ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ: ಕಾವೇರುತ್ತಿರುವ ಚುನಾವಣಾ ಪ್ರಚಾರ

Last Updated 22 ಫೆಬ್ರುವರಿ 2012, 8:35 IST
ಅಕ್ಷರ ಗಾತ್ರ

ತಿಪಟೂರು: ತಾಲ್ಲೂಕಿನ ರಂಗಾಪುರ ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ಫೆ.26ರಂದು ನಡೆಯುವ ಉಪ ಚುನಾವಣೆಗೆ ವಿವಿಧ ಪಕ್ಷಗಳ ಪ್ರಚಾರ ಬಿರುಸುಗೊಂಡಿದೆ.

ಕ್ಷೇತ್ರದಿಂದ ಸದಸ್ಯ ಕಾಂಗ್ರೆಸ್‌ನ ಕೆ.ರಾಜಶೇಖರ್ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ರಾಜಕೀಯ ಪಕ್ಷಗಳು ಇದನ್ನು ಗಂಭೀರವಾಗಿ ಪರಿಗಣಿಸಿವೆ.

ಕಳೆದ ಬಾರಿ ಕಾಂಗ್ರೆಸ್‌ನ ರಾಜಶೇಖರ್ ಮತ್ತು ಬಿಜೆಪಿಯ ಎಚ್.ಬಿ.ದಿವಾಕರ್ ಸ್ಪರ್ಧೆಯಿಂದ ತಾಲ್ಲೂಕಿನಲ್ಲೇ ಪ್ರತಿಷ್ಠಿತ ಕ್ಷೇತ್ರವೆಂದು ಗುರುತಿಸಿಕೊಂಡಿತ್ತು. ಆದರೆ ಈಗ ಅಂಥ ವ್ಯಕ್ತಿಗತ ವರ್ಚಸ್ಸು ಕಾಣುತ್ತಿಲ್ಲ. ಪಕ್ಷ ಪ್ರಾಬಲ್ಯ, ಸಂಘಟನೆ, ತಂತ್ರಗಾರಿಕೆ ನೆಲೆಯಲ್ಲಿ ಚುನಾವಣೆ ಎದುರಿಸಲು ಸಿದ್ಧಗೊಂಡಿರುವ ಪಕ್ಷಗಳು ಪ್ರಚಾರಕ್ಕೆ ಹೆಚ್ಚಿನ ಆದ್ಯತೆ ನೀಡಿವೆ.

ಶಾಸಕ ಬಿ.ಸಿ.ನಾಗೇಶ್ ಪ್ರಭಾವ ನೆಚ್ಚಿರುವ ಬಿಜೆಪಿ, ಎಪಿಎಂಸಿ ಅಧ್ಯಕ್ಷ ಎಚ್.ಬಿ.ದಿವಾಕರ್ ಅವರಿಗಿರುವ ಸ್ಥಳೀಯ ಬೆಂಬಲ ಮತ್ತು ಕಳೆದ ಬಾರಿಯ ಸೋಲಿನ ಅನುಕಂಪ ಗಿಟ್ಟಿಸಲು ಪ್ರಯತ್ನಿಸುತ್ತಿದೆ. ಈಗಾಗಲೇ ಶಾಸಕರು ಮನೆ ಮನೆ ಪ್ರಚಾರ ನಡೆಸುತ್ತಿದ್ದಾರೆ.

ತಾಲ್ಲೂಕು ಬಿಜೆಪಿ ಅಧ್ಯಕ್ಷರೂ ಆದ ಆ ಪಕ್ಷದ ಅಭ್ಯರ್ಥಿ ಶಿವಸ್ವಾಮಿ ಪಕ್ಷ ಸಂಘಟನೆಯಲ್ಲಿ ಗಮನಾರ್ಹವಾಗಿ ಗುರುತಿಸಿಕೊಂಡ ಯುವಕರನ್ನು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ತುಮಕೂರು ಶಾಸಕ ಸೊಗಡು ಶಿವಣ್ಣ ಪ್ರಚಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಮಾಜಿ ಶಾಸಕ ಕೆ.ಷಡಕ್ಷರಿ ಪ್ರಭಾವವನ್ನು ಕಾಂಗ್ರೆಸ್ ಬಳಸಿಕೊಳ್ಳುತ್ತಿದೆ. ಗೆದ್ದು ಒಂದೇ ವಾರದಲ್ಲಿ ಕೆ.ರಾಜಶೇಖರ್ ಮೃತಪಟ್ಟ ಹಿನ್ನೆಲೆಯ ಅನುಕಂಪವನ್ನೂ ಪಕ್ಷ ನೆಚ್ಚಿಕೊಂಡಿದ್ದು, ರಾಜು ಹೆಸರನ್ನು ಶಕ್ತಿಯಾಗಿಸಿಕೊಳ್ಳುತ್ತಿದೆ.

ತಾಲ್ಲೂಕಿನ ಕಾಂಗ್ರೆಸ್ ಮುಖಂಡರು ಸಕ್ರಿಯವಾಗಿ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆ.ಷಡಕ್ಷರಿ ಅವರಂತೂ ಅಭ್ಯರ್ಥಿಗೆ ಬೆನ್ನೆಲುಬಾಗಿ ನಿಂತಿದ್ದಾರೆ. ಹಾಲು ಒಕ್ಕೂಟದ ನಿರ್ದೇಶಕರೂ ಆದ ಕಾಂಗ್ರೆಸ್ ಅಭ್ಯರ್ಥಿ ತ್ರಿಯಂಬಕ ತಮ್ಮ ಸಂಪರ್ಕ ಮೂಲ ಬಳಸಿಕೊಳ್ಳುತ್ತಿದ್ದಾರೆ.

ಕಳೆದ ಚುನಾವಣೆಯಲ್ಲಿ ಮೂರನೇ ಸ್ಥಾನದಲ್ಲಿದ್ದ ಜೆಡಿಎಸ್ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರಚಾರಕ್ಕೆ ಹೆಚ್ಚು ಆದ್ಯತೆ ನೀಡಿರುವ ಪಕ್ಷ ಈಗಾಗಲೇ ಮಧು ಬಂಗಾರಪ್ಪ ಅವರಿಂದ ಪ್ರಚಾರ ಮುಗಿಸಿದೆ. ತಾಲ್ಲೂಕು ಜೆಡಿಎಸ್ ಅಧ್ಯಕ್ಷರೂ ಆದ ಈ ಪಕ್ಷದ ಅಭ್ಯರ್ಥಿ ಗುರುಮೂರ್ತಿಗೆ ವರವಾಗಿ ಬಂದಂತೆ ಈಚೆಗಷ್ಟೇ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾದ ಆನಂದರವಿ ಪ್ರಚಾರದಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ.

ಮಾಜಿ ಶಾಸಕ ಬಿ.ನಂಜಾಮರಿ ಜೆಡಿಎಸ್‌ನಿಂದ ದೂರ ಉಳಿದ ನಂತರ ಅಂತಹ ಸ್ಥಳೀಯ ನಾಯಕರ ಬಲವಿಲ್ಲದ ಈ ಪಕ್ಷ ಸಾಮೂಹಿಕ ನಾಯಕತ್ವದ ಮೂಲಕ ಪ್ರಚಾರ ಬಿರುಸುಗೊಳಿಸಿದೆ. ಜೆಡಿಎಸ್ ಮುಖಂಡ ಜಕ್ಕನಹಳ್ಳಿ ಲಿಂಗರಾಜು ಪ್ರಚಾರದ ಮುಂಚೂಣಿಯಲ್ಲಿದ್ದಾರೆ. ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್‌ಬಾಬು, ಗುಬ್ಬಿ ಶಾಸಕ ಶ್ರೀನಿವಾಸ್ ಹಾಗೂ ವಿಧಾನಪರಿಷತ್ ಸದಸ್ಯ ಡಾ.ಹುಲಿನಾಯ್ಕರ್ ಅವರಿಗೆ ಪಕ್ಷ ಚುನಾವಣೆ ಜವಾಬ್ದಾರಿ ವಹಿಸಿದ್ದು, ಕ್ಷೇತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ತಾಲ್ಲೂಕಿನಲ್ಲಿ ಪಕ್ಷ ಬಲಗೊಳಿಸಲು ಸಜ್ಜಾಗಿರುವಂತೆ ಕಾಣುವ ಜೆಡಿಎಸ್, ರಾಜ್ಯ ನಾಯಕರನ್ನೂ ಪ್ರಚಾರಕ್ಕೆ ಬಳಸಿಕೊಳ್ಳುತ್ತಿದೆ. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ, ನಟಿ ಪೂಜಾ ಗಾಂಧಿ ಬುಧವಾರ ಪ್ರಚಾರ ನಡೆಸಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT