ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪವಾಸವೂ ಖರ್ಜೂರವೂ

Last Updated 13 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಖರ್ಜೂರಕ್ಕೂ ರಂಜಾನ್ ಉಪವಾಸಕ್ಕೂ ಸಂಬಂಧ ಇದೆಯಾ? ಅಂತ ಹುಡುಕುತ್ತ ಹೊರಟರೆ ಸಂಬಂಧ ಸಿಗುವುದಕ್ಕೆ ಹೆಚ್ಚು ಹೊತ್ತೇನು ಬೇಕಾಗುವುದಿಲ್ಲ. ದಿನವಿಡೀ ನಡೆಸುವ ಉಪವಾಸ ಅಂತ್ಯಗೊಳ್ಳುವುದೇ ಖರ್ಜೂರ ತಿನ್ನುವ ಮೂಲಕ. ಮೂರು ಖರ್ಜೂರದ ಮೂಲಕ ಉಪವಾಸ ಮುಗಿಸಲಾಗುತ್ತದೆ. `ಇಫ್ತಾರ್~ನ ಟೇಬಲ್ ಮೇಲೆ ಬಗೆಬಗೆಯ ತಿಂಡಿ, ಖಾದ್ಯಗಳು ಇರುತ್ತವೆಯಾದರೂ ಅವುಗಳಲ್ಲಿ ಖರ್ಜೂರಕ್ಕೇ ಆದ್ಯತೆ. ಇಸ್ಲಾಂ ಹುಟ್ಟಿದ ನಾಡು ಅರೇಬಿಯಾ `ಖರ್ಜೂರದ ನಾಡು~ ಕೂಡ ಹೌದು. ಕಡಿಮೆ ನೀರು ಇರುವ ಪ್ರದೇಶಗಳಲ್ಲಿ ಬೆಳೆಯುವ ಈ ಹಣ್ಣು ಮರುಭೂಮಿ ಅರೇಬಿಯಾದಲ್ಲಿ ಸರ್ವೇ ಸಾಮಾನ್ಯ.

`ಮರುಭೂಮಿಯ ಹಡಗು~ ಒಂಟೆಗಳ ಮೇಲೆ ಓಡಾಡುವ ಪ್ರಯಾಣಿಕರಿಗೆ, ಪ್ರವಾಸಿಗರಿಗೆ, ಅಲೆಮಾರಿಗಳಿಗೆ ಸಹಜವಾಗಿ, ಸರಳವಾಗಿ ದೊರೆಯುವ ಏಕೈಕ ಹಣ್ಣು ಖರ್ಜೂರ.

ಉಸುಕಿನ ನಡುವೆ ಬೆಳೆದರೂ ಖರ್ಜೂರವು ತನ್ನ ಸ್ವಾದಿಷ್ಟ ಹಾಗೂ ಚೈತನ್ಯ ನೀಡುವ ಗುಣಗಳಿಂದ ಪ್ರಿಯವಾಗಿದೆ. ಖರ್ಜೂರದ ಹಣ್ಣಿನಲ್ಲಿರುವ ಕಡಿಮೆ ಕೊಬ್ಬು ಮತ್ತು ಹೆಚ್ಚು ಕಾರ್ಬೋಹೈಡ್ರೆಟ್, ಪ್ರೊಟೀನ್, ವಿಟಾಮಿನ್‌ಗಳು ಉಪವಾಸ ಮುಗಿಸುವ ಮುನ್ನ ಅತ್ಯಗತ್ಯ ಎನ್ನುವಂತೆ ಮಾಡಿವೆ.

`ಮಗ್ರಿಬ್~ (ಸೂರ್ಯಾಸ್ತ) ನಂತರ ಮುಗಿಯುವ ಉಪವಾಸದಲ್ಲಿ ಮೊದಲು ಖರ್ಜೂರ ತಿನ್ನುವ ಪರಿಪಾಠ ಇತ್ತೀಚಿನದೇನಲ್ಲ. `ಪ್ರವಾದಿ~ ಮಹಮ್ಮದರು ಖರ್ಜೂರ ತಿನ್ನುವ ಮೂಲಕವೇ ಉಪವಾಸ ಮುಗಿಸುತ್ತಿದ್ದರು. `ಪ್ರವಾದಿ~ ಮಹಮ್ಮದ್ ಅವರು ವಾಸಿಸುತ್ತಿದ್ದ ಮದೀನಾ ಮತ್ತು ಪವಿತ್ರ ಮೆಕ್ಕಾದ ಸುತ್ತಲಿನ ಪ್ರದೇಶದಲ್ಲಿ ಖರ್ಜೂರದ ಗಿಡಗಳು ವ್ಯಾಪಕವಾಗಿದ್ದವು. ಸಹಜವಾಗಿ ದೊರೆಯುವ ಖರ್ಜೂರದ ಹಣ್ಣುಗಳನ್ನು ಪ್ರವಾದಿಯವರು ಉಪವಾಸ ಅಂತ್ಯಗೊಳಿಸಲು ಉಪಯೋಗಿಸಿದರು. ಈ ಅಂಶ ಪ್ರವಾದಿ ಅವರ ಸಮಕಾಲೀನರು ದಾಖಲಿಸಿದ `ಹದೀಸ್~ಗಳಲ್ಲಿ ಪ್ರಸ್ತಾಪವಾಗಿದೆ. ಅದೇ ಪರಂಪರೆ ಮುಂದುವರಿದಿದೆ.

`ಹಿಂದೆ ಖರ್ಜೂರದ ಹಣ್ಣು ಬಹಳ ಅಪರೂಪ ಆಗಿತ್ತು. ಎಲ್ಲಿ ಬೇಕೆಂದರಲ್ಲಿ ಮಾರಲು ಸಿಗುತ್ತಿರಲಿಲ್ಲ. ಒಳ್ಳೆಯ ಗುಣಮಟ್ಟದ ಖರ್ಜೂರವಂತೂ ಬಹಳ ಕಡಿಮೆ ಸಿಗುತ್ತಿತ್ತು. ಎಷ್ಟೇ ಕಡಿಮೆ ದೊರೆಯುತ್ತಿದ್ದರೂ ಉಪವಾಸ ಮುಗಿಸುವುದಕ್ಕಾಗಿ ಮಾತ್ರ ಖರ್ಜೂರ ತರುವುದನ್ನು ತಪ್ಪಿಸುತ್ತಿರಲಿಲ್ಲ. ಈಗ ಹಾಗೇನಿಲ್ಲ. ಎಲ್ಲ ರೀತಿಯ ಗುಣಮಟ್ಟದ ಖರ್ಜೂರಗಳು ದೊರೆಯುತ್ತವೆ. ಸಣ್ಣ-ಪುಟ್ಟ ಊರುಗಳಲ್ಲಿಯೂ ಉತ್ತಮ ಗುಣಮಟ್ಟದ ಮತ್ತು ಭಾರಿ ಬೆಲೆಯ ಖರ್ಜೂರ ಸಿಗುತ್ತದೆ. ಖರ್ಜೂರ ತಿಂದೇ ನಾವು ಉಪವಾಸ ಮುಗಿಸುತ್ತೇವೆ~ ಎನ್ನುತ್ತಾರೆ ಕಾಜಿ ಅಲಿಯೊದ್ದೀನ್.

ಮೆಸಪಟೋಮಿಯಾದಿಂದ ಇತಿಹಾಸಪೂರ್ವ ಈಜಿಪ್ಟ್‌ಗಳಲ್ಲಿಯೂ ಖರ್ಜೂರದ ಹಣ್ಣು ಬಳಕೆಯಲ್ಲಿ ಇತ್ತು ಎನ್ನುವ ಅಂಶ ಚರಿತ್ರೆಯ ಪುಟಗಳಲ್ಲಿದೆ. ಈ ಹಣ್ಣುಗಳ ಮೂಲ ಪರ್ಷಿಯಾದ ಕರಾವಳಿ ತೀರವಾದರೂ ಹರಪ್ಪ ಸಂಸ್ಕೃತಿಯ ಕಾಲಕ್ಕಾಗಲೇ ಭಾರತ ಪ್ರವೇಶಿಸಿದ್ದವು. ಅಂದಹಾಗೆ ಬೈಬಲ್‌ನಲ್ಲಿ 50ಕ್ಕೂ ಹೆಚ್ಚು ಕಡೆಗಳಲ್ಲಿ ಖರ್ಜೂರದ ಹಣ್ಣಿನ ಪ್ರಸ್ತಾಪ ಇದೆ.

ಅದಿರಲಿ, ಉಪವಾಸ ಬಿಟ್ಟ ನಂತರದ `ಇಫ್ತಾರ್~ನಲ್ಲಿ ಬಗೆ ಬಗೆಯ ಹಣ್ಣು ಹಂಪಲುಗಳನ್ನು ತಿನ್ನಲಾಗುತ್ತದೆ ಮತ್ತು ಆಯಾ ಪ್ರದೇಶಕ್ಕೆ ವಿಶಿಷ್ಟ, ವಿಭಿನ್ನ ಅನ್ನಿಸುವ ತರಹೇವಾರಿ ತಿಂಡಿ-ತಿನಿಸುಗಳಿರುತ್ತವೆ. ಕರ್ನಾಟಕದ ಕರಾವಳಿಯ ಕಡೆಗಳಲ್ಲಿ ಹಣ್ಣಿನ ಮತ್ತಿತರ ಪಾನೀಯಗಳಿಗೆ ಹೆಚ್ಚು ಮನ್ನಣೆ. ಹೈದರಾಬಾದ್‌ನಲ್ಲಿ `ಹಲೀಮ್~ ಮತ್ತು ಉತ್ತರ ಕರ್ನಾಟಕದ ಬೀದರ್-ಗುಲ್ಬರ್ಗಗಳಲ್ಲಿ `ಹರೀಸ್~ ಎನ್ನುವ ಖಾದ್ಯ ರಂಜಾನ್‌ನ ವಿಶೇಷ.

ಉತ್ತರ ಭಾರತದಲ್ಲಿ ಮಾತ್ರ ಸಮೋಸ ಮತ್ತಿತರ ಕರಿದ ಪದಾರ್ಥಗಳಿಗೆ ಆದ್ಯತೆ. ಉಪವಾಸ ಬಿಡುವಾಗ ಖರ್ಜೂರದಿಂದ ತಿನ್ನುವುದನ್ನು ಆರಂಭಿಸುವ ಪರಿಪಾಠಕ್ಕೆ `ಹದೀಸ್~ನ ಮನ್ನಣೆ ಇದೆಯಾದರೂ ಎಲ್ಲ ಕಡೆಗಳಲ್ಲಿಯೂ ಅದೇ ಪದ್ಧತಿಯೇನಿಲ್ಲ. ಖರ್ಜೂರ ಸಿಗದೇ ಇರುವ ಸಂದರ್ಭದಲ್ಲಿ ನೀರು ಕುಡಿದು ಕೂಡ ಉಪವಾಸ ಅಂತ್ಯಗೊಳಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT