ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪಚುನಾವಣೆ: ಯಾರಿಗಂತೆ ಮಾರಾಯ್ರೆ ಟಿಕೆಟ್?

Last Updated 21 ಫೆಬ್ರುವರಿ 2012, 10:00 IST
ಅಕ್ಷರ ಗಾತ್ರ

ಉಡುಪಿ: `ಯಾರಿಗಂತೆ ಮಾರಾಯ್ರೆ ಟಿಕೆಟ್? ಬಿಜೆಪಿಯಿಂದ ಸುನಿಲ್‌ಕುಮಾರ್ ಅವರಿಗಾ? ಅಥವಾ ಶೆಟ್ಟರಿಗಾ? ಕಾಂಗ್ರೆಸ್ ಟಿಕೆಟ್ ಜಯಪ್ರಕಾಶ್ ಹೆಗ್ಡೆಯವರಿಗಾ? ಇಲ್ಲಾ ವಿನಯಕುಮಾರ್ ಸೊರಕೆ ಅವರಿಗಾ?~ ಇಂಥದ್ದೊಂದು  ಕುತೂಹಲ ಧ್ವನಿ ಉಡುಪಿ ಭಾಗದ ಜನರಲ್ಲಿ ಕಳೆದ ಒಂದೆರಡು ದಿನಗಳಿಂದ ಎಲ್ಲೆಲ್ಲೂ ಕೇಳಿಬರುತ್ತಿದೆ.

ಮಾರ್ಚ್ 18ಕ್ಕೆ ಚುನಾವಣೆ ನಿಗದಿಯಾಗಿದ್ದು ಇದೇ 29 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯ ಈವರೆಗೂ ಸಂಭಾವ್ಯ ಅಭ್ಯರ್ಥಿಯನ್ನು ಅಂತಿಮಗೊಳಿಸಿಲ್ಲ. ಇಂತಹದ್ದೇ  ಅಭ್ಯರ್ಥಿಯನ್ನು ಇದೇ ರಾಜಕೀಯ ಪಕ್ಷ ಕಣಕ್ಕಿಳಿಸುತ್ತದೆ ಎನ್ನುವ ಸ್ಪಷ್ಟತೆಯೂ ಇಲ್ಲ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಕಾಂಗ್ರೆಸ್‌ನಿಂದ ಮಾಜಿ ಸಚಿವ ಬಂಟ ಸಮುದಾಯದ ಜಯಪ್ರಕಾಶ್ ಹೆಗ್ಡೆ ಅವರಿಗೆ ಸ್ಪರ್ಧಿಸಲು ಟಿಕೆಟ್ ಸಿಗುವುದು ಖಚಿತ ಎನ್ನುವ ಮಾತು ಕೇಳಿಬರುತ್ತಿದೆ. ಇದಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್  ಮಾತ್ರ ಬಾಕಿ ಇದ್ದು ಜಯಪ್ರಕಾಶ್ ಹೆಗ್ಡೆ ಅವರನ್ನೇ ಕಣಕ್ಕಿಳಿಸುವಂತೆ ಒಮ್ಮತದ ಪ್ರಸ್ತಾವನೆಯನ್ನು ಕೂಡಾ ಜಿಲ್ಲಾ ಉಸ್ತುವಾರಿಗಳು ಹೈಕಮಾಂಡ್‌ಗೆ ಸಲ್ಲಿಸಿದ್ದಾರೆ ಎನ್ನುವುದು ಸದ್ಯದ ವರ್ತಮಾನ.

ಇನ್ನು ಬಿಜೆಪಿಯಿಂದ ಮಾಜಿ ಸುನಿಲ್ ಕುಮಾರ್ ಅವರಿಗೆ ಟಿಕೆಟ್ ಸಿಗುವುದು ಖಚಿತ ಎನ್ನುವ ಮಾತು ಬಿಜೆಪಿ ವಲಯದಿಂದಲೇ ಕೇಳಿಬರುತ್ತಿದೆ. ಇನ್ನೊಬ್ಬ ಸಂಭವನೀಯ ಅಭ್ಯರ್ಥಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಕೂಡ ಸಂಭಾವ್ಯ ಅಭ್ಯರ್ಥಿ ಎನ್ನುವ ವದಂತಿ ಇದೆ.

ಸಂಸದರಾಗಿದ್ದ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರಿಂದ ತೆರವಾದ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಚುನಾವಣೆಯ ದಿನಾಂಕ ಈಗಾಗಲೇ ಘೋಷಣೆಯಾಗಿದ್ದು ರಾಜಕೀಯ ಪಕ್ಷಗಳಲ್ಲಿ   ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆ ಸಿದ್ದವಾಗುತ್ತಿದೆ. ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದ್ದರೆ, ಕಾಂಗ್ರೆಸ್‌ಗೆ ಗೆಲ್ಲಲೇ ಬೇಕು ಎನ್ನುವ ಉಮೇದು ಕಂಡು ಬರುತ್ತಿದೆ.  

ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಪ್ರತಿಯೊಂದು ರಾಜಕೀಯ ಪಕ್ಷಗಳಲ್ಲಿಯೂ ನಾಲ್ಕಾರು ಅಭ್ಯರ್ಥಿಗಳಿದ್ದಾರೆ.  ಕಾಂಗ್ರೆಸ್‌ನಲ್ಲಿ ಮಾಜಿ ಸಂಸದ ವಿನಯ್ ಕುಮಾರ್ ಸೊರಕೆ, ಡಿ.ಕೆ.ತಾರಾದೇವಿ, ಬಿ.ಎಲ್.ಶಂಕರ್ ಹಾಗೂ ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ. ಆದರೆ ಇವರ ನಡುವೆ ಟಿಕೆಟ್‌ಗಾಗಿ ಪೈಪೋಟಿ ನಡೆದಿದ್ದು ವಿನಯ್ ಕುಮಾರ್ ಸೊರಕೆ ಮತ್ತು ಜಯಪ್ರಕಾಶ್ ಹೆಗ್ಡೆ  ನಡುವೆ. 

  ಕಳೆದ ಚುನಾವಣೆಯಲ್ಲಿ ಕೊನೆಗಳಿಗೆಯಲ್ಲಿ ಟಿಕೆಟ್ ಪಡೆದು ಸ್ಪರ್ಧಿಸಿ 25 ಸಾವಿರ ಅಂತರದಿಂದ ಸದಾನಂದ ಗೌಡ ಎದುರೇ ಸೋತಿದ್ದ ಜಯಪ್ರಕಾಶ್ ಹೆಗ್ಡೆ ಅವರು ಉಡುಪಿ ಮಾತ್ರವಲ್ಲದೇ ಚಿಕ್ಕಮಗಳೂರಿನ ಕೆಲವು ಭಾಗದಲ್ಲಿ ಪ್ರಭಾವಿಯಾಗಿದ್ದಾರೆ.

ಕಳೆದ ಭಾರಿ ಕುಂದಾಪುರದಲ್ಲಿ ಹೆಚ್ಚು ಮತಗಳು ಜಯಪ್ರಕಾಶ್ ಹೆಗ್ಡೆ ಅವರಿಗೆ ಬೀಳದ ಕಾರಣ ಹಾಗೂ ಕೊನೆಗಳಿಗೆಯಲ್ಲಿ ಟಿಕೆಟ್ ಸಿಕ್ಕ ಕಾರಣ ಪ್ರಚಾರಕ್ಕೆ ಸಮಯ ಸಿಕ್ಕಿರಲಿಲ್ಲ. ಈ ಬಾರಿ ಮತ್ತೆ ಅವಕಾಶ ನೀಡಿ ಗೆಲ್ಲಿಸುವ ಹಿನ್ನಲೆಯಲ್ಲಿ ಜಯಪ್ರಕಾಶ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆಗಳೇ ಹೆಚ್ಚು ಎನ್ನುವ ಮಾತು ಇಲ್ಲಿ ಕೇಳಿಬಂದಿದೆ.

ಇನ್ನು ಬಿಜೆಪಿಯಿಂದ ಸ್ಪರ್ಧಿಸಲು ಯಾರಿಗೆ ಟಿಕೆಟ್ ಸಿಗುತ್ತೆ ಎನ್ನುವುದರ ಬಗ್ಗೆ ಗೊಂದಲ ಈಗಲೂ ಮುಂದುವರಿದಿದೆ. ಜೆಡಿಎಸ್ ಕೂಡ ಸ್ಪರ್ಧಿಸುತ್ತಿದ್ದು, ಆ ಪಕ್ಷದಲ್ಲಿ ಕೂಡ ಈವರೆಗೂ ಅಭ್ಯರ್ಥಿಗಳ ಗೊಂದಲ ಬಗೆಹರಿದಿಲ್ಲ. ಹೀಗಾಗಿ `ಯಾರಿಗಂತೆ ಮಾರಾಯ್ರೆ ಟಿಕೆಟ್?~ ಎನ್ನುವ ಮಾತು ಸದ್ಯಕ್ಕೆ ಕುತೂಹಲವಾಗಿಯೇ ಇರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT