ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಮಟ್ಟದ ತನಿಖೆಗೆ ಗಡಾದ ಒತ್ತಾಯ

ಸುವರ್ಣ ವಿಧಾನಸೌಧ ಕಾಮಗಾರಿಯಲ್ಲಿ ಅವ್ಯವಹಾರ ಶಂಕೆ
Last Updated 19 ಜುಲೈ 2013, 6:56 IST
ಅಕ್ಷರ ಗಾತ್ರ

ಬೆಳಗಾವಿ: `ಸುಮಾರು 438 ಕೋಟಿ ರೂಪಾಯಿ ವೆಚ್ಚದಲ್ಲಿ ಇಲ್ಲಿ ನಿರ್ಮಿಸಿರುವ `ಸುವರ್ಣ ವಿಧಾನಸೌಧ' ಕಟ್ಟಡ ಕಾಮಗಾರಿಯಲ್ಲಿ ಭಾರಿ ಪ್ರಮಾಣದ ಅವ್ಯವಹಾರ ನಡೆದಿರುವ ಶಂಕೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ. ಈ ಕುರಿತು ಉನ್ನತ ಮಟ್ಟದ ತನಿಖೆ ಕೈಗೊಳ್ಳಬೇಕು' ಎಂದು ಮೂಡಲಗಿಯ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರಿಗೆ ಈ ಕುರಿತು ಪತ್ರ ಬರೆದಿರುವ ಗಡಾದ ಅವರು, `ಅಂದಾಜು ಪತ್ರಿಕೆಯ ದರದಂತೆ ಸುವರ್ಣ ವಿಧಾನಸೌಧ ಕಟ್ಟಡ ಕಾಮಗಾರಿಯ ಮೊತ್ತ 187,06,98,119 ರೂಪಾಯಿ ನಿಗದಿಗೊಳಿಸಲಾಗಿತ್ತು.

  ಆದರೆ, ಪ್ರಚಲಿತ ದರಗಳಂತೆ ಮೊತ್ತವು ರೂ. 183,46,13,724 ರೂಪಾಯಿ ಆಗಿತ್ತು. ಜೂನ್ 22, 2009ರಂದು ನಡೆದ ಟೆಂಡರ್ ಪರಿಶೀಲನಾ ಸಮಿತಿ ಸಭೆಯಲ್ಲಿ ನಾಲ್ಕು ಕಂಪೆನಿಗಳ ತುಲನಾತ್ಮಕ ಪಟ್ಟಿಯನ್ನು ಪರಿಶೀಲಿಸಲಾಗಿತ್ತು. ಪುಣೆಯ ಬಿ.ಜಿ. ಶಿರ್ಕೆ ಕನ್‌ಸ್ಟ್ರಕ್ಷನ್ ಟೆಕ್ನಾಲಾಜಿಸ್ ಪ್ರೈವೇಟ್ ಕಂಪೆನಿಯು 232,90,63,526 ರೂಪಾಯಿ ಸಲ್ಲಿಸಿದ್ದು, ಇದು ಪ್ರಚಲಿತ ದರಗಳ ಮೇಲೆ ಶೇ. 26.95ರಷ್ಟು ಅಧಿಕವಾಗಿತ್ತು. ಹೀಗಾಗಿ ಗುತ್ತಿಗೆದಾರರೊಂದಿಗೆ ಸರ್ಕಾರ ಮಟ್ಟದಲ್ಲಿ ಸಂಧಾನ ನಡೆಸಿ ಶೇ. 24.50ರಷ್ಟು ಮಾತ್ರ ಹೆಚ್ಚಿಸಲು ಒಪ್ಪಿಗೆ ಕೊಟ್ಟು, ಬೆಂಗಳೂರಿನ ವಿಕಾಸ ಸೌಧ ನಿರ್ಮಿಸಿದ್ದ ಶಿರ್ಕೆ ಕಂಪೆನಿಗೇ ಟೆಂಡರ್ ನೀಡಲಾಯಿತು.

`ರಾಜ್ಯ ಸರ್ಕಾರ ವಿಧಿಸಿದ್ದ 4ನೇ ಷರತ್ತಿನಲ್ಲಿ, ಗುತ್ತಿಗೆದಾರರು ನಮೂದಿಸಿದ ಒಟ್ಟಾರೆ ಅಂದಾಜು ಮೊತ್ತದ ಮೇಲೆ ಯಾವುದೇ ರೀತಿಯ ಹೆಚ್ಚಿನ ವೆಚ್ಚ ಆಗದಂತೆ ಇಲಾಖೆಯ ಮುಖ್ಯಸ್ಥರು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಆದರೆ, ಇದನ್ನು ಉಲ್ಲಂಘಿಸಿ, ಗುತ್ತಿಗೆದಾರರಿಗೆ ಹಣ ಪಾವತಿ ಮಾಡುವ ಸಮಯದಲ್ಲಿ ಶೇ. 19.62ರಷ್ಟು ಹೆಚ್ಚಿಗೆ ಹಣವನ್ನು ಪಾವತಿಸಲಾಗಿದೆ.

ಕಾಮಗಾರಿಯ ಮೊತ್ತ ರೂ. 232.67 ಕೋಟಿ ಮಾತ್ರ ಇತ್ತು. ಆದರೆ, 278.32 ಕೋಟಿ ರೂಪಾಯಿ ಪಾವತಿಸಲಾಗಿದೆ. ಒಟ್ಟು ಮೂಲ ಅಂದಾಜು ಪತ್ರಿಕೆಗಿಂತ ಶೇ. 44.12ರಷ್ಟು ಹೆಚ್ಚಿನ ಹಣವನ್ನು ನೀಡಿದಂತಾಗಿದೆ ಎಂಬ ಅಂಶ ಮಾಹಿತಿ ಹಕ್ಕಿನಡಿ ಲೋಕೋಪಯೋಗಿ ಇಲಾಖೆ ನೀಡಿರುವ ವಿವರಗಳಿಂದ ಬೆಳಕಿಗೆ ಬಂದಿದೆ' ಎಂದು ಗಡಾದ ತಿಳಿಸಿದ್ದಾರೆ.

`ಸುವರ್ಣ ಸೌಧ ನಿರ್ಮಾಣ ಕಾಮಗಾರಿಯ ಅವಧಿಯನ್ನು ಮೂರು ಬಾರಿ ವಿಸ್ತರಿಸಲಾಗಿದ್ದರಿಂದ ಕಾಮಗಾರಿ ವೆಚ್ಚದಲ್ಲಿ ಶೇ. 60ಕ್ಕಿಂತಲೂ ಹೆಚ್ಚು ಏರಿಕೆಯಾಗಿದೆ. ಇದಕ್ಕೆ ಯಾರು ಹೊಣೆ?' ಎಂದು ಗಡಾದ ಪ್ರಶ್ನಿಸಿದ್ದಾರೆ.

ಇದರಲ್ಲಿ ಗುತ್ತಿಗೆದಾರರೊಂದಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಶಾಮೀಲಾಗಿರುವಂತೆ ಕಂಡು ಬರುತ್ತದೆ. ಹೀಗಾಗಿ ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ, ಸಾರ್ವಜನಿಕರಿಗೆ ಸತ್ಯಾಂಶವನ್ನು ತಿಳಿಸಬೇಕು. ಇಲ್ಲದಿದ್ದರೆ, ಸರ್ಕಾರದ ವಿರುದ್ಧ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಲಾಗುವುದು' ಎಂದು ಭೀಮಪ್ಪ ಗಡಾದ ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT