತಮ್ಮ ವಾರ್ಡ್‌ಗಳಲ್ಲಿ ಉದ್ಯಾನಗಳನ್ನು ಅಭಿವೃದ್ಧಿಪಡಿಸಿದಾಗ ಎಲ್ಲರೂ ಮೂಗು ಮುರಿದರು. ಇದೀಗ ರಾಜಧಾನಿಯ ವಿಹಾರಿಗಳಿಗೇ ಈ ಉದ್ಯಾನಗಳೇ ಸಾಕು ಎನಿಸಿವೆ.

‘ಪುಟ್ಟ ನಗರ’ ಮಡಿಕೇರಿಯಲ್ಲಿ ಪುಷ್ಪೋದ್ಯಮಕ್ಕೆ ಪೂರವಾದ ವಾತಾವರಣವಿದೆ. ಯಾವುದೇ ಹೂ ಗಿಡಗಳನ್ನು ಎಲ್ಲೆಂದರಲ್ಲಿ ಎಸೆದರೆ ಸಾಕು. ಅವೇ ಚಿಗುರಿ, ಬೆಳೆದು ನಿಲ್ಲುತ್ತವೆ. ರಸ್ತೆಗಳ ಇಕ್ಕೆಲಗಳಲ್ಲಿ ಅಲ್ಲೊಂದು- ಇಲ್ಲೊಂದು ‘ಗುಲ್‌ಮೊಹರ್’ ಗಿಡಗಳನ್ನು ಬೆಳೆಸಿದರೂ ‘ಮಂಜಿನ ನಗರಿ’ಯ ಚಿತ್ರಣವೇ ಬದಲಾಗಲಿದೆ. ಇನ್ನು ಉದ್ಯಾನಕ್ಕೆ ಸಂಬಂಧಿಸಿದಂತೆ ಮಾತು ಮುಂದುವರಿಸುವುದಾದರೆ ಬಹಳಷ್ಟು ವರ್ಷಗಳಿಂದ ಪಾಳು ಬಿದ್ದಿರುವ ನೆಹರೂ ಮಂಟಪದ ಕಡೆ ಗಮನಹರಿಸುವವರೇ ಇಲ್ಲದಂತಾಗಿದೆ.

ಈ ಹಿಂದೆ ಖಾಸಗಿ ಸಹಭಾಗಿತ್ವದಲ್ಲಿ ಮಹೀಂದ್ರ ಕ್ಲಬ್ ಈ ಉದ್ಯಾನವನ್ನು ಅಭಿವೃದ್ಧಿಪಡಿಸಿ ನಿರ್ವಹಣೆ ಮಾಡಲು ಮುಂದೆ ಬಂದಿತ್ತಾದರೂ ಆ ಪ್ರಕ್ರಿಯೆ ಏಕೆ ಮುರಿದು ಬಿತ್ತೋ ಗೊತ್ತಿಲ್ಲ. ಈ ಮಧ್ಯೆ, ಗಾಂಧಿ ಮೈದಾನದ ಎಡ ಬದಿಯ ಜಾಗವನ್ನು ಮಂಜೂರು ಮಾಡಿಕೊಡುವಂತೆ ಕೋರಿ ಜಿಲ್ಲಾಡಳಿತಕ್ಕೆ ಪ್ರಸ್ತಾವನೆ ಸಲ್ಲಿಸಲು ನಗರಸಭೆ ನಿರ್ಣಯ ಕೈಗೊಂಡಿದೆ. ರಾಜಾಸೀಟು ಉದ್ಯಾನಕ್ಕೆ ಹೊಂದಿಕೊಂಡಂತಿರುವ ಐದು ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡು ಉದ್ಯಾನವನ್ನು ಇನ್ನಷ್ಟು ವಿಸ್ತರಿಸಿ ಅಭಿವೃದ್ಧಿಪಡಿಸುವ ಈ ಹಿಂದಿನ ಜಿಲ್ಲಾಡಳಿತದ ಯೋಜನೆ ಕೇವಲ ಕನಸಾಗಿಯೇ ಉಳಿದಿದೆ. ಇನ್ನು, ನಗರಸಭೆಯ ಏನಾಗುತ್ತದೋ ಕಾದು ನೋಡಬೇಕಿದೆ.

ಒಟ್ಟಿನಲ್ಲಿ ಮಡಿಕೇರಿ ಪ್ರಾಕೃತಿಕ ಸೌಂದರ್ಯದಿಂದ ಎಲ್ಲರ ಗಮನಸೆಳೆದಿದ್ದರೂ ಸುಂದರ ಉದ್ಯಾನಗಳ ಅಭಿವೃದ್ಧಿಯಲ್ಲಿ ಹಿಂದೆ ಬಿದ್ದಿದೆ ಎನ್ನಬಹುದು. ಮುಖ್ಯಮಂತ್ರಿಗಳ ಸಣ್ಣ ಮತ್ತು ಮಧ್ಯಮ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ನಗರಸಭೆಗೆ ಪ್ರತಿ ವರ್ಷ 15 ಕೋಟಿ ರೂಪಾಯಿ ಅನುದಾನ ಹರಿದು ಬರುತ್ತಿದೆ. ಇಂತಹ ಸನ್ನಿವೇಶದಲ್ಲಿ ಒಂದಷ್ಟು ಸುಂದರ  ಉದ್ಯಾನಗಳ ಅಭಿವೃದ್ಧಿಗೂ ನಗರಸಭೆ ಮುಂದಾದಲ್ಲಿ ‘ಮಂಜಿನ ನಗರಿ’ಯ ರೂಪ ಬದಲಾತೀತು!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT