ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ ಅಭ್ಯರ್ಥಿಗಳು ಕೋಟ್ಯಂತರ ಮೊತ್ತದ ಒಡೆಯರು

Last Updated 14 ಜೂನ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬನಶಂಕರಿ ದೇವಸ್ಥಾನ ವಾರ್ಡ್ ಉಪ ಚುನಾವಣೆಗೆ ಸ್ಪರ್ಧಿಸಿರುವ ಇಬ್ಬರು ಅಭ್ಯರ್ಥಿಗಳು ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಬಿಜೆಪಿಯ ಎ.ಎಚ್. ಬಸವರಾಜು ಅವರು 2.91 ಕೋಟಿ ರೂಪಾಯಿ ಮೌಲ್ಯದ ಆಸ್ತಿಯ ಒಡೆಯರೆನಿಸಿದ್ದರೆ, ಜೆಡಿಎಸ್ ಬಂಡಾಯ ಅಭ್ಯರ್ಥಿ ಕೆ.ವಿ. ಆದಿಶೇಷಯ್ಯ ಅವರು 1.40 ಕೋಟಿ ರೂಪಾಯಿ ಮೊತ್ತದ ಆಸ್ತಿ ಹೊಂದಿದ್ದಾರೆ.

ಪಾಲಿಕೆ ವಿರೋಧ ಪಕ್ಷದ ಮಾಜಿ ನಾಯಕ ಬಸವರಾಜು ಅವರು ನಾಮಪತ್ರದೊಂದಿಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ನಮೂದಿಸಿರುವಂತೆ ವೈಯಕ್ತಿಕವಾಗಿ 17.61 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ನಗದು ಸೇರಿದಂತೆ ವಿವಿಧ ಬ್ಯಾಂಕ್‌ಗಳಲ್ಲಿ 51,336 ರೂಪಾಯಿ ಠೇವಣಿ ಹೊಂದಿದ್ದಾರೆ.

ಬನಶಂಕರಿ 2ನೇ ಹಂತದಲ್ಲಿ 15 ಲಕ್ಷ ರೂಪಾಯಿ ಮೌಲ್ಯದ ಮನೆ. ಮಾಗಡಿ ತಾಲೂಕಿನಲ್ಲಿ 60,000 ರೂಪಾಯಿ ಮೊತ್ತದ ಶೀಟಿನ ಮನೆ. 1.50 ಲಕ್ಷ ರೂಪಾಯಿ ವಾರ್ಷಿಕ ಆದಾಯ ಹೊಂದಿದ್ದಾರೆ.

ಅವರ ಪತ್ನಿ ಹೆಸರಿನಲ್ಲಿ 2.73 ಲಕ್ಷ ರೂಪಾಯಿ ಬೆಲೆಬಾಳುವ ಕಾರು ಹಾಗೂ ದ್ವಿಚಕ್ರ ವಾಹನವಿದೆ. ಅರ್ಧ ಕೆ.ಜಿ. ಚಿನ್ನ (8.50 ಲಕ್ಷ), 7 ಕೆ.ಜಿ. ಬೆಳ್ಳಿ (ರೂ 3.55 ಲಕ್ಷ) ಹೊಂದಿದ್ದಾರೆ. ಗಾರ್ಮೆಂಟ್ ವ್ಯವಹಾರದಿಂದ ವಾರ್ಷಿಕ 7.75 ಲಕ್ಷ ರೂಪಾಯಿ ಆದಾಯ, ಮನೆ ಬಾಡಿಗೆ ರೂಪದಲ್ಲಿ ರೂ 6.50 ಲಕ್ಷ ಆದಾಯ ಪಡೆಯುತ್ತಿದ್ದಾರೆ.

ಅಗರ ಗ್ರಾಮದಲ್ಲಿ 75 ಲಕ್ಷ ರೂಪಾಯಿ ಮೌಲ್ಯದ ಮೂರು ಎಕರೆ ಕೃಷಿ ಭೂಮಿ, ಪದ್ಮನಾಭನಗರದಲ್ಲಿ 40 ಲಕ್ಷ ರೂಪಾಯಿ ಬೆಲೆಬಾಳುವ ಮನೆ, ಬನಶಂಕರಿ 2ನೇ ಹಂತದಲ್ಲಿ 1.10 ಕೋಟಿ ರೂಪಾಯಿ ಮೌಲ್ಯದ ವಾಸದ ಮನೆ ಹೊಂದಿದ್ದಾರೆ. ಹೊಸಕೆರೆಹಳ್ಳಿಯಲ್ಲಿ ರೂ 20 ಲಕ್ಷ ಬೆಲೆಬಾಳುವ ಫ್ಲ್ಯಾಟ್ ಇದೆ. ವಿವಿಧ ಬ್ಯಾಂಕ್‌ಗಳಲ್ಲಿ 42 ಲಕ್ಷ ರೂಪಾಯಿ ಸಾಲ ಹೊಂದಿದ್ದಾರೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

1 ಕೋಟಿ ಮೌಲ್ಯದ ಮನೆ
ಜೆಡಿಎಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಆದಿಶೇಷಯ್ಯ ಅವರು 50 ಸಾವಿರ ನಗದು, 250 ಗ್ರಾಂ ಚಿನ್ನ, ನಾಗಸಂದ್ರದಲ್ಲಿ ಒಂದು ಕೋಟಿ ರೂ. ಮೌಲ್ಯದ ಮನೆ ಹೊಂದಿದ್ದಾರೆ. ಮಾಸಿಕ 25,000 ರೂಪಾಯಿ ಮನೆ ಬಾಡಿಗೆ ಪಡೆಯುತ್ತಿದ್ದಾರೆ.

ಇವರ ಪತ್ನಿ 250 ಗ್ರಾಂ ಚಿನ್ನ, ಯಡಿಯೂರಿನಲ್ಲಿ 40 ಲಕ್ಷ ರೂಪಾಯಿ ಮೌಲ್ಯದ ಮನೆ ಹೊಂದಿದ್ದಾರೆ. 35 ಲಕ್ಷ ರೂಪಾಯಿ ಸಾಲವನ್ನೂ ಪಡೆದಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಮಹಮ್ಮದ್ ಅಕ್ಬರ್ ಅವರು 60 ಸಾವಿರ ನಗದು, ಬ್ಯಾಂಕ್‌ನಲ್ಲಿ 10,000 ರೂಪಾಯಿ ಠೇವಣಿ ಇಟ್ಟಿದ್ದಾರೆ. ಕನಕಪುರದಲ್ಲಿ 2 ಲಕ್ಷ ರೂಪಾಯಿ ಬೆಲೆ ಬಾಳುವ ಕೃಷಿ ಭೂಮಿ ಇದೆ. ಟೀಚರ್ಸ್‌ ಕಾಲೊನಿಯಲ್ಲಿ 25 ಲಕ್ಷ ರೂಪಾಯಿ ಮೌಲ್ಯದ ಮನೆಯನ್ನೂ ಹೊಂದಿದ್ದಾರೆ. ಎರಡು ಆಟೊರಿಕ್ಷಾಗಳಿವೆ.ಇವರ ಪತ್ನಿ ಮಿನಾಜ್ ನಗರದಲ್ಲಿ 15 ಲಕ್ಷ ರೂಪಾಯಿ ಬೆಲೆಬಾಳುವ ಮನೆ ಹೊಂದಿದ್ದಾರೆ. ಜತೆಗೆ 1.50 ಲಕ್ಷ ರೂಪಾಯಿ ಸಾಲವೂ ಇದೆ.

ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಅನ್ಸರ್ ಪಾಷಾ ಅವರು ರೂ 30 ಸಾವಿರ ನಗದು, ತುಮಕೂರಿನ ಹಿರೇಹಳ್ಳಿಯಲ್ಲಿ 40 ಲಕ್ಷ ರೂಪಾಯಿ ಮೌಲ್ಯದ 1.19 ಎಕರೆ ಭೂಮಿ, ಕನಕಪುರ ರಸ್ತೆಯಲ್ಲಿ 20 ಲಕ್ಷ ರೂಪಾಯಿ ಬೆಲೆ ಬಾಳುವ ಫ್ಲ್ಯಾಟ್ ಹೊಂದಿದ್ದಾರೆ. ಇವರ ಪತ್ನಿ 100 ಗ್ರಾಂ ಚಿನ್ನ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT