ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಶಿಕ್ಷಣ ಅಭಿವೃದ್ಧಿಗೆ ಒತ್ತು

Last Updated 19 ಸೆಪ್ಟೆಂಬರ್ 2011, 6:35 IST
ಅಕ್ಷರ ಗಾತ್ರ

ಚಾಮರಾಜನಗರ: `ಜಿಲ್ಲೆಯಲ್ಲಿ ಉನ್ನತ ಶಿಕ್ಷಣದ ಅಭಿವೃದ್ಧಿ ಸಂಬಂಧ ಕೇಂದ್ರ ಪುರಸ್ಕೃತ ಯೋಜನೆಯಡಿ 8 ಕೋಟಿ ರೂ ಅನುದಾನ ಬಿಡುಗಡೆಗೆ ಕ್ರಮವಹಿಸಲಾಗಿದೆ~ ಎಂದು ಸಂಸದ ಆರ್. ಧ್ರುವನಾರಾಯಣ ತಿಳಿಸಿದರು.

`ಉನ್ನತ ಶಿಕ್ಷಣದಲ್ಲಿ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಯೋಜನೆ ರೂಪಿಸಿದೆ. ದೇಶದ 374 ಜಿಲ್ಲೆಗಳು ಹಿಂದುಳಿದಿವೆ. ಚಾಮರಾಜನಗರ ಸೇರಿದಂತೆ ರಾಜ್ಯದ 20 ಜಿಲ್ಲೆಗಳು ಈ ಪಟ್ಟಿಯಲ್ಲಿವೆ. ಇವುಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರ ತಲಾ 8 ಕೋಟಿ ರೂ ಅನುದಾನ ನೀಡಲಿದೆ. ಆದರೆ, ಅನುದಾನ ಕೋರಿ ಕೇವಲ ದೇಶದ 34 ಜಿಲ್ಲೆಗಳಿಂದ ಮಾತ್ರವೇ ಪ್ರಸ್ತಾವ ಸಲ್ಲಿಸಲಾಗಿದೆ~ ಎಂದು ಸುದ್ದಿಗೋಷ್ಠಿಯಲ್ಲಿ ಅವರು ವಿವರಿಸಿದರು.

ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಿಲ್ಲ. ಹೀಗಾಗಿ, ಅನುದಾನ ಲಭಿಸಿಲ್ಲ. ಜಿಲ್ಲಾ ಕೇಂದ್ರದಲ್ಲಿ ಸ್ಥಾಪಿಸಿರುವ ಸ್ಯಾಟಲೈಟ್ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೂ ಅನುದಾನದ ಕೊರತೆಯಿದೆ. ಈ ಅನುದಾನ ಲಭಿಸಿದರೆ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು. `ಮೈಸೂರು ವಿವಿಗೆ ಕೇಂದ್ರ ಸರ್ಕಾರದ ಬಜೆಟ್‌ನಲ್ಲಿ 100 ಕೋಟಿ ರೂ ಮೀಸಲಿಡಲಾಗಿದೆ. ಇದರಲ್ಲಿಯೇ ಸ್ನಾತಕೋತ್ತರ ಕೇಂದ್ರಕ್ಕೆ ಅಗತ್ಯವಿರುವ 18 ಕೋಟಿ ರೂ ನೀಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು~ ಎಂದರು.

ಉನ್ನತ ಶಿಕ್ಷಣ ಅಭಿವೃದ್ಧಿಗೆ ಮೀಸಲಾದ 8 ಕೋಟಿ ರೂ ಅನುದಾನ ಲಭಿಸಿದರೆ ಗ್ರಂಥಾಲಯ, ಆರೋಗ್ಯ ಕೇಂದ್ರ, ಬೋಧಕರ ವಸತಿಗೃಹ, ಪ್ರಯೋಗಾಲಯ ನಿರ್ಮಿಸಲು ಅವಕಾಶವಿದೆ. ಕೂಡಲೇ, ಅನುದಾನ ಪಡೆಯುವ ಸಂಬಂಧ ರಾಜ್ಯ ಸರ್ಕಾರದಿಂದ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಬೇಕೆಂದು ಉನ್ನತ ಶಿಕ್ಷಣ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

ಹಾಸ್ಟೆಲ್ ನಿರ್ಮಾಣ
ಸ್ನಾತಕೋತ್ತರ ವಿದ್ಯಾರ್ಥಿನಿಯರ ಹಾಸ್ಟೆಲ್ ನಿರ್ಮಾಣಕ್ಕೆ ರಾಜ್ಯಸಭಾ ಸದಸ್ಯೆ ಜಯಶ್ರೀ ಅವರು ಸಂಸದರ ಅನುದಾನದಡಿ 25 ಲಕ್ಷ ರೂ ನೀಡಲು ಒಪ್ಪಿದ್ದಾರೆ. ತಮ್ಮ ಅನುದಾನದಲ್ಲಿ 25 ಲಕ್ಷ ರೂ ವೆಚ್ಚದಡಿ ಗ್ರಂಥಾಲಯ ನಿರ್ಮಿಸಲಾಗುತ್ತಿದೆ ಎಂದರು.

ಜಿಲ್ಲಾ ಕೇಂದ್ರದಲ್ಲಿ ಕೇಂದ್ರೀಯ ವಿದ್ಯಾಲಯ ನಿರ್ಮಾಣ ಸಂಬಂಧ ಸಲ್ಲಿಸಿದ್ದ ಪರಿಷ್ಕೃತ ಕ್ರಿಯಾಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ರೇಷ್ಮೆ ಇಲಾಖೆಯ ಕಟ್ಟಡದಲ್ಲಿ ಶಾಲೆ ಆರಂಭಿಸಲಾಗುವುದು. ಸದ್ಯದಲ್ಲೇ ಅನುದಾನ ಕೂಡ ಲಭಿಸಲಿದ್ದು, ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು.

ಕೊಳ್ಳೇಗಾಲ ತಾಲ್ಲೂಕಿನ ಮಂಗಲ ಗ್ರಾಮದಲ್ಲಿ ಏಕಲವ್ಯ ವಸತಿಶಾಲೆ ನಿರ್ಮಿಸಲು ನಿವೇಶನ ಕೂಡ ಲಭಿಸಿದೆ. ಶಾಲಾ ಕಟ್ಟಡ ನಿರ್ಮಾಣಕ್ಕೆ 20 ಕೋಟಿ ರೂ ಮಂಜೂರಾಗಿದ್ದು, ಶೀಘ್ರವೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ ಕಾಮಗಾರಿ ಆರಂಭಿಸಲಾಗುವುದು ಎಂದು ತಿಳಿಸಿದರು.

ಮುಖ್ಯ ಅಂಚೆ ಕಚೇರಿ ಸ್ಥಾಪನೆ
ಜಿಲ್ಲಾ ಕೇಂದ್ರದಲ್ಲಿ ಮುಖ್ಯ ಅಂಚೆ ಕಚೇರಿ ಸ್ಥಾಪಿಸುವ ಸಂಬಂಧ ಅಂಚೆ ಇಲಾಖೆಯ ಪ್ರಧಾನ ಅಂಚೆ ವ್ಯವಸ್ಥಾಪಕರಿಗೂ ಪ್ರಸ್ತಾವ ಸಲ್ಲಿಸಲಾಗಿದೆ. ಈ ಬಗ್ಗೆ ಸ್ಥಳ ಪರಿಶೀಲನೆ ನಡೆದಿದ್ದು, ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ ಎಂದರು.

ರಸಬಾಳೆ ಉಳಿವಿಗೆ ಸಂಶೋಧನಾ ಕೇಂದ್ರ
`ರಸಬಾಳೆ, ಮಲ್ಲಿಗೆ ಹಾಗೂ ವೀಳ್ಯದ ಎಲೆ ಸಂರಕ್ಷಿಸುವ ಸಂಬಂಧ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸಂಶೋಧನಾ ಕೇಂದ್ರ ತೆರೆಯಲು ಭಾರತೀಯ ಕೃಷಿ ಅನುಸಂಧಾನ ಪರಿಷತ್‌ಗೆ ಕೋರಲಾಗಿದೆ~ ಎಂದು ಧ್ರುವನಾರಾಯಣ ತಿಳಿಸಿದರು.

ಪರಿಷತ್‌ನಡಿಯೇ ಕೃಷಿ ವಿಜ್ಞಾನ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. ಕೇಂದ್ರಕ್ಕೆ ಮೀಸಲಾದ ಅರ್ಧ ಎಕರೆ ಜಮೀನಿನ ಒತ್ತುವರಿ ಕೂಡ ನಡೆದಿದೆ. ಸಂಬಂಧಪಟ್ಟ ಖಾಸಗಿ ವ್ಯಕ್ತಿಗೆ ನೋಟಿಸ್ ಜಾರಿಗೊಳಿಸಿ ತೆರವುಗೊಳಿಸಲು ಜಿಲ್ಲಾಧಿಕಾರಿಗೆ ಸೂಚಿಸಲಾಗಿದೆ. ಜಿಲ್ಲೆಯಲ್ಲಿ ಯಾವುದೇ ಸಂಶೋಧನಾ ಕೇಂದ್ರವಿಲ್ಲ. ಹೀಗಾಗಿ, ಹತ್ತಿ ಸಂಶೋಧನಾ ಕೇಂದ್ರ ಮಂಜೂರಿಗೆ ಪರಿಷತ್‌ನ ಮಹಾ ಕಾರ್ಯದರ್ಶಿಯೊಂದಿಗೆ ಚರ್ಚಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT