ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ: ನಾಯಕತ್ವಕ್ಕೆ ಪಕ್ಷದಲ್ಲೇ ಪೈಪೋಟಿ

Last Updated 3 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕೊಪ್ಪಳ ವಿಧಾನಸಭೆಯ ಉಪ ಚುನಾವಣೆಗೆ ಯಾರ ನಾಯಕತ್ವ? ಈ ಪ್ರಶ್ನೆ ಆಡಳಿತಾರೂಢ ಬಿಜೆಪಿಯಲ್ಲಿ ವಿವಾದ ಎಬ್ಬಿಸಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಅವರು ಸಾಮೂಹಿಕ ನಾಯಕತ್ವದ ಮೇಲೆ ಉಪ ಚುನಾವಣೆ ಎದುರಿಸುವುದಾಗಿ ಹೇಳಿದ್ದಾರೆ.

ಇದಕ್ಕೆ ತದ್ವಿರುದ್ಧವಾಗಿ ಯಡಿಯೂರಪ್ಪ ಬಣದಿಂದ ಹೇಳಿಕೆ ಬಂದಿದೆ. `ಯಡಿಯೂರಪ್ಪ ಅವರೇ ಈ ಚುನಾವಣೆಯ ಉಸ್ತುವಾರಿ ವಹಿಸಿಕೊಳ್ಳಬೇಕು. ಅವರ ನೇತೃತ್ವದಲ್ಲೇ ಚುನಾವಣೆ ನಡೆಯಬೇಕು~ ಎನ್ನುವ ಒತ್ತಾಯವನ್ನು ಸಂಸದ ಡಿ.ಬಿ.ಚಂದ್ರೇಗೌಡ ಮಾಡಿದ್ದಾರೆ.

ಡಾಲರ್ಸ್‌ ಕಾಲೊನಿಯ ಯಡಿಯೂರಪ್ಪ ಮನೆಯಲ್ಲಿ ಅವರ ನೇತೃತ್ವದಲ್ಲಿ ಸಭೆ ನಡೆದರೆ, ಅದೇ ಸಂದರ್ಭದಲ್ಲಿ ಮಲ್ಲೇಶ್ವರದ ಪಕ್ಷದ ಕಚೇರಿಯಲ್ಲಿ ಈಶ್ವರಪ್ಪ ಸಭೆ ನಡೆಸಿದರು. ಚುನಾವಣೆಗೆ ತಯಾರಿ ನಡೆದಿದ್ದು, ಇದೇ 9ರಂದು ಪಕ್ಷದ ಅಭ್ಯರ್ಥಿ ಕರಡಿ ಸಂಗಣ್ಣ ನಾಮಪತ್ರ ಸಲ್ಲಿಸಲಿದ್ದಾರೆ. ಅದೊಂದು ಶಕ್ತಿ ಪ್ರದರ್ಶನದ ಕಾರ್ಯಕ್ರಮವಾಗಲಿದೆ ಎಂದು ಈಶ್ವರಪ್ಪ ಹೇಳಿದರು.

ಹೀಗೆ ಹೇಳುತ್ತಿದ್ದಂತೆ ಅತ್ತ ಯಡಿಯೂರಪ್ಪ ಮನೆಯ ಸಭೆಯಿಂದ ಹೊರಬಂದ ಚಂದ್ರೇಗೌಡ ಅವರು `ಕೊಪ್ಪಳ ಚುನಾವಣೆಗೆ ಯಡಿಯೂರಪ್ಪ ನಾಯಕತ್ವ ವಹಿಸಿಕೊಳ್ಳಬೇಕು. ಇಲ್ಲದಿದ್ದರೆ ಗೆಲ್ಲುವುದು ಕಷ್ಟ~ ಎಂದು ಹೇಳಿದರು.

`ಕರಡಿ ಸಂಗಣ್ಣ ಅವರನ್ನು ರಾಜೀನಾಮೆ ಕೊಡಿಸಿದ್ದು ಯಡಿಯೂರಪ್ಪ. ಆ ನಂತರ ಅವರಿಗೆ ನಿಗಮ- ಮಂಡಳಿಯ ಅಧ್ಯಕ್ಷ ಸ್ಥಾನ ಕೊಟ್ಟಿದ್ದೂ ಅವರೇ. ಈಗ ಚುನಾವಣೆಯಲ್ಲಿ ಗೆಲ್ಲಿಸುವುದು ಕೂಡ ಅವರದ್ದೇ ಜವಾಬ್ದಾರಿ. ಅವರ ನಾಯಕತ್ವ ಇಲ್ಲದಿದ್ದರೆ ಗೆಲುವು ಕಷ್ಟ~ ಎಂದು ನೇರವಾಗಿಯೇ ಹೇಳಿದರು. ಗೌಡರ ಈ ಹೇಳಿಕೆ ಪಕ್ಷಕ್ಕೆ ಮುಜುಗರ ಉಂಟುಮಾಡಿದೆ. ಈಶ್ವರಪ್ಪ ಮಾತನಾಡಿ, `ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲರೂ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಆ ಮೂಲಕ ಸಾಮೂಹಿಕ ನಾಯಕತ್ವಕ್ಕೆ ಆದ್ಯತೆ ನೀಡುತ್ತೇವೆ~ ಎಂದರು.

`ಇಷ್ಟಕ್ಕೂ ಯಡಿಯೂರಪ್ಪ ಅಪರಾಧಿಯಲ್ಲ. ಅವರ ವಿರುದ್ಧ ಕೇವಲ ಆರೋಪ ಮಾತ್ರ ಇದ್ದು, ಚುನಾವಣೆಗೆ ಅವರ ಸೇವೆಯನ್ನೂ ಬಳಸಿಕೊಳ್ಳುತ್ತೇವೆ~ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

`ಯಾರು ಮುಖ್ಯಮಂತ್ರಿಯಾಗಿರುತ್ತಾರೊ ಅವರು ಸಹಜವಾಗಿಯೇ ನಮ್ಮ ನಾಯಕರಾಗುತ್ತಾರೆ. ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗುವುದು ಸೂಕ್ತ~ ಎನ್ನುವ ಸಲಹೆಯನ್ನೂ ಕೆಲವರು ನೀಡಿದ್ದಾರೆ ಎನ್ನಲಾಗಿದೆ.

ಮುಖ್ಯಮಂತ್ರಿ ಸದಾನಂದಗೌಡರು ಮಾತ್ರ ಎರಡೂ ಸಭೆಗಳಲ್ಲಿ ಭಾಗವಹಿಸಲಿಲ್ಲ. ಪಕ್ಷದ ಸಭೆ ಮತ್ತು ಯಡಿಯೂರಪ್ಪ ಮನೆಯಲ್ಲಿ ನಡೆದ ಸಭೆಗಳಿಂದ ದೂರವೇ ಉಳಿದ ಅವರು ಅಧಿಕೃತ ಕಾರ್ಯಕ್ರಮಗಳಲ್ಲಿ ಮಗ್ನರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT