ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನೋಂದಣಾಧಿಕಾರಿ ಅಮಾನತಿಗೆ ಆಗ್ರಹ

Last Updated 18 ಆಗಸ್ಟ್ 2012, 8:05 IST
ಅಕ್ಷರ ಗಾತ್ರ

ಬಂಗಾರಪೇಟೆ: ಅನಧಿಕೃತ ಬಡಾವಣೆಗಳಲ್ಲಿನ ನಿವೇಶನಗಳನ್ನು ನಗರಾಭಿವೃದ್ಧಿ ಪ್ರಾಧಿಕಾರದ ಸಮ್ಮತಿ ಇಲ್ಲದೆ ನೋಂದಣಿ ಮಾಡಿಕೊಳ್ಳುತ್ತಿರುವ ಬಂಗಾರಪೇಟೆ ಉಪನೋಂದಣಿ ಅಧಿಕಾರಿ ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಮತ್ತು ಮಹಿಳೆಯರು ಶುಕ್ರವಾರ ಉಪ ನೋಂದಣಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಕೆಲ ಅನಧಿಕೃತ ಬಡಾವಣೆಗಳಲ್ಲಿಯ ಖಾಲಿ ನಿವೇಶನಗಳಿಗೆ ಕೆಜಿಎಫ್ ನಗರಾಭಿವೃದ್ಧಿ ಪ್ರಾಧಿಕಾರ ಅನುಮತಿ ನೀಡಿಲ್ಲ. ಆದರೂ ಪಟ್ಟಣದ ಪುರಸಭೆ ಕಚೇರಿಯಲ್ಲಿ ನೀಡಲಾಗಿರುವ ಬೋಗಸ್ ಖಾತೆ ಆಧಾರಾದ ಮೇಲೆ ನೋಂದಣಿ ಮಾಡಲಾಗುತ್ತಿದೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ಆರೋಪಿಸಿದರು.

ಕಸಬಾ ಹೋಬಳಿ ದೇಶಳ್ಳಿ ಗ್ರಾಮದ ಸರ್ವೇ ನಂ ಐದು ವಿವಾದಿತ ಸ್ಥಳ ಆಗಿದ್ದು, ಇದಕ್ಕೆ ಸಂಬಂಧಿಸಿದ ಪ್ರಕರಣ ನ್ಯಾಯಾಲಯದಲ್ಲಿದೆ. ಈ ವಿಷಯದ ಬಗ್ಗೆ ನೋಂದಣಿ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದರೂ, ಪರಿಶೀಲಿಸದೆ ನೋಂದಣಿ ಪ್ರಕ್ರಿಯೆ ನಡೆಸಿ, ಸರ್ಕಾರಿ ನಿಯಮ ಉಲ್ಲಂಘಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೂಡಲೇ ನೋಂದಣಿ ಅಧಿಕಾರಿಗಳನ್ನು ಅಮಾನುತುಗೊಳಿಸಿ, ಬೋಗಸ್ ದಾಖಲೆಗಳ ಮೇಲೆ ನೋಂದಣಿ ಮಾಡಿರುವುದನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.ಸಮಿತಿಯ ಜಿಲ್ಲಾ ಘಟಕದ ಸಂಚಾಲಕ ಸೂಲಿಕುಂಟೆ ರಮೇಶ್, ತಾಲ್ಲೂಕು ಘಟಕದ ಸಂಚಾಲಕ ಕೆ.ಪಳನಿ, ಸಂಘಟನಾ ಸಂಚಾಲಕ ಎಚ್.ರಾಮೂರ್ತಿ, ನಗರ ಸಂಚಾಲಕ ಎನ್.ಕುಟ್ಟಿ, ಜಿಲ್ಲಾ ಸಂಘಟನಾ ಸಂಚಾಲಕ ರಮಣ ಕುಮಾರ್, ತಾಲ್ಲೂಕು ಸಂಘಟನಾ ಸಂಚಾಲಕ ಎಸ್.ಶ್ರೀನಿವಾಸ್ ರವೀಂದ್ರ ಮತ್ತು ಹೆಚ್ಚಿನ ಸಂಖ್ಯೆಯ ಮಹಿಳೆಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ದಾಳಿ ವದಂತಿ: ಪಹರೆ
ಬಂಗಾರಪೇಟೆ: ಬೆಂಗಳೂರಿನಲ್ಲಿ ಅಸ್ಸಾಂ ಮತ್ತಿತರರ ಈಶಾನ್ಯ ಭಾರತದ ನಿವಾಸಿಗಳ ಮೇಲೆ ದಾಳಿ ವದಂತಿ ಹಿನ್ನೆಲೆಯಲ್ಲಿ ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಶ್ವಾನ ಮತ್ತು ಬಾಂಬ್ ನಿರೋಧಕ ದಳದವರು ಪರಿಶೀಲನೆ ನಡೆಸಿದರು.

ನಿತ್ಯ ರೈಲಿನ ಜೊತೆಗೆ ಮೂರು ವಿಶೇಷ ರೈಲುಗಳು ಈ ಮಾರ್ಗದಲ್ಲಿ ಸಂಚರಿಸಿದವು. ಗುರುವಾರ ರಾತ್ರಿ 9ರಿಂದ ಬೆಳಿಗ್ಗೆ 3ರವರೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.ಡಿವೈಎಸ್ಪಿ ಪುಟ್ಟಮಾದಯ್ಯ,  ಸಿಪಿಐ ಶಿವಕುಮಾರ್ ಸಬ್ ಇನ್ಸ್‌ಪೆಕ್ಟರ್ ಅಶ್ವತ್ಥನಾರಾಯಣ ಸ್ವಾಮಿ, ಮದುಸೂಧನ್, ರೈಲ್ವೆ   ಇನ್ಸ್‌ಪೆಕ್ಟರ್ ಮುನಿಯಪ್ಪ, ಆರ್‌ಪಿಎಫ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT