ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉದ್ವಿಗ್ನ ಶಮನಕ್ಕೆ ಇಂದು ಸಭೆ

Last Updated 14 ಜನವರಿ 2013, 19:59 IST
ಅಕ್ಷರ ಗಾತ್ರ

ಜಮ್ಮು (ಪಿಟಿಐ):  ಗಡಿ ನಿಯಂತ್ರಣ ರೇಖೆಯಲ್ಲಿನ ಉದ್ವಿಗ್ನ ಪರಿಸ್ಥಿತಿ ಶಮನಗೊಳಿಸುವ ನಿಟ್ಟಿನಲ್ಲಿ ಸೋಮವಾರ ನಡೆಯಲಿರುವ ಉಭಯ ರಾಷ್ಟ್ರಗಳ ಸೇನಾಪಡೆ ಉನ್ನತ ಕಮಾಂಡರ್‌ಗಳ ಸಭೆಗೆ ಪೂರ್ವಭಾವಿ ತಯಾರಿ ಆರಂಭವಾಗುತ್ತಿರುವಂತೆಯೇ, ಪಾಕಿಸ್ತಾನ ಸೇನಾಪಡೆಯು ಪೂಂಚ್‌ನಲ್ಲಿನ ಭಾರತೀಯ ಸೇನಾ ನೆಲೆಗಳತ್ತ ಭಾನುವಾರ ಗುಂಡು ಹಾರಿಸಿ ಮತ್ತೊಮ್ಮೆ ಕದನ ವಿರಾಮ ಉಲ್ಲಂಘಿಸಿದೆ.

ಭಾನುವಾರ ಸಂಜೆ 4.30ರ ಸುಮಾರಿಗೆ ಪಾಕ್ ಪಡೆ ಮತ್ತೆ ಗುಂಡು ಹಾರಿಸಿತು ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಶನಿವಾರ ಭಾರತೀಯ ಸೇನೆಯು ಉಗ್ರರ ಒಳನುಸುಳುವಿಕೆ ಯತ್ನ  ವಿಫಲಗೊಳಿಸಿದ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಕಳೆದ ರಾತ್ರಿಯೂ ಭಾರಿ ಗುಂಡಿನ ಚಕಮಕಿ ನಡೆದು ಕೆಲಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.

`ರಾತ್ರಿ 10 ಗಂಟೆ ಸುಮಾರಿಗೆ ಕೃಷ್ಣಘಾಟಿ ಎದುರಿನ ಗಡಿ ನಿಯಂತ್ರಣ ರೇಖೆ ಸಮೀಪ ಶಂಕಿತ ಉಗ್ರರ ಚಲನವಲನ ಗಮನಿಸಿದ ಭಾರತೀಯ ಸೇನೆಯು ಅವರ ಮೇಲೆ ಗುಂಡಿನ ದಾಳಿ ನಡೆಸಿತು. ಬಳಿಕ ಭಾರತ-ಪಾಕ್ ಸೇನೆ ನಡುವೆ ಭಾರಿ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಯಿತು. ಈ ವೇಳೆ ಉಗ್ರರು ಅಲ್ಲಿಂದ ಕಾಲ್ಕಿತ್ತ್ದ್ದಿದರು. ಆದರೆ, ರಾತ್ರಿ 2 ಗಂಟೆಯವರೆಗೆ ಎರಡೂ ಕಡೆಗಳಿಂದ ಗುಂಡಿನ ದಾಳಿ ಮುಂದುವರಿದಿತ್ತು. ಬೆಳಗಾಗುತ್ತಿದ್ದಂತೆಯೇ ನಿಧಾನವಾಗಿ ದಾಳಿ ನಿಂತು ಹೋಯಿತು' ಎಂದು ರಕ್ಷಣಾ ಇಲಾಖೆ ವಕ್ತಾರ ಆರ್.ಕೆ. ಪಲ್ಟಾ ತಿಳಿಸಿದ್ದಾರೆ.

`ಎಲ್‌ಒಸಿ' ಬಳಿ ಕಾಣಿಸಿದವರು ಪಾಕಿಸ್ತಾನದ ಗಡಿ ಕ್ರಿಯಾ ಪಡೆಗೆ (ಬಿಎಟಿ) ಸೇರಿದವರು ಅಥವಾ ಶಂಕಿತ ಉಗ್ರರಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಘಟನೆಯಲ್ಲಿ ಸಾವು- ನೋವು ಸಂಭವಿಸಿಲ್ಲ ಎಂದು ಮೂಲ ತಿಳಿಸಿವೆ.

ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಗಡಿಯಲ್ಲಿ ಪರಿಸ್ಥಿತಿ ಉದ್ವಿಗ್ನವಾಗ್ದ್ದಿದರೂ, ನಿಯಂತ್ರಣದಲ್ಲಿದೆ. ಭಾರತೀಯ ಸೈನಿಕರು ಗಡಿಯುದ್ದಕ್ಕೂ ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಇಂದು ಬ್ರಿಗೇಡ್ ಕಮಾಂಡರ್‌ಗಳ ಸಭೆ: ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಸೋಮವಾರ ಪೂಂಚ್‌ನಲ್ಲಿ ಬ್ರಿಗೇಡ್ ಕಮಾಂಡರ್ ಮಟ್ಟದ ಸಭೆ (ಫ್ಲ್ಯಾಗ್ ಮೀಟಿಂಗ್) ನಡೆಯಲಿದೆ. ಭಾರತದ ಇಬ್ಬರು ಸೈನಿಕರ ಬರ್ಬರ ಹತ್ಯೆ ಬಳಿಕ ಗಡಿಯಲ್ಲಿ ನಿರ್ಮಾಣವಾಗಿರುವ ಉದ್ವಿಗ್ನ ಸ್ಥಿತಿ ಶಮನಗೊಳಿಸುವ ಹಿನ್ನೆಲೆಯಲ್ಲಿ ಈ ಸಭೆ ಮಹತ್ವದ್ದಾಗಿದೆ.

`ಸೋಮವಾರ ಮಧ್ಯಾಹ್ನ ಪೂಂಛ್‌ನ ಚಕನ್-ದಾ-ಬಾಗ್‌ನಲ್ಲಿ ಈ ಸಭೆ ಆಯೋಜಿಸಲಾಗಿದೆ' ಎಂದು ರಕ್ಷಣಾ ಇಲಾಖೆಯ ವಕ್ತಾರ ಆರ್.ಕೆ. ಪಲ್ಟಾ ತಿಳಿಸಿದ್ದಾರೆ.

`ಎರಡೂ ರಾಷ್ಟ್ರಗಳ ಬ್ರಿಗೇಡ್ ಕಮಾಂಡರ್‌ಗಳ ಸಭೆ ಹಮ್ಮಿಕೊಳ್ಳುವ ಸಂಬಂಧ ದೂರವಾಣಿಯಲ್ಲಿ ವಿಷಯ ತಿಳಿಸಿದಾಗ ಪಾಕಿಸ್ತಾನ ಒಪ್ಪಿಕೊಂಡಿತು ಎಂದು ಅವರು ಹೇಳಿದ್ದಾರೆ.

ಉದ್ವಿಗ್ನ ಶಮನಕ್ಕೆ ಇಂದು ಸಭೆ
ಗಡಿಯಾಚೆಗಿನ ವ್ಯಾಪಾರ ಮತ್ತು ಪ್ರಯಾಣಕ್ಕೆ ಸಂಬಂಧಿಸಿದಂತೆ ವಿಶ್ವಾಸ ವೃದ್ಧಿ ಕ್ರಮ ಕೈಗೊಳ್ಳುವ ಬಗ್ಗೆಯೂ ಚರ್ಚಿಸುವ ಸಾಧ್ಯತೆ ಇದೆ ಎಂದಿದ್ದಾರೆ.

ಚಕನ್-ದಾ-ಬಾಗ್‌ನಿಂದ ಗಡಿ ಪ್ರವೇಶಿಸುವ ಮಾರ್ಗವನ್ನು ಪಾಕಿಸ್ತಾನ ಬಂದ್ ಮಾಡಿದೆ. ಇದರಿಂದಾಗಿ ತರಕಾರಿ ಸೇರಿದಂತೆ ವಿವಿಧ ಸರಕುಗಳನ್ನು ಕೊಂಡೊಯ್ಯುತ್ತಿದ್ದ ಲಾರಿಗಳು ಗಡಿಯಲ್ಲಿಯೇ ನಿಂತಿವೆ. ಪ್ರಯಾಣಿಕರ ವಾಹನಗಳನ್ನು ರದ್ದುಪಡಿಸಲಾಗಿದೆ.

ಪಾಕ್ ನಿಯೋಗ ವಾಪಸ್ ಕಳುಹಿಸಿದ ಗುಜರಾತ್ ಸರ್ಕಾರ
ಅಹಮದಾಬಾದ್ ವರದಿ: ಹೂಡಿಕೆದಾರರ ಸಮಾವೇಶದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದ   ಪಾಕಿಸ್ತಾನದ 22 ವಾಣಿಜ್ಯೋದ್ಯಮಿಗಳ ನಿಯೋಗವನ್ನು ರಾಜ್ಯ ಸರ್ಕಾರ ಭಾನುವಾರ ವಾಪಸ್ ಕಳುಹಿಸಿದೆ.

ಭಾರತ-ಪಾಕ್ ಗಡಿಯಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಗುಜರಾತ್ ಸರ್ಕಾರ ಈ ಕ್ರಮ ಕೈಗೊಂಡಿದೆ ಎನ್ನಲಾಗಿದೆ.

ಇಲ್ಲಿ ನಡೆದ ಮೇಳದಲ್ಲಿ ಮಾತ್ರ ಭಾಗವಹಿಸಲು ಪಾಕಿಸ್ತಾನದ ನಿಯೋಗಕ್ಕೆ ವೀಸಾ ನೀಡಲಾಗಿತ್ತು. ಆದಕಾರಣ ಗಾಂಧಿನಗರದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಅವರು ಪಾಲ್ಗೊಳ್ಳುವುದಿಲ್ಲ ಎಂದು ಗುಜರಾತ್ ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಸ್.ಕೆ. ನಂದಾ ಸ್ಪಷ್ಟಪಡಿಸಿದ್ದಾರೆ.

ಪಾಕ್ ನಿಯೋಗವನ್ನು ಗಾಂಧಿನಗರಕ್ಕೆ ಕರೆದುಕೊಂಡು ಹೋಗಲು ಸರ್ಕಾರ ಎಲ್ಲ ರೀತಿಯ ವ್ಯವಸ್ಥೆ ಮಾಡಿತ್ತು. ಆದರೆ, ವೀಸಾ ಸಂಬಂಧ ಸರ್ಕಾರ ಕೊನೆ ಕ್ಷಣದಲ್ಲಿ ನಿರ್ಧಾರ ಬದಲಿಸಿತು ಎಂದು ಮೂಲಗಳು ತಿಳಿಸಿವೆ.ಗಾಂಧಿನಗರದಲ್ಲಿ ಆಯೋಜಿಸಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನದ ಪ್ರವಾಸಿಗರಿಗೆ ವೀಸಾ ನಿಯಮ ಸರಳಗೊಳಿಸಬೇಕೆಂದು ಮುಖ್ಯಮಂತ್ರಿ ನರೇಂದ್ರ ಮೋದಿ ಒತ್ತಾಯಿಸಿದ್ದರು.

ಪಾಕ್ ಆಟಗಾರರ ಸೇರ್ಪಡೆಗೆ ಶಿವಸೇನೆ ಪ್ರತಿಭಟನೆ
ಮುಂಬೈ ವರದಿ: ಹಾಕಿ ಇಂಡಿಯಾ ಲೀಗ್‌ನ ಫ್ರಾಂಚೈಸಿಯಾಗಿರುವ `ಮುಂಬೈ ಮೆಜೀಷಿಯನ್ಸ್'ನ ಅಭ್ಯಾಸ ಶಿಬಿರದಲ್ಲಿ ಪಾಕಿಸ್ತಾನದ ನಾಲ್ವರು ಆಟಗಾರರನ್ನು ಸೇರ್ಪಡೆಗೊಳಿಸಿರುವುದನ್ನು ವಿರೋಧಿಸಿ ಶಿವಸೇನಾ ಕಾರ್ಯಕರ್ತರು ಭಾನುವಾರ ಮುಂಬೈ ಹಾಕಿ ಅಸೋಸಿಯೇಶನ್ ಕ್ರೀಡಾಂಗಣದ ಮುಂದೆ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಅಭ್ಯಾಸ ಶಿಬಿರ ರದ್ದುಪಡಿಸಲಾಯಿತು. ಮಹಮೂದ್ ರಶೀದ್, ಫರೀದ್ ಅಹಮದ್, ಮುಹಮದ್ ತೌಶಿಕ್ ಮತ್ತು ಇಮ್ರಾನ್ ಬಟ್ ಅವರನ್ನು ತಂಡದಲ್ಲಿ ಸೇರಿಸಲು `ಮುಂಬೈ ಮೆಜೀಷಿಯನ್ಸ್' ಒಪ್ಪಂದ ಮಾಡಿಕೊಂಡಿತ್ತು.

ಭಾನುವಾರ ಬೆಳಿಗ್ಗೆ ಮುಂಬೈಗೆ ಆಗಮಿಸಿದ್ದ ಆಟಗಾರರು ಡ್ರೆಸ್ಸಿಂಗ್ ರೂಮ್‌ನಲ್ಲಿದ್ದ ವೇಳೆ ಕ್ರೀಡಾಂಗಣದಲ್ಲಿ ಪ್ರತಿಭಟನೆ ಆರಂಭಗೊಂಡಿತಲ್ಲದೆ, ಐದು ನಿಮಿಷಗಳಲ್ಲೇ ಪ್ರತಿಭಟನಾಕಾರರು ಅಲ್ಲಿಂದ ತೆರಳಿದರು. ಬಳಿಕ ಕೋಚ್ ರಿಕ್ ಚಾರ್ಲ್ಸ್‌ವರ್ತ್ ಅವರ ಆಣತಿ ಮೇರೆಗೆ ಶಿಬಿರವನ್ನು ರದ್ದುಪಡಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT