ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪವಾಸ ಬಿಡದ ಯೋಗಗುರು: ಮೈದಾನ ಸುತ್ತುವರಿದ ಪೊಲೀಸರು

Last Updated 4 ಜೂನ್ 2011, 20:50 IST
ಅಕ್ಷರ ಗಾತ್ರ

ನವದೆಹಲಿ: ವಿದೇಶಗಳಲ್ಲಿರುವ ಕಪ್ಪುಹಣ ವಾಪಸು ತರಬೇಕೆಂದು ಶನಿವಾರ ಬೆಳಿಗ್ಗೆ ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದ ಯೋಗ ಗುರು ಬಾಬಾ ರಾಮ್‌ದೇವ್ ಅವರನ್ನು ಆರಂಭದಲ್ಲಿ ಸಂಧಾನದ ಮೂಲಕ ಮನವೊಲಿಸಲು ಯತ್ನಿಸಿದ ಸರ್ಕಾರ ಸಂಜೆಯ ವೇಳೆಗೆ ಒತ್ತಡ ತಂತ್ರ ಅನುಸರಿಸುತ್ತಿದ್ದಂತೆ ಸರ್ಕಾರ ಹಾಗೂ ರಾಮ್‌ದೇವ್ ನಡುವಿನ ಸಂಘರ್ಷ ತಾರಕಕ್ಕೆ ಏರಿತು.

ಈ ಮಧ್ಯೆ ಕಪ್ಪುಹಣವನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸುವುದಕ್ಕೆ ಪೂರಕವಾದ ನಿಯಮಾವಳಿ ರೂಪಿಸಲು ಸಮಿತಿ ರಚನೆಗೆ ಒಪ್ಪಿ ಸರ್ಕಾರವು ರಾಮ್‌ದೇವ್ ಅವರಿಗೆ ತಡರಾತ್ರಿ ಲಿಖಿತ ಪತ್ರ ರವಾನಿಸಿದ್ದು, ಅದು ರಾಮ್‌ದೇವ್ ಅವರನ್ನು ತಲುಪಿದೆ ಎನ್ನಲಾಗಿದೆ. ಮಧ್ಯರಾತ್ರಿ ನಂತರ ಪೊಲೀಸರು ಮೈದಾನ ಸುತ್ತುವರಿದಿದ್ದು ಬಾಬಾ ಅವರನ್ನು ಬಂಧಿಸುವ ಸಾಧ್ಯತೆ ಇದೆ ಎಂಬ ವದಂತಿ ಹರಡಿದೆ.

ಇದಕ್ಕೆ ಮುನ್ನ, ತಮ್ಮ ಬಹುತೇಕ ಬೇಡಿಕೆಗಳ ಬಗ್ಗೆ ಸರ್ಕಾರ ಸಹಮತ ಹೊಂದಿರುವುದರಿಂದ ಸಂಜೆ 4ರ ವೇಳೆಗೆ ಉಪವಾಸ ಕೊನೆಗೊಳಿಸುವುದಾಗಿ ಬಾಬಾ ರಾಮ್‌ದೇವ್ ಅವರು ನೀಡಿದ್ದ ಪತ್ರವನ್ನು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಕೇಂದ್ರ ಸಚಿವ ಕಪಿಲ್ ಸಿಬಲ್ ಸುದ್ದಿಗೋಷ್ಠಿಯಲ್ಲಿ ಬಹಿರಂಗಗೊಳಿಸುವ ಮೂಲಕ ಅವರ ಮೇಲೆ ಒತ್ತಡ ಹೇರಿದರು. ಯೋಗಗುರುವಿನ ಸಮ್ಮುಖದಲ್ಲಿ ಅವರ ಪ್ರಮುಖ ಆಪ್ತಸಹಾಯಕ ಆಚಾರ್ಯ ಬಾಲಕೃಷ್ಣನ್ ಇದಕ್ಕೆ ಸಹಿ ಹಾಕಿದ್ದರು. ಆದರೆ ರಾಮ್‌ದೇವ್ ಅವರು ಆಡಿದ್ದ ಮಾತಿನಂತೆ ನಡೆದುಕೊಂಡಿಲ್ಲ ಎಂದು ಅವರು ನೇರವಾಗಿ ದೂಷಿಸಿದರು.

ಸುದ್ದಿಗೋಷ್ಠಿಯಲ್ಲಿ ಕಟುವಾಗಿಯೇ ಮಾತನಾಡಿದ ಸಚಿವ ಸಿಬಲ್, `ಮಾತುಕತೆ ಮೂಲಕ ವಿವಾದ ಬಗೆಹರಿಸಿಕೊಳ್ಳಲು ಯತ್ನಿಸುತ್ತಿರುವ ಸರ್ಕಾರಕ್ಕೆ ಕಡಿವಾಣ ಹಾಕಲು ಹೇಗೆಂಬುದೂ ಗೊತ್ತು~ ಎಂದು ರಾಮ್‌ದೇವ್ ಅವರಿಗೆ ಪರೋಕ್ಷ ಎಚ್ಚರಿಕೆಯನ್ನೂ ನೀಡಿದರು. ಸರ್ಕಾರದ ಸಮಿತಿ ರಚನೆ ಪ್ರಸ್ತಾವದ ಬಗ್ಗೆ ಬಾಬಾ ತಪ್ಪು ತಿಳಿವಳಿಕೆ ಹೊಂದಿದ್ದಾರೆ ಎಂದು ದೂರಿದ ಸಿಬಲ್, ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸುವ ಸಾಧ್ಯತೆಯನ್ನು  ಖಡಾಖಂಡಿತವಾಗಿ ತಳ್ಳಿಹಾಕಿದರು.

ಇದೇ ವೇಳೆ, ರಾಮ್‌ದೇವ್ ಅವರು ತಮ್ಮ ಬೇಡಿಕೆಗಳ ಬಗ್ಗೆ ಪದೇ ಪದೇ ನಿಲುವು ಬದಲಿಸಿದ್ದರಿಂದ ಪತ್ರವನ್ನು ಬಹಿರಂಗಗೊಳಿಸಬೇಕಾಯಿತು ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.

ಇದಾಗುತ್ತಿದ್ದಂತೆ ತೀಕ್ಷ್ಣ ತಿರುಗೇಟು ನೀಡಿದ ರಾಮ್‌ದೇವ್, `ಉಪವಾಸ ಕೈಬಿಡುವ ಸಂಬಂಧದ ಪತ್ರವನ್ನು ಸರ್ಕಾರ ಬಲವಂತದಿಂದ ಬರೆಸಿಕೊಂಡಿತ್ತು~ ಎಂದು ಗಂಭೀರ ಆರೋಪ ಮಾಡಿದ ಅವರು, `ಸರ್ಕಾರದೊಂದಿಗೆ ಇನ್ನು ಮಾತುಕತೆ ನಡೆಸುವುದಿಲ್ಲ. ಸರ್ಕಾರ ವಿಶ್ವಾಸಘಾತ ಹಾಗೂ ವಂಚನೆ ಎಸಗಿದೆ.
ಕಪ್ಪುಹಣ ತಡೆಗೆ ಕಠಿಣ ನಿಯಮಾವಳಿ ರೂಪಿಸುವ ಬಗ್ಗೆ ಸರ್ಕಾರ ಲಿಖಿತ ಒಪ್ಪಿಗೆ ನೀಡುವ ತನಕ ಉಪವಾಸ ಕೈಬಿಡುವುದಿಲ್ಲ~ ಎಂದರು. `ಕಪಿಲ್ ಸಿಬಲ್ ಒಬ್ಬ ಸುಳ್ಳುಗಾರ. ಜೀವಮಾನದಲ್ಲಿ ಮತ್ತೊಮ್ಮೆ ಅವರ ಜತೆ ಇನ್ನೆಂದಿಗೂ ಮಾತನಾಡುವುದಿಲ್ಲ~ ಎಂದ ಅವರು, ಪ್ರಧಾನಿ ಸಿಂಗ್ ಅವರ ಬಗ್ಗೆ ತಮಗೆ ಈಗಲೂ ನಂಬಿಕೆ ಇದ್ದು, ಅವರ ನಿರ್ಧಾರವನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದರು. ಇದೇ ವೇಳೆ ರಾಮ್‌ದೇವ್ ಕೂಡ ಹಲವು ಪ್ರಶ್ನೆಗಳನ್ನು ಎದುರಿಸಬೇಕಾಯಿತು.

ತಾವು ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡದ್ದನ್ನು ಬೆಂಬಲಿಗರು, ಮಾಧ್ಯಮ ಹಾಗೂ ರಾಷ್ಟ್ರದ ಜನತೆಗೆ ತಿಳಿಸದೆ ಹೇಗೆ ಮುಚ್ಚಿಟ್ಟಿದ್ದಿರಿ ಎಂಬ ಮುಜುಗರದ ಪ್ರಶ್ನೆಗೆ ಅವರು ಉತ್ತರಿಸಬೇಕಾಯಿತು.
ಒಂದು ಹಂತದಲ್ಲಿ ಸಹನೆ ಕಳೆದುಕೊಂಡ ಯೋಗಗುರು, ತಮ್ಮ ಚಳವಳಿಯ ನಿಧಿ ಕ್ರೋಡೀಕರಣದ ಬಗ್ಗೆ ಸುದ್ದಿಗಾರರೊಬ್ಬರು ವಿವರಣೆ ಬಯಸಿದಾಗ, `ಒಂದು ಮಿತಿಯೊಳಗೆ ಪ್ರಶ್ನೆ ಕೇಳುವಂತೆ~ ಎಚ್ಚರಿಸಿದರು.

ಈ ಮುನ್ನ ಸಚಿವ ಪ್ರಣವ್ ಮುಖರ್ಜಿ ಅವರು, ಕಪಿಲ್ ಸಿಬಲ್, ಸುಬೋಧ್‌ಕಾಂತ್ ಸಹಾಯ್ ಮತ್ತು ಪಿ.ಚಿದಂಬರಂ ಅವರೊಂದಿಗೆ ಚರ್ಚಿಸಿ ಯೋಗ ಗುರು ಬೇಡಿಕೆಗಳ ಬಗ್ಗೆ ಚರ್ಚಿಸಿದ್ದರು. ಕೇಂದ್ರ ಸಂಪುಟ ಕಾರ್ಯದರ್ಶಿ ಕೆ.ಎಂ.ಚಂದ್ರಶೇಖರ್ ಮತ್ತು ಪ್ರಧಾನ ಮಂತ್ರಿಯವರ ಮುಖ್ಯ ಕಾರ್ಯದರ್ಶಿ ಟಿ.ಕೆ.ಎ.ನಾಯರ್ ಅವರೂ ಸಭೆಯಲ್ಲಿ ಪಾಲ್ಗೊಂಡಿದ್ದರು.

ಸಹಸ್ರಾರು ಜನರ ಸಮಾಗಮ: ಈ ಮಧ್ಯೆ ಯೋಗಗುರುವಿನ ಚಳವಳಿ ಬೆಂಬಲಿಸಿ ಸಾವಿರಾರು ಜನ ರಾಮ್‌ಲೀಲ್ ಮೈದಾನದಲ್ಲಿ ಸಮಾಗಮಗೊಂಡಿದ್ದಾರೆ. ಆರಂಭದ ದಿನ, ವಿಶ್ವ ಹಿಂದೂ ಪರಿಷತ್ ನಾಯಕಿ ಹಾಗೂ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿ ಸಾಧ್ವಿ ರಿತಂಬರ ಅವರು ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ತೀವ್ರ ಟೀಕೆಗೆ ಗುರಿಯಾಯಿತು.

ರಾಮ್‌ದೇವ್ ಅವರ ಚಳವಳಿಯ ಹಿಂದೆ ವಿಎಚ್‌ಪಿ ಮತ್ತು ಆರ್‌ಎಸ್‌ಎಸ್ ಕುಮ್ಮಕ್ಕು ಇದೆ ಎಂದು ಕಾಂಗ್ರೆಸ್ ಟೀಕಾಸ್ತ್ರ ಪ್ರಯೋಗಿಸಿದ್ದು, ಇದೊಂದು `ಪಂಚತಾರಾ ಉಪವಾಸ~ ಎಂದು ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರು ವ್ಯಂಗ್ಯವಾಡಿದ್ದಾರೆ.

ಈ ಟೀಕೆಗಳನ್ನು ಅಲ್ಲಗಳೆದಿರುವ ರಾಮ್‌ದೇವ್, `ಈ ಚಳವಳಿಯ ಹಿಂದೆ ಕೋಮುವಾದಿ ಕಾರ್ಯಸೂಚಿ ಇದೆ ಎನ್ನುತ್ತಿರುವವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ನಾನು ಈ ಚಳವಳಿಯ ಮೂಲಕ ರಾಷ್ಟ್ರದಲ್ಲಿ ಅಸ್ಥಿರತೆ ಮೂಡಿಸಲು ಯತ್ನಿಸುತ್ತಿದ್ದೇನೆ ಎಂಬ ಹೇಳಿಕೆಗಳಲ್ಲಿ ಹುರುಳಿಲ್ಲ~ ಎಂದಿದ್ದಾರೆ.

ಸಂಧಾನ ಮುರಿದು ಬಿದ್ದದ್ದು ಏಕೆ?
ಕಪ್ಪು ಹಣಕ್ಕೆ ಕಡಿವಾಣ ಹಾಕುವ, ವಿದೇಶಿ ಬ್ಯಾಂಕುಗಳಲ್ಲಿರುವ ಕಪ್ಪು ಹಣ ವಶಪಡಿಸಿಕೊಂಡು ಅದನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಬೇಕೆಂಬ ರಾಮ್‌ದೇವ್ ಅವರ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ. ಆದರೆ, ಭ್ರಷ್ಟಾಚಾರ ಆರೋಪಿಗಳಿಗೆ ಮರಣ ದಂಡನೆ ವಿಧಿಸಲು ಕೂಡ ಅವಕಾಶವಿರಬೇಕೆಂಬ ಬಾಬಾ ಅವರ ಬೇಡಿಕೆಯನ್ನು ಸರ್ಕಾರ ಒಪ್ಪಿಕೊಂಡಿಲ್ಲ. ಹಾಗೂ ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಬೇಕೆಂಬ ಯೋಗಗುರುವಿನ ಒತ್ತಾಯದ ಬಗ್ಗೆಯೂ ಸರ್ಕಾರಕ್ಕೆ ಸಹಮತವಿಲ್ಲದಿರುವುದು ಸಂಧಾನ ಮುರಿದುಬೀಳಲು ಪ್ರಮುಖ ಕಾರಣ ಎಂದು ಮೂಲಗಳು ತಿಳಿಸಿವೆ.

ಕಪ್ಪುಹಣ ಚಲಾವಣೆ ತಡೆ ನಿಟ್ಟಿನಲ್ಲಿ 500 ರೂಪಾಯಿ ಹಾಗೂ 1000 ರೂಪಾಯಿ ಮೌಲ್ಯದ ನೋಟುಗಳನ್ನು ನಿಷೇಧಿಸಬೇಕೆಂಬ ರಾಮ್‌ದೇವ್ ಅವರ ಬೇಡಿಕೆಯನ್ನೂ ಸರ್ಕಾರ ಸ್ಪಷ್ಟವಾಗಿ ತಳ್ಳಿಹಾಕಿದ್ದು, ಇದರಿಂದ ರಾಮ್‌ದೇವ್ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.ಉನ್ನತ ಶಿಕ್ಷಣದಲ್ಲಿ ಹಿಂದಿಯನ್ನು ಬೋಧನಾ ಭಾಷೆಯನ್ನಾಗಿ ಮಾಡಬೇಕೆಂಬ ಅವರ ಮತ್ತೊಂದು ಬೇಡಿಕೆಯನ್ನೂ ಸರ್ಕಾರ ಪರಿಗಣಿಸಿಲ್ಲ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT