ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಶಿಕ್ಷಣದಲ್ಲಿ ಜನಮುಖಿ ಸಂಶೋಧನೆ

Last Updated 22 ಜುಲೈ 2012, 19:30 IST
ಅಕ್ಷರ ಗಾತ್ರ

ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ದೊರೆಯುತ್ತಿದೆ. ಜಿಲ್ಲೆಗೊಂದರಂತೆ ವಿವಿಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಉತ್ತೇಜಿಸುತ್ತಿದೆ. ಬೇರೆಯವರ ಹೊಟ್ಟೆ ಉರಿಗೆ ಕಾರಣವಾಗುವಷ್ಟು ಪ್ರಮಾಣದಲ್ಲಿ ವಿವಿ ಶಿಕ್ಷಕರ ಸಂಬಳ- ಭತ್ಯೆಗಳನ್ನು ಹೆಚ್ಚಿಸಲಾಗಿದೆ.

ಸಂಶೋಧನಾ ಚಟುವಟಿಕೆಗಳನ್ನು ಉತ್ತೇಜಿಸಲು ವಿಶ್ವವಿದ್ಯಾಲಯ ಧನ ಸಹಾಯ ಆಯೋಗ (ಯುಜಿಸಿ) ಸಾಕಷ್ಟು ಹಣಕಾಸಿನ ನೆರವು ನೀಡುತ್ತಿದೆ. ಉನ್ನತ ಶಿಕ್ಷಣಕ್ಕೆ ಸರ್ಕಾರದ ಹೆಚ್ಚಿನ ಪ್ರೋತ್ಸಾಹ ಶ್ಲಾಘನೀಯ.

ವಿವಿ ಪ್ರಾಧ್ಯಾಪಕರುಗಳಿಗೆ ಉಚಿತ ಲ್ಯಾಪ್‌ಟಾಪ್ ನೀಡುವುದು ಸೇರಿದಂತೆ ಅನೇಕ ಸವಲತ್ತುಗಳನ್ನು ಕಲ್ಪಿಸಲಾಗುತ್ತಿದೆ. ಜೊತೆಗೆ ವಿಶೇಷ ಸಂಶೋಧನೆ ಕೈಗೊಳ್ಳಲೆಂದು ಯುಜಿಸಿ ಸಂಶೋಧನಾ ನೆರವು ಒದಗಿಸುತ್ತಿದೆ. ಒಂದು ಲಕ್ಷದಿಂದ ಹಿಡಿದು ಒಂದು ಕೋಟಿ ರೂಪಾಯಿ ವರೆಗೆ ವಿವಿಧ ಪ್ರಾಜೆಕ್ಟ್‌ಗಳಿಗೆ ಯುಜಿಸಿ ಅನುದಾನ ಪಡೆಯಬಹುದು.

ಇವು ಸಮರ್ಪಕವಾಗಿ ನಡೆಯಲೆಂದೇ ಎಲ್ಲರ ಅಪೇಕ್ಷೆ. ಆದರೆ ಬಹುತೇಕ ವಿವಿಗಳಲ್ಲಿ ಯುಜಿಸಿ ಪ್ರಾಯೋಜಿತ ಸಂಶೋಧನೆಗಳಿಗೆ ಉತ್ತರದಾಯಿತ್ವ ಇಲ್ಲದಂತಾಗಿದೆ. ಹಾಗಾಗಿ ಹಣಕಾಸಿನ ನೆರವು ಸಾಕಷ್ಟು ಹರಿದು ಬಂದರೂ ಸಂಶೋಧನೆಯ ಫಲಿತಾಂಶ ಮಾತ್ರ ಅರ್ಥಪೂರ್ಣವಾಗಿ ಹೊರಬರುತ್ತಿಲ್ಲ.

ಏಕೆಂದರೆ ವಿವಿಗಳಲ್ಲಿ ನಡೆಯುವ ಸಂಶೋಧನೆಗಳು ಜನಮುಖಿ ಆಗುತ್ತಿಲ್ಲ. ಇದು ಆಗಬೇಕಾದರೆ ಯುಜಿಸಿ ಪ್ರಾಯೋಜಿತ ಸಂಶೋಧನಾ ಪ್ರಾಜೆಕ್ಟ್‌ಗಳ ಮೇಲೆ ಆಯಾ ವಿವಿ ಮುಖ್ಯಸ್ಥರ ಕನಿಷ್ಠ ಪ್ರಮಾಣದ ನಿಯಂತ್ರಣವಾದರೂ ಇರಬೇಕು.
 
ವಿವಿ ಕುಲಪತಿಗಳ ಅಧ್ಯಕ್ಷತೆಯಲ್ಲಿ ಸಂಶೋಧನಾ ಗುಣಮಟ್ಟ ಪರಿಶೀಲನೆಗೆಂದೇ ಉನ್ನತ ಮಟ್ಟದ ಸಮಿತಿ ರಚಿಸಬೇಕು. ಆದರೆ ಸದ್ಯದ ವ್ಯವಸ್ಥೆಯಲ್ಲಿ ಸಂಶೋಧನೆಗೆಂದು ಹಣ ಪಡೆಯುವವರು ಯುಜಿಸಿಯೊಂದಿಗೆ ನೇರ ವ್ಯವಹರಿಸುತ್ತಾರೆ. ಲೆಕ್ಕಪತ್ರದ ವಿವರ ಸಲ್ಲಿಸಿ ಯೋಜನೆ ಮುಗಿಯಿತು ಎಂದು ಕೈತೊಳೆದುಕೊಳ್ಳುತ್ತಾರೆ.

ಸಂಶೋಧಕ ಸಂಶೋಧನೆಗೆಂದು ಯುಜಿಸಿಯಿಂದ ನೆರವು ಪಡೆದ ಮೇಲೆ ಅದರ ಫಲಿತಾಂಶವನ್ನು ವಿವಿಗೆ ಮತ್ತು ಆ ಭಾಗದ ಜನತೆಗೆ ತಿಳಿಯುವಂತೆ ಮಾಡುವ ವ್ಯವಸ್ಥೆ ಇಲ್ಲ. ಯುಜಿಸಿ ಪ್ರಾಯೋಜಿತ ಸಂಶೋಧನಾ ಯೋಜನೆಗಳು ವ್ಯಕ್ತಿಗತ ನೆಲೆಯಲ್ಲೇ `ಕಣ್ಮರೆ~ಯಾಗುತ್ತವೆ.

ಸಂಶೋಧನೆಯ ಫಲಿತಗಳ ಬಗ್ಗೆ ಯಾವ ವೇದಿಕೆಯಲ್ಲೂ ಚರ್ಚೆಯಾಗದೇ ಇರುವುದರಿಂದ ಬಹುತೇಕ ಸಂಶೋಧಕರು ಹೊಣೆಗಾರಿಕೆ ಪ್ರದರ್ಶಿಸುವುದಿಲ್ಲ. `ನಾನು ಯಾರಿಗೂ ಉತ್ತರಿಸಬೇಕಿಲ್ಲ~ ಎಂಬ ಸಂಶೋಧಕರ ಮನೋಭಾವವೇ ಸಂಶೋಧನೆಗಳು ಹಾದಿ ತಪ್ಪುವಂತೆ ಮಾಡುತ್ತವೆ.

ಈಗ ಕರ್ನಾಟಕದ ವಿವಿಗಳ ಪರಿಸ್ಥಿತಿಯನ್ನೇ ನೋಡಿ. ಗುಲ್ಬರ್ಗ ವಿವಿ ವ್ಯಾಪ್ತಿಯ ಜಿಲ್ಲೆಗಳಲ್ಲಿ ತೊಗರಿ ಮತ್ತು ಹತ್ತಿ ಹೆಚ್ಚು ಪ್ರಮಾಣದಲ್ಲಿ ಬೆಳೆಯುತ್ತಾರೆ. ತೊಗರಿ ಬೆಳೆಯುವ ರೈತ ಪ್ರತಿ ವರ್ಷ ಸಮಸ್ಯೆಗಳನ್ನು ಎದುರಿಸುತ್ತಲೇ ಇರುತ್ತಾನೆ.

ಒಮ್ಮೆ ಕಾಯಿಕೊರಕ ಹುಳುವಿನಿಂದ ಸಮಸ್ಯೆಯಾದರೆ ಇನ್ನೊಮ್ಮೆ ತೊಗರಿಗೆ ಗೊಡ್ಡು ರೋಗ ಬಾಧಿಸುತ್ತದೆ. ಬೀದರ್ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರು ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಲೇ ಇರುತ್ತಾರೆ. ಚಿಕ್ಕಮಗಳೂರು ಭಾಗದ ಕಾಫಿ ಬೆಳೆಗಾರರೂ ಸಮಸ್ಯೆಗಳಿಂದ ಹೊರತಲ್ಲ.

ಹೀಗಾಗಿ ಪಿಎಚ್‌ಡಿ ಸಂಶೋಧನೆಗಳು ಇಂಥವುಗಳ ಕಡೆ ವಾಲಿದರೆ ಜನರಿಗೂ ಅನುಕೂಲ. ವಿವಿ ವ್ಯಾಪ್ತಿಯ ಜನಸಾಮಾನ್ಯರು, ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಸಮರ್ಪಕ ಉತ್ತರ ಕಂಡುಕೊಳ್ಳಲು ಸಂಶೋಧಕರಿಂದ ಸಾಧ್ಯವಾದರೆ ಅಷ್ಟರಮಟ್ಟಿಗೆ ಸಂಶೋಧನೆಗೆಂದು ಖರ್ಚು ಮಾಡಿದ ಹಣದ ಸದ್ಬಳಕೆಯಾದಂತೆ.

ಉತ್ತರ ಕರ್ನಾಟಕದಲ್ಲಿ ವೃತ್ತಿರಂಗಭೂಮಿ ಕಲಾವಿದರು ಗಣನೀಯ ಸಾಧನೆ ಮಾಡಿದ್ದಾರೆ. ಪ್ರತಿ ವೃತ್ತಿ ನಾಟಕದ ಕಂಪೆನಿಯ ಹಿಂದೆ ಕಣ್ಣೀರ ಕತೆಗಳಿವೆ. ಕಂಪೆನಿ ನಾಟಕಗಳ ಸಾಧನೆ, ಸಿದ್ಧಿ, ವೈಫಲ್ಯಗಳ ಕಥಾನಕವನ್ನು ಸಂವೇದನಾಶೀಲ ಸಂಶೋಧಕರು ಅಧ್ಯಯನಕ್ಕೆ ಒಳಪಡಿಸಿದರೆ ರಂಗಭೂಮಿಯ ಮಹತ್ವ ಎತ್ತಿ ಹಿಡಿದಂತಾಗುತ್ತದೆ.

ಸಂಶೋಧನೆಗಳು ಜನಮುಖಿಯಾದಾಗಲೇ ಅವುಗಳ ಗುಣಮಟ್ಟವೂ ಸುಧಾರಿಸುತ್ತದೆ. ಸಂಶೋಧನೆಯ ಫಲಿತವನ್ನು ಯಾರೂ ಗಮನಿಸದೇ ಹೋದಾಗ ಆತ/ ಆಕೆ ಮಾಡಿದ್ದೇ `ಸಂಶೋಧನೆ~ ಎನಿಸಿಕೊಳ್ಳುತ್ತದೆ. ಸಂಶೋಧನೆಯ ಫಲಿತಾಂಶವನ್ನು ಜನರೆದುರು ಇಡಬೇಕಾಗುತ್ತದೆ ಎಂದಾಗ ಸಂಶೋಧಕರು ಜವಾಬ್ದಾರಿಯಿಂದ ತನ್ನ ಪಾಲಿನ ಕರ್ತವ್ಯ ನಿರ್ವಹಿಸುತ್ತಾರೆ.

ಅದಕ್ಕಾಗಿ ಯುಜಿಸಿ ನೆರವಿನ ಪ್ರಾಜೆಕ್ಟ್‌ಗಳ ವಿವರ ಸಾರ್ವಜನಿಕರ ಮಾಹಿತಿಗಾಗಿ ಮಾಧ್ಯಮಗಳಲ್ಲಿ ಬಿಡುಗಡೆ ಮಾಡಬೇಕು. ಇದರಲ್ಲಿ ಸಮಾಜಕ್ಕೆ ಯಾವ ಪ್ರಯೋಜನ ಇದೆ ಎನ್ನುವುದರ ಸಮರ್ಥನೆಯೂ ಅಡಕವಾಗಿರಬೇಕು.

ಸಾಹಿತ್ಯ-ಸಂಸ್ಕೃತಿ-ಸಮಾಜ ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗಳಾದರೆ ಒಂದಲ್ಲ ಒಂದು ಬಗೆಯಲ್ಲಿ ಜನತೆಗೆ ಗೊತ್ತಾಗುತ್ತವೆ. ಅನ್ವಯಿಕ ವಿಜ್ಞಾನ ವಿಷಯಗಳ `ಸಂಶೋಧನೆ~ ಯಾವ ದಿಕ್ಕಿನಲ್ಲಿ ಸಾಗಿದೆ ಎನ್ನುವುದು ಮಾತ್ರ ಯಾರಿಗೂ ತಿಳಿಯುತ್ತಿಲ್ಲ. ಇಂಟರ್‌ನೆಟ್‌ನಲ್ಲಿ ವಿಪುಲ ಮಾಹಿತಿ ಲಭ್ಯವಾಗುತ್ತಿದೆ. ಇಂಟರ್‌ನೆಟ್‌ನಲ್ಲಿ ದೊರೆಯುವ ಯಾವುದೋ ದೇಶದ ಮಾಹಿತಿಯನ್ನೇ `ಇದು ನನ್ನ ಸಂಶೋಧನೆ~ ಎಂದು ಹೇಳಿದರೆ ಯಾರಿಗೆ ತಾನೆ ಗೊತ್ತಾಗುತ್ತದೆ?

ಸಂಶೋಧನೆಗಳು ಜನಮುಖಿಯಾಗದ ಹೊರತು, ಅವುಗಳ ಗುಣಮಟ್ಟ ಸುಧಾರಿಸಲಾಗದು. ಆದರೆ ಉತ್ತರಿಸಬೇಕಾದ ಹೊಣೆಗಾರಿಕೆ ಇಲ್ಲದ ಯಾವ ಚಟುವಟಿಕೆಯೂ ಗುಣಮಟ್ಟದ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.
(ಲೇಖಕರ ಮೊಬೈಲ್ 94804 09732)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT