ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಶಿಕ್ಷಣ ಪ್ರತಿಷ್ಠೆಗೆ ಧಕ್ಕೆ

Last Updated 15 ಜನವರಿ 2012, 19:30 IST
ಅಕ್ಷರ ಗಾತ್ರ


ಉನ್ನತ ಮತ್ತು ತಾಂತ್ರಿಕ ಶಿಕ್ಷಣಕ್ಕೆ ಆದ್ಯತೆ ನೀಡುತ್ತಿರುವ ರಾಜ್ಯ ಸರ್ಕಾರ, ಶಿಕ್ಷಣ ಸಂಸ್ಥೆಗಳ ಸುಗಮ ಆಡಳಿತ ನಿರ್ವಹಣೆಗಾಗಿ ವಿಷಯವಾರು ವಿಶ್ವವಿದ್ಯಾಲಯಗಳನ್ನು ಆರಂಭಿಸಿದೆ.

ಎಂಜಿನಿಯರಿಂಗ್ ಶಿಕ್ಷಣಕ್ಕೆ ಪ್ರತ್ಯೇಕವಾದ ವಿಶ್ವವಿದ್ಯಾಲಯವನ್ನು ಅಸ್ತಿತ್ವಕ್ಕೆ ತಂದಿದ್ದು ರಾಜ್ಯದ ಇನ್ನೂರಕ್ಕೂ ಹೆಚ್ಚಿನ ಎಂಜಿನಿಯರಿಂಗ್ ಕಾಲೇಜುಗಳು ಈ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಬಂದಿವೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರವು ಸೃಷ್ಟಿಸಿರುವ ಉದ್ಯೋಗದ ಅವಕಾಶಗಳ ಹಿನ್ನೆಲೆಯಲ್ಲಿ ತಾಂತ್ರಿಕ ಶಿಕ್ಷಣಕ್ಕೆ ಹೆಚ್ಚಿನ ಬೇಡಿಕೆಯೂ ಸೃಷ್ಟಿಯಾಗಿರುವುದರಿಂದ ಈ ವಿಶ್ವವಿದ್ಯಾಲಯಕ್ಕೆ ಪ್ರತಿಷ್ಠಿತ ಸ್ಥಾನವೇ ಇದೆ.

ಆದರೆ, ವಿಶ್ವವಿದ್ಯಾಲಯದ ಗೌರವಕ್ಕೆ ತಕ್ಕಂತೆ ಅರ್ಹ ವ್ಯಕ್ತಿಯನ್ನು ಕುಲಪತಿಯಾಗಿ ನೇಮಿಸುವಲ್ಲಿ ಸರ್ಕಾರ ಜವಾಬ್ದಾರಿಯಿಂದ ನಡೆದುಕೊಂಡಿಲ್ಲವೆಂಬುದು ಈಗ ಬಯಲಾಗುತ್ತಿದೆ.

ಈ ವಿಶ್ವವಿದ್ಯಾಲಯದ ಕುಲಪತಿ ಗಳಿಸಿದ ಪದವಿ ಪ್ರಥಮ ದರ್ಜೆಯದೊ, ಎರಡನೇ ದರ್ಜೆಯದೋ ಎಂಬುದನ್ನು, ಅವರನ್ನು ನೇಮಕ ಮಾಡಿದ ಕುಲಾಧಿಪತಿಗಳಾದ ರಾಜ್ಯಪಾಲರು ನಿರ್ಧರಿಸಲಿ ಎಂಬ ಸೂಚನೆಯನ್ನು, ಈ ಸಂಬಂಧ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಈ ಪ್ರಕರಣದ ವಿಚಾರಣೆ ಹೈಕೋರ್ಟಿನಲ್ಲಿ ನಡೆಯುತ್ತಿದ್ದಾಗಲೇ, ಕುಲಪತಿಯಾಗಿ ನೇಮಕಗೊಂಡಿದ್ದ ವ್ಯಕ್ತಿ ತಮ್ಮ ಎಂಜಿನಿಯರಿಂಗ್ ಪದವಿಯ ಹತ್ತು ಸೆಮಿಸ್ಟರ್‌ಗಳಲ್ಲಿ ತೇರ್ಗಡೆಯಾಗಲು ಒಟ್ಟು 25 ಪ್ರಯತ್ನಗಳನ್ನು ತೆಗೆದುಕೊಂಡಿದ್ದರೆಂಬ ಅಂಶ ಮಾಹಿತಿ ಹಕ್ಕು ಕಾಯ್ದೆ ಅನ್ವಯ ಬಯಲಿಗೆ ಬಂದಿತ್ತು.

 ಅನುಮಾನಕ್ಕೆ ಎಡೆ ಕೊಡುವಂಥ ಶೈಕ್ಷಣಿಕ ಅರ್ಹತೆ ಇದ್ದ ವ್ಯಕ್ತಿಯನ್ನು ಕುಲಪತಿ ಸ್ಥಾನಕ್ಕೆ ನೇಮಕ ಮಾಡಿರುವ ಸರ್ಕಾರದ ಕ್ರಮ ವಿವೇಚನೆಯಿಂದ ಕೂಡಿಲ್ಲ ಎಂಬುದು ಇದರಿಂದ ಸ್ಪಷ್ಟ.

ಕುಲಪತಿ ಹುದ್ದೆಗೆ ನೇಮಕಗೊಳ್ಳುವ ವ್ಯಕ್ತಿಯ ಶೈಕ್ಷಣಿಕ ಅರ್ಹತೆ ಮತ್ತು ಸಂಶೋಧನಾ ಪ್ರತಿಭೆ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕವಾಗಿರಬೇಕು ಎಂಬುದನ್ನು ಅಭ್ಯರ್ಥಿಗಳನ್ನು ಗುರುತಿಸಿದ ಸರ್ಕಾರವಾಗಲೀ, ಅದಕ್ಕೆ ಅನುಮತಿ ನೀಡಿದ ರಾಜ್ಯಪಾಲರಾಗಲೀ ಗಮನಿಸದೆ ಇರುವುದು ಬೇಜವಾಬ್ದಾರಿಯ ಪರಮಾವಧಿ.

ಇದರಿಂದ ತಾಂತ್ರಿಕ ಶಿಕ್ಷಣ ಕ್ಷೇತ್ರ ದುರ್ಬಲಗೊಳ್ಳುತ್ತದೆ. ಇದರ ಹೊಣೆಯನ್ನು ಕುಲಾಧಿಪತಿಗಳಾದ ರಾಜ್ಯಪಾಲರೇ ಹೊರಬೇಕಾಗಿದೆ. ಹಾಗೆ ನೋಡಿದರೆ ರಾಜ್ಯದಲ್ಲಿ ಈಚಿನ ವರ್ಷಗಳಲ್ಲಿ ಅಸ್ತಿತ್ವಕ್ಕೆ ಬಂದ ಎಲ್ಲ ವಿಶ್ವವಿದ್ಯಾಲಯಗಳೂ ಬಗೆಬಗೆಯ ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿವೆ.

ಕುಲಪತಿ ಸ್ಥಾನಕ್ಕೆ ಆಯ್ಕೆ ಮಾಡುವಾಗ ಸಾಮಾಜಿಕ ನ್ಯಾಯದ ಅನ್ವಯ ಎಲ್ಲ ವರ್ಗಕ್ಕೆ ನೀಡುತ್ತಿದ್ದ ಪ್ರಾತಿನಿಧ್ಯದ ಪರಿಪಾಠ ಮಾಯವಾಗಿದೆ. ವಿಶ್ವವಿದ್ಯಾಲಯಗಳಲ್ಲಿ ನೇಮಕಗಳಿಗೆ ಕಟ್ಟುನಿಟ್ಟಿನ ನಿಯಮಗಳಿವೆ.

ಆದರೆ, ಎಲ್ಲ ವಿಶ್ವವಿದ್ಯಾಲಯಗಳಲ್ಲೂ ನಿಯಮಗಳನ್ನು ಉಲ್ಲಂಘಿಸಿ ಇಲ್ಲವೇ ನಿರ್ಲಕ್ಷಿಸಿ ನೇಮಕಗಳಾಗಿವೆ. ಕೆಲವು ಕಡೆ ಪ್ರಕರಣಗಳು ಹೈಕೋರ್ಟ್ ಮೆಟ್ಟಿಲೇರಿವೆ. ಇನ್ನೂ ಕೆಲವು ಕಡೆ ವಿಚಾರಣೆಗಳು ನಡೆದು ಸರ್ಕಾರಕ್ಕೆ ವರದಿಗಳು ಸಲ್ಲಿಕೆಯಾಗಿವೆ.

ಯಾವ ಸಂದರ್ಭದಲ್ಲೂ ವರದಿಗಳನ್ನು ಆಧರಿಸಿ ಕ್ರಮಗಳನ್ನು ಕೈಗೊಂಡಿಲ್ಲ. ಬಯಲಿಗೆ ಬಂದ ಎಲ್ಲ ಅವ್ಯವಹಾರಗಳ ಬಗ್ಗೆಯೂ ಸರ್ಕಾರದ ಕಡೆಯಿಂದ ದಿವ್ಯ ನಿರ್ಲಕ್ಷ್ಯ.

ಇಂಥ ಪರಿಸ್ಥಿತಿಯನ್ನು ಮೂಕ ಪ್ರೇಕ್ಷಕನಂತೆ ನೋಡುತ್ತಿರುವ ಉನ್ನತ ಶಿಕ್ಷಣ ಇಲಾಖೆ ಪ್ರಮುಖ ಅಧಿಕಾರಿಗಳ ಹುದ್ದೆಗಳೂ, ಸಚಿವ ಸ್ಥಾನವೂ ಅಪ್ರಸ್ತುತವೆನಿಸುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT