ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತರಿ ಯೋಜನೆ: ನಾಮಫಲಕ ಹಣ ದುರ್ಬಳಕೆ?

Last Updated 18 ಜನವರಿ 2012, 6:20 IST
ಅಕ್ಷರ ಗಾತ್ರ

ಶಹಾಪುರ: 2010-11ನೇ ಸಾಲಿನ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಿರ್ಮಾಣ ಮಾಡಿದ ಕಾಮಗಾರಿಗಳ ಸ್ಥಳದಲ್ಲಿ ನಾಮಫಲಕ ಬರಹಕ್ಕಾಗಿ ತಾಲ್ಲೂಕು ಪಂಚಾಯಿತಿ ಮೂಲಕ 15ಲಕ್ಷ ಅನುದಾನ ಗ್ರಾಮ ಪಂಚಾಯಿತಿಗಳಿಗೆ ಬಿಡುಗಡೆ ಆಗಿದೆ. ಕೆಲಸ ನಿರ್ವಹಿಸಿದ ಸ್ಥಳದಲ್ಲಿ ನಾಮಫಲವನ್ನು ಹಾಕದೆ ಹಣ ದುರ್ಬಳಕೆ ಮಾಡಿಕೊಂಡ ಅಂಶ ಬೆಳಕಿಗೆ ಬಂದಿದೆ.

ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳ ಪೈಕಿ ವನದುರ್ಗ ಗ್ರಾಮ ಪಂಚಾಯಿತಿ ಹೊರತುಪಡಿಸಿ ಪ್ರತಿ ಗ್ರಾಮ ಪಂಚಾಯಿತಿಗೆ 42,850ರೂಪಾಯಿ ಹಣವನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ 2010 ಮೇ 2ರಂದು ಒಟ್ಟು 14,99,750ರೂಪಾಯಿ ಹಣ ಬಿಡುಗಡೆಗೊಳಿಸಿದ ಬಗ್ಗೆ ಆದೇಶದ ಪ್ರತಿಯಲ್ಲಿ ತಿಳಿಸಿದ್ದಾರೆ.

ಮುಖ್ಯವಾಗಿ ನಾಮಫಲಕದಲ್ಲಿ 2010-11ನೇ ಸಾಲಿನ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕಾಮಗಾರಿ ಕೈಗೊಂಡ ವಿವರಗಳನ್ನು ನಮೂದಿಸತಕ್ಕದ್ದು. ಬೋರ್ಡ್ ಅಳತೆ 2ಹಾಗೂ 3ಅಡಿ ಉದ್ದವಿರಬೇಕು.

ಕಾಮಗಾರಿ ಸ್ಥಳದಲ್ಲಿ ಸರಬರಾಜು ಮಾಡಿದ ಕಾಂಕ್ರಿಟ್‌ನಲ್ಲಿ ನೆಡುವುದು ಸೇರಿದಂತೆ ಎಲ್ಲಾ ವಿವರಗಳಂತೆ ವಿವಿಧ ಫರಂಗಳಿಂದ ಕೊಟೇಶನ್ ಕರೆದು ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕೆಂದು ಸ್ಪಷ್ಟವಾಗಿ ಸುತ್ತೋಲೆಯಲ್ಲಿ ಹೇಳಲಾಗಿದೆ.

ಸರ್ಕಾರದ ಆದೇಶವನ್ನು ಉಲ್ಲಂಘಿ ಸಿ ಯಾವುದೇ ಕೊಟೇಶನ್ ಕರೆಯದೆ ಕಾನೂನು ಬಾಹಿರವಾಗಿ ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಹಣ ವೆಚ್ಚ ಮಾಡಲಾಗಿದೆ. ವಿಚಿತ್ರವೆಂದರೆ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೈಗೆತ್ತಿಕೊಂಡು ನಿರ್ವಹಿಸಿದ ಸ್ಥಳದಲ್ಲಿ ಮಾತ್ರ ನಾಮಫಲಕ ಹಾಕದೆ ಆಯಾ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿಗಳು ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದಲಿತ ಮುಖಂಡ ಈಶ್ವರ ಮಹಲರೋಜಾ ಆರೋಪಿಸಿದ್ದಾರೆ.

ನಾಮಫಲಕ ಹಣದ ದುರ್ಬಳಕೆಯ ತನಿಖೆಗಾಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಕಳೆದ ನವಂಬರ 3ರಂದು ದೂರು ಸಲ್ಲಿಸಿದಾಗ ಇದರ ಬಗ್ಗೆ ವಿವರವಾಗಿ ಪರಿಶೀಲಿಸಿ ಅಭಿವೃದ್ಧಿ ಅಧಿಕಾರಿಯಿಂದ ವಿವರಣೆ ಪಡೆದು ಸೂಕ್ತ ಕ್ರಮ ತೆಗೆದುಕೊಂಡ ಬಗ್ಗೆ ಅರ್ಜಿದಾರನಿಗೆ ವಾರದಲ್ಲಿ ಹಿಂಬರಹ ನೀಡಿ ಎಂಬ ಸೂಚನೆಯನ್ನು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗೆ ತಿಳಿಸಿದ್ದಾರೆ.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಆದೇಶದಂತೆ ತಾಪಂ ಅಧಿಕಾರಿಯ ಮುಂದೆ ವಿಚಾರಿಸಿದಾಗ ಇಂದಿಗೂ ಯಾವುದೇ ಕ್ರಮ ತೆಗೆದುಕೊಳ್ಳದೆ ಅಕ್ರಮದಲ್ಲಿ ತಾಪಂ ಅಧಿಕಾರಿ ಶಾಮೀಲಾಗಿದ್ದಾರೆ ಎಂಬ ಶಂಕೆ ಮೂಡುತ್ತಿದೆ.

ಸಮಗ್ರ ತನಿಖೆಗೆ ಬೆಂಗಳೂರಿನ ಲೋಕಾಯುಕ್ತ ವಿಭಾಗದ ಹೆಚ್ಚುವರಿ ವಿಚಾರಣೆಗಳ ನಿಬಂಧಕರಿಗೆ ಕಳೆದ 9ರಂದು ದೂರು ಸಲ್ಲಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿಯವರು ತಕ್ಷಣ ಇದರ ಬಗ್ಗೆ ಸಮಗ್ರ ತನಿಖೆ ನಡೆಸಿ ಕ್ರಮತೆಗೆದುಕೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT