ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಶಿಕ್ಷಣ ಮಸೂದೆ ಜಾರಿಗೆ ವಿರೋಧ

Last Updated 12 ಜುಲೈ 2012, 5:20 IST
ಅಕ್ಷರ ಗಾತ್ರ

ಹಿರಿಯೂರು: ನಗರದಲ್ಲಿ ಬುಧವಾರ ತಾಲ್ಲೂಕು ವಕೀಲರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಉನ್ನತ ಶಿಕ್ಷಣ ಮಸೂದೆ -2011, ಉನ್ನತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ನಿಗದಿತ ಪ್ರಾಧಿಕಾರ ಮಸೂದೆ -2010, ಹೊರದೇಶದ ಶಿಕ್ಷಣ ಸಂಸ್ಥೆಗಳು (ಪ್ರವೇಶ ಮತ್ತು ಕ್ರಮ ವಹಿಸುವಿಕೆ) ಮಸೂದೆ 2010, ಶೈಕ್ಷಣಿಕ ಮಂಡಳಿಯ ಮಸೂದೆ -2010, ರಾಷ್ಟ್ರೀಯ ಕಾನೂನು ಶಾಲಾ ಮಸೂದೆ -2011, ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ -2012 ಜಾರಿಗೊಳಿಸಬಾರದು ಎಂದು  ಒತ್ತಾಯಿಸಲಾಯಿತು.

ಈ ಮಸೂದೆಗಳು ಈಗಾಗಲೇ ರಾಜ್ಯ ಸಭೆಯಲ್ಲಿ ಅಂಗೀಕಾರವಾಗಿದ್ದು, ಇವನ್ನು ಜಾರಿ ಮಾಡಬಾರದು ಎಂದು ದೇಶದಾದ್ಯಂತ ಎಲ್ಲಾ ನ್ಯಾಯಾಲಯಗಳ ವಕೀಲರು ಕಲಾಪಗಳಿಂದ ದೂರ ಉಳಿದಿದ್ದು, ಹಿರಿಯೂರಿನಲ್ಲೂ ಈ ಹೋರಾಟಕ್ಕೆ ಬೆಂಬಲ ಸೂಚಿಸಲಾಗಿದೆ. ಮೇಲೆ ಹೇಳಿರುವ ಮಸೂದೆಗಳನ್ನು ಕೇಂದ್ರ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಬರುವ ಮುಂಗಾರು ಅಧಿವೇಶನದಲ್ಲಿ ಮಂಡಿಸಲಿದ್ದು, ಇಂತಹ ಮಸೂದೆಗಳನ್ನು ವಕೀಲರ ಪರಿಷತ್ತು ಹಾಗೂ ವಕೀಲರ ದೃಷ್ಟಿಯಿಂದ ಹಿಂದಕ್ಕೆ ಪಡೆಯಬೇಕು ಎಂದು ವಕೀಲರ ಸಂಘದ ಅಧ್ಯಕ್ಷ ಟಿ. ರಂಗನಾಥ್ ಆಗ್ರಹಿಸಿದರು.

ತಹಶೀಲ್ದಾರ್ ಮೂಲಕ ಪ್ರಧಾನ ಮಂತ್ರಿಗೆ, ಉನ್ನತ ಶಿಕ್ಷಣ ಸಚಿವ ಮತ್ತು ಸಂಸತ್ ಸದಸ್ಯರಿಗೆ ಸಲ್ಲಿಸಲಾಯಿತು.
ಸಹ ಕಾರ್ಯದರ್ಶಿ ಎಂ.ಆರ್. ಪ್ರಭಾಕರ್, ಶೇಷಾದ್ರಿ, ಸಂಜಯ್, ಮಂಜುನಾಥ್, ಜಿ. ರಮೇಶ್, ಸಣ್ಣಪ್ಪ, ಜಿ. ಪ್ರಭುಶಂಕರ್, ರಾಜಣ್ಣ, ನಿಂಗಣ್ಣ, ಹೊನ್ನೂರ್‌ಸಾಬ್, ಮೋಹನ್, ಲೋಕೇಶ್ ಹಾಜರಿದ್ದರು.

ವಕೀಲರ ಪ್ರತಿಭಟನೆ
ಮೊಳಕಾಲ್ಮುರು:
ನೂತನವಾಗಿ ಕೇಂದ್ರ ಸರ್ಕಾರ ಜಾರಿ ಮಾಡಲು ಉದ್ದೇಶಿಸಿರುವ ಕಾಯ್ದೆಗಳನ್ನು ಕಾರ್ಯರೂಪಕ್ಕೆ ತರುವುದನ್ನು ಸ್ಥಗಿತ ಮಾಡಬೇಕು ಎಂದು ತಾಲ್ಲೂಕು ವಕೀಲರ ಸಂಘ ಬುಧವಾರ ತಾಲ್ಲೂಕು ಆಡಳಿತಕ್ಕೆ ಮನವಿ ಸಲ್ಲಿಸಿತು.

ಈಚೆಗೆ ರಾಜ್ಯಸಭೆಯಲ್ಲಿ ಅಂಗೀಕಾರವಾಗಿರುವ ಉನ್ನತ ಶಿಕ್ಷಣ ಮಸೂದೆ-2011, ಉನ್ನತ ಶಿಕ್ಷಣ ಸಂಸ್ಥೆಗಳ ರಾಷ್ಟ್ರೀಯ ನಿಗದಿತ ಪ್ರಾಧಿಕಾರ ಮಸೂದೆ-2010, ಶೈಕ್ಷಣಿಕ ಮಸೂದೆ-2010, ಹೊರದೇಶ ಶಿಕ್ಷಣ ಸಂಸ್ಥೆಗಳ ಮಸೂದೆ-2010, ರಾಷ್ಟ್ರೀಯ ಕಾನೂನು ಶಾಲಾ ಮಸೂದೆ-2011, ಮೋಟಾರು ವಾಹನ ಕಾಯ್ದೆ (ತಿದ್ದುಪಡಿ) ಕಾಯ್ದೆ-2012ಗಳನ್ನು ನವೀಕರಣಗೊಳಿಸಿ ಜಾರಿ ಮಾಡಬಾರದು ಎಂದು ವಕೀಲರು ಮನವಿ ಮಾಡಿದರು.

ಕಾಯ್ದೆಗಳು ಜಾರಿಯಾದಲ್ಲಿ ವಕೀಲರ ವೃತ್ತಿಗೆ ಮಾರಕವಾಗಿದೆ. ಆದ್ದರಿಂದ, ಉನ್ನತ ಶಿಕ್ಷಣ ಸಚಿವರು ಮುಂಗಾರು ಅಧಿವೇಶನದಲ್ಲಿ ಈ ಕಾಯ್ದೆಗಳನ್ನು ಜಾರಿಗೆ ತರುವ ಸಂಬಂಧ ವಿಷಯ ಮಂಡನೆ ಮಾಡಬಾರದು ಎಂದು ಆಗ್ರಹಿಸಿ ಈ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಅವರು ಹೇಳಿದರು.


ಇದಕ್ಕೂ ಮುನ್ನ ವಕೀಲರು ನ್ಯಾಯಾಲಯ ಆವರಣದಿಂದ ತಾಲ್ಲೂಕು ಕಚೇರಿ ತನಕ ಮೆರವಣಿಗೆಯಲ್ಲಿ ಆಗಮಿಸಿದರು. ತಹಶೀಲ್ದಾರ್ ಎಂ.ಪಿ. ಮಾರುತಿ ಅವರಿಗೆ ಮನವಿಪತ್ರ ಮನವಿ ಸಲ್ಲಿಸಲಾಯಿತು.
ವಕೀಲರ ಸಂಘದ ಅಧ್ಯಕ್ಷ ಆರ್.ಎಂ. ಅಶೋಕ್, ಕಾರ್ಯದರ್ಶಿ ಶಿವರುದ್ರಪ್ಪ, ಮುದ್ದಣ್ಣ, ಎಚ್. ಚಂದ್ರಣ್ಣ, ಬಿ. ಒಳಮಠ್, ವಿ.ಜಿ. ಪರಮೇಶ್ವರಪ್ಪ, ಎಂ.ಎನ್. ವಿಜಯಲಕ್ಷ್ಮೀ, ಪಿ.ಜಿ. ವಸಂತಕುಮಾರ್ ನೇತೃತ್ವ ವಹಿಸಿದ್ದರು.

ಕಲಾಪದಿಂದ ಹೊರಗೆ

ಹೊಸದುರ್ಗ
: ಉನ್ನತ ಶಿಕ್ಷಣ ಮಸೂದೆ 2011 ಹಾಗೂ ಇನ್ನಿತರ ಮಸೂದೆಗಳನ್ನು ಅಂಗೀಕರಿಸದಂತೆ ಒತ್ತಾಯಿಸಿ ಬುಧವಾರ ಇಲ್ಲಿನ ವಕೀಲರು ನ್ಯಾಯಾಲಯ ಕಲಾಪ ಬಹಿಷ್ಕರಿಸಿದರು. 

ಭಾರತೀಯ ವಕೀಲರ ಪರಿಷತ್ ಹಾಗೂ ರಾಜ್ಯ ವಕೀಲರ ಪರಿಷತ್ ಕರೆಯ ಮೇರೆಗೆ ತಾಲ್ಲೂಕು ವಕೀಲರ ಸಂಘದ ಪದಾಧಿಕಾರಿಗಳು, ವಕೀಲರು, ವಿವಿಧ ಮಸೂದೆಗಳನ್ನು ಅಂಗೀಕರಿಸದಂತೆ ಒತ್ತಾಯಿಸಿ ನ್ಯಾಯಾಲಯದ ಕಲಾಪಗಳಿಂದ ದೂರ ಉಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT