ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ: ಕೊನೆಯ ದಿನ ಹತ್ತು ನಾಮಪತ್ರ ಸಲ್ಲಿಕೆ

Last Updated 4 ಆಗಸ್ಟ್ 2013, 6:22 IST
ಅಕ್ಷರ ಗಾತ್ರ

ಮಂಡ್ಯ: ಮಂಡ್ಯ ಲೋಕಸಭೆ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಚಿತ್ರನಟಿ ರಮ್ಯಾ, ಬಿಜೆಪಿ ಅಭ್ಯರ್ಥಿ ದೊರೆಸ್ವಾಮಿ, ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ನಂದಿನಿ ಕೆ.ಎಸ್. ಸೇರಿದಂತೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಶನಿವಾರ 10 ಮಂದಿ ನಾಮಪತ್ರ ಸಲ್ಲಿಸಿದರು.

ಚಿತ್ರನಟಿ ರಮ್ಯಾ ಅವರೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್, ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಮಾಜಿ ಶಾಸಕರಾದ ಎಲ್.ಆರ್. ಶಿವರಾಮೇಗೌಡ, ಕೆ.ಬಿ. ಚಂದ್ರಶೇಖರ್, ಎಂ.ಎಸ್. ಆತ್ಮಾನಂದ, ಎನ್.ಎಸ್. ಬೋಸರಾಜು, ಮಲ್ಲಾಜಮ್ಮ, ಕೆ. ಸುರೇಶ್‌ಗೌಡ, ಮಧು ಮಾದೇಗೌಡ, ಯುವ ಘಟಕದ ರಾಜ್ಯಾಧ್ಯಕ್ಷ ರಿಜ್ವಾನ್ ಅರ್ಷದ್, ಮುಖಂಡರಾದ ಅಮರಾವತಿ ಚಂದ್ರಶೇಖರ್, ರವಿಕುಮಾರ್ ಗಣಿಗ, ಬಿ.ಸಿ. ಶಿವಾನಂದ, ಬೇಲೂರು ಸೋಮಶೇಖರ್, ಎಚ್.ಪಿ. ಮಹೇಶ್ ಸೇರಿದಂತೆ ಅನೇಕ ನಾಯಕರು ಉಪಸ್ಥಿತರಿದ್ದರು.

ಪಕ್ಷದಲ್ಲಿ ಈಗ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಒಮ್ಮತದ ಅಭ್ಯರ್ಥಿಯಾಗಿ ರಮ್ಯಾ ಸ್ಪರ್ಧಿಸಿದ್ದಾರೆ. ಪಕ್ಷದ ಅಭ್ಯರ್ಥಿ ಗೆಲ್ಲಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಷ್ ಹೇಳಿದರು.

`ಇದು ನನ್ನ ಮೊದಲ ಚುನಾವಣೆ. ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ, ವಸತಿ ಸಚಿವ ಅಂಬರೀಷ್, ಮಾಜಿ ವಿದೇಶಾಂಗ ಸಚಿವ ಕೃಷ್ಣ ಅವರೇ ಚುನಾವಣೆಗೆ ಸ್ಪರ್ಧಿಸಲು ಕಾರಣ. ಇವರೆಲ್ಲ ವಿಶ್ವಾಸವನ್ನು ಗೆದ್ದಿದ್ದೇನೆ. ಮುಂದಿನ ದಿನಗಳಲ್ಲಿ ಜನರ ವಿಶ್ವಾಸ ಗೆಲ್ಲಲಿದ್ದೇನೆ' ಎಂದು ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ತಿಳಿಸಿದರು.

ಬಿಜೆಪಿ: ಬೆಂಬಲಿಗರೊಂದಿಗೆ ಆಗಮಿಸಿದ ಕೆ.ಎಸ್. ದೊರೆಸ್ವಾಮಿ ಅವರು ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ಮಾಜಿಶಾಸಕ ಎಚ್.ಹೊನ್ನಪ್ಪ, ಡಿ.ರಾಮಲಿಂಗಯ್ಯ ಮತ್ತಿತರರು ಉಪಸ್ಥಿತರಿದ್ದರು.

ಎಸ್‌ಕೆಪಿ: ಅಪಾರ ಬೆಂಬಲಿಗರೊಂದಿಗೆ ಆಗಮಿಸಿದ ನಂದಿನಿ ಜಯರಾಂ ಅವರು ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.

ಶಾಸಕ ಕೆ.ಎಸ್. ಪುಟ್ಟಣ್ಣಯ್ಯ, ಕೆ.ಎಸ್. ನಂಜುಂಡೇಗೌಡ, ವಿ. ಅಶೋಕ್, ಬಡಗಲಪುರ ನಾಗೇಂದ್ರ, ಕೋಣಸಾಲೆ ನರಸರಾಜು ಮತ್ತಿತರರು ಉಪಸ್ಥಿತರಿದ್ದರು.

ಕೈಚಳಕ ತೋರಿದ ಕಳ್ಳರು
ಮಂಡ್ಯ: ವಸತಿ ಸಚಿವ ಅಂಬರೀಷ್, ಚಿತ್ರ ನಟಿ-ಕಾಂಗ್ರೆಸ್ ಅಭ್ಯರ್ಥಿ ರಮ್ಯಾ ಅವರನ್ನು ನೋಡಲು ಆಗಮಿಸಿದ್ದ ಜನಜಂಗುಳಿಯಲ್ಲಿ ಕೈಚಳಕ ತೋರಿರುವ ಕಳ್ಳರು, ವ್ಯಕ್ತಿಯೊಬ್ಬರ ಕಿಸೆಗೆ ಕತ್ತರಿ ಹಾಕಿ 50 ಸಾವಿರ ಕಳ್ಳತನ ಮಾಡಿರುವ ಘಟನೆ ಶನಿವಾರ ನಡೆಯಿತು !
ಮಂಡ್ಯ ತಾಲ್ಲೂಕು ಉರಮಾರಕಸಲಗೆರೆ ಗ್ರಾಮದ ಸ್ವಾಮಿ, ಹಣ ಕಳೆದುಕೊಂಡ ವ್ಯಕ್ತಿ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿ ಸುಮಾರು ಮಧ್ಯಾಹ್ನ 3.20ಕ್ಕೆ ಹೊರಬಂದ ಅಭ್ಯರ್ಥಿ ರಮ್ಯಾ, ಅಂಬರೀಷ್ ಸೇರಿದಂತೆ ಹಲವು ನಾಯಕರು ನೆರದಿದ್ದ ಜನಸಮೂಹದತ್ತ ಕೈಬೀಸಿ, ಹುರಿದುಂಬಿಸುತ್ತಾ ಅತ್ತಿತ್ತ ನಡೆದಾಡಿದರು. ಈ ನಾಯಕರು ಸನಿಹ ಬಂದಾಂಗ ಜನರ ಕೂಗಾಟ, ತಳ್ಳಾಟವೂ ಜೋರಾಗಿಯೇ ನಡೆಯಿತು. ಕೆಲವರು ಮೊಬೈಲ್‌ಗಳಲ್ಲಿ ಫೋಟೊ ತೆಗೆಯಲು ಮುಗಿದ್ದರು. ಈ ವೇಳೆ ಕಳ್ಳರು ಪ್ಯಾಂಟಿನ ಜೋಬು ಕತ್ತರಿಸಿ ರೂ. 50 ಸಾವಿರ ಎಗರಿಸಿಕೊಂಡು ಪರಾರಿಯಾಗಿದ್ದಾರೆ.

ಪ್ರತಿಮೆ ನಮಸ್ಕಾರ
ಮಂಡ್ಯ: ಚಿತ್ರ ನಟಿ ರಮ್ಯಾ ಅವರು ನಾಮಪತ್ರ ಸಲ್ಲಿಸಲು ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ತೆರಳುವ ಮೊದಲು ಮೈಸೂರು-ಬೆಂಗಳೂರು ಹೆದ್ದಾರಿ ಬದಿಯಲ್ಲಿರುವ                       ಸರ್ ಎಂ. ವಿಶ್ವೇಶ್ವರಯ್ಯ ಪ್ರತಿಮೆ ನಮಸ್ಕರಿಸಿದರು.

ಬೆಂಗಳೂರಿನಿಂದ ಮಧ್ಯಾಹ್ನ 2.05 ಗಂಟೆಗೆ ಆಗಮಿಸಿದ ಅವರೊಂದಿಗೆ ಶಾಸಕ ಪಿ.ಎಂ. ನರೇಂದ್ರಸ್ವಾಮಿ, ಮಾಜಿ ಸಚಿವ ಆತ್ಮಾನಂದ, ಮಾಜಿ ಶಾಸಕ ಮಧು ಜಿ.ಮಾದೇಗೌಡ, ಯುವ ಘಟಕ ಅಧ್ಯಕ್ಷ ಎಂ.ಎಸ್. ಚಿದಂಬರ್ ಸೇರಿದಂತೆ ಹಲವರು ಇದ್ದರು.

ಪ್ರತಿಮೆ ಬಳಿಯಿಂದ ವಾಪಸ್ಸು ಆಗುವ ವೇಳೆ ನೆರದಿದ್ದ ಯುವ ಸಮೂಹದತ್ತ ಕೈ ಬೀಸಿದರು. ಯುವಜನರೂ ಹೋ..ಹೋ ಎಂದು ಕೂಗುವ ಜೊತೆಗೆ ಮೊಬೈಲ್‌ನಲ್ಲಿ ರಮ್ಯಾ ಅವರನ್ನು ಸೆರೆ ಹಿಡಿದರು.

ಅದೇ ವೇಳೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಸ್ಥಳಕ್ಕೆ ಆಗಮಿಸಿದರು. ಕೈ ಬೀಸಿ ಕಾರ್ಯಕರ್ತರನ್ನು ಹುರಿದುಂಬಿಸಿ, ಮೈಸೂರಿನತ್ತ ಹೊರಟರು.

ಒಟ್ಟು 14 ಮಂದಿ ನಾಮಪತ್ರ ಸಲ್ಲಿಕೆ
ಮಂಡ್ಯ: ಮಂಡ್ಯ ಲೋಕಸಭಾ ಉಪ ಚುನಾವಣೆಗೆ ಒಟ್ಟು 14 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಸಿ.ಎಸ್. ಪುಟ್ಟರಾಜು (ಜೆಡಿಎಸ್), ರಮ್ಯಾ (ಕಾಂಗ್ರೆಸ್), ನಂದಿನಿ ಕೆ.ಎಸ್. (ಸರ್ವೋದಯ ಕರ್ನಾಟಕ), ಕೆ. ಬಲರಾಮು, ಕೆ.ಎಸ್. ದೊರೆಸ್ವಾಮಿ (ಬಿಜೆಪಿ), ಕೃಷ್ಣಮೂರ್ತಿ (ಆರ್‌ಪಿಐ), ಪಕ್ಷೇತರರಾಗಿ ಸಿದ್ದರಾಮಯ್ಯ, ಐ.ಎನ್.ಆರ್. ಗೌಡ ನಂದೀಶ್, ಸಿ.ಟಿ.  ಮಂಜುನಾಥ್, ಶಂಭುಲಿಂಗೇಗೌಡ, ಅರುಣ್ ಕುಮಾರ್‌ಎಸ್. ವಸಂತಕುಮಾರ್, ಬಿ.ಎನ್. ಲೋಕೇಶ್, ವಿ. ಸುರೇಶ್ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT