ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತರಿ: ಅಂತರ್ಜಾಲದಲ್ಲಿ ಮಾಹಿತಿ

Last Updated 7 ಜುಲೈ 2013, 19:59 IST
ಅಕ್ಷರ ಗಾತ್ರ

ದಾವಣಗೆರೆ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ನಡೆಯುವ ಅಕ್ರಮ, ಉಲ್ಲಂಘನೆ, ಪ್ರಗತಿ ಮಾಹಿತಿ, ಕೈಗೊಂಡ ಮಾದರಿ ಕಾರ್ಯಕ್ರಮಗಳು... ಮೊದಲಾದ ವಿವರಗಳನ್ನು ಇನ್ನು ಮುಂದೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಅಂತರಜಾಲ ತಾಣದಲ್ಲಿ ಪಡೆಯಬಹುದು.

- ಪರಿಷ್ಕೃತ ಮಾರ್ಗಸೂಚಿಯ ಪ್ರಕಾರ, ವರ್ಷಕ್ಕೆ ಕನಿಷ್ಠ 2 ಬಾರಿ ಸಾಮಾಜಿಕ ಪರಿಶೋಧನೆ ಕಡ್ಡಾಯಗೊಳಿಸಿರುವುದರ ಪರಿಣಾಮ ಇದಾಗಿದೆ.

ಪಂಚಾಯ್ತಿಗಳಲ್ಲಿ ನಡೆಯುವ ಪರಿಶೋಧನೆಯ ಎಲ್ಲಾ ಮಾಹಿತಿಯನ್ನು ಕೂಡಲೇ ಅಂತರಜಾಲ ತಾಣದಲ್ಲಿ ಪ್ರಕಟಿಸಬೇಕು ಎಂದು `ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯ'ದ ನಿರ್ದೇಶಕರು ಈಚೆಗೆ ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.

ಈ ಹಿಂದೆ ಸಾಮಾಜಿಕ ಲೆಕ್ಕಪರಿಶೋಧನೆ ಮಾಡುವ ಆದೇಶವಿತ್ತಾದರೂ, ಸ್ಪಷ್ಟ ಮಾರ್ಗಸೂಚಿ ಇರಲಿಲ್ಲ. ವರ್ಷಕ್ಕೊಮ್ಮೆ ಪರಿಶೋಧನೆ ಮಾಡಲಾಗುತ್ತಿತ್ತು. ಈಗ ವರ್ಷಕ್ಕೆ ಎರಡು ಬಾರಿ ಪರಿಶೋಧನೆ ಕಡ್ಡಾಯ.  ಸಾರ್ವಜನಿಕರ ಮಾಹಿತಿಗಾಗಿ ಈ ವರದಿಯನ್ನು ಇಲಾಖೆಯ ಜಾಲತಾಣದಲ್ಲಿ ಪ್ರಕಟಿಸುವುದು ಸಹ ಕಡ್ಡಾಯ.

ಈ ಮೂಲಕ ಯೋಜನೆಯ ಸಮರ್ಪಕ ಜಾರಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಲಾಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು. ಯೋಜನೆಯಡಿ, ಗ್ರಾಮೀಣ ಪ್ರದೇಶದ ಬಡ ಕುಟುಂಬಕ್ಕೆ ಆರ್ಥಿಕ ವರ್ಷದ ಅವಧಿಯಲ್ಲಿ 100 ದಿನಗಳ ಉದ್ಯೋಗಾವಕಾಶ ನೀಡಲಾಗುತ್ತಿದೆ.

ಯೋಜನೆಯ ಅನುಷ್ಠಾನದ ಕುರಿತು `ಕಾರ್ಯಾಚರಣೆಯ ಮಾರ್ಗಸೂಚಿ-2013'ರಲ್ಲಿ ಸಾಮಾಜಿಕ ಪರಿಶೋಧನೆ, ವಿಚಕ್ಷಣೆ ಹಾಗೂ ಕುಂದುಕೊರತೆಗಳ ನಿವಾರಣೆಗೆ ಸ್ಪಷ್ಟ ನಿಯಮಗಳನ್ನು ರೂಪಿಸಿ ಜಿಲ್ಲಾ ಪಂಚಾಯ್ತಿಗಳಿಗೆ ನೀಡಲಾಗಿದೆ.

ಪಾರದರ್ಶಕತೆ ಹಾಗೂ ಉತ್ತರದಾಯಿತ್ವ ಇದರ ಮುಖ್ಯ ಅಂಶಗಳಾಗಿವೆ. ಈ ನಿಯಮಾವಳಿಗಳನ್ನು ಅನುಸರಿಸುವುದು ಕಡ್ಡಾಯವಾಗಿದೆ ಎನ್ನುತ್ತಾರೆ ಅವರು. ನಿಯಮಾವಳಿ ಪ್ರಕಾರ, ಕನಿಷ್ಠ 6 ತಿಂಗಳಿಗೊಮ್ಮೆ ಗ್ರಾಮ ಪಂಚಾಯ್ತಿಗಳಲ್ಲಿ ಸಾಮಾಜಿಕ ಪರಿಶೋಧನೆ ನಡೆಸಬೇಕು.

ಜಿಲ್ಲಾ ಪಂಚಾಯ್ತಿಗಳ `ಸಿಇಒ'ಗಳು ಜಿಲ್ಲಾ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಆಗಿರುತ್ತಾರೆ. ಅವರು, ವೇಳಾಪಟ್ಟಿ ಸಿದ್ಧಪಡಿಸಿ ಪಂಚಾಯ್ತಿಗಳಿಗೆ ನೀಡಬೇಕು. ಪರಿಶೋಧನೆಗೆ ನಿಗದಿಪಡಿಸಿದ ಕನಿಷ್ಠ 15 ದಿನಗಳಿಗೆ ಮೊದಲೇ ವಿವರ ನೀಡಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಲಾಗಿದೆ.

ಅಲ್ಲದೇ, ಗ್ರಾಮ ಸಭೆಗಳಲ್ಲಿಯೂ ತಿಳಿಸಬೇಕು. ಹಣ ದುರುಪಯೋಗದ ಪ್ರಕರಣ, ಪ್ರಮುಖ ನಿಯಮ ಉಲ್ಲಂಘಿಸಿರುವುದು, ಕೂಲಿ ನೀಡುವಲ್ಲಿ ಜರುಗುವ ಅವ್ಯವಹಾರ ಮೊದಲಾದವುಗಳನ್ನು ಹೊರತಂದು ಕಾರಣರಾದ ಸಿಬ್ಬಂದಿ ವಿರುದ್ಧ ಕ್ರಮ ಜರುಗಿಸಲು ಸರ್ಕಾರಕ್ಕೆ ಶಿಫಾರಸು ಮಾಡಬೇಕು. ಇದನ್ನು ವಿಳಂಬ ಮಾಡದೇ ಅಂತರಜಾಲ ತಾಣದಲ್ಲಿ ಕಡ್ಡಾಯವಾಗಿ ಪ್ರಕಟಿಸಬೇಕು. ಇಲ್ಲವಾದಲ್ಲಿ `ಕರ್ತವ್ಯ ಲೋಪ' ಎಂದು ಪರಿಗಣಿಸಬೇಕಾಗುತ್ತದೆ ಎಂದು ಸಿಇಒಗಳಿಗೆ  ತಿಳಿಸಲಾಗಿದೆ.

ಗೋಡೆ ಬರಹದಲ್ಲಿ ಪ್ರಚಾರ...
ಉದ್ಯೋಗ ಖಾತರಿ ಯೋಜನೆಯ ಸ್ವರೂಪ, ಉದ್ಯೋಗ ಚೀಟಿ ಹಾಗೂ ಉದ್ಯೋಗ ಪಡೆಯುವ ವಿಧಾನ, ಅನುಷ್ಠಾನಗೊಳಿಸಿದ ಕಾಮಗಾರಿ ವಿವರ, ಯೋಜನೆಯ ವ್ಯಾಪ್ತಿಯಲ್ಲಿ ತೆಗೆದುಕೊಳ್ಳಲು ಅವಕಾಶವಿರುವ ಕಾಮಗಾರಿಗಳ ಪಟ್ಟಿ ಮೊದಲಾದವುಗಳ ಬಗ್ಗೆ ಗ್ರಾಮೀಣ ಜನರಲ್ಲಿ ಹೆಚ್ಚಿನ ಮಾಹಿತಿ ಹಾಗೂ ಜಾಗೃತಿ ಇಲ್ಲದಿರುವುದನ್ನು ನಿರ್ದೇಶನಾಲಯ ಗುರುತಿಸಿದೆ.

ಈ ಹಿನ್ನೆಲೆಯಲ್ಲಿ ಯೋಜನೆಯ ಮಾಹಿತಿ ನೀಡಲು ಗೋಡೆ ಬರಹಗಳು, ಮಾಧ್ಯಮ ಮೊದಲಾದವುಗಳ ಮೂಲಕ ಪ್ರಚಾರ ಮಾಡಬೇಕು ಎಂದು ಸಾಮಾಜಿಕ ಪರಿಶೋಧನಾ ನಿರ್ದೇಶನಾಲಯದ ನಿರ್ದೇಶಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT