ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ ನಿರ್ಲಕ್ಷ್ಯ ಸಲ್ಲ:ಸೋನಿಯಾ

Last Updated 2 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): `ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ ಮತ್ತು ಅಕ್ರಮಗಳ ಕುರಿತು ಬರುವ ದೂರುಗಳನ್ನು ಕಡೆಗಣಿಸಬಾರದು~ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ಹೇಳಿದ್ದಾರೆ.

`ಉದ್ಯೋಗ ಖಾತ್ರಿ -2012~ ಸಮಾವೇಶ ಉದ್ದೇಶಿಸಿ ಮಾತನಾಡಿದ ಅವರು, `ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರಿಗೆ ವೇತನ ಪಾವತಿಯಲ್ಲಿ ವಿಳಂಬವಾಗುತ್ತಿದ್ದು, 15 ದಿನಗಳಲ್ಲಿಯೇ ಕೂಲಿ ಹಣ ಪಾವತಿಸಲು ಆದ್ಯತೆ ನೀಡಬೇಕು~ ಎಂದರು. ಪ್ರಧಾನಿ ಮನಮೋಹನ್ ಸಿಂಗ್ ಸಹ ಇದಕ್ಕೆ ದನಿಗೂಡಿಸಿದರು.

`ಈ ಯೋಜನೆಯಲ್ಲಿ ಸುಧಾರಣೆಯಾಗಬೇಕೆಂಬ ಮಾತುಗಳು ಮೊದಲಿನಿಂದಲೂ ಕೇಳಿ ಬರುತ್ತಿದ್ದು, ಅದನ್ನು ಜಾರಿಗೊಳಿಸುವ ಕಾಲ ಈಗ ಬಂದಿದ್ದು, ನಾವು ಅದನ್ನು ಜಾರಿಗೊಳಿಸುತ್ತೇವೆ. ಯೋಜನೆಯಲ್ಲಿನ ಅಕ್ರಮ ಮತ್ತು ಭ್ರಷ್ಟಾಚಾರವನ್ನು ಸಹಿಸುವುದಿಲ್ಲ~ ಎಂದು ಎಚ್ಚರಿಸಿದರು.

`ಯೋಜನೆಯಲ್ಲಿನ ಖರ್ಚುವೆಚ್ಚಗಳ ಬಗ್ಗೆ ಸಿಎಜಿ ನಿಗಾ ವಹಿಸುತ್ತಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಸೋನಿಯಾ, ಇದರಲ್ಲಿನ ಭ್ರಷ್ಟಾಚಾರ ದೇಶಕ್ಕೆ ಬಗೆಯುವ ದೊಡ್ಡ ಅನ್ಯಾಯ. ರಾಷ್ಟ್ರಪಿತನ ಹೆಸರಿನಲ್ಲಿ ಅಪರಾಧ ಮಾಡಿದಂತೆ~ ಎಂದರು.

`ಕಳೆದ 6 ವರ್ಷಗಳಲ್ಲಿ ಯೋಜನೆಯಲ್ಲಿ ಯಶಸ್ಸು ಕಂಡರೂ ಇನ್ನೂ ಹಲವು ಸವಾಲುಗಳು ನಮ್ಮ ಎದುರಿಗೆ ಇವೆ. ಕೂಲಿಕಾರರಿಗೆ ನಿಗದಿತ ಅವಧಿಯಲ್ಲಿ ಕೂಲಿ ಹಣ ಸಿಗದಿರುವುದು ಪ್ರಮುಖ ಸವಾಲಾಗಿದ್ದು, ಬ್ಯಾಂಕ್ ಮತ್ತು ಅಂಚೆ ಕಚೇರಿಗಳು ತಮ್ಮ ಗುರಿ ತಲುಪುವಿಕೆಯನ್ನು ತೀವ್ರಗೊಳಿಸಬೇಕು~ ಎಂದು ಹೇಳಿದರು.

ತಿಂಗಳಲ್ಲಿಯೇ ಸುಧಾರಣೆ: ಯೋಜನೆಯಲ್ಲಿ ಸುಧಾರಣೆಗಳನ್ನು ತರಬೇಕೆಂಬ ಸೋನಿಯಾ ಗಾಂಧಿ ಸಲಹೆಗೆ ಸಹಮತ ವ್ಯಕ್ತಪಡಿಸಿರುವ ಗ್ರಾಮೀಣ ಅಭಿವೃದ್ಧಿ ಸಚಿವ ಜೈರಾಮ್ ರಮೇಶ್, ಈ ಮಾಸಾಂತ್ಯಕ್ಕೆ ಹೊಸ ಸುಧಾರಣೆಗಳನ್ನು ಪ್ರಕಟಿಸಲಾಗುವುದು ಎಂದಿದ್ದಾರೆ.

`ಈ ಬಗ್ಗೆ ನಾವು ರಾಜ್ಯಗಳು ಮತ್ತು ಹಲವಾರು ಸಂಸ್ಥೆಗಳೊಂದಿಗೆ ಚರ್ಚಿಸಿದ್ದು, ಒಂದು ತಿಂಗಳ ಒಳಗಾಗಿ ಅಂತಿಮ ರೂಪ ನೀಡಲಾಗುವುದು~ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT