ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ಯೋಗದ ನೆಪದಲ್ಲಿ ವಂಚನೆ

Last Updated 1 ಡಿಸೆಂಬರ್ 2013, 19:52 IST
ಅಕ್ಷರ ಗಾತ್ರ

ಬೆಂಗಳೂರು:  ನಿವೃತ್ತ ಪೊಲೀಸ್‌ ಮಹಾನಿರ್ದೇಶಕರೆಂದು ಹೇಳಿಕೊಂಡು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯಲ್ಲಿ (ಸಿಐಎಸ್‌ಎಫ್‌) ಉದ್ಯೋಗ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದ ಆರೋಪಿಗಳನ್ನು ಮಹದೇವಪುರ ಪೊಲೀಸರು ಬಂಧಿಸಿದ್ದಾರೆ.

ಜಾರ್ಖಂಡ್‌ ಮೂಲದ ಸಿದ್ಧಾಂತ್‌ ಸಿಂಗ್‌ (36) ಹಾಗೂ ಗೋಪಾಲ್‌ ಸಾಹ (32) ಬಂಧಿತರು. ಎರಡು ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಆರೋಪಿಗಳು, ರಸ್ತೆ ಬದಿ ಬಟ್ಟೆ ಮಾರಾಟ ಮಾಡಿಕೊಂಡು ಎ.ನಾರಾಯಣಪುರದಲ್ಲಿ ವಾಸವಾಗಿದ್ದರು. ಬಿ.ಇ ಪದವೀಧರ ಸಿದ್ಧಾಂತ್‌, ಹಿಂದೆ ಸಿಐಎಸ್‌ಎಫ್‌ನ ನೇಮಕಾತಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ. ಆಯ್ಕೆಯಾ ಗದಿದ್ದರೂ ಸಿಐಎಸ್‌ಎಫ್‌ನ ಕಾರ್ಯವೈಖರಿ ಮತ್ತು ನೇಮಕಾತಿ ಪ್ರಕ್ರಿಯೆ ಅರಿತುಕೊಂಡಿದ್ದ. ನಂತರ ಗೋಪಾಲ್‌ನ ಜೊತೆಗೂಡಿ ವಂಚನೆಗೆ ಸಂಚು ರೂಪಿಸಿದ್ದ.

ಮಾಜಿ ಸಂಸದರಿಗೆ ಕರೆ: 20ಕ್ಕೂ ಹೆಚ್ಚು ಸಿಮ್‌ಕಾರ್ಡ್‌ ಗಳನ್ನು ಹೊಂದಿದ್ದ ಆರೋಪಿಗಳು ಅಂತರ್ಜಾಲದ ಮೂಲಕ ಮಾಜಿ ಸಂಸದರ ದೂರವಾಣಿ ಸಂಖ್ಯೆ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನೆಲೆಸಿರುವ ಮಾಜಿ ಸಂಸದರೊಬ್ಬರಿಗೆ ಕರೆ ಮಾಡಿದ ಸಿದ್ಧಾಂತ್‌, ‘ನಾನು ಕರ್ನಾಟಕ ರಾಜ್ಯದ ಪೊಲೀಸ್‌ ಮಹಾನಿರ್ದೇಶಕ. ಇಲ್ಲಿನ ಸಿಐಎಸ್‌ಎಫ್‌ನಲ್ಲಿ ಹುದ್ದೆಗಳು ಖಾಲಿ ಇದ್ದು ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.

ನಿಮ್ಮ ಕ್ಷೇತ್ರದಲ್ಲಿರುವ ಬುದ್ಧಿವಂತ ನಿರುದ್ಯೋಗಿಗಳನ್ನು ರಾಜ್ಯಕ್ಕೆ ಕಳುಹಿಸಿ. ಅವರ ಆಯ್ಕೆಗೆ ಆದ್ಯತೆ ನೀಡುವಂತೆ ಸಂದರ್ಶಕರಿಗೆ ಸೂಚಿಸುತ್ತೇನೆ’ ಎಂದು ನಂಬಿಸಿದ್ದ. ಇದನ್ನು ನಂಬಿದ ಮಾಜಿ ಸಂಸದರು ತಮ್ಮ ಸಂಬಂಧಿಕರು ಸೇರಿದಂತೆ ಪರಿಚಿತ ಯುವಕರನ್ನು ರಾಜ್ಯಕ್ಕೆ ಕಳುಹಿಸಿದ್ದಾರೆ. ಈ ಹಂತದಲ್ಲಿ ಸ್ವಲ್ಪ ಗಾಬರಿಗೊಂಡಿರುವ ಆರೋಪಿಗಳು, ಯುವಕರಿಗೆ ಕರೆ ಮಾಡಿ ‘ನೇಮಕಾತಿ ಪ್ರಕ್ರಿಯೆ ವಿಳಂಬವಾಗುತ್ತದೆ. ಅಲ್ಲಿಯವರೆಗೆ ಚೆನ್ನೈನಲ್ಲಿಯೇ ಉಳಿದುಕೊಂಡಿರಬೇಕು’ ಎಂದು ಹೇಳಿದ್ದಾರೆ. ಅವರ ಮಾತಿ ನಂತೆ ಯುವಕರು ಚೆನ್ನೈನಲ್ಲೇ  ಉಳಿದುಕೊಂಡಿದ್ದಾರೆ.

ಬಳಿಕ ಅಲ್ಲಿಗೆ ತೆರಳಿದ ಆರೋಪಿಗಳು, ನಿವೃತ್ತ ಡಿಜಿಪಿ ತಮ್ಮನ್ನು ಕಳುಹಿಸಿದ್ದು ಸಿಐಎಸ್‌ಎಫ್‌ಗೆ ನೇಮಕ ಮಾಡಲು ಪ್ರತಿ ಅಭ್ಯರ್ಥಿಯಿಂದ ₨ 15 ಸಾವಿರ ಹಣ ಪಡೆಯುವಂತೆ ಹೇಳಿದ್ದಾರೆ ಎಂದಿದ್ದಾರೆ. ಅದನ್ನು ನಂಬಿದ 15 ಮಂದಿ ಯುವಕರು ಹಣ ಕೊಟ್ಟು ಕಳುಹಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ನಾಲ್ಕು ದಿನ ಕಳೆದರೂ ನೇಮಕಾತಿ ಪ್ರಕ್ರಿಯೆ ಬಗ್ಗೆ ಕರೆ ಬಂದಿಲ್ಲ. ಅನುಮಾನಗೊಂಡ ಯುವಕರು, ಮಾಜಿ ಸಂಸದ ರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಈ ವೇಳೆಗಾಗಲೇ ಆರೋಪಿಗಳ ಮೊಬೈಲ್‌ಗಳೂ ಸ್ವಿಚ್‌ ಆಫ್‌ ಆಗಿವೆ. ತಾವು ವಂಚನೆಗೊಳಗಾಗಿರುವುದನ್ನು ಅರಿತ ಮಾಜಿ ಸಂಸದರು, ಚೆನ್ನೈನಲ್ಲಿರುವ ಸಿಐಎಸ್‌ಎಫ್‌ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾರೆ.

ಈ ಬಗ್ಗೆ ಚೆನ್ನೈ ಅಧಿಕಾರಿಗಳು ನಗರದ ಸಿಐಎಸ್‌ಎಫ್‌ಗೆ ಮಾಹಿತಿ ರವಾನಿಸಿದ್ದಾರೆ. ತನಿಖೆ ಆರಂಭಿಸಿದ ಅಧಿಕಾರಿಗಳಿಗೆ ಆರೋಪಿಗಳು ಎ.ನಾರಾಯಣಪುರದಿಂದ ಕರೆ ಮಾಡಿರು ವುದು ಗೊತ್ತಾಗಿದೆ. ಕೂಡಲೇ ಸಿಐಎಸ್‌ಎಫ್‌ನ ಡೆಪ್ಯುಟಿ ಕಮಾಂಡರ್‌ ತಂಗರಾಜನ್‌ ಅವರು ಮಹದೇವಪುರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಿಐಎಸ್‌ಎಫ್‌ ಅಧಿಕಾರಿಗಳ ನೆರವಿನಿಂದ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇನ್‌ಸ್ಪೆಕ್ಟರ್‌ ಗೌತಮ್‌, ಎಸ್‌ಐ ಸುರೇಶ್‌, ಹೆಡ್‌ ಕಾನ್‌ಸ್ಟೆಬಲ್‌ ವೇಣುಗೋಪಾಲ್‌ ಹಾಗೂ ಕಾನ್‌ಸ್ಟೆಬಲ್‌ ಶಿವಾನಂದ್‌ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT