ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತ್ರಿ ಪ್ರಗತಿ ಕುಂಠಿತ- ಸಂಸದ ಗರಂ

55 ಪಿಡಿಒಗಳಿಗೆ ಷೋಕಾಸ್ ನೋಟಿಸ್
Last Updated 8 ಫೆಬ್ರುವರಿ 2013, 10:54 IST
ಅಕ್ಷರ ಗಾತ್ರ

ಮಂಗಳೂರು: ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ನಿರೀಕ್ಷಿತ ಪ್ರಗತಿ ಆಗದಿರುವ ಬಗ್ಗೆ ಹಾಗೂ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲಿ ಯೋಜನೆ ಅಡಿ ಸಾರ್ವಜನಿಕ ಕೆಲಸಗಳನ್ನು ಕೈಗೊಳ್ಳದ ಬಗ್ಗೆ  ಸಂಸದ ನಳಿನ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಲ್ಲಿನ ಜಿ.ಪಂ.ಸಭಾಂಗಣದಲ್ಲಿ ಗುರುವಾರ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತ ಹಾಗೂ ಉಸ್ತುವಾರಿ ಸಮಿತಿ ಸಭೆಯಲ್ಲಿ ಅವರು ಅಧಿಕಾರಿಗಳನ್ನು ಈ ಬಗ್ಗೆ ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್, `ಉದ್ಯೋಗ ಖಾತರಿ ಮತ್ತಿತರ ಯೋಜನೆಗಳ ಅನುಷ್ಠಾನದಲ್ಲಿ ಉತ್ಸಾಹದಲ್ಲಿ ತೊಡಗಿಸಿಕೊಳ್ಳದ 55 ಪಿಡಿಒಗಳಿಗೆ ಈಗಾಗಲೇ ಷೋಕಾಸ್ ನೋಟಿಸ್ ನೀಡಿದ್ದೇವೆ.

ಸಾಮಾಜಿಕ ಅರಣ್ಯ, ಜಲಾನಯನ, ತೋಟಗಾರಿಕೆ, ಕೃಷಿ ಇಲಾಖೆಗಳಲ್ಲಿ ನಿರೀಕ್ಷಿತ ಪ್ರಗತಿ ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಕಾರ್ಯ ನಿರ್ವಹಣಾಧಿಕಾರಿಗಳ ವಿರುದ್ಧವೂ ಕ್ರಮಕೈಗೊಳ್ಳುವಂತೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆಯಲಿದ್ದೇನೆ' ಎಂದರು.

ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಪಿಡಿಒ ಹಾಗೂ ಕಾರ್ಯದರ್ಶಿ ಹುದ್ದೆಗಳೆರಡೂ ಖಾಲಿ ಇವೆ. ಉಳಾಯಿಬೆಟ್ಟು ಗ್ರಾಮಕ್ಕೆ ಪಿಡಿಒ ಹಾಗೂ ಕಾರ್ಯದರ್ಶಿ ಇಬ್ಬರೂ ಇಲ್ಲ. ಹಾಗಿರುವಾಗ ಅಭಿವೃದ್ಧಿ ನಡೆಯುವುದು ಹೇಗೆ ಎಂದು ಸಮಿತಿಯ ಸದಸ್ಯ ರಾಜೀವ ಪ್ರಶ್ನಿಸಿದರು.

ಗ್ರಾಮಗಳಲ್ಲಿ ಪಿಡಿಒ ಅಥವಾ ಕಾರ್ಯದರ್ಶಿಗಳ ಪೈಕಿ ಒಂದು ಹುದ್ದೆಯನ್ನಾದರೂ ತುಂಬಲು 15 ದಿನಗಳೊಳಗೆ ಕ್ರಮ ಕೈಗೊಳ್ಳುತ್ತೇನೆ ಎಂದು ಮುಖ್ಯ ಕಾರ್ಯದರ್ಶಿ ಶಿವರಾಮೇ ಗೌಡ ಭರವಸೆ ನೀಡಿದರು.

ಮಾಣಿ-ಮೈಸೂರು ರಸ್ತೆ ಅಭಿವೃದ್ಧಿ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿರುವ ಬಗ್ಗೆ ಹಾಗೂ ಐದಾರು ಕಡೆ ಕಾಮಗಾರಿ ನಡೆಸದ ಬಗ್ಗೆ ಸಂಸದರು ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮೇ 8ರ ಒಳಗೆ ಈ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಕಾಮಗಾರಿಗೆ ಕಚ್ಚಾವಸ್ತುಗಳನ್ನು ಪೂರೈಸುವ ಲಾರಿಗಳ ಓಡಾಟದಿಂದ ಗ್ರಾಮೀಣ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಈ ರಸ್ತೆಗಳ ದುರಸ್ತಿಗೆ ತಗುಲುವಷ್ಟು ಮೊತ್ತವನ್ನು ಕಾಮಗಾರಿಗೆ ಅನುಮತಿ ನೀಡುವಾಗಲೇ ರಾಯಧನವಾಗಿ ಪಡೆಯುವಂತೆ ಗ್ರಾಮ ಪಂಚಾಯಿತಿಗಳಿಗೆ ಸಿಇಒ ಸೂಚಿಸಿದರು.

ಇಂದಿರಾ ಆವಾಜ್ ಮನೆ ನಿರ್ಮಾಣ ವಿಳಂಬವಾದ ಬಗ್ಗೆ ಹಾಗೂ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುತ್ತಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಶಿಷ್ಟಾಚಾರ ಉಲ್ಲಂಘನೆ- ಸಂಸದ ಕೆಂಡಾಮಂಡಲ

ಕೇಂದ್ರ ಸರ್ಕಾರದ ನೆರವಿನಿಂದ ಕೈಗೊಂಡ ಕಾಮಗಾರಿಗಳ ಉದ್ಘಾಟನೆ ಬಗ್ಗೆ ಮಾಹಿತಿಯನ್ನೂ ನೀಡದೆ, ಉದ್ಘಾಟನೆಗೂ ಆಹ್ವಾನಿಸದಿರುವ ಪಿಡಿಒಗಳ ವರ್ತನೆ ಬಗ್ಗೆ ನಳಿನ್ ಕೆಂಡಾಮಂಡಲವಾದರು.

`ಇದು ಶಿಷ್ಟಾಚಾರ ಉಲ್ಲಂಘನೆ ಮಾತ್ರವಲ್ಲ ಸಂಸದ ಸ್ಥಾನಕ್ಕೆ ತೋರುವ ಅಗೌರವವೂ ಹೌದು. ಅಧಿಕಾರಿಗಳು ರಾಜಕಾರಣ ಮಾಡಿದರೆ ಅದನ್ನು ಹೇಗೆ ಎದುರಿಸಬೇಕೆಂಬುದು ಗೊತ್ತು. ಜನರನ್ನು ಕಳುಹಿಸಿ ಗಲಾಟೆ ಮಾಡಿಸಲು ಬರುತ್ತದೆ. ನಾಲ್ಕು ವರ್ಷಗಳಿಂದ ನೋಡಿಯೂ ಸುಮ್ಮನಿದ್ದೆ. ಆದರೆ, ಇನ್ನು ಸುಮ್ಮನಿರಲು ಸಾಧ್ಯವಿಲ್ಲ' ಎಂದು ಅವರು ಎಚ್ಚರಿಕೆ ನೀಡಿದರು.

`ವಿದ್ಯುತ್ ಕಡಿತ ಇಲ್ಲ'

ವಿದ್ಯಾರ್ಥಿಗಳ ಪರೀಕ್ಷೆ ಸಂದರ್ಭ ವಿದ್ಯುತ್ ಕಡಿತ ಮಾಡದಂತೆ ಸಂಸದರು ಸೂಚಿಸಿದರು. `ಯುಪಿಸಿಎಲ್ ವಿದ್ಯುತ್ ಪೂರೈಕೆ ನಿಲ್ಲಿಸಿತ್ತು. ಈಗ ಯುಪಿಸಿಎಲ್‌ನಿಂದ ಜಿಲ್ಲೆಗೆ ನಿತ್ಯ 500 ಮೆಗಾವಾಟ್ ವಿದ್ಯುತ್ ಪೂರೈಕೆಯಾಗುತ್ತಿದ್ದು, ಇನ್ನು ವಿದ್ಯುತ್ ಕಡಿತ ಮಾಡುವ ಪ್ರಮೇಯ ಉದ್ಭವಿಸುವುದಿಲ್ಲ' ಎಂದು ಮೆಸ್ಕಾಂ ಅಧಿಕಾರಿಯೊಬ್ಬರು ಸಭೆಗೆ ತಿಳಿಸಿದರು.

`ಇಂಡಿಯಾ- ಪಾಕ್ ತರಹ ವರ್ತಿಸಬೇಡಿ'

ರಸ್ತೆ ಅಭಿವೃದ್ಧಿ ಕಾಮಗಾರಿ ವೇಳೆ ಬೇರೆ ಬೇರೆ ಇಲಾಖೆಯ ಎಂಜಿನಿಯರ್‌ಗಳ ನಡುವೆ ಸಮನ್ವಯದ ಕೊರತೆ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಎನ್.ಪ್ರಕಾಶ್, `ನೀವು ಇಂಡಿಯಾ- ಪಾಕ್ ತರಹ ಏಕೆ ವರ್ತಿಸುತ್ತೀರಿ.

ಮಕ್ಕಳು ಗಾಯವನ್ನು ಕೆರೆದು ದೊಡ್ಡದು ಮಾಡಿಕೊಳ್ಳುವಂತೆ ಸಣ್ಣ ಸಮಸ್ಯೆಯನ್ನು ದೊಡ್ಡದು ಮಾಡಿ ನಮಗೆ ಮುಜುಗರ ತರಿಸಬೇಡಿ. 100ಕ್ಕೆ 93 ಅಂಕ ಪಡೆಯುವ ಅತಿ ಬುದ್ಧಿವಂತ ಎಂಜಿನಿಯರ್‌ಗಳೇ ಹೀಗೆ ವರ್ತಿಸಿದರೆ ಕಡಿಮೆ ಅಂಕ ಪಡೆದು ಅಧಿಕಾರಿಗಳಾದ ನಾವು ನಿಮ್ಮ ಅಮಾನತಿಗೆ ಶಿಫಾರಸು ಮಾಡಬೇಕಾಗುತ್ತದೆ' ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT