ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪವಾಸ ಅಂತ್ಯ ಸನ್ನಿಹಿತ ?

Last Updated 25 ಆಗಸ್ಟ್ 2011, 18:40 IST
ಅಕ್ಷರ ಗಾತ್ರ

ನವದೆಹಲಿ: ನಾಗರಿಕ ಸಮಿತಿಯ ಜನ ಲೋಕಪಾಲ ಮಸೂದೆಯನ್ನು ಪ್ರಧಾನವಾಗಿಸಿಕೊಂಡು ಈ ಸಂಬಂಧದ ನಾಲ್ಕು ಮಸೂದೆಗಳ ಕುರಿತು ಸಂಸತ್ತಿನಲ್ಲಿ ಶುಕ್ರವಾರ ಚರ್ಚೆ ಆರಂಭಿಸುವುದಾಗಿ ಸರ್ಕಾರ ಪ್ರಕಟಿಸಿದೆ. ಈ ಹಿನ್ನೆಲೆಯಲ್ಲಿ ಆ.16ರಿಂದ ಉಪವಾಸ ಕುಳಿತಿರುವ 74 ವರ್ಷದ ಮುಂದಾಳು ಅಣ್ಣಾ ಹಜಾರೆ ಉಪವಾಸ ಶುಕ್ರವಾರ ಕೊನೆಯಾಗುವ ನಿರೀಕ್ಷೆ ಇದೆ.

ಅಣ್ಣಾ ಉಪವಾಸಕ್ಕೆ ತೆರೆ ಎಳೆದರೂ ಪ್ರತಿಭಟನೆ ಮುಂದುವರಿಸುವ ಸಾಧ್ಯತೆಗಳು ಇವೆ. `ಈ ಸಂಬಂಧದ ಮಸೂದೆಗಳ ಬಗ್ಗೆ ಸಂಸತ್ತಿನಲ್ಲಿ ಚರ್ಚಿಸಲು ಸಿದ್ಧ~ ಎಂದು ಘೋಷಿಸಿದ ಸರ್ಕಾರ ಅಣ್ಣಾ ಗುರುವಾರವೇ ಉಪವಾಸ ಕೊನೆಗೊಳಿಸಬಹುದೆಂದು ನಿರೀಕ್ಷಿಸಿತ್ತು. ಆದರೆ ಅದು ಹುಸಿಯಾಯಿತು.

`ಸರ್ಕಾರಕ್ಕೆ ಪ್ರಬಲ ಮಸೂದೆ ತರುವ ಇಚ್ಛೆ ಇದ್ದರೆ ಶುಕ್ರವಾರವೇ ಸದನದಲ್ಲಿ ಚರ್ಚೆ ಆರಂಭಿಸಲಿ. ನಾವು ಒತ್ತಿ ಹೇಳುತ್ತಿರುವ ಮೂರು ಪ್ರಮುಖ ಅಂಶಗಳನ್ನು ಮಸೂದೆಯಲ್ಲಿ ಅಡಕಗೊಳಿಸುವ ಬಗ್ಗೆ ನಿರ್ಣಯ ಅಂಗೀಕರಿಸಿದ ನಂತರವಷ್ಟೇ ಉಪವಾಸ ಕೊನೆಗೊಳಿಸುವ ಮಾತು~ ಎಂದು ಅಣ್ಣಾ ಸ್ಪಷ್ಟಪಡಿಸಿದ್ದಾರೆ.
ಆದರೆ ಅಣ್ಣಾ ಬಳಗದವರೇ ಆದ ಪ್ರಶಾಂತ್ ಭೂಷಣ್, ಸ್ವಾಮಿ ಅಗ್ನಿವೇಶ್ ಮತ್ತಿತರರು ಇದು ಉಪವಾಸ ಮುಕ್ತಾಯಗೊಳಿಸಲು ಸೂಕ್ತ ಸಮಯ ಎಂದಿದ್ದಾರೆ.

ಕೆಳ ಹಂತದ ಅಧಿಕಾರಿಗಳನ್ನು ಲೋಕಪಾಲ ವ್ಯಾಪ್ತಿಗೆ ಒಳಪಡಿಸಬೇಕು; ಎಲ್ಲ ರಾಜ್ಯಗಳಲ್ಲೂ ಲೋಕಾಯುಕ್ತ ವ್ಯವಸ್ಥೆ ಜಾರಿಗೊಳಿಸಬೇಕು; ಪ್ರತಿಯೊಂದು ಇಲಾಖೆಯ ಪ್ರತಿ ಕೆಲಸಕ್ಕೆ ಸಮಯದ ಗಡುವು ನಿಗದಿಪಡಿಸಿ ಅದನ್ನು ಕಚೇರಿಗಳ ಮುಂದೆ ಪ್ರದರ್ಶಿಸಬೇಕು- ಇವು ನಾಗರಿಕ ಸಮಿತಿಯ ಮೂರು ಪ್ರಮುಖ ಬೇಡಿಕೆಗಳಾಗಿವೆ.

ಈ ಮುನ್ನ ಪ್ರಧಾನಿ ದೂತರಾಗಿ ಗುರುವಾರ ಎರಡು ಬಾರಿ ಅಣ್ಣಾ ಅವರನ್ನು ಭೇಟಿಯಾದ ಕೇಂದ್ರ ಸಚಿವ ಹಾಗೂ ವಿಲಾಸ್‌ರಾವ್ ದೇಶ್‌ಮುಖ್ ಸದನ ಆರಂಭವಾಗುವ ಮುನ್ನ ಅವರನ್ನು ಮತ್ತೊಮ್ಮೆ ಭೇಟಿಯಾಗುತ್ತಾರೆ ಎನ್ನಲಾಗಿದೆ.

ಮತ್ತೊಂದೆಡೆ ಅಣ್ಣಾ ಬಳಗದ ಪ್ರಮುಖರು ಪ್ರಮುಖ ಪ್ರತಿಪಕ್ಷ ಬಿಜೆಪಿಯ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಸೇರಿ ಹಲವರನ್ನು ರಾತ್ರಿ ಭೇಟಿಯಾಗಿ ಚರ್ಚಿಸಿದರು. ಜನ ಲೋಕಪಾಲ ಮಸೂದೆಯಯನ್ನು ಬೆಂಬಲಿಸುವುದಾಗಿ ಪಕ್ಷದ ಅಧ್ಯಕ್ಷ ನಿತಿನ್ ಗಡ್ಕರಿ ಹೇಳಿದ್ದಾರೆ.

ಗುರುವಾರ ದಿನವಿಡೀ  ಉಭಯ ಬಣಗಳಲ್ಲೂ ಬಿಡುವಿಲ್ಲದ ಸಭೆಗಳು ಮತ್ತು ಸಮಾಲೋಚನೆ ನಡೆದವು. ಮನಮೋಹನ್ ಸಿಂಗ್ ಬೆಳಿಗ್ಗೆ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ಗೃಹ ಸಚಿವ ಪಿ. ಚಿದಂಬರಂ, ಕಾನೂನು ಸಚಿವ ಸಲ್ಮಾನ್ ಖುರ್ಷಿದ್ ಮತ್ತಿತರ ಹಿರಿಯ ಸಚಿವರ ಜತೆ ಸುದೀರ್ಘ ಸಮಾಲೋಚನೆ ನಡೆಸಿದರು. ಪ್ರಣವ್ ಮುಖರ್ಜಿ ಎರಡು ದಿನಗಳಿಂದ ಅಣ್ಣಾ ತಂಡದ ಜತೆ ನಡೆಸಿದ ಮಾತುಕತೆ ವಿವರಗಳನ್ನು ಸಿಂಗ್ ಅವರಿಗೆ ನೀಡಿದರು.

ಸಂಜೆ ಪ್ರಣವ್ ಅವರು ಸಲ್ಮಾನ್,  ಅಂಬಿಕಾ ಸೋನಿ ಮತ್ತಿತರ ಸಚಿವರ ಜತೆ ಮಾತುಕತೆ ನಡೆಸಿದರು. ಈ ಮಧ್ಯೆ, ಪ್ರಧಾನಿ ಮನೆ ಮುಂದೆ ಅಣ್ಣಾ ಬೆಂಬಲಿಗರು ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾದರು.

ಜನ ಲೋಕಪಾಲ ಮಸೂದೆ ಒಳಗೊಂಡು ಈ ಸಂಬಂಧದದ ಎಲ್ಲ ಮಸೂದೆಗಳ ಮೇಲೂ ಸಂಸತ್ತಿನಲ್ಲಿ ಚರ್ಚೆ ನಡೆಸುವುದಾಗಿ ಪ್ರಧಾನಿ ಲೋಕಸಭೆಯಲ್ಲಿ ಪ್ರಕಟಿಸಿದರು. ಸರ್ಕಾರದ ಈ ಘೋಷಣೆ ಬಳಿಕ ಅಣ್ಣಾ ಉಪವಾಸ ಕೊನೆಗೊಳ್ಳಬಹುದೆಂಬ ನಿರೀಕ್ಷೆ ಫಲಿಸಲಿಲ್ಲ. ಜನ ಲೋಕಪಾಲ ಮಸೂದೆ ಮೇಲಿನ ನಿರ್ಣಯಕ್ಕೆ ಅಣ್ಣಾ ತಂಡ ಜೋತು ಬಿದ್ದಿತು.

ಸಂಸತ್ತು ಶುಕ್ರವಾರದಿಂದ ಸರ್ಕಾರದ ಲೋಕಪಾಲ್, ಅಣ್ಣಾ ತಂಡದ ಜನ ಲೋಕಪಾಲ್, ಅರುಣಾ ರಾಯ್ ಹಾಗೂ ಹೈದ್ರಾಬಾದ್ ಮೂಲದ ಜೆ. ಪಿ. ನಾರಾಯಣ್ ಕರಡುಗಳನ್ನೊಳಗೊಂಡು ಎಲ್ಲ ಮಸೂದೆಗಳ ಮೇಲೂ ಚರ್ಚೆ ನಡೆಸಲಿದೆ.

ಮತ ಹಾಕಲು ಅವಕಾಶವಿರುವ ನಿಯಮ 184ರ ಅಡಿಯಲ್ಲೇ ಚರ್ಚೆ ನಡೆಯಲಿದೆ ಎಂದು ಕಾಂಗ್ರೆಸ್ ಮೂಲಗಳು ರಾತ್ರಿ ಹೇಳಿವೆ.

`ಜನ ಲೋಕಪಾಲ ಮತ್ತಿತರ ಹೊರಗಿನ ಮಸೂದೆಗಳನ್ನು ಸಂಸತ್ತಿನ ಮುಂದೆ ತರಲು ಯಾವ ವಿಧಾನ ಅನುಸರಿಸಬೇಕೆಂಬ ಬಗ್ಗೆ ಆಲೋಚಿಸಲಾಗುತ್ತಿದೆ~ ಎಂದು ಸಂಸದೀಯ ವ್ಯವಹಾರ ಸಚಿವ ಪಿ.ಕೆ. ಬನ್ಸಲ್ ತಿಳಿಸಿದ್ದಾರೆ.

ಎಲ್ಲ ರಾಜ್ಯಗಳಲ್ಲಿ ಲೋಕಾಯುಕ್ತ ಸಂಸ್ಥೆ ಜಾರಿಗೆ ಬರಬೇಕು ಎಂಬ ನಾಗರಿಕ ಸಮಿತಿ ಪಟ್ಟು ಹಾಕಿದ್ದರೆ,  `ಲೋಕಾಯುಕ್ತ ರಚನೆ ರಾಜ್ಯಕ್ಕೆ ಸಂಬಂಧಪಟ್ಟ ವಿಷಯ. ರಾಜ್ಯದ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ತನಗೆ ಅಧಿಕಾರವಿಲ್ಲ~ ಎಂದು ಕೇಂದ್ರ ಹೇಳುತ್ತಿದೆ.

ಸರ್ಕಾರದ ಸಿ ಮತ್ತು ಡಿ ವರ್ಗದ ನೌಕರರನ್ನು ಲೋಕಪಾಲದ ವ್ಯಾಪ್ತಿಗೆ ತರಬೇಕೆಂಬುದು ಅಣ್ಣಾ ತಂಡದ ಮತ್ತೊಂದು ಪಟ್ಟು.  ಆದರೆ, ಕೇಂದ್ರ ಮತ್ತು ರಾಜ್ಯಗಳಲ್ಲಿ 1.4 ಕೋಟಿಯಷ್ಟು ಇರುವ ನೌಕರರನ್ನು ಮಸೂದೆ ವ್ಯಾಪ್ತಿಗೆ ತರುವುದು ಕಷ್ಟದ ಮಾತು; ಇದಕ್ಕೆ ಬೇರೆ ಪರ್ಯಾಯ ಏನು ಎಂಬ ಬಗ್ಗೆ ಚಿಂತಿಸಬಹುದೆಂದು ಸರ್ಕಾರ ಹೇಳುತ್ತಿದೆ.

ಅಲ್ಲದೆ, ಎಲ್ಲ ಇಲಾಖೆಗಳಿಗೂ ಜನರ ಕೆಲಸ-ಕಾರ್ಯಗಳನ್ನು ಪೂರ್ಣಗೊಳಿಸಲು ಕಾಲಮಿತಿ ನಿಗದಿಪಡಿಸಬೇಕೆಂಬ ಷರತ್ತು ಅಣ್ಣಾ ತಂಡದ್ದು. ಇದು ಆಗದ ಕೆಲಸ ಎಂಬುದು ಸರ್ಕಾರದ ವಾದ. ಈ ಮೂರು ಅಂಶಗಳನ್ನು ಉಭಯ ಬಣಗಳು `ಪ್ರತಿಷ್ಠೆ ಪ್ರಶ್ನೆ~ ಮಾಡಿಕೊಂಡಿರುವುದರಿಂದ ಬಿಕ್ಕಟ್ಟು ಮುಂದುವರಿದಿದೆ.

ಕ್ಷೀಣಿಸುತ್ತಿರುವ ಅಣ್ಣಾ ಆರೋಗ್ಯ
ನವದೆಹಲಿ:
ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ  ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಹತ್ತನೇ ದಿನಕ್ಕೆ ಕಾಲಿಟ್ಟಿದ್ದು, ಅವರ ಆರೋಗ್ಯ ಕ್ಷಿಣಿಸುತ್ತಿದೆ. ಆದರೂ ಸ್ಥಿರವಾಗಿದೆ ಎಂದು ಅವರನ್ನು ನೋಡಿಕೊಳ್ಳುತ್ತಿರುವ ವೈದ್ಯರು ತಿಳಿಸಿದ್ದಾರೆ.

ರಕ್ತ ಮಾದರಿ ಪರೀಕ್ಷೆಯಿಂದ ಅಣ್ಣಾ ಆರೋಗ್ಯ ಉತ್ತಮವಾಗಿದೆ. ಆದರೆ ಅವರ ದೇಹ ತೂಕ ಆರು ಕೆ.ಜಿ.ಯಷ್ಟು ಕಡಿಮೆ ಆಗಿದೆ. ಇದು ಆತಂಕಕ್ಕೆ ಕಾರಣವಾದ ಅಂಶ ಎಂದು ಅಣ್ಣಾ ಆರೋಗ್ಯದ ಮೇಲ್ವಿಚಾರಣೆ ನಡೆಸುತ್ತಿರುವ ಖ್ಯಾತ ಹೃದ್ರೋಗ ತಜ್ಞ ನರೇಶ್ ಟ್ರೆಹಾನ್ ತಿಳಿಸಿದರು.

ರಕ್ತದೊತ್ತಡ ಮತ್ತು ಎದೆಬಡಿತ ಸಮನಾಗಿದೆ. ಅಣ್ಣಾ ಆರು ಲೀಟರ್ ನೀರು ಕುಡಿದಿದ್ದು, ಇದು ರಕ್ತದಲ್ಲಿನ ಕೆಟೊನ್ ಪ್ರಮಾಣವನ್ನು ಸಮಸ್ಥಿತಿಯಲ್ಲಿಟ್ಟಿದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವಂತೆ ವೈದ್ಯರು ಸಲಹೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT