ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪನ್ಯಾಸಕರ ನೇಮಕಕ್ಕೆ ಒತ್ತಾಯಿಸಿ ಧರಣಿ

Last Updated 7 ಸೆಪ್ಟೆಂಬರ್ 2013, 6:02 IST
ಅಕ್ಷರ ಗಾತ್ರ

ಸಿಂಧನೂರು: ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಪದವಿ ಮತ್ತು ಸ್ನಾತಕೋತ್ತರ ತರಗತಿಗಳಿಗೆ ಪಾಠ ಮಾಡಲು ಉಪನ್ಯಾಸಕರೇ ಇಲ್ಲದ ಕಾರಣ ಬೇಸತ್ತ ವಿದ್ಯಾರ್ಥಿಗಳು ಶುಕ್ರವಾರ ತರಗತಿ ಬಹಿಷ್ಕರಿಸಿ ಕಾಲೇಜು ಮುಂಭಾಗದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ಕಾಲೇಜಿನಲ್ಲಿ ಗಣಿತ, ರಸಾಯನಶಾಸ್ತ್ರ, ಇತಿಹಾಸ, ಪರಿಸರ ಅಧ್ಯಯನ ವಿಷಯಗಳ ಬೋಧಕರೇ ಇಲ್ಲ. ಗ್ರಂಥಾಲಯದಲ್ಲಿ ಪುಸ್ತಕಗಳಿಲ್ಲ.

ವಾಚನಾಲಯ ಅವ್ಯವಸ್ಥೆಗಳ ಆಗರವಾಗಿದೆ. ವಾಚನಾಲಯದಲ್ಲಿ ಮ್ಯಾಗಜಿನ್, ಪಠ್ಯಪುಸ್ತಕಗಳಿಲ್ಲ. ಒಂದೂವರೆ ಸಾವಿರ ವಿದ್ಯಾರ್ಥಿಗಳಿದ್ದರೂ ಕುಡಿಯುವ ನೀರಿನ ಸೌಲಭ್ಯ ಹಾಗೂ ಸಮರ್ಪಕ ಶೌಚಾಲಯವಿಲ್ಲ. ಮಳೆ ಬಂದರೆ ತರಗತಿ ಕೋಣೆಗಳು ಸೋರುತ್ತಿದ್ದು ಮೇಲ್ಛಾವಣಿ ಶಿಥಿಲಾವಸ್ಥೆಯಲ್ಲಿ ಇದೆ. ಪ್ರಯೋಗಾಲಯಕ್ಕೆ ಸಹಾಯಕರಿಲ್ಲ, ಕ್ರೀಡಾ ಸಾಮಗ್ರಿಗಳಿಲ್ಲ ಎಂದು ಆಗ್ರಹಿಸಿ ವಿದ್ಯಾರ್ಥಿಗಳಾದ ಬಸವರಾಜ, ಪಂಪನಗೌಡ, ಮಂಜುನಾಥ, ಯಾಸ್ಮಿನ್, ಗೀತಾ, ಶಿವಲೀಲಾ, ಅಯ್ಯಪ್ಪ, ವೀರೇಶ ಹೂಗಾರ, ಅಂದಾನಯ್ಯ ಮತ್ತಿತರರು ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್‌ರ ಗಮನ ಸೆಳೆದರು.

ವಿದ್ಯಾರ್ಥಿಗಳ ಅಹವಾಲು ಆಲಿಸಿದ ತಹಶೀಲ್ದಾರ ಯಂಕನಗೌಡ ಆರ್.ಪಾಟೀಲ್ ವಿದ್ಯಾರ್ಥಿಗಳ ಬೇಡಿಕೆ ಆಧರಿಸಿ 12 ದಿನದೊಳಗೆ ಆದ್ಯತೆ ಮೇರೆಗೆ ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು. ಈಗಾಗಲೇ ಶಾಸಕ ಬಾದರ್ಲಿ ಹಂಪನಗೌಡರ ಮನವಿ ಮೇರೆಗೆ ಗಂಗಾವತಿಯಿಂದ ಭೌತಶಾಸ್ತ್ರದ ಶಿವಕುಮಾರ, ರಸಾಯನಶಾಸ್ತ್ರದ ಯಂಕಪ್ಪ ಅಂಗಡಿ, ಗಣಿತಶಾಸ್ತ್ರದ ಇಮ್ಯಾನುಯಲ್ ಸಂಜಯ್‌ನಾಥ ಅವರನ್ನು ವರ್ಗಾಯಿಸಲಾಗಿದ್ದು ಇಷ್ಟರಲ್ಲಿಯೇ ಸೇವೆಗೆ ಹಾಜರಾಗಬಹುದು ಎಂದು ಪ್ರಾಚಾರ್ಯ ಪ್ರಹ್ಲಾದರೆಡ್ಡಿ ತಿಳಿಸಿದರು. ಆದರೆ ಅಲ್ಲಿಯ ಶಾಸಕ ಇಕ್ಬಾಲ್ ಅನ್ಸಾರಿ ಅವರು ಉಪನ್ಯಾಸಕರನ್ನು ಬಿಡುಗಡೆ ಮಾಡದಂತೆ ಪ್ರಾಚಾರ್ಯರಿಗೆ ಸೂಚಿಸಿದ್ದಾರೆಂದು ಹೆಸರು ಹೇಳಲಿಚ್ಚಿಸದ ಉಪನ್ಯಾಸಕರೊಬ್ಬರು ತಿಳಿಸಿದರು.

ಪರಿಹಾರಕ್ಕೆ ಪ್ರಯತ್ನ: ಸ್ಥಳೀಯ ಸಮಸ್ಯೆಗಳಾದ ವಾಚನಾಲಯ, ಪುಸ್ತಕ ಕೊರತೆ, ಪ್ರಯೋಗಾಲ ಸಹಾಯಕರ ಕೊರತೆ ಆದಷ್ಟು ಶೀಘ್ರವೇ ಪರಿಹರಿಸಲಾಗುವುದು. ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಲು ಶಾಸಕರು ಭರವಸೆ ನೀಡಿದ್ದಾರೆ ಎಂದು ಪ್ರಾಚಾರ್ಯ ಪ್ರಹ್ಲಾದರೆಡ್ಡಿ ತಿಳಿಸಿದರು.

ತಹಶೀಲ್ದಾರ ಮತ್ತು ಪ್ರಾಚಾರ್ಯರ ಭರವಸೆ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಧರಣಿ ಸತ್ಯಾಗ್ರಹವನ್ನು ಹಿಂತೆಗೆದುಕೊಂಡರು. ಸಿಪಿಐ ಶೇಖರಪ್ಪ ಎಚ್., ಪತಂಜಲಿ ಯೋಗ ಸಮಿತಿ ಎಂ.ಭಾಸ್ಕರ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT