ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತ್ರಿ: ಅನುದಾನ ಸದ್ಬಳಕೆಗೆ ಸೂಚನೆ

Last Updated 4 ಅಕ್ಟೋಬರ್ 2011, 4:30 IST
ಅಕ್ಷರ ಗಾತ್ರ

ಸೋಮವಾರಪೇಟೆ: ಉದ್ಯೋಗ ಖಾತ್ರಿ ಯೋಜನೆಯಡಿ ಬಿಡುಗಡೆಯಾದ ಹಣವನ್ನು ಸಮರ್ಪಕವಾಗಿ ವಿನಿಯೋಗಿಸದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಬಳವನ್ನು ತಡೆಹಿಡಿಯುವಂತೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಸೂಚಿಸಿದರು.

ಸೋಮವಾರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಗ್ರಾಮ ಪಂಚಾಯಿತಿ ಪ್ರಗತಿ ಪರಿಶೀ ಲನಾ ಸಭೆಯಲ್ಲಿ ಪಂಚಾಯಿತಿ ಅಧ್ಯಕ್ಷರು ಮತ್ತು ಪಿಡಿಓ ಗಳನ್ನು ಉದ್ದೇಶಿಸಿ ಮಾತನಾಡಿದರು.

ತಾಲ್ಲೂಕಿನ 40 ಗ್ರಾಮ ಪಂಚಾಯಿತಿಗಳಿಗೆ ಉದ್ಯೋಗ ಖಾತ್ರಿ ಯೋಜನೆಯಡಿ 4.79 ಕೋಟಿ ರೂ. ಹಣ ಬಿಡುಗಡೆಯಾಗಿದ್ದೆ. ಕೇವಲ 2.30 ಕೋಟಿ ರೂಪಾಯಿ ಖರ್ಚಾಗಿದೆ. ನೀಡಿದ ಹಣವನ್ನು ಸರಿಯಾಗಿ ಖರ್ಚುಮಾಡದಿದ್ದರೆ ಮುಂದೆ ಹೆಚ್ಚಿನ ಅನುದಾನ ತರುವುದು ಕಷ್ಟವೆಂದರು.

ಕೂಡಿಗೆ ಗ್ರಾಮ ಪಂಚಾಯಿತಿಗೆ ಬಿಡುಗಡೆಯಾದ ಹಣದಲ್ಲಿ 29 ಲಕ್ಷ ರೂ. ಬಾಕಿ ಉಳಿದಿದೆ. ಕೊಡ್ಲಿಪೇಟೆ ಗ್ರಾಮ ಪಂಚಾಯಿತಿಯಲ್ಲಿ 25 ಲಕ್ಷ ಖರ್ಚು ಮಾಡಿಲ್ಲ. ಪಂಚಾಯಿತಿ ಅಧ್ಯಕ್ಷರು ಹಾಗೂ ಅಭಿವೃದ್ಧಿ ಅಧಿಕಾರಿಗಳು ಸಮಾನ ಮನಸ್ಕರಾಗಿ ಕೆಲಸ ನಿರ್ವಹಿಸದಿದ್ದರೆ ಅಭಿವೃದ್ಧಿ ಅಸಾಧ್ಯ ಎಂದರು.

ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳು ಕಳಪೆಯಾಗದಂತೆ ಪಿಡಿಓಗಳು ಎಚ್ಚರ ವಹಿಸಬೇಕು. ಪ್ರತಿಯೊಂದು ಕಾಮಗಾರಿಯನ್ನೂ ಖುದ್ದಾಗಿ ಪರಿಶೀಲಿಸಬೇಕು. ಪೂರ್ಣಗೊಂಡ ಕೆಲಸಗಳಿಗೆ ಮಾತ್ರ ಹಣ ಬಿಡುಗಡೆ ಮಾಡಬೇಕು ಎಂದು ಸೂಚಿಸಿದರು.

ಬೆಟ್ಟದಳ್ಳಿ ಗ್ರಾಮ ಪಂಚಾಯಿತಿಯಲ್ಲಿ ಒಂದೇ ಕಾಮಗಾರಿಗೆ ಎರಡು ಬಾರಿ ಹಣ ಬಿಡುಗಡೆ ಮಾಡಿರುವ ದೂರುಗಳು ಬಂದಿದ್ದು, ಇದಕ್ಕೆ ಅಧಿಕಾರಿಗಳೇ ನೇರ ಹೊಣೆಯಾಗಬೇಕಾಗುತ್ತದೆ. ಅಕ್ರಮ ಎಸಗಿದವರು ಎಂತಹ ಬಲಿಷ್ಠರಾದರೂ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಎಚ್ಚರಿಸಿದರು.

ಸರ್ಕಾರದ ವಸತಿ ಯೋಜನೆಗಳು ನಿಜವಾದ ಫಲಾನುಭವಿಗಳಿಗೆ ಸಿಗಬೇಕು. ಕೆಲವು ಆಸ್ತಿವಂತರು ಆಶ್ರಯ ಮನೆಗಳ ಫಲಾನುಭವಿಗಳಾಗಿ ದನದ ಕೊಟ್ಟಿಗೆ ಕಟ್ಟಿಸಿಕೊಂಡಿರುವ ಪ್ರಕರಣಗಳು ಕಂಡು ಬಂದಿವೆ. ಇಂತಹ ಪ್ರಕರಣಗಳು ಮುಂದೆಯೂ ಕಂಡುಬಂದರೆ ಪಿಡಿಓಗಳು ಕೆಲಸ ಕಳೆದುಕೊಳ್ಳಬೇಕಾ ಗುತ್ತದೆ ಎಂದರು.

ಎರಡು ಬಾರಿ ಒಬ್ಬ ವ್ಯಕ್ತಿ ಆಶ್ರಯ ಮನೆ ಯೋಜನೆಯ ಫಲಾನುಭವಿಗಳಾಗಲು ಅವಕಾಶ ನೀಡಬಾರದು. ನಿಜವಾದ ಬಡ ಫಲಾನುಭವಿಗಳಿಗೆ ಆಶ್ರಯ ಮನೆ ನೀಡಬೇಕು. ಅವರು ವಾಸಿಸಲು ಯೋಗ್ಯವಲ್ಲದ ಮನೆಗಳನ್ನು ಕೆಡವಿ ಹೊಸ ಮನೆ ನಿರ್ಮಿಸಿಕೊಡುವ ಪ್ರಯತ್ನ ಮಾಡಬೇಕು. ಯೋಜ ನೆಯ ನಿಯಮಗಳನ್ನು ಮೀರಿ ಪಿಡಿಓಗಳು ಕೆಲಸ ನಿರ್ವಹಿಸಬಾರದು ಎಂದು ಶಾಸಕರು ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವಿ.ಕೆ. ಲೋಕೇಶ್, ಉಪಾಧ್ಯಕ್ಷೆ ನೇತ್ರಾವತಿ ಈರಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯೆ ಸುಲೋಚನ, ಚಂದ್ರಿಕಾ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಿ.ಎನ್. ನಾಗರಾಜ್, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಸತೀಶ್ ಹಾಗೂ ಶಂಕರನಾರಾಯಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT