ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪವಾಸದಲ್ಲೂ ಅದೇ ಕಾಯಕ

Last Updated 24 ಜುಲೈ 2013, 19:59 IST
ಅಕ್ಷರ ಗಾತ್ರ

ರಂಜಾನ್ ಮಾಸದಲ್ಲಿ ಮುಸ್ಲಿಂ ಬಾಂಧವರ ದಿನಚರಿ ಬೆಳಗಿನ ಜಾವ 3.30ಕ್ಕೆ ಪ್ರಾರಂಭಗೊಳ್ಳುತ್ತದೆ. ಅದು ಮುಗಿಯುವುದು ದಿನ ಕೊನೆಗೊಳ್ಳುವ ಕ್ಷಣಗಳಲ್ಲಿ. ಉಪವಾಸವಿದ್ದರೂ ಇವರ ದುಡಿಮೆ, ಸತತ ಕೆಲಸಗಳಲ್ಲಿ ಯಾವ ಬದಲಾವಣೆಯೂ ಇಲ್ಲ. ಹಾಗಿದ್ದೂ ಭಕ್ತಿಗೆ ಕುಂದು ಬರುವುದಿಲ್ಲ.

ಕುರಾನ್ ಪಠಣ ನಿಲ್ಲುವುದಿಲ್ಲ. ನಮಾಜು ತಪ್ಪುವುದಿಲ್ಲ. ರಂಜಾನ್ ಮಾಸದಲ್ಲಿ ಗಂಡು-ಹೆಣ್ಣು, ಹಿರಿಯ-ಕಿರಿಯ, ಮಕ್ಕಳು-ಮುದುಕರು ಎಂಬ ಭೇದವಿಲ್ಲದೆ ಎಲ್ಲರ ದಿನಚರಿಯೂ ಹೀಗೆಯೇ ಸಾಗುತ್ತಿರುತ್ತದೆ. ಶಿವಾಜಿನಗರಕ್ಕೆ ಹೊಂದಿಕೊಂಡಂತಿರುವ ಕಮರ್ಷಿಯಲ್ ಸ್ಟ್ರೀಟ್‌ನಲ್ಲಿ ದುಡಿವ ವರ್ಗದವರ ಸಂಖ್ಯೆ ದೊಡ್ಡದಿದೆ. ಇವರಲ್ಲಿ ಅನೇಕರು ಉಪವಾಸ ಮಾಡಿಕೊಂಡೇ ನಿತ್ಯ ಕಾಯಕವನ್ನು ಎಂದಿನಂತೆ ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಇಲ್ಲಿ ಸುಗಂಧದ್ರವ್ಯ, ಉಂಗುರ, ಪಿಂಗಾಣಿ ಪಾತ್ರೆ ಹಾಗೂ ಬಟ್ಟೆಗಳನ್ನು ಮಾರುವವರರು ಬೆಳಗಿನಿಂದ ಸಂಜೆವರೆಗೂ `ಸೌ ಕಾ ಚಾರ್... ಸೌ ಕಾ ಚಾರ್...' ಎನ್ನುತ್ತಾ ಗ್ರಾಹಕರನ್ನು ಸೆಳೆಯುತ್ತಿದ್ದರೂ ಅವರ ಮುಖಗಳಲ್ಲಿ ಬಸವಳಿದ ಭಾವ ಇಣುಕುವುದಿಲ್ಲ. ಅದು ಸಂಜೆ 6.30ರ ಸಮಯ. ಮಾರುಕಟ್ಟೆ ತುಂಬೆಲ್ಲಾ ಜನ ಗಿಜಿಗಿಡುತ್ತಿದ್ದರು. ಬುರ್ಖಾ ಧರಿಸಿದ್ದ ಮಹಿಳೆಯರು ಬಟ್ಟೆ-ಬರೆ, ಆಭರಣಗಳು, ಸುಗಂಧದ್ರವ್ಯ, ಶ್ಯಾವಿಗೆ ಖರೀದಿಯಲ್ಲಿ ಮೈಮರೆತಿದ್ದರು.

ಕೊಳ್ಳುವ, ಚೌಕಾಸಿ ಮಾಡುವ ವ್ಯಾಪಾರ, ವ್ಯವಹಾರ ಎಗ್ಗಿಲ್ಲದೆ ನಡೆದಿತ್ತು. ಗಡಿಯಾರದ ಮುಳ್ಳು 6.50ಕ್ಕೆ ಬಂದು ನಿಂತಾಗ ಇದ್ದಕ್ಕಿದ್ದಂತೆ ಇಡೀ ಮಾರುಕಟ್ಟೆ ನಿಶ್ಶಬ್ದಕ್ಕೆ ಜಾರಿತು. ಅದುವರೆಗೂ ವಸ್ತುಗಳ ಖರೀದಿ ಭರಾಟೆಯಲ್ಲಿದ್ದ ಜನರ ಚಿತ್ತ ಇಫ್ತಾರ್‌ನತ್ತ ಹೊರಳಿತು. ಪಕ್ಕದಲ್ಲಿದ್ದ ಮಸೀದಿಯ ಧ್ವನಿವರ್ಧಕದಲ್ಲಿ ನಮಾಜು ಮೊಳಗುತ್ತಿತ್ತು. ನೋಡ ನೋಡುತ್ತಿದ್ದಂತೆ ಜನರೆಲ್ಲಾ ಗುಂಪಾಗಿ ಕುಳಿತು ಲಘು ಉಪಹಾರಕ್ಕೆ ಅಣಿಯಾದರು.

ಸಾಮಾನು ಖರೀದಿಗೆಂದು ಬಂದಿದ್ದ ಮುಸ್ಲಿಂ ಕುಟುಂಬದ ಎಂಟ್ಹತ್ತು ಮಹಿಳೆಯರು ಡೇರೆ ಅಂಗಡಿ ಪಕ್ಕದಲ್ಲಿದ್ದ ಖಾಲಿ ಸ್ಥಳದಲ್ಲಿ ಸುತ್ತ ಕುಳಿತರು. ಅವರು ಬ್ಯಾಗಿನಲ್ಲಿಟ್ಟುಕೊಂಡಿದ್ದ ಕತ್ತರಿಸಿದ ಹಣ್ಣಿನ ಹೋಳುಗಳು, ಸಮೋಸಗಳು ಹೊರಕ್ಕೆ ಬಂದವು. ಅವುಗಳನ್ನು ಕೈಯಲ್ಲಿ ಹಿಡಿದುಕೊಂಡು ಮನಸ್ಸಿನಲ್ಲೇ ಅಲ್ಲಾಹುವಿಗೆ ವಂದಿಸಿ ಒಂದು ಖರ್ಜೂರ ತಿಂದು ದಿನದ ಉಪವಾಸ ಮುರಿದರು.

ಉಪವಾಸ ಮುರಿಯುವುದಕ್ಕೂ ಮುನ್ನ ಮಾರುಕಟ್ಟೆಯಲ್ಲಿ ಅನುರಣಿಸುತ್ತಿದ್ದ ಮಾತಿನ ಜಾಗವನ್ನು ಈಗ ಗರಿಗರಿ ಸಮೋಸಾ ಕಚ್ಚುವ ಸದ್ದು, ಮೆಲ್ಲುವ ಸದ್ದು ಆವರಿಸಿಕೊಂಡಿತ್ತು. ಖರೀದಿಗೆ ಬಂದಿದ್ದ ಗ್ರಾಹಕರು ಅಲ್ಲೇ ಬಿಕರಿಯಾಗುತ್ತಿದ್ದ ಹಣ್ಣಿನ ಗುಡ್ಡೆ, ಬನ್ನು-ಗುಲ್ಕನ್, ಸಮೋಸಾ, ಸಿಹಿ ಲಸ್ಸಿಯನ್ನು ಕೊಂಡು ಸವಿಯುತ್ತಿದ್ದರೆ, ಇತ್ತ ಅಂಗಡಿ ಮಾಲೀಕರು ಮತ್ತು ಅಲ್ಲಿ ಕೆಲಸ ಮಾಡುವ ಹುಡುಗರೆಲ್ಲಾ ಸುತ್ತ ಕುಳಿತು ಸಂಜೆಯ ಲಘು ಆಹಾರ ಸವಿಯುತ್ತಿದ್ದ ಬಿಡಿಬಿಡಿ ದೃಶ್ಯಗಳು ಸಾಮಾನ್ಯವಾಗಿದ್ದವು.

ಲಾಲ್ ಮಸೀದಿ ಮುಂಭಾಗದಲ್ಲಿರುವ `ಚೂಡಿ ಘರ್' ಅಂಗಡಿ ಮಾಲೀಕ ಸನಾವುಲ್ಲ ಅವರು ರಂಜಾನ್ ಮಾಸದಲ್ಲಿ ಕಟ್ಟುನಿಟ್ಟಾಗಿ ಉಪವಾಸವನ್ನು ಆಚರಿಸುತ್ತಾರೆ. ಬೆಳಿಗ್ಗೆ ಸೂರ್ಯೋದಯಕ್ಕೂ ಮುನ್ನ ಆಹಾರ ಸೇವಿಸಿ ಅಂಗಡಿಗೆ ಬಂದರೆ ರಾತ್ರಿ ಮನೆಗೆ ತೆರಳುವುದು ರಾತ್ರಿ ಹನ್ನೊಂದರ ನಂತರವೇ. ಅವರು ತಮ್ಮ ದಿನಚರಿಯನ್ನು ಹಂಚಿಕೊಂಡಿದ್ದು ಹೀಗೆ: `ಮನೆಯಲ್ಲಿ ಮಡದಿ, ಮೂವರು ಮಕ್ಕಳಿದ್ದಾರೆ.

ದೊಡ್ಡ ಮಗಳು ಪದವಿ ಮುಗಿಸಿ ರಿಲಯನ್ಸ್ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದಾಳೆ. ಎರಡನೇ ಮಗಳು ಈಗ ಪದವಿ ವ್ಯಾಸಂಗ ಮಾಡುತ್ತಿದ್ದಾಳೆ. ಮಗ ಚಿಕ್ಕವನು. ಐದನೇ ತರಗತಿಯಲ್ಲಿ ಓದುತ್ತಿದ್ದಾನೆ. ನಾವಿಷ್ಟೂ ಜನ ರಂಜಾನ್ ಮಾಸದಲ್ಲಿ ಕಟ್ಟುನಿಟ್ಟಾಗಿ ಉಪವಾಸ ಮಾಡುತ್ತೇವೆ. ಸೂರ್ಯ ಹುಟ್ಟುವುದಕ್ಕೂ ಮುನ್ನ ಆಹಾರ ತಿಂದ ನಂತರ ಏನನ್ನೂ ಸೇವಿಸುವುದಿಲ್ಲ.

ಸಂಜೆ 6.50ಕ್ಕೆ ಉಪವಾಸ ಬಿಟ್ಟಾಗ ಅಂಗಡಿಯಲ್ಲಿ ಕೆಲಸ ಮಾಡುವ ನಾಲ್ಕು ಹುಡುಗರ ಜತೆ ಸೇರಿ ವಿವಿಧ ಬಗೆಯ ಹಣ್ಣುಗಳು, ಅಕ್ಕಿಗಂಜಿ, ಸಮೋಸಾ, ಖರ್ಜೂರ ತಿನ್ನುತ್ತೇವೆ. ಎಲ್ಲರೂ ಒಟ್ಟಾಗಿ ತಿನ್ನುವಾಗ ಸಿಕ್ಕುವ ಖುಷಿ ಅವರ್ಣನೀಯ. ಹಸಿವು ನಮ್ಮನ್ನು ಅಷ್ಟಾಗಿ ಕಾಡುವುದಿಲ್ಲ. ಆನಂತರ ಮನೆಗೆ ಹೋದರೆ ಹೆಚ್ಚು ತಿನ್ನುವ ಮನಸ್ಸು ಬರುವುದಿಲ್ಲ. ಸಂಜೆ ಕೆಲಸಗಾರರ ಜತೆ ಸೇರಿ ತಿಂದ ಲಘು ಆಹಾರವೇ ಹೆಚ್ಚೆನಿಸುತ್ತದೆ. ಹಾಗಾಗಿ ರಾತ್ರಿ ಎರಡು ಚಪಾತಿ ತಿಂದಷ್ಟೇ ಮಲಗುತ್ತೇನೆ'.

`ಪ್ರತಿ ವರ್ಷವೂ ರಂಜಾನ್ ಹಬ್ಬ ಒಂದೇ ತಿಂಗಳಿನಲ್ಲಿ ಬರುವುದಿಲ್ಲ. ಉಪವಾಸದ ಹಬ್ಬ ಬೇಸಿಗೆ ತಿಂಗಳಿನಲ್ಲಿ ಬಂದಾಗ ಮಾತ್ರ ತುಸು ಕಷ್ಟವೆನಿಸುತ್ತದೆ. ಅದರಲ್ಲೂ ನೀರಿನ ಬಾಧೆ ತುಂಬಾ ಕಾಡುತ್ತದೆ' ಎಂದು ಮಾತು ಸೇರಿಸುತ್ತಾರೆ ಅವರು. ರಂಜಾನ್ ಮಾರುಕಟ್ಟೆಯಲ್ಲಿ ಮುಸ್ಲಿಮರಂತೆ ಹಿಂದೂಗಳು ಸಹ ವಿವಿಧ ಬಗೆಯ ವ್ಯಾಪಾರದಲ್ಲಿ ತೊಡಗಿರುವುದು ಕಾಣಿಸುತ್ತದೆ.

ತಮಿಳುನಾಡಿನ ದಿನೇಶ್ ಕುಮಾರ್ ಕಳೆದ ಐದು ವರ್ಷಗಳಿಂದ ಇಲ್ಲಿ ಸೇವಿಯಾ (ಶ್ಯಾವಿಗೆ), ಪೇಣಿ ಮಾರಾಟ ಮಾಡುತ್ತಿದ್ದಾರೆ. ಪವಿತ್ರ ರಂಜಾನ್ ಆಚರಣೆಯಲ್ಲಿ ಶ್ಯಾವಿಗೆ ಪಾತ್ರವನ್ನು ಅವರು ವಿವರಿಸುವುದು ಹೀಗೆ: `ನಗರ ಪ್ರದೇಶದಲ್ಲಿ ವಾಸವಿರುವ, ಸುಶಿಕ್ಷಿತರಾಗಿರುವವರು ಶ್ಯಾವಿಗೆ ಕೊಳ್ಳುವುದು ಕಮ್ಮಿ. ಆದರೆ, ಹಳ್ಳಿಗರು ಮತ್ತು ಬಡ ಮುಸ್ಲಿಂ ಮನೆಗಳಲ್ಲಿ ಶ್ಯಾವಿಗೆ ಎಂಬ ಸಿಹಿ ಇಲ್ಲದೇ ಈದ್ ಪೂರ್ಣವಾಗುವುದಿಲ್ಲ ಎಂಬ ನಂಬಿಕೆ ಉಳಿಸಿಕೊಂಡಿದ್ದಾರೆ.

ಅವರ ಈ ಸಂಸ್ಕೃತಿಯ ಅರಿವು ನಮಗೆ ಅನ್ನ ನೀಡುತ್ತದೆ. ಸಂಸ್ಕೃತಿಯ ಆರಾಧಕರು ಅವರು'. ಶ್ಯಾವಿಗೆ, ಪೇಣಿ ಕೊಳ್ಳಲು ಇಲ್ಲಿಗೆ ಯಶವಂತಪುರ, ಜಯನಗರ, ಯಲಹಂಕ ಹಾಗೂ ನಗರದ ಇತರೆ ಭಾಗಗಳಿಂದ ಗ್ರಾಹಕರು ಬರುತ್ತಾರೆ ಎನ್ನುವ ದಿನೇಶ್ ಅವರ ವ್ಯಾಪಾರ ಇನ್ನೂ ಬಿರುಸುಗೊಂಡಿಲ್ಲವಂತೆ.

`ಒಂದು ಕಿ.ಲೋ. ಶ್ಯಾವಿಗೆಗೆ 60 ರೂಪಾಯಿ. ಪೇಣಿ ಪ್ರತಿ ಕಿ.ಲೋಗೆ 140 ರೂಪಾಯಿ. ಉಪವಾಸ ಆರಂಭವಾಗಿ ಹದಿನಾಲ್ಕು ದಿನ ಕಳೆದಿದೆಯಷ್ಟೆ. ಹಾಗಾಗಿ ಜೋರು ವ್ಯಾಪಾರ ಇನ್ನೂ ಶುರುವಾಗಿಲ್ಲ. ಕಳೆದ ವರ್ಷ ಐದು ಟನ್ ಶ್ಯಾವಿಗೆ ಮಾರಾಟವಾಗಿತ್ತು. ಈ ವರ್ಷ ಅದಕ್ಕೂ ಮೀರಿ ವ್ಯಾಪಾರವಾಗುವ ನಿರೀಕ್ಷೆಯಲ್ಲಿದ್ದೇನೆ' ಎನ್ನುತ್ತಾರೆ ಅವರು.

ದೈವಬಲ ಒಂದಿದ್ದರೆ...
ಸೂರ್ಯೋದಯದ ನಂತರ ರೋಜಾ ಇರುವ ಮುಸ್ಲಿಂ ಬಾಂಧವರು, ಅದರಲ್ಲೂ ಕಠಿಣ ಕೆಲಸಗಳಲ್ಲಿ ತೊಡಗುವ ಗಾರೆ ಕೆಲಸದವರು, ಮಾರುಕಟ್ಟೆಗಳಲ್ಲಿ ಮೂಟೆ ಹೊರುವ, ದಿನವಿಡೀ ನಿಂತುಕೊಂಡೇ ವ್ಯಾಪಾರ ಮಾಡುವ ಹಾಗೂ ಗ್ಯಾರೇಜ್‌ಗಳಲ್ಲಿ ಬೆವರಿನ ಜೊತೆ ಕೈಗಳಿಗೆ ಗ್ರೀಸನ್ನು ಮೆತ್ತಿಕೊಂಡು ದುಡಿಯುವ ಶ್ರಮಜೀವಿಗಳು ಒಂದು ತಿಂಗಳವರೆಗೂ ರೋಜಾ ಮಾಡುವುದೆಂದರೆ ಕಷ್ಟದ ವಿಷಯ. ಆದರೂ ಮಕ್ಕಳಿಂದ ಮುದುಕರವರೆಗೆ ತಪ್ಪದೇ ವ್ರತಾಚರಣೆ ಮಾಡುವ ಇವರ ಹಿಂದಿರುವ ಒಂದೇ ಶಕ್ತಿ ದೈವಭಕ್ತಿ. ಅಲ್ಲಾಹುವಿನ ಮೇಲಿನ ಪರಮಭಕ್ತಿ. ಆತ್ಮ ಮತ್ತು ದೇವರ ನಡುವಿನ ಅನುಸಂಧಾನ ಎಂದೇ ನಂಬಿ ಈದ್ ಆಚರಿಸುತ್ತಾರೆ.

ದಿನವಿಡೀ ಶ್ರದ್ಧೆಯಿಂದ ಉಪವಾಸ ಮಾಡುವ ಕಷ್ಟಜೀವಿಗಳು ತಮ್ಮ ರೋಜಾ ಕ್ಷಣಗಳನ್ನು ಹಂಚಿಕೊಂಡಿದ್ದು ಹೀಗೆ... `ಉಪವಾಸವಿದ್ದಾಗ ದೇವರ ಮೇಲೆ ನಂಬಿಕೆ ಇರುತ್ತದೆ. ಹಾಗಾಗಿ ಎಷ್ಟೇ ಕಷ್ಟದ ಕೆಲಸಗಳನ್ನು ಮಾಡುವಾಗಲೂ ಹಸಿವಾಗಲೀ, ಬಾಯಾರಿಕೆಯಾಗಲೀ ಆಗುವುದಿಲ್ಲ. ಸಹರಿಯ ನಂತರ ಗ್ಯಾರೇಜಿಗೆ ಬಂದು ಕೆಲಸ ಆರಂಭಿಸಿದರೆ ಸಂಜೆ ನಮಾಜ್‌ವರೆಗೂ ರೋಜಾ ಇರುತ್ತೇವೆ. ಟೈರ್‌ಗಳನ್ನು ಬಿಚ್ಚುವಾಗ, ಯಂತ್ರಗಳ ಬಿಡಿಭಾಗಗಳನ್ನು ಎತ್ತಾಡುವಾಗ ಸುಸ್ತಾಗುತ್ತದೆ, ಬಾಯಾರಿಕೆಯೂ ಆಗುತ್ತದೆ.

ಆದರೆ ನೀರನ್ನು ಬಾಯಲ್ಲಿ ಮುಕ್ಕಳಿಸಿ ಸುಮ್ಮನಾಗುತ್ತೇನೆ ಅಷ್ಟೆ. ಆಗ ದಾಹ ದೂರವಾಗುತ್ತದೆ. ದೇವರ ಮೇಲಿನ ಭಕ್ತಿಯಿಂದ ಕಟ್ಟುನಿಟ್ಟಾಗಿ ರೋಜಾ ಪಾಲಿಸಬೇಕಾಗುತ್ತದೆ. ಮನಸ್ಸಿಗೆ ತೃಪ್ತಿ ಸಿಗುವ ದಿನಗಳಿವು. ತಪ್ಪು ಮಾಡಿದರೆ ದೇವರು ಶಿಕ್ಷಿಸುತ್ತಾನೆ ಎಂದು ಯಾವುದೇ ದುಶ್ಚಟಗಳಿದ್ದರೂ ಅವುಗಳನ್ನು ಹಬ್ಬ ಮುಗಿಯುವವರೆಗೂ ದೂರ ಮಾಡಬೇಕಾಗುತ್ತದೆ. ದಿನಕ್ಕೆ ಐದು ಬಾರಿ ನಮಾಜ್ ಮಾಡಿದರೆ ಸಾಕು ಅಂದಿನ ಶ್ರಮವೆಲ್ಲ ಮಾಯವಾಗುತ್ತದೆ' ಎಂದು ಮುಗುಳ್ನಗುತ್ತಾರೆ ಪೀಣ್ಯ ಎಸ್‌ಆರ್‌ಎಸ್ ಬಸ್ ನಿಲ್ದಾಣದ ಬಳಿ ಇರುವ ಮಾರುತಿ ಕಾರ್ ಗ್ಯಾರೇಜಿನ ಸೈಯದ್ ಜಮೀಲ್.

ದಿನವಿಡೀ ಗಿಜಿಗುಡುವ ಶಿವಾಜಿನಗರದ ಜುಮ್ಮಾ ಮಸೀದಿ ರಸ್ತೆಯ ದ್ವಿಚಕ್ರ ವಾಹನ ರಿಪೇರಿ ಅಂಗಡಿಯ ಅಶು ಅವರು ದಿನದ ಹನ್ನೆರಡು ಗಂಟೆಗೂ ಹೆಚ್ಚು ಸಮಯ ಉಪವಾಸವಿರುತ್ತಾರೆ. ಬಿಡುವಿಲ್ಲದ ಗ್ರಾಹಕರ ನಡುವೆಯೂ ಚಿಕ್ಕ ಪೆಟ್ಟಿಗೆಯಲ್ಲಿ ಕುಳಿತು ಕೆಲಸ ಮಾಡುತ್ತಾರೆ. ಇಫ್ತಾರ್‌ಗೆ ಹೋಗುವವರೆಗೆ ಹನಿ ನೀರನ್ನೂ ಬಾಯಿಗೆ ಬಿಡುವಂತಿಲ್ಲ. ಇದು ರೋಜಾ ನಿಯಮ.

ತಿಂಗಳವರೆಗೂ ಅವರು ವ್ರತಾಚರಣೆ ಮಾಡುವುದರ ಹಿಂದಿನ ಗುಟ್ಟನ್ನು ಹೀಗೆ ಬಿಚ್ಚಿಡುತ್ತಾರೆ: `ನಮಾಜ್ ಮಾಡಿದರೆ ಸಾಕು, ಈ ಸಂದರ್ಭದಲ್ಲಿ ಎಂಥ ಕೆಲಸವನ್ನಾದರೂ ಮಾಡುವಷ್ಟು ಹುಮ್ಮಸ್ಸು ಬರುತ್ತದೆ. ದೇವರು ಮನಸ್ಸಿನಲ್ಲಿ ಮನೆ ಮಾಡಿರುತ್ತಾನೆ. ಮಾಮೂಲಿ ದಿನಗಳಂತೆ ಕೆಲಸ ಮಾಡುತ್ತೇವೆ. ಸುಸ್ತು ಆಗೋದೇ ಇಲ್ಲ. ಮನಸ್ಸು ಸ್ಥಿಮಿತಕ್ಕೆ ಬರುತ್ತದೆ. ಆತ್ಮವಿಶ್ವಾಸ ಹೆಚ್ಚಾದಂತಾಗಿ ದಣಿವೇ ಇಲ್ಲವಾಗುತ್ತದೆ'.

ಶಿವಾಜಿನಗರದ ಲಾಲ್ ಮಸೀದಿ ಎದುರು ಅಜ್ಜನ ಕಾಲದಿಂದಲೂ ಮೊಸರು ಮಾರುವ ಸೈಯದ್ ಬಾಷಾ ಅವರೂ ಕಾಯಕದ ನಡುವೆ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಇದ್ದಲ್ಲೇ ಇಫ್ತಾರ್‌ನಲ್ಲಿ ಪಾಲ್ಗೊಂಡು ಅಂದಿನ ರೋಜಾ ಅಂತ್ಯವಾಗಿಸುತ್ತಾರೆ. 60ರ ವಯೋಮಾನದ ಬಾಷಾ ಅವರು ವ್ಯಾಪಾರ ಮತ್ತು ತಮ್ಮ ರೋಜಾ ಬಗ್ಗೆ ಹೀಗೆ ಹೇಳುತ್ತಾರೆ: `ರಂಜಾನ್ ದಿನಗಳಲ್ಲಿ 100 ಲೀಟರ್‌ಗೂ ಅಧಿಕ ಮೊಸರು ವ್ಯಾಪಾರವಾಗುತ್ತದೆ.

98 ವರ್ಷಗಳಿಂದ ಇದು ಅನೇಕರಿಗೆ ವ್ಯಾಪಾರಕ್ಕೆ ಜಾಗ ನೀಡಿದೆ. ಪರಂಪರಾಗತವಾಗಿ ರಂಜಾನ್‌ನಲ್ಲಿ ರೋಜಾ ಕೂಡ ಮಾಡಿಕೊಂಡು ಬಂದಿದ್ದೇವೆ. ಈ ಜೀವಕ್ಕೆ ಎಲ್ಲಿಯವರೆಗೆ ಸಾಮರ್ಥ್ಯವಿರುತ್ತದೋ ಅಲ್ಲಿಯವರೆಗೆ ಉಪವಾಸ ಮಾಡುತ್ತೇವೆ'. ಶ್ರಮಜೀವಿಗಳ ಕಾಯಕದ ಮೆಕ್ಕಾ ಒಂದು ಕಡೆ. ನಂಬಿದ ಅಲ್ಲಾಹು ನೀಡುವ ಶಕ್ತಿ ಇನ್ನೊಂದು ಕಡೆ. ಉಪವಾಸದ ನಡುವೆಯೂ ಅವರೆಲ್ಲಾ ಬದುಕಿನ ರಥವನ್ನು ಎಳೆಯುತ್ತಲೇ ಇದ್ದಾರೆ.
-ಕೆ.ಎಂ.ಸತೀಶ್ ಬೆಳ್ಳಕ್ಕಿ, ರಮೇಶ ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT