ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ಚುನಾವಣೆ: ಶೇ 67.17ರಷ್ಟು ಮತದಾನ

Last Updated 11 ಜನವರಿ 2012, 8:05 IST
ಅಕ್ಷರ ಗಾತ್ರ

ದಾವಣಗೆರೆ: ಮಹಾನಗರ ಪಾಲಿಕೆ ವಾರ್ಡ್ ನಂ.: 27ರ ಸದಸ್ಯ ಸ್ಥಾನಕ್ಕೆ ಮಂಗಳವಾರ ನಡೆದ ಉಪ ಚುನಾವಣೆ ಶಾಂತಿಯುತವಾಗಿ ನಡೆದಿದ್ದು, ಶೇ. 67.17ರಷ್ಟು ಮತದಾನ ನಡೆದಿದೆ.

ಬೆಳಿಗ್ಗೆ 7ಕ್ಕೆ ಪ್ರಾರಂಭವಾದ ಮತದಾನ ಸಂಜೆ 5ರವರೆಗೆ ನಡೆಯಿತು. ವಿವಿಧ ಕೆಲಸ ಕಾರ್ಯಗಳಿಗೆ ತೆರಳುವವರು ಬೆಳಿಗ್ಗೆಯೇ ಸಾಲುಗಟ್ಟಿ ನಿಂತು, ತಮ್ಮ ಹಕ್ಕು ಚಲಾಯಿಸಿದರು. ಒಟ್ಟು 10 ಕಡೆ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರಸ್ತುತ ಪಾಲಿಕೆ ಆಡಳಿತಾವಧಿಯಲ್ಲಿ 27ನೇ ವಾರ್ಡ್‌ಗೆ ಇದು 2ನೇ ಉಪ ಚುನಾವಣೆ ಆಗಿದ್ದು, ಕೆಲವು ಕಡೆ ಅಷ್ಟಾಗಿ ಉತ್ಸಾಹ ಕಾಣಿಸಲಿಲ್ಲ.  

ಮತಗಟ್ಟೆಗಳು: ಅಂಬೇಡ್ಕರ್ ವೃತ್ತದ ಬಳಿಯ ಬೆಸ್ಕಾಂ ಕಚೇರಿಯಲ್ಲಿ 3, ತ್ರಿಶೂಲ್ ಚಿತ್ರಮಂದಿರ ರಸ್ತೆಯ ನಗರಸಭಾ ಗ್ರಂಥಾಲಯದಲ್ಲಿ 1, ಕಾವೇರಮ್ಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2, ಕೆಟಿಜೆ ನಗರದ ಒಳಭಾಗದ ಮುನ್ಸಿಪಲ್ ನರ್ಸರಿ ಶಾಲೆಯಲ್ಲಿ 1 ಅಂಗನವಾಡಿಯಲ್ಲಿ 1, ಬಂದೂರು ಕ್ಯಾಂಪ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1, ಹನಗೋಡಿಮಠ ಹಿ.ಪ್ರಾ. ಶಾಲೆಯಲ್ಲಿ 1 ಮತಗಟ್ಟೆ ಸ್ಥಾಪಿಸಲಾಗಿತ್ತು.

ಎಲ್ಲೆಡೆಯೂ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಮತದಾನಕ್ಕೆ ಅನುಕೂಲ ಆಗುವಂತೆ ಕೇಂದ್ರೀಯ ವಿದ್ಯಾಲಯ ರಸ್ತೆಯಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು. ಬೆಳಿಗ್ಗೆ 8ರಿಂದ 11.30ರವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಬಂದು ಮತ ಚಲಾಯಿಸಿದರು. ಬಳಿಕ ಸ್ವಲ್ಪಮಟ್ಟಿಗೆ ನೀರಸವಾಗಿತ್ತು.

ಮತಪೆಟ್ಟಿಗೆಗಳನ್ನು ನಗರದ ಹೈಸ್ಕೂಲ್ ಮೈದಾನದ ಡಿ.ಇಡಿ ಕಾಲೇಜಿನಲ್ಲಿ ಇಡಲಾಗಿದ್ದು, ಜ. 13ರಂದು ಮತಎಣಿಕೆ ಕಾರ್ಯ ನಡೆಯಲಿದೆ. 2,227 ಪುರುಷ ಹಾಗೂ 2,840 ಮಹಿಳೆಯರು ಸೇರಿದಂತೆ ಒಟ್ಟು 5,610 ಮತದಾರರು ಈ ವಾರ್ಡ್‌ನಲ್ಲಿದ್ದಾರೆ.

ಕಾಂಗ್ರೆಸ್‌ನಿಂದ ಕೋಳಿ ಇಬ್ರಾಹಿಂ, ಜೆಡಿಎಸ್‌ನಿಂದ ಎಸ್. ಅಬ್ದುಲ್ ಸಮದ್, ಬಿಜೆಪಿಯಿಂದ ಕೆ.ಎನ್. ಹನುಮಂತಪ್ಪ ಹಾಗೂ ಸುಬಾನ್ ಖಾನ್ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದರು. ಎಲ್ಲಾ ಅಭ್ಯರ್ಥಿಗಳ ಪರ ಆಯಾ ಪಕ್ಷಗಳ ಜಿಲ್ಲಾ ಮುಖಂಡರು ಪ್ರಚಾರ ನಡೆಸಿದ್ದರು.

ಗೊಂದಲ
ಕೆಟಿಜೆ ನಗರದ 1ರಿಂದ 9ನೇ ಕ್ರಾಸ್‌ನಲ್ಲಿ ಉದ್ದೇಶಪೂರ್ವಕವಾಗಿ ಮತದಾರರನ್ನು ಪಟ್ಟಿಯಿಂದ ಕೈಬಿಡಲಾಗಿದೆ. ಪರಿಷ್ಕರಣೆ ಸಂದರ್ಭದಲ್ಲಿ ಮನೆ ಖಾಲಿ ಮಾಡಿದ್ದಾರೆ ಎಂದು ಮುದ್ರೆ ಒತ್ತಿಕೊಟ್ಟಿದ್ದಾರೆ. ಹೀಗಾಗಿ, ಬೆಳಿಗ್ಗೆಯೇ ಮತ ಹಾಕಲು ಬಂದವರು  ಹಾಗೆಯೇ ವಾಪಸ್ ಮರಳಿದರು ಎಂದು ಕಾಂಗ್ರೆಸ್ ಮುಖಂಡ ಡಿ. ಬಸವರಾಜ್ ಆರೋಪಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT