ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗಕ್ಕಿದು ಮೈಲಿಗಲ್ಲು

Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ಉನ್ನತ ಕಾಲೇಜಿಗೆ ಸೇರಿಕೊಂಡ ಮಾತ್ರಕ್ಕೆ ಒಳ್ಳೆ ನೌಕರಿ ಸಿಕ್ಕಿತೆಂದು ನಿರಾಳವಾಗಲು ಸಾಧ್ಯವೇ? ಆದರೆ ಬಹುಪಾಲು ಕಾಲೇಜುಗಳು, ಅದರಲ್ಲೂ ಎಂಬಿಎ ಕಾಲೇಜುಗಳ ವಿವರಣ ಪುಸ್ತಕಗಳಲ್ಲಿನ ‘ಕ್ಯಾಂಪಸ್ ಇಂಟರ್‌ವ್ಯೂ’ ಎಂಬ ಸಾಲುಗಳು ವಿದ್ಯಾರ್ಥಿಗಳ ಈ ಕಲ್ಪನೆಗೆ ಇಂಬು ಕೊಟ್ಟಿವೆ.

ಒಂದು ವೇಳೆ ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾಗಿ ಉತ್ತಮ ಕಂಪೆನಿಯಲ್ಲಿ ಉದ್ಯೋಗ ಸಿಕ್ಕರೂ ಅದು ನಿಮ್ಮ ಭವಿಷ್ಯವನ್ನು ಎಷ್ಟರಮಟ್ಟಿಗೆ ಉಜ್ವಲಗೊಳಿಸುತ್ತದೆ ಎಂಬುದರ ಯೋಚನೆಯೂ ನಿಮಗೆ ಈ ಸಂದರ್ಭದಲ್ಲಿ ಬರಲೇಬೇಕು. ಒಮ್ಮೆ ಕಂಪೆನಿಯೊಂದರಲ್ಲಿ ಕೆಲಸ ಸಿಕ್ಕರೆ ಸಾಕು, ಚಿಂತೆಯಿಲ್ಲ ಎಂದುಕೊಂಡು ಪೂರ್ವತಯಾರಿಯೇ ಇಲ್ಲದೆ ನೌಕರಿಗೆ ಇಳಿದರೆ ಅಪೂರ್ಣತೆ ಕಾಡುವ ಸಾಧ್ಯತೆಯೂ ಇದೆ.

ಎಂಥ ಉತ್ತಮ ಕಾಲೇಜಾದರೂ ‘ಕುದುರೆಯನ್ನು ನೀರಿನ­ವರೆಗೆ ಮಾತ್ರ ಎಳೆದುಕೊಂಡು ಹೋಗಲು ಸಾಧ್ಯ. ಅದನ್ನು ಕುಡಿಯುವಂತೆ ಮಾಡಲು ಸಾಧ್ಯವಿಲ್ಲ’ ಎಂಬ ಅಂಶ ನೆನಪಿರಲಿ. ಸ್ವತಃ ಕೆಲವು ಸಾಮರ್ಥ್ಯವನ್ನು ರೂಢಿಸಿಕೊಳ್ಳುವುದು ಅತ್ಯವಶ್ಯಕ. ಆದ್ದರಿಂದ, ಎಂಬಿಎ ಅಥವಾ ಡಿಪ್ಲೊಮಾ ಇನ್‌ ಮ್ಯಾನೇಜ್ಮೆಂಟ್ ಪ್ರೋಗ್ರಾಮ್‌ನ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವಾಗ ಈ ಅಂಶಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದುವರಿದರೆ ಉತ್ತಮ ವಾಣಿಜ್ಯೋದ್ಯಮಿಯಾಗುವುದರಲ್ಲಿ ಸಂಶಯವಿಲ್ಲ. ಬನ್ನಿ, ಆ ಆರು ಅಂಶಗಳು ಯಾವುವು ಎಂದು ತಿಳಿದುಕೊಳ್ಳೋಣ.

ಮೌಖಿಕ-–ಲಿಖಿತ ಸಂವಹನ ಕೌಶಲ
‘ವ್ಯವಹಾರ ಸಂವಹನ’ದ ವಿಷಯಕ್ಕೆ ಬಂದರೆ, ನಿಮ್ಮ ಆಲೋಚನೆ, ಚಿಂತನೆ ಮತ್ತು ವಸ್ತು ವಿಷಯವನ್ನು ಸಮರ್ಥವಾಗಿ ಇನ್ನೊ­ಬ್ಬರಿಗೆ ತಲುಪಿಸುವ ಸಾಮರ್ಥ್ಯ ನಿಮಗಿರ­ಬೇಕಾ­ಗುತ್ತದೆ. ಹೇಳಬೇಕಿರುವ ವಿಚಾರಗ­ಳನ್ನು ವಿವರ, ಸ್ಪಷ್ಟ ಮತ್ತು ಸರಳವಾಗಿ ಹೇಳಿಮುಗಿಸಬೇಕು. ಅದು ವರದಿ, ಮೆಮೊ, ನೋಟ್, ಇಮೇಲ್, ಸ್ಪ್ರೆಡ್ ಶೀಟ್ ಅಥವಾ ಎಲೆವೇಟರ್ ಪಿಚ್ (ಮೂವತ್ತು ಸೆಕೆಂಡ್‌ನಿಂದ 2 ನಿಮಿಷದಲ್ಲಿ ಸಾರಾಂಶ­ವನ್ನು ಹೇಳಿ ಮುಗಿಸುವುದು) ಯಾವುದೇ ಇರಲಿ, ಸ್ಪಷ್ಟತೆ ಎದ್ದು ತೋರಬೇಕು. ಉತ್ತಮ ಅಭ್ಯಾಸ ಮತ್ತು ಆಗುಹೋಗು­ಗಳ ಬಗ್ಗೆ  ತಿಳಿದುಕೊಂಡಿದ್ದರೆ ಜ್ಞಾನ ವೃದ್ಧಿಯಾಗುತ್ತದೆ.

ಜಾಗತಿಕ ಮಟ್ಟದ ಜ್ಞಾನ
ವ್ಯವಹಾರ, ವಾಣಿಜ್ಯೋದ್ಯಮ ಹೇಗೆ ನಡೆಯುತ್ತದೆ ಎಂಬುದನ್ನು ಅರಿತುಕೊಳ್ಳಬೇಕಾದರೆ ಅರ್ಥಶಾಸ್ತ್ರದ ಮೂಲ ಅಂಶಗಳು ಹಾಗೂ ಪರಿಕಲ್ಪನೆಯ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿ­ರಬೇಕು. ಅರ್ಥಶಾಸ್ತ್ರಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಅಧ್ಯಯನ, ಚಿಂತನೆ, ವಿಚಾರ ವಿನಿಮಯ ಮಾಡಿಕೊಂಡರೆ ಒಳ್ಳೆಯದು. ವಾಣಿಜ್ಯ ಸಂಬಂಧಿತ ವಿಚಾರಗಳತ್ತ ಹೆಚ್ಚು ಗಮನವಿರಬೇಕು.

ವಿಮರ್ಶಾತ್ಮಕ– ಸಂಘಟನಾತ್ಮಕ ಆಲೋಚನೆ
ಇಂದಿನ ಅಸಂಘಟಿತ ವಾಣಿಜ್ಯ ಚಿತ್ರಣದಲ್ಲಿ, ವ್ಯವಹಾರ ಸಂಬಂಧಿ ಸಮಸ್ಯೆಗಳನ್ನು ನಿರ್ವಹಿಸುವ ಸಾಮರ್ಥ್ಯ ಹಾಗೂ ಸೂಕ್ಷ್ಮತೆ ಅತಿ ಮುಖ್ಯ. ಇಷ್ಟೇ ಅಲ್ಲದೆ, ಪರಿಸ್ಥಿತಿಯ ಸಮಗ್ರ ಚಿತ್ರಣವನ್ನು ಪಡೆಯಲು ಹೆಚ್ಚೆಚ್ಚು ಪ್ರಾಜೆಕ್ಟ್, ಅಧ್ಯಯನ, ವಿಶ್ಲೇಷಣೆ, ಲ್ಯಾಬ್‌ ಕೋರ್ಸ್‌ಗಳ ಮೂಲಕವೂ ಕೆಲಸ ಮಾಡು­ವುದು ಒಳ್ಳೆಯದು. ಕೇವಲ ಪ್ರಶ್ನೆಗಳಿಗೆ ಉತ್ತರಿಸಿ ಸುಮ್ಮನಾಗು­ವುದು ನಿಮ್ಮ ಕೆಲಸವಲ್ಲ. ಉತ್ತರವನ್ನೂ ಮತ್ತೆ ಪ್ರಶ್ನಿಸುವ ಕೆಲಸವನ್ನೂ ಮಾಡುತ್ತಿರಿ.

ಜನರೊಂದಿಗೆ ಬೆರೆತು, ಆದ್ಯತೆ ಅರ್ಥೈಸಿಕೊಳ್ಳಿ
ನೀವು ಜನರೊಂದಿಗೆ ಎಷ್ಟು ಪರಿಣಾಮಕಾರಿ ಮತ್ತು ಸೂಕ್ಷ್ಮವಾಗಿ ಬೆರೆಯುತ್ತೀರಿ ಎಂಬುದೇ ನಿಮ್ಮ  ನಾಯಕತ್ವ ಗುಣದ ಆರಂಭ ಅಥವಾ ಕೊನೆ ನಿರ್ಧರಿತವಾಗುವುದು. ನಿಮ್ಮ ವ್ಯಕ್ತಿತ್ವದಲ್ಲಿ ಭಾವನಾತ್ಮಕತೆಯನ್ನೂ ಬೆಳೆಸಿಕೊಳ್ಳಿ. ಜನರಲ್ಲಿ ಹೆಚ್ಚು ಬೆರೆಯಲು ಅವಕಾಶ ಕಲ್ಪಿಸುವ ವಿದ್ಯಾರ್ಥಿ ಕ್ಲಬ್‌, ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ. ಸಾಮಾ­ಜಿಕ ಮತ್ತು ಸಮುದಾಯದ ಸಂಘಗಳಲ್ಲೂ ಭಾಗವಹಿಸು­ವುದ­ರಿಂದ ‘ನಾನು‘ ಇಂದ ‘ನಾವು’ ಮನೋಭಾವ ­ಬೆಳೆ­ಯುತ್ತದೆ. ಇದಕ್ಕಿಂತ ಮುಖ್ಯವಾಗಿ, ನಿಮ್ಮ ಆಲೋಚನೆ, ವಸ್ತು, ಉತ್ಪನ್ನವನ್ನು ಇನ್ನೊಬ್ಬರಿಗೆ ಮುಟ್ಟಿಸುವಂಥ ಚಟುವಟಿ­ಕೆಗಳ ದಾರಿ ಆಯ್ದುಕೊಳ್ಳಿ. ಇದು ವ್ಯಕ್ತಿಯ ನಡವಳಿಕೆಯನ್ನು ಅರಿತುಕೊಳ್ಳುವ ಮತ್ತು ನಿಮ್ಮ ಕೌಶಲವನ್ನು ಒರೆಗೆ ಹಚ್ಚುವ ಕಲೆಯೂ ಹೌದು.

ವೃತ್ತಿಯಲ್ಲಿ ನೈತಿಕ ಮೌಲ್ಯ
ಇಂದಿನ ಚದುರಿಹೋಗಿರುವ ವಾಣಿಜ್ಯ ಚಿತ್ರಣದಲ್ಲಿ, ಏಕತೆ, ಜವಾಬ್ದಾರಿ ಮತ್ತು ಸೂಕ್ಷ್ಮತೆಯನ್ನೊಳಗೊಂಡು ನೈತಿಕ ಮೌಲ್ಯಗ­ಳನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳುವುದು ಅನಿವಾರ್ಯವೆನಿಸಿದೆ. ಇದರಿಂದ ಕಾರ್ಯಕ್ಷಮತೆಯೂ ಹೆಚ್ಚುವುದು. ನೀವು ಮಾಡಬಾರದ, ಅವಶ್ಯಕವಾಗಿ ಮಾಡಬೇಕಾದ ಕೆಲಸಗಳನ್ನು ಪಟ್ಟಿ ಮಾಡಿಟ್ಟುಕೊಳ್ಳಿ. ‘ಮೌಲ್ಯಗಳನ್ನು ಕಲಿಯುವುದಲ್ಲ, ಅಳವಡಿಸಿಕೊಳ್ಳುವುದು’ ಎಂಬ ಮಾತು ಸದಾ ನೆನಪಿನಲ್ಲಿರಲಿ.

ಕ್ಷೇತ್ರದ ಬಗ್ಗೆ ಸಮರ್ಥ ಜ್ಞಾನ
ಕೇವಲ ವಿಷಯವನ್ನು ಒಟ್ಟಾರೆಯಾಗಿ ಕಲಿತರೆ ಸಾಲದು, ನಿಮ್ಮ ಅಭಿರುಚಿ, ಆಸಕ್ತಿಗೆ ಹೊಂದುವ ವಿಶೇಷ ಕ್ಷೇತ್ರವನ್ನು ಆಯ್ದುಕೊ­ಳ್ಳುವುದು ಒಳ್ಳೆಯದು. ಮೊದಲು ನಿಮ್ಮಿಚ್ಛೆಯ ಕ್ಷೇತ್ರ ಯಾವುದು ಎಂಬುದನ್ನು ನಿರ್ಧರಿಸಿಕೊಳ್ಳಿ. ಉದಾಹರಣೆಗೆ, ಮಾರ್ಕೆಟಿಂಗ್ ನಲ್ಲೂ ಬ್ರಾಂಡ್ ಮ್ಯಾನೇಜ್ಮೆಂಟ್, ಬಿ2ಬಿ ಸೇಲ್‌, ಡಿಜಿಟಲ್ ಮಾರ್ಕೆಟಿಂಗ್, ಜಾಹೀರಾತು, ಕಂಸ್ಯೂಮರ್ ರಿಸರ್ಚ್, ಮಾರ್ಕೆಟಿಂಗ್ ಅನಾಲಿಟಿಕ್ಸ್‌ ಎಂಬ ಹಲವು ವಿಭಾಗ­ಗಳಿವೆ. ಇವುಗಳಲ್ಲಿ ನಿಮ್ಮ ವಿಶೇಷ ಆಸ್ಥೆ ಯಾವುದು ಎಂಬುದನ್ನು ಸ್ಪಷ್ಟಪಡಿಸಿ­ಕೊಳ್ಳಿ.

ಕೇವಲ ಪಠ್ಯದಿಂದ ಕ್ಷೇತ್ರದ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಸ್ವ ಪ್ರಯತ್ನದಿಂದ ಮಾಹಿತಿ ಸಂಗ್ರಹಿಸಿಕೊಳ್ಳಿ. ಇದಕ್ಕೆ ‘ಬ್ಲಾಗಿಂಗ್’ ಹೆಚ್ಚು ಉಪಯೋಗಕ್ಕೆ ಬರುವ ಸಂಗತಿ. ಮಾರ್ಕೆಟಿಂಗ್ ಕ್ಲಬ್, ಫೈನಾನ್ಸ್ ಕ್ಲಬ್, ಸ್ಟ್ರಾಟೆಜಿ ಕ್ಲಬ್, ಅಥವಾ ಬಿಸಿನೆಸ್ ಅನಾಲಿಟಿಕ್ಸ್ ಕ್ಲಬ್ ಗಳಲ್ಲಿ ತೊಡಗಿಕೊಂಡು ಬ್ಲಾಗ್‌ನಲ್ಲಿ ಅಪ್‌ಡೇಟ್‌ ಮಾಡುತ್ತಿರಿ.
ಈ ಮೇಲಿನ ಎಲ್ಲ ಅಂಶಗಳನ್ನು ಆಧಾರವಾಗಿಟ್ಟುಕೊಂಡು ಪ್ರಾಮಾಣಿಕವಾಗಿ ಹತ್ತರಲ್ಲಿ ಎಂಟು ಅಂಕ ಕೊಟ್ಟುಕೊಳ್ಳಬಲ್ಲಿರಿ ಎಂದಾದರೆ  ನೀವು ವೃತ್ತಿಯಲ್ಲಿ ಖಂಡಿತ ಯಶಸ್ವಿಯಾಗುತ್ತೀರಿ ಎಂದೇ ಅರ್ಥ.
(ಲೇಖಕರ ಸಂಪರ್ಕಕ್ಕೆ anand.n@ifimbschool.com)                
 ಅನುವಾದ–ಸುಮಲತಾ ಎನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT