ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉನ್ನತ ಶಿಕ್ಷಣದಲ್ಲಿ ಸಹಭಾಗಿತ್ವ

Last Updated 22 ಜನವರಿ 2012, 19:30 IST
ಅಕ್ಷರ ಗಾತ್ರ

ಉನ್ನತ ಶಿಕ್ಷಣ, ಸಂಶೋಧನೆ ಮತ್ತಿತರ ಕ್ಷೇತ್ರಗಳಲ್ಲಿ ಖಾಸಗಿ ವಲಯದ ಸಹಭಾಗಿತ್ವಕ್ಕೆ ಮುಕ್ತ ಅವಕಾಶ ಇರಬೇಕು ಎಂಬುದು ಈ ಕಾಲದ ನಿರೀಕ್ಷೆ. ಈ ಕ್ಷೇತ್ರಗಳಿಗೆ ಬೇಕಾದ ಹಣಕಾಸಿನ ನೆರವನ್ನು ಸರ್ಕಾರವೇ ಪೂರೈಸಬೇಕು ಎಂದು ಈಗ ನಿರೀಕ್ಷಿಸುವಂತಿಲ್ಲ.

ಜಾಗತೀಕರಣದ ನಂತರ ಖಾಸಗಿ ವಲಯ ಬಲಗೊಳ್ಳುತ್ತಿದೆ. ಜನಜೀವನಕ್ಕೆ ಸಂಬಂಧಿಸಿದ ಬಹುತೇಕ ಕ್ಷೇತ್ರಗಳು ಖಾಸಗೀಕರಣಗೊಂಡಿವೆ. ಉನ್ನತ ಶಿಕ್ಷಣ, ಸಂಶೋಧನೆಯ ಫಲಶ್ರುತಿಗಳನ್ನು ಖಾಸಗಿ ವಲಯವೂ ಹೆಚ್ಚಾಗಿ ಬಳಸಿಕೊಳ್ಳುತ್ತಿದೆ. ಹೀಗಾಗಿ ಈ ಕ್ಷೇತ್ರಗಳ ಅಭಿವೃದ್ಧಿಗೆ ಬೇಕಾದ ಆರ್ಥಿಕ ನೆರವನ್ನು ಪೂರೈಸುವ ಜವಾಬ್ದಾರಿ ಖಾಸಗಿ ವಲಯದ ಮೇಲಿದೆ. ಈ ಹಿನ್ನೆಲೆಯಲ್ಲಿ ವಿಶ್ವ ವಿದ್ಯಾಲಯಗಳೂ ಸೇರಿದಂತೆ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಖಾಸಗಿ ಸಹಭಾಗಿತ್ವಕ್ಕೆ ಹೆಚ್ಚಿನ ಅವಕಾಶಗಳಿರಬೇಕು. ವಿಪರ್ಯಾಸದ ಸಂಗತಿ ಎಂದರೆ ಖಾಸಗಿ ವಲಯದ ಸಹಭಾಗಿತ್ವಕ್ಕೆ ವಿಶ್ವ ವಿದ್ಯಾಲಯಗಳ ನಿಯಮಾವಳಿಗಳು ಅಸ್ಪಷ್ಟವಾಗಿರುವುದು. ನಿಯಮಗಳ ಚೌಕಟ್ಟಿನಲ್ಲೇ ಖಾಸಗಿ ಸಹಭಾಗಿತ್ವಕ್ಕೆ ಅವಕಾಶ ಕೊಡುವ ಮಾತುಗಳು ಕೇಳಿ ಬರುತ್ತಿವೆ. ಖಾಸಗಿ ವಲಯದ ಆರ್ಥಿಕ ನೆರವು ಹೆಚ್ಚಾದರೆ ವಿಶ್ವವಿದ್ಯಾಲಯಗಳ ಹಿಡಿತ ಸಡಿಲವಾಗುತ್ತದೆ ಎಂಬ ಆತಂಕವಿದೆ. ಅದು ಸಹಜ.  ಈ ಹಿನ್ನೆಲೆಯಲ್ಲಿ  ಖಾಸಗಿ ಸಹಭಾಗಿತ್ವಕ್ಕೆ ಬೇಕಾದ ಪಾರದರ್ಶಕ ನಿಯಮಗಳನ್ನು ರೂಪಿಸುವ  ಅಗತ್ಯವಿದೆ. ಈ ವಿಷಯದಲ್ಲಿ ವಿವಿಗಳು ಮುಕ್ತ ಮನಃಸ್ಥಿತಿ ಬೆಳೆಸಿಕೊಳ್ಳಬೇಕು.

ವಿಶ್ವವಿದ್ಯಾಲಯಗಳಲ್ಲಿ ಈಗ ಹಣಕಾಸಿನ ಕೊರತೆಯಿಂದಾಗಿ ಉನ್ನತ ಶಿಕ್ಷಣದ ಹೊಸ ಕೋರ್ಸುಗಳು ಹಾಗೂ ಸಂಶೋಧನೆಗೆ ಹೆಚ್ಚಿನ ಅವಕಾಶಗಳಿಲ್ಲ. ಖಾಸಗಿ ಸಹಭಾಗಿತ್ವ ಸಿಕ್ಕರೆ ಉನ್ನತ ಶಿಕ್ಷಣ ಮತ್ತು ಸಂಶೋಧನೆಗೆ ಆದ್ಯತೆ ಸಿಗುತ್ತದೆ. ಆರ್ಥಿಕ ನೆರವು ನೀಡಲು ಮುಂದೆ ಬರುವ ಖಾಸಗಿ ಸಂಸ್ಥೆಗಳು ತಮ್ಮ ಬಂಡವಾಳ ವ್ಯರ್ಥವಾಗಬಾರದು ಎಂಬ ಹಿನ್ನೆಲೆಯಲ್ಲಿ ಕೆಲವು ಷರತ್ತುಗಳನ್ನು ಹಾಕುತ್ತವೆ. ಆದರೆ ಅಂತಹ ಷರತ್ತುಗಳು ವಿಶ್ವವಿದ್ಯಾಲಯದ ಸ್ವಾಯತ್ತತೆ ಮತ್ತು ಹಿತಾಸಕ್ತಿಗೆ ಧಕ್ಕೆಯಾಗುವಂತಿರಬಾರದು.

ಪರಸ್ಪರ ಸಂದೇಹಗಳಿಗೆ ಅವಕಾಶ ಇಲ್ಲದಂತೆ ಪಾರದರ್ಶಕ ನಿಯಮಗಳ ಚೌಕಟ್ಟಿನಲ್ಲಿ ಕೆಲಸ ಮಾಡಲು ಸಾಧ್ಯವಾದರೆ ಸರ್ಕಾರಿ ಹಾಗೂ ಖಾಸಗಿ ಎರಡೂ ವಲಯಗಳಿಗೆ ಅದರಿಂದ ಪ್ರಯೋಜನವಾಗುತ್ತದೆ. ಯಾವುದೇ ಖಾಸಗಿ ಸಂಸ್ಥೆ ವಿಶ್ವವಿದ್ಯಾಲಯದಲ್ಲಿ ಸಹಭಾಗಿತ್ವ ಪಡೆಯುವುದು ಸುಲಭವಾಗುವಂತೆ ನಿಯಮಗಳನ್ನು ಪಾರದರ್ಶಕವಾಗಿ ರೂಪಿಸಬೇಕು. ನಿಯಮಗಳು ಸರಳವಾಗಿದ್ದು ಅವುಗಳ ಅನುಷ್ಠಾನ ಪ್ರಾಮಾಣಿಕತೆಯಿಂದ ಕೂಡಿರುವ ವಿಶ್ವಾಸ ಮೂಡಿದರೆ ಖಾಸಗಿ ಸಹಭಾಗಿತ್ವದ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದೆ. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಅಸಕ್ತಿ ತೋರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT